ನವದೆಹಲಿ(ಜೂ.28): ಸಾಮಾನ್ಯದಿಂದ ತೀವ್ರತರ ಕೊರೋನಾ ಸೋಂಕು ಹೊಂದಿರುವ ರೋಗಿಗಳಿಗೆ ಡೆಕ್ಸಾಮೆಥಸೋನ್‌ ಸ್ಟೆರಾಯ್ಡ್‌ ನೀಡಲು ಕೇಂದ್ರ ಆರೋಗ್ಯ ಇಲಾಖೆ ಒಪ್ಪಿಗೆ ನೀಡಿದೆ. ಅದರಂತೆ ಕೊರೋನಾ ಚಿಕಿತ್ಸೆಗೆ ಬಳಸುವ ಔಷಧಗಳ ಪಟ್ಟಿಯಲ್ಲಿ ಡೆಕ್ಸಾಮೆಥಸೋನ್‌ ಸ್ಟೆರಾಯ್ಡ್‌ ಅನ್ನೂ ಸೇರಿಸಿ ಆದೇಶ ಹೊರಡಿಸಿದೆ.

ಶ್ವಾಸಕೋಶದ ಸೋಂಕೂ ಸೇರಿದಂತೆ ಹಲವಾರು ವಿಧದ ಅನಾರೋಗ್ಯಗಳಿಗೆ ಡೆಕ್ಸಾಮೆಥಸೋನ್‌ ಸ್ಟೆರಾಯ್ಡನ್ನು ಈಗಾಗಲೇ ವ್ಯಾಪಕವಾಗಿ ಬಳಸಲಾಗುತ್ತಿದೆ. ಇದೊಂದು ಸೋವಿ ದರದ ಔಷಧಿಯಾಗಿದ್ದು, ಕೊರೋನಾ ರೋಗಿಗಳ ಮೇಲೂ ಪರಿಣಾಮ ಬೀರುವುದು ಸಾಬೀತಾಗಿದೆ. ಹೀಗಾಗಿ ಇದನ್ನು ಕೊರೋನಾ ಚಿಕಿತ್ಸೆಯ ಅಧಿಕೃತ ಔಷಧಗಳ ಪಟ್ಟಿಗೆ ಆರೋಗ್ಯ ಇಲಾಖೆ ಸೇರಿಸಿ ಶನಿವಾರ ಆದೇಶ ಹೊರಡಿಸಿದೆ. ಮಿಥೈಲ್‌ಪ್ರೆಡ್ನಿಸೊಲೋನ್‌ಗೆ ಪರ್ಯಾಯವಾಗಿ ಇದನ್ನು ಬಳಸಬಹುದು ಎಂದು ಹೇಳಿದೆ.

ಇದಲ್ಲದೆ ಸದ್ಯ ಕೋವಿಡ್‌ ಚಿಕಿತ್ಸೆಗೆ ರೆಮ್‌ಡೆಸಿವಿರ್‌, ಹೈಡ್ರಾಕ್ಸಿಕ್ಲೋರೋಕ್ವಿನ್‌, ಪ್ಲಾಸ್ಮಾ ಚಿಕಿತ್ಸೆ ಹಾಗೂ ಜ್ವರ, ಕೆಮ್ಮು, ಉಸಿರಾಟದ ತೊಂದರೆಗೆ ನೀಡುವ ಇತರ ಸಾಮಾನ್ಯ ಔಷಧಿಗಳನ್ನೂ ಬಳಸಲಾಗುತ್ತಿದೆ. ಅವುಗಳ ಬಳಕೆ ಮುಂದುವರೆಯಲಿದೆ.

ಡೆಕ್ಸಾಮೆಥಸೋನ್‌ ಸ್ಟೆರಾಯ್ಡನ್ನು ಮೂರು ದಿನಗಳ ಕಾಲ ದಿನಕ್ಕೆ 0.1ರಿಂದ 0.2 ಎಂಜಿ/ಕೆಜಿ ಪ್ರಮಾಣದಲ್ಲಿ ನೀಡಬಹುದು. ಆಸ್ಪತ್ರೆಗೆ ದಾಖಲಾದ 48 ಗಂಟೆಯೊಳಗೆ ಅಥವಾ ಆಮ್ಲಜನಕದ ಅಗತ್ಯ ಹೆಚ್ಚುತ್ತಿದ್ದರೆ ಹಾಗೂ ಉರಿಯೂತದ ಸಮಸ್ಯೆ ಉಲ್ಬಣಿಸುತ್ತಿದ್ದರೆ ನೀಡುವುದು ಒಳ್ಳೆಯದು. ವೆಂಟಿಲೇಟರ್‌ ಅಗತ್ಯವಿರುವ ತೀವ್ರ ಶ್ವಾಸಕೋಶದ ತೊಂದರೆಯ ರೋಗಿಗಳಿಗೆ ಇದನ್ನು ದಿನಕ್ಕೆ 0.2ರಿಂದ 0.4 ಎಂಜಿ/ಕೆಜಿ ಪ್ರಮಾಣದಲ್ಲಿ 5ರಿಂದ 7 ದಿನಗಳ ಕಾಲ ನೀಡಬಹುದು ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಬ್ರಿಟನ್ನಿನಲ್ಲಿ ಕೊರೋನಾ ಚಿಕಿತ್ಸೆಯಲ್ಲಿ ಸ್ಟೆರಾಯ್ಡ್‌ ಸಾಕಷ್ಟುಉತ್ತಮ ಫಲಿತಾಂಶ ನೀಡುತ್ತಿದೆ.