ಕೇಂದ್ರ ಸರ್ಕಾರ ಮೇ.3ರ ಬಳಿಕ ಲಾಕ್‌ಡೌನ್ ವಿಸ್ತರಿಸಿದ ಬೆನ್ನಲ್ಲೇ ಇತ್ತ ರಾಜ್ಯ ಸರ್ಕಾರವೂ ಕೂಡ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.ಇದೀಗ ತನ್ನೆಲ್ಲಾ ನೌಕರರಿಗೆ ಮಹತ್ವದ ಸುತ್ತೋಲೆಯನ್ನು ಹೊರಡಿಸಿದೆ.
ಬೆಂಗಳೂರು, (ಮೇ.02): ರಾಜ್ಯದ ಹಸಿರು, ಕಿತ್ತಳೆ ವಲಯದಲ್ಲಿನ ಎಲ್ಲಾ ಗ್ರೂಪ್ ಎ, ಬಿ ಸಿ ಮತ್ತು ಡಿ ವೃಂದದ ಅಧಿಕಾರಿ, ಸಿಬ್ಬಂದಿ ಶೇ.100ರಷ್ಟು ಕರ್ತವ್ಯಕ್ಕೆ ಹಾಜರಾಗುವಂತೆ ಸರ್ಕಾರ ಸುತ್ತೋಲೆ ಹೊರಡಿಸಿದೆ.
ಈ ಕುರಿತಂತೆ ಇಂದು (ಶನಿವಾರ) ಸುತ್ತೋಲೆ ಹೊರಡಿಸಿರುವಂತ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯ ಭಾಸ್ಕರ್, ದಿನಾಂಕ 04-05-2020ರಿಂದ ಜಾರಿಗೆ ಬರುವಂತೆ ಕಿತ್ತಳೆ ಮತ್ತು ಹಸಿರು ವಲಯಗಳಲ್ಲಿ ಬರುವ ಉಳಿದ ಎಲ್ಲಾ ಜಿಲ್ಲೆಗಳಲ್ಲಿನ ಎಲ್ಲಾ ಸರ್ಕಾರಿ ಕಛೇರಿಗಳಲ್ಲಿ ಶೇ.100ರಷ್ಟು ಗ್ರೂಪ್ ಎ, ಬಿ, ಸಿ ಮತ್ತು ಡಿ ವೃಂದದ ಅಧಿಕಾರಿ, ಸಿಬ್ಬಂದಿಗ ಕರ್ತವ್ಯಕ್ಕೆ ಹಾಜರಾಗತಕ್ಕದ್ದು ಸೂಚನೆ ನೀಡಿದ್ದಾರೆ.
ರಾಜ್ಯ ಸರ್ಕಾರದಿಂದ ಹೊಸ ಗೈಡ್‌ಲೈನ್ಸ್ ರಿಲೀಸ್: ಯಾವ ಝೋನ್‌ನಲ್ಲಿ ಏನಿರುತ್ತೆ? ಏನಿರಲ್ಲ?
ಈಗಾಗಲೇ ಅಗತ್ಯ ಸೇವೆ ಒದಗಿಸುತ್ತಿರುವಂತ ಇಲಾಖೆಯಗಳ ರಾಜ್ಯದ ಸರ್ಕಾರಿ ನೌಕರರು ಮಾತ್ರವೇ ಕರ್ತವ್ಯಕ್ಕೆ ಹಾಜರಾಗುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಶೇ.33ರಷ್ಟು ನೌಕರರು ಕರ್ತವ್ಯಕ್ಕೆ ಹಾಜರಾಗುವಂತೆ ಸೂಚನೆ ನೀಡಿತ್ತು. ಇದೀಗ ರಾಜ್ಯದ ಹಸಿರು, ಕಿತ್ತಳೆ ವಲಯದಲ್ಲಿನ ಎಲ್ಲಾ ಗ್ರೂಪ್ ಎ, ಬಿ ಸಿ ಮತ್ತು ಡಿ ವೃಂದದ ಅಧಿಕಾರಿ, ಸಿಬ್ಬಂದಿ ಶೇ.100ರಷ್ಟು ಕರ್ತವ್ಯಕ್ಕೆ ಹಾಜರಾಗುವಂತೆ ಸುತ್ತೋಲೆಯಲ್ಲಿ ಸೂಚಿಸಿದೆ.
ಕರ್ನಾಟಕ ರಾಜ್ಯದಲ್ಲಿ ಕೊರೋನಾ ವೈರಸ್ ಸಾಂಕ್ರಾಮಿಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಕೇಂದ್ರ ಗೃಹ ಸಚಿವಾಲಯದ ಮಾರ್ಗ ಸೂಚಿಯ ಅನ್ವಯ ದಿನಾಂಕ 02-05-2020ರಂತೆ ಆರೋಗ್ಯ ಇಲಾಖೆಯು ಕಾಲಕಾಲಕ್ಕೆ ಕೆಂಪು, ಹಸಿರು ಮತ್ತು ಕಿತ್ತಳೆ ವಲಯಗಳನ್ನಾಗಿ ವಿಂಗಢಿಸಿ ಅಧಿಸೂಚಿಸುತ್ತದೆ.
ದಿನಾಂಕ 02-05-2020ರ ವಿಂಗಡನೆಯಂತೆ ದಿನಾಂಕ 04-05-2020ರಿಂದ ದಿನಾಂಕ 17-05-2020ರವರೆಗಿನ ಅವಧಿಯಲ್ಲಿ ಕೆಂಪು ವಲಯದಲ್ಲಿ ಬರುವ ಬೆಂಗಳೂರು, ಬೆಂಗಳೂರು ಗ್ರಾಮಾಂತರ ಮತ್ತು ಮೈಸೂರು ಜಿಲ್ಲೆಗಳಲ್ಲಿ ಸರ್ಕಾರದ ಅಗತ್ಯ ಸೇವೆ ಒದಗಿಸುತ್ತಿರುವ ಇಲಾಖೆಗಳಲ್ಲಿನ ಸರ್ಕಾರಿ ಕಛೇರಿಗಳಲ್ಲಿ ಶೇ.100ರಷ್ಟು ಗ್ರೂಪ್ ಎ, ಬಿ, ಸಿ ಮತ್ತು ಡಿ ವೃಂದದ ಅಧಿಕಾರಿ, ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗತಕ್ಕದ್ದು.
ಉಳಿದ ಇಲಾಖೆಗಳಲ್ಲಿನ ಗ್ರೂಪ್ ಎ ಮತ್ತು ಬಿ ವೃಂದದ ಎಲ್ಲಾ ಅಧಿಕಾರಿಗಳು ಮತ್ತು ಗ್ರೂಪ್ ಸಿ ಮತ್ತು ಡಿ ವೃಂದದ ಶೇ.33ರಷ್ಟು ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗತಕ್ಕದ್ದು ಎಂದು ರಾಜ್ಯ ಸರ್ಕಾರ ತಿಳಿಸಿದೆ.
