ಬೆಂಗಳೂರು, (ಜೂನ್.28): ಕೋವಿಡ್-19 ಅಥವಾ ಸೋಂಕು ಲಕ್ಷಣ ಇರುವವರಿಗೆ ಚಿಕಿತ್ಸೆ ನೀಡಲು ನಿರಾಕರಿಸುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. 

ತುರ್ತು ಸಂದರ್ಭಗಳಲ್ಲಿ ಆಸ್ಪತ್ರೆಗಳು ಚಿಕಿತ್ಸೆ ನೀಡದೆ ರೋಗಿಯನ್ನು ಅಲೆದಾಡಿಸುವುದು ಗಂಭೀರ ಪರಿಣಾಮಗಳಿಗೆ ಕಾರಣವಾಗಬಹುದು. ಈ ಹಿನ್ನೆಲೆಯಲ್ಲಿ ಕೋವಿಡ್ ಸೋಂಕಿತ ಅಥವಾ ಅಂತಹ ರೋಗಲಕ್ಷಣಗಳಿರುವವರಿಗೆ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆಯನ್ನು ನಿರಾಕರಿಸುವುದು/ ನೀಡದಿರುವುದು/ತಪ್ಪಿಸುವುದು ಕಾನೂನುಬಾಹಿರ ಎಂದು ರಾಜ್ಯಸರ್ಕಾರ ಆದೇಶ ಮಾಡಿದೆ.

ಆದೇಶವನ್ನು ಪಾಲಿಸದಿರುವ ಆಸ್ಪತ್ರೆಗಳ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ 2005 ರ ಅಡಿಯಲ್ಲಿ ಶಿಕ್ಷೆ ವಿಧಿಸಲಾಗುತ್ತದೆ ಎಂದು ಆದೇಶದಲ್ಲಿ ತಿಳಿಸಿದೆ. 

ಕೊರೋನಾ ರೋಗಿಗಳಿಗೆ ಅಗ್ಗದ ಸ್ಟೆರಾಯ್ಡ್‌ ನೀಡಲು ಒಪ್ಪಿಗೆ!

ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರುವ ಜನರಿಗೆ 7 ದಿನಗಳ ಸಾಂಸ್ಥಿಕ ಕ್ವಾರಂಟೈನ್ ವಿಧಿಸಲಾಗುತ್ತದೆ ಹಾಗೂ ಇತರೆ ರಾಜ್ಯಗಳಿಂದ ಬರುವ ಜನರಿಗೆ 14 ದಿನಗಳ ಕಾಲ ಹೋಂ ಕ್ವಾರಂಟೈನ್ ವಿಧಿಸಲಾಗುತ್ತದೆ ಎಂದು ಹೇಳಿದೆ.

ಕೆಮ್ಮು, ನೆಗಡಿ ಮತ್ತು ಜ್ವರದಂತಹ ಕೊರೋನಾ ವೈರಸ್ ಲಕ್ಷಣಗಳು ಇದ್ದ ರೋಗಿಗಳಿಗೆ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ನೀಡಲು ನಿರಾಕರಿಸುತ್ತಿವೆ. ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೇ ರೋಗಿಗಳು ಸಾವನ್ನಪ್ಪಿದ್ದಾರೆ. 

ಈ ಹಿನ್ನೆಲೆಯಲ್ಲಿ ರಾಜ್ಯ ಇದೀಗ ಖಡಕ್ ಆದೇಶ ಹೊರಡಿಸಿದ್ದು, ಖಾಸಗಿ ಆಸ್ಪತ್ರೆಗಳು ಹಳೇ ಚಾಳಿ ಮುಂದುವರಿಸಿದ್ರೆ ಕೇಸ್ ಬುಕ್ ಆಗುವುದು ಗ್ಯಾರಂಟಿ.