ಬೆಂಗಳೂರು, (ಜುಲೈ.21): ನಾಳೆಯಿಂದ (ಬುಧವಾರ) ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಲಾಕ್ ಡೌನ್ ತೆರವಾಗಲಿದೆ. ಎಂದಿನಂತೆ ಚಟುವಟಿಕೆ ಮುಂದುವರೆಯಲಿದೆ. 

ಹೌದು, ಬೆಂಗಳೂರಿನಲ್ಲಿ ಲಾಕ್ ಡೌನ್ ವಿಸ್ತರಣೆ ಇಲ್ಲಎಂದು ಸಿಎಂ ಯಡಿಯೂರಪ್ಪ ಸ್ಪಷ್ಟನೆ ನೀಡಿದ್ದಾರೆ. ಈ ಬೆನ್ನಲ್ಲೇ ಇದೀಗ ರಾಜ್ಯ ಸರ್ಕಾರದಿಂದ ಅನ್ ಲಾಕ್ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಈ ಹಿಂದಿನ ಆದೇಶದಂತೆ ರಾಜ್ಯಾದ್ಯಂತ ರಾತ್ರಿ 9.00 ಗಂಟೆಯಿಂದ ಬೆಳಗ್ಗೆ 5.00 ಗಂಟೆಯವರೆಗೆ ಕರ್ಫ್ಯೂ  ಜಾರಿ ಇರಲಿದೆ. ಹಾಗೂ ಪ್ರತೀ ಭಾನುವಾರದ ಲಾಕ್ ಡೌನ್ ಮುಂದುವರಿಯಲಿದೆ.

ರಾಜ್ಯದ ಜನತೆಯನ್ನುದ್ದೇಶಿಸಿ ಸಿಎಂ ಮಾತು: ಮಹತ್ವದ ಮಾಹಿತಿ ಬಿಚ್ಚಿಟ್ಟ ಬಿಎಸ್‌ವೈ

ರಾಜ್ಯ ಸರ್ಕಾರ ಹಿಂದಿನ ಪ್ರಕಾರ ಜುಲೈ 5ರಿಂದ ಆಗಸ್ಟ್ 8ರ ವರೆಗೆ ಪ್ರತಿ ಭಾನುವಾರ ಲಾಕ್‌ಡೌನ್ ಇರಲಿದೆ. ಅಲ್ಲದೇ ಜುಲೈ 10ರಿಂದ ಎಲ್ಲಾ ಶನಿವಾರದಂದು ಸರ್ಕಾರಿ ಕಚೇರಿಗಳಿಗೆ ರಜೆ ಘೋಷಿಸಿ ಆದೇಶ ನೀಡಲಾಗಿದೆ.

ಗೈಡ್‌ಲೈನ್ಸ್

* ಅನ್ ಲಾಕ್ 2.0 ಮಾರ್ಗಸೂಚಿಗಳ ಪ್ರಕಾರ ರಾಜ್ಯಾದ್ಯಂತ ರಾತ್ರಿ 9.00 ಗಂಟೆಯಿಂದ ಬೆಳಗ್ಗೆ 5.00 ಗಂಟೆಯವರೆಗೆ ಕರ್ಫ್ಯೂ ಸ್ಥಿತಿ ಜಾರಿಯಲ್ಲಿರುತ್ತದೆ. 
* ಪ್ರಸ್ತುತ ಚಾಲ್ತಿಯಲ್ಲಿರುವಂತೆ ಪ್ರತೀ ಭಾನುವಾರದ ಲಾಕ್ ಡೌನ್ ಮುಂದುವರಿಯಲಿದೆ.

* ಜನಸಂದಣಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಬೆಂಗಳೂರು ಸಹಿತ ರಾಜ್ಯದ ಎಲ್ಲಾ ಜಿಲ್ಲೆಗಳು ಹಾಗೂ ತಾಲೂಕು ಮಟ್ಟಗಳಲ್ಲಿ ತರಕಾರಿ ಮಾರುಕಟ್ಟೆಗಳನ್ನು ಎ.ಪಿ.ಎಂ.ಸಿ. ಅಥವಾ ಸೂಕ್ತ ವಿಶಾಲ ಪ್ರದೇಶಗಳಿಗೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳುವುದು.

* ಉದ್ಯಾನವನಗಳಲ್ಲಿ ಜಿಮ್ ಸಲಕರಣೆಗಳು ಹಾಗೂ ಕುಳಿತುಕೊಳ್ಳುವ ಬೆಂಚ್ ಗಳನ್ನು ಸಾರ್ವಜನಿಕರು ಬಳಸದಂತೆ ನಿಗಾ ವಹಿಸುವುದು.

ಇವುಗಳೊಂದಿಗೆ ಆಯಾ ಜಿಲ್ಲಾಡಳಿತಗಳ ಪ್ರತ್ಯೇಕ ಮಾರ್ಗಸೂಚಿಗಳು ಪ್ರಕಟಗೊಳ್ಳುವವರೆಗೂ ಅನ್ ಲಾಕ್ 2.0ರ ಮಾರ್ಗಸೂಚಿಯು ಈ ಮೇಲಿನ ಬದಲಾವಣೆಗಳೊಂದಿಗೆ ರಾಜ್ಯಾದ್ಯಂತ ಜಾರಿಯಲ್ಲಿರುತ್ತದೆ.

ರಾಜ್ಯದಲ್ಲಿ ಕೋವಿಡ್ 19 ಸೋಂಕು ಹರಡುವಿಕೆಯನ್ನು ತಡೆಗಟ್ಟುವ ಉದ್ದೇಶದಿಂದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ದಕ್ಷಿಣ ಕನ್ನಡ ಸೇರಿದಂತೆ ಇನ್ನು ಕೆಲವು ಜಿಲ್ಲೆಗಳಲ್ಲಿ ಲಾಕ್ ಡೌನ್ ನಿಯಮಗಳನ್ನು ಮರು ಜಾರಿಗೊಳಿಸಲಾಗಿತ್ತು. ಈ ಎಲ್ಲಾ ಜಿಲ್ಲೆಗಳು ಬುಧವಾರದಿಂದ ಅನ್‌ಲಾಕ್ ಆಗಲಿವೆ.