ಬೆಂಗಳೂರು(ಮೇ.09): ಸೆಮಿ ಲಾಕ್‌ಡೌನ್‌ ಅವಧಿಯಲ್ಲಿ ಮದುವೆ ಸಮಾರಂಭಕ್ಕೆ ಮತ್ತಷ್ಟುಕಠಿಣ ನಿರ್ಬಂಧಗಳನ್ನು ವಿಧಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಪೂರ್ವಾನುಮತಿಯೊಂದಿಗೆ ಕೇವಲ 40 ಮಂದಿಯೊಂದಿಗೆ ಮನೆಯಲ್ಲೇ ಮದುವೆ ಆಗಲು ಮಾತ್ರ ಅನುಮತಿ ನೀಡುವುದಾಗಿ ಹೇಳಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಮದುವೆ ಆಗುವವರು ಬಿಬಿಎಂಪಿ ವಲಯ ಆಯುಕ್ತರು ಹಾಗೂ ಇತರ ಜಿಲ್ಲೆಗಳ ವ್ಯಾಪ್ತಿಯಲ್ಲಿ ತಹಸೀಲ್ದಾರ್‌ ಅವರಿಂದ ಅನುಮತಿ ಪಡೆಯಬೇಕು.

"

ಅನುಮತಿ ಪಡೆಯಲು ಮದುವೆ ದಿನಾಂಕ, ಆಹ್ವಾನ ಪತ್ರಿಕೆ ಅಥವಾ ಸಂಬಂಧಪಟ್ಟದಾಖಲೆಗಳೊಂದಿಗೆ ಮದುವೆಗೆ ಆಗಮಿಸುವ 40 ಮಂದಿಯ ವಿವರಗಳನ್ನು ಒಳಗೊಂಡ ಅರ್ಜಿ ಸಲ್ಲಿಸಬೇಕು.

ಅರ್ಜಿ ಪಡೆದು ವಲಯ ಆಯುಕ್ತರು ಅಥವಾ ತಹಸೀಲ್ದಾರ್‌ ಅವರು ಮದುವೆಗೆ ಅನುಮತಿಯೊಂದಿಗೆ 40 ಪಾಸುಗಳನ್ನು ವಿತರಿಸುತ್ತಾರೆ. ಕಡ್ಡಾಯವಾಗಿ ಮನೆಯ ಬಳಿಯೇ ಮದುವೆ ಮಾಡಬೇಕು. ಕಲ್ಯಾಣ ಮಂಟಪದಲ್ಲಿ ವಿವಾಹ ನಡೆಯುವಂತಿಲ್ಲ. ಮದುವೆಗೆ ಆಗಮಿಸುವವರು ಕಡ್ಡಾಯವಾಗಿ ಪಾಸನ್ನು ತೆಗೆದುಕೊಂಡೇ ಬರಬೇಕು. ಒಬ್ಬರ ಪಾಸನ್ನು ಮತ್ತೊಬ್ಬರಿಗೆ ಹಸ್ತಾಂತರಿಸುವಂತಿಲ್ಲ. ಜತೆಗೆ ಕೊರೋನಾ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ.

ಇನ್ನು ಇದೇ ಆದೇಶದಲ್ಲಿ ಕಬ್ಬಿಣ ಅದಿರು ಗಣಿಗಾರಿಕೆ ಹಾಗೂ ಸಿಮೆಂಟ್‌ ಉತ್ಪಾದನೆಗೆ ಬಳಸುವ ಸುಣ್ಣದ ಕಲ್ಲು ಗಣಿಗಾರಿಕೆಗೂ ಅನುಮತಿ ನೀಡಲಾಗಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona