ಬೆಂಗಳೂರು (ಅ.17):  ರಾಜ್ಯದ ವಿದ್ಯುತ್‌ ಸರಬರಾಜು ಕಂಪನಿಗಳನ್ನು (ಎಸ್ಕಾಂ) ಖಾಸಗೀಕರಣಗೊಳಿಸುವ ಕೇಂದ್ರದ ಪ್ರಸ್ತಾವನೆಗೆ ರಾಜ್ಯ ಸರ್ಕಾರ ಅ.12ರಂದು ತನ್ನ ಅಭಿಪ್ರಾಯ ಕಳುಹಿಸಿದ್ದು, ಸದ್ಯಕ್ಕೆ ಎಸ್ಕಾಂಗಳ ಖಾಸಗೀಕರಣ ಬೇಡ ಎಂದು ಅಭಿಪ್ರಾಯಪಟ್ಟಿದೆ.

ರಾಜ್ಯ ಸರ್ಕಾರಕ್ಕೆ ಸೆ.20ರಂದು ಎಸ್ಕಾಂಗಳ ಖಾಸಗೀಕರಣ ಪ್ರಸ್ತಾವನೆ ಕಳುಹಿಸಿದ್ದ ಕೇಂದ್ರ ಸರ್ಕಾರವು ಬೆಂಗಳೂರು ವಿದ್ಯುತ್‌ ಸರಬರಾಜು ನಿಗಮ, ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ ಹಾಗೂ ಗುಲ್ಬರ್ಗಾ ವಿದ್ಯುತ್‌ ಸರಬರಾಜು ನಿಗಮಗಳ ವಿದ್ಯುತ್‌ ಪೂರೈಕೆಯನ್ನು ಖಾಸಗಿಗೆ ವಹಿಸಲು ಟೆಂಡರ್‌ ದಾಖಲೆಯ ಕರಡು ಪ್ರತಿಯನ್ನು ಕಳುಹಿಸಿತ್ತು. ಈ ಬಗ್ಗೆ ಅ.5ರೊಳಗಾಗಿ ರಾಜ್ಯ ಸರ್ಕಾರದ ಅಭಿಪ್ರಾಯ ಕಳುಹಿಸುವಂತೆ ಸೂಚಿಸಿತ್ತು.

ಸತತವಾಗಿ ಎಸ್ಕಾಂಗಳ ಜೊತೆ ಸಭೆ ನಡೆಸಿದ ಸರ್ಕಾರದ ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್‌, ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಎಸ್ಕಾಂಗಳ ಅಭಿಪ್ರಾಯ ತಿಳಿಸಿ ಖಾಸಗೀಕರಣ ಬೇಡ ಎಂಬ ನಿರ್ಧಾರಕ್ಕೆ ಬಂದಿದ್ದರು. ಆದರೆ ಕೇಂದ್ರ ಸರ್ಕಾರದ ಒತ್ತಡ ಹೆಚ್ಚಾಗಿದ್ದರಿಂದ ಪುನರ್‌ ಪರಿಶೀಲನೆ ನಡೆಸುವ ಸಲುವಾಗಿ ಅಭಿಪ್ರಾಯ ತಿಳಿಸಲು ಅ.5ರ ಬದಲು ಅ.12 ರವರೆಗೆ ಅವಕಾಶ ಕೋರಿದ್ದರು. ಇದರಂತೆ ಕೇಂದ್ರ ಸರ್ಕಾರವು ಅ.12ರ ವರೆಗೆ ಕಾಲಾವಕಾಶ ವಿಸ್ತರಿಸಿತ್ತು.

ಮೋದಿ ಬಿಡುಗಡೆ ಮಾಡಿದ 17 ಸುಪರ್ ತಳಿಗಳು, ಏನಿದರ ವಿಶೇಷ?

ಇದೀಗ ಅ.12ರಂದು ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ತನ್ನ ವರದಿ ಕಳುಹಿಸಿದ್ದು, ರಾಜ್ಯದ ಎಸ್ಕಾಂಗಳನ್ನು ಖಾಸಗೀಕರಣಗೊಳಿಸಲು ಕೇಂದ್ರ ಸರ್ಕಾರವು 2015ರಲ್ಲೇ ಪ್ರಸ್ತಾವನೆ ಸಲ್ಲಿಸಿತ್ತು. ಈ ವೇಳೆಯೂ ರಾಜ್ಯ ಸರ್ಕಾರ ತಿರಸ್ಕರಿಸಿತ್ತು. ಪ್ರಸ್ತುತ ಎಸ್ಕಾಂಗಳು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಈ ಹಂತದಲ್ಲಿ ಖಾಸಗೀಕರಣಗೊಳಿಸುವ ಅಗತ್ಯವಿಲ್ಲ. ಈಗಾಗಲೇ ಎಸ್ಕಾಂಗಳ ನೌಕರರು, ಅಧಿಕಾರಿಗಳು ಇದನ್ನು ತೀವ್ರವಾಗಿ ವಿರೋಧಿಸಿದ್ದು, ಅ.22ರಂದು ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಹೀಗಾಗಿ ಮೊದಲು ಕೇಂದ್ರಾಡಳಿತ ಪ್ರದೇಶಗಳಲ್ಲಿ ವಿದ್ಯುತ್‌ ಸರಬರಾಜು ವ್ಯವಸ್ಥೆಯನ್ನು ಖಾಸಗೀಕರಣಗೊಳಿಸಿ. ಅಲ್ಲಿನ ವ್ಯವಸ್ಥೆ ಯಶಸ್ವಿಯಾದರೆ ಬಳಿಕ ನಮ್ಮಲ್ಲಿ ಅನುಷ್ಠಾನಗೊಳಿಸಲು ಚಿಂತಿಸಲಾಗುವುದು ಎಂದು ತಿಳಿಸಿರುವುದಾಗಿ ಇಂಧನ ಇಲಾಖೆ ಉನ್ನತ ಮೂಲಗಳು ತಿಳಿಸಿವೆ.

ಕೇಂದ್ರದ ಮುಂದಿನ ನಡೆ ಏನು?

ರಾಜ್ಯ ಸರ್ಕಾರದ ಆಕ್ಷೇಪದ ಕಾರಣ ಕೇಂದ್ರ ಸರ್ಕಾರ ಪ್ರಸ್ತಾವನೆಯನ್ನು ಕೈಬಿಡುತ್ತದೆಯೇ? ಅಥವಾ ಖಾಸಗೀಕರಣಕ್ಕಾಗಿ ರಾಜ್ಯದ ಮೇಲೆ ಒತ್ತಡ ಹೇರುತ್ತದೆಯೇ ಎಂಬುದು ಕುತೂಹಲ ಮೂಡಿಸಿದೆ.