ರಾಜ್ಯದಲ್ಲಿ ಕೊರೋನಾ ಪರಿಸ್ಥಿತಿ ಕೈ ಮೀರಿ ಹೋಗಿದೆ. ಸಾವು ನೋವುಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಈ ನಿಟ್ಟಿನಲ್ಲಿ ಸರ್ಕಾರ ಸಂಪುಟ ಸಭೆ ನಡೆಸಿ ಇನ್ನಷ್ಟು ಕಠೀಣ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. 

ಬೆಂಗಳೂರು (ಏ.26): ರಾಜ್ಯದಲ್ಲಿ ಕೋವಿಡ್‌ನ ಎರಡನೇ ಅಲೆಯ ತೀವ್ರತೆ ಗಣನೀಯ ಪ್ರಮಾಣದಲ್ಲಿ ಹೆಚ್ಚಿರುವ ಹಿನ್ನೆಲೆಯಲ್ಲಿ ಹಾಲಿ ಜಾರಿಯಲ್ಲಿರುವ ನಿರ್ಬಂಧಗಳು ಯಥಾರೀತಿ ಮುಂದುವರೆಯುತ್ತವೆಯೇ ಅಥವಾ ಇನ್ನಷ್ಟುಕಠಿಣ ನಿಯಮಗಳನ್ನು ಅನುಷ್ಠಾನಗೊಳಿಸಲಾಗುತ್ತದೆಯೇ ಎಂಬುದರ ಬಗ್ಗೆ ಇಂದು ನಡೆಯಲಿರುವ ಸಚಿವ ಸಂಪುಟ ಸಭೆ ಬಳಿಕ ಸ್ಪಷ್ಟಚಿತ್ರಣ ಹೊರಬೀಳಲಿದೆ.

ವಾರಾಂತ್ಯದ ಕರ್ಫ್ಯೂ ಮಾದರಿಯನ್ನೇ ಇತರ ದಿನಗಳಲ್ಲೂ ಒಂದು ವಾರ ಅಥವಾ ಎರಡು ವಾರಗಳ ಕಾಲ ಮುಂದುವರೆಸುವ ಬಗ್ಗೆ ಚರ್ಚೆ ನಡೆದಿದ್ದರೂ ಸೋಮವಾರ ಸಂಪುಟ ಸಭೆಯಲ್ಲಿ ಇತರ ಸಚಿವರ ಅಭಿಪ್ರಾಯಗಳನ್ನು ಆಲಿಸಿದ ಬಳಿಕ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ. ಹೀಗಾಗಿ, ಸಂಪುಟ ಸಭೆ ಕುತೂಹಲ ಮೂಡಿಸಿದೆ.

14 ದಿನ ಕರ್ನಾಟಕ ಲಾಕ್‌ಡೌನ್: ಏನಿರುತ್ತೆ? ಏನಿರಲ್ಲ? ಇಲ್ಲಿದೆ ಮಾಹಿತಿ ...

ಇದೇ ವೇಳೆ ರಾಜಧಾನಿ ಬೆಂಗಳೂರಿಗೆ ಅನ್ವಯವಾಗುವಂತೆ ಕಠಿಣ ನಿಯಮಗಳನ್ನು ರೂಪಿಸಿ ಪ್ರತ್ಯೇಕ ಮಾರ್ಗಸೂಚಿ ಜಾರಿಗೊಳಿಸುವುದು ಅಗತ್ಯ ಎಂಬ ಅಭಿಪ್ರಾಯವೂ ಕೇಳಿಬರುತ್ತಿರುವುದರಿಂದ ಈ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ ಎನ್ನಲಾಗಿದೆ.

ವೀಕೆಂಡ್ ಲಾಕ್‌ಡೌನ್‌ ಮಧ್ಯೆ ಕರ್ನಾಟಕದಲ್ಲಿ ಅಬ್ಬರಿಸಿದ ಕೊರೋನಾ! ...

ಹಾಗೆ ನೋಡಿದರೆ ಆರ್ಥಿಕ ಚಟುವಟಿಕೆ ಕುಂಠಿತವಾಗಬಹುದು ಎಂಬ ಕಾರಣಕ್ಕಾಗಿ ಮುಂದಿನ ಹಲವು ದಿನಗಳವರೆಗೆ ಕಫä್ರ್ಯ ಮಾದರಿಯನ್ನೇ ಮುಂದುವರೆಸುವ ಬಗ್ಗೆ ಯಡಿಯೂರಪ್ಪ ಸೇರಿದಂತೆ ಸರ್ಕಾರದ ಬಹುತೇಕ ಸಚಿವರಿಗೆ ಒಲವು ಇಲ್ಲ. ಈ ನಡುವೆ ಭಾನುವಾರ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್‌.ಅಶೋಕ್‌, ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌ ಸೇರಿದಂತೆ ಹಲವು ಸಚಿವರು ಈಗ ಜಾರಿಯಲ್ಲಿರುವ ಮಾರ್ಗಸೂಚಿ ನಿಯಮಗಳು ಯಾವುದೇ ಬದಲಾವಣೆಯಿಲ್ಲದೆ ಮುಂದುವರೆಯಲಿವೆ ಎಂದು ಹೇಳಿಕೆ ನೀಡಿದ್ದಾರೆ.

ಬರುವ ಮೇ 4ರವರೆಗೆ ಈಗಿರುವ ಮಾರ್ಗಸೂಚಿಯೇ ಮುಂದುವರೆಯಲಿ. ಅಷ್ಟರೊಳಗೂ ಪರಿಸ್ಥಿತಿ ನಿಯಂತ್ರಣಕ್ಕೆ ಬರದಿದ್ದರೆ ಆಗ ಲಾಕ್‌ಡೌನ್‌ನಂಥ ಮತ್ತಷ್ಟುಕಠಿಣ ನಿಯಮಗಳನ್ನು ಜಾರಿಗೆ ತರುವುದು ಸೂಕ್ತವಾಗಬಹುದು ಎಂಬ ಅಭಿಪ್ರಾಯವನ್ನು ಕೆಲವು ಸಚಿವರು ಮುಖ್ಯಮಂತ್ರಿಗಳನ್ನು ಖುದ್ದು ಭೇಟಿ ಮಾಡಿದಾಗ ನೀಡಿದ್ದಾರೆ ಎನ್ನಲಾಗಿದೆ.

ಆದರೆ, ಕೋವಿಡ್‌ ನಿಯಂತ್ರಣದ ತಾಂತ್ರಿಕ ಸಲಹಾ ಸಮಿತಿ ಸದಸ್ಯರು ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ತೀವ್ರಗೊಳ್ಳುತ್ತಿರುವ ಎರಡನೇ ಅಲೆ ನಿಯಂತ್ರಿಸಲು ಎರಡು ವಾರಗಳ ಕರ್ಫ್ಯೂ ಮಾದರಿ ಅಥವಾ ಲಾಕ್‌ಡೌನ್‌ ಮಾದರಿ ನಿಯಮಗಳನ್ನು ಜಾರಿಗೊಳಿಸುವುದು ಸೂಕ್ತ ಎಂಬ ಸಲಹೆಯನ್ನು ಸರ್ಕಾರಕ್ಕೆ ನೀಡಿದ್ದಾರೆ. ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಅವರು ಪರೋಕ್ಷವಾಗಿ ತಜ್ಞರ ಸಲಹೆ ಅನುಸಾರ ಕ್ರಮ ಕೈಗೊಳ್ಳಲಾಗುವುದು ಎಂಬಂತೆ ಮಾತನಾಡಿದ್ದಾರೆ.

ಈ ಹಿನ್ನೆಲೆಯಲ್ಲಿ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿಗಳು ತಜ್ಞರ ಸಲಹೆಯನ್ನೂ ಮುಂದಿಟ್ಟು ಚರ್ಚೆ ನಡೆಸಲಿದ್ದಾರೆ. ಸಚಿವರೆಲ್ಲರ ಅಭಿಪ್ರಾಯ ಆಧರಿಸಿ ಬಳಿಕ ನಿರ್ಧಾರ ಪ್ರಕಟಿಸುವ ಸಂಭವವಿದೆ. ಕೆಲವೊಂದು ನಿಯಮಗಳನ್ನು ಮಾರ್ಪಡಿಸುವ ಅಥವಾ ಬದಲಾಯಿಸುವ ಸಾಧ್ಯತೆಯೂ ಇದೆ ಎನ್ನಲಾಗಿದೆ.

ಉಚಿತ ಲಸಿಕೆಗೆ ನಿರ್ಧಾರ ಸಂಭವ

ಸೋಮವಾರದ ಸಚಿವ ಸಂಪುಟ ಸಭೆಯಲ್ಲಿ ಕೋವಿಡ್‌ ಲಸಿಕೆಯನ್ನು ರಾಜ್ಯದ ಎಲ್ಲ ಜನರಿಗೂ ಉಚಿತವಾಗಿ ನೀಡುವ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.

ಈಗಾಗಲೇ ಒಂದು ಕೋಟಿ ಲಸಿಕೆ ಖರೀದಿಸಲು ಸರ್ಕಾರ 400 ಕೋಟಿ ರು.ಗಳನ್ನು ಬಿಡುಗಡೆ ಮಾಡಿದೆ. ಹೀಗಾಗಿ, ಇನ್ನಷ್ಟುಲಸಿಕೆ ಖರೀದಿಸುವ ಮೂಲಕ ಎಲ್ಲ ನಾಗರಿಕರಿಗೂ ಉಚಿತವಾಗಿ ಲಸಿಕೆ ನೀಡುವ ಬಗ್ಗೆ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳುವ ಸಂಭವವಿದೆ ಎಂದು ತಿಳಿದು ಬಂದಿದೆ.

ಕರ್ಫ್ಯೂ ಯಶಸ್ವಿ

ಬೆಂಗಳೂರು: ಕೋವಿಡ್‌ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಜಾರಿಗೊಳಿಸಿರುವ ವಾರಾಂತ್ಯ ಕರ್ಫ್ಯೂನ ಮೊದಲ ಪ್ರಯೋಗ ಬಹುತೇಕ ಯಶಸ್ವಿಯಾಯಿತು. ಮೊದಲ ದಿನದಂತೆ ವಾರಾಂತ್ಯದ ಎರಡನೇ ದಿನವಾದ ಭಾನುವಾರವೂ ಕರ್ಫ್ಯೂ ನಿಯಮ ರಾಜ್ಯದ ಬಹುತೇಕ ಕಡೆ ಕಟ್ಟುನಿಟ್ಟಾಗಿ ಪಾಲನೆಯಾಯಿತು. ಇಡೀ ದಿನ ಮನೆಯಲ್ಲೇ ಉಳಿದ ಜನ ಕೋವಿಡ್‌ ನಿಯಂತ್ರಣ ಪ್ರಯತ್ನಕ್ಕೆ ಬೆಂಬಲ ಸೂಚಿಸಿದರು.