ಆರ್‌ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತ ಪ್ರಕರಣದಲ್ಲಿ ಮೃತರಪಟ್ಟ ಕುಟುಂಬಕ್ಕೆ ಘೋಷಿಸಿದ ಪರಿಹಾರ ಮೊತ್ತವನ್ನು 25 ಲಕ್ಷ ರೂಪಾಯಿಗೆ ಹೆಚ್ಚಿಸುವಂತೆ ಸಿಎಂ ಸಿದ್ದರಾಮಯ್ಯ ಆದೇಶ ನೀಡಿದ್ದಾರೆ.
ಬೆಂಗಳೂರು(ಜೂ.07) ಆರ್‌ಸಿಬಿ ವಿಜಯೋತ್ಸವದ ದುರಂತ ಘಟನೆ ಕಾಂಗ್ರೆಸ್ ಸರ್ಕಾರಕ್ಕೆ ತೀವ್ರ ಹಿನ್ನಡೆ ತಂದಿದೆ. 18 ವರ್ಷಗಳ ಬಳಿಕ ಟ್ರೋಫಿ ಗೆದ್ದ ಆರ್‌ಸಿಬಿ ತಂಡಕ್ಕೆ ಸನ್ಮಾನ ಕಾರ್ಯಕ್ರಮದಲ್ಲಿ ಸಂಭವಿಸಿದ ಕಾಲ್ತುಳಿತ ಘಟನೆಯಲ್ಲಿ 11 ಅಭಿಮಾನಿಗಳು ಮೃತಪಟ್ಟಿದ್ದಾರೆ.56ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸೂಕ್ತ ಸುರಕ್ಷತಾ ಕ್ರಮ ಕೈಗೊಳ್ಳದೆ ತರಾತುರಿಯಲ್ಲಿ ಸರ್ಕಾರ ಕಾರ್ಯಕ್ರಮ ಆಯೋಜಿಸಿದ ಕಾರಣ ಈ ಘಟನೆ ನಡೆದಿದೆ ಎಂದು ವಿಪಕ್ಷಗಳು ಆರೋಪಿಸಿದೆ. ಈ ದುರಂತ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಸರ್ಕಾರ ಘೋಷಿಸಿದ ಪರಿಹಾರ ಮೊತ್ತ ಕಡಿಮೆ ಎಂದು ವಿಪಕ್ಷಗಳು ಆರೋಪ ಮಾಡಿತ್ತು. ಈ ಬೆಳವಣಿಗೆ ಬೆನ್ನಲ್ಲೇ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಮೃತರ ಕುಟುಂಬಗಳಿಗೆ ಘೋಷಿಸಿದ ಪರಿಹಾರವನ್ನು ಮೊತ್ತವನ್ನು 25 ಲಕ್ಷ ರೂಪಾಯಿಗೆ ಏರಿಕೆ ಮಾಡಲಾಗಿದೆ.
10 ಲಕ್ಷ ರೂಪಾಯಿ ಘೋಷಿಸಿ ಇದೀಗ 25 ಲಕ್ಷ ರೂ ಗೆ ಏರಿಕೆ
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ದುರಂತದಲ್ಲಿ ಮೃತಪಟ್ಟವರ ಪ್ರತಿ ಕುಟುಂಬಕ್ಕೆ ಆರಂಭದಲ್ಲಿ ಸರ್ಕಾರ ತಲಾ 10 ಲಕ್ಷ ರೂಪಾಯಿ ಪರಿಹಾರ ಮೊತ್ತ ಘೋಷಿಸಿತ್ತು. ಆದರೆ ಕೇರಳದಲ್ಲಿ ಆನೆ ತುಳಿದು ಮೃತಪಟ್ಟ ವ್ಯಕ್ತಿಗೆ ಇದಕ್ಕಿಂತ ಹೆಚ್ಚಿನ ಮೊತ್ತ ಪರಿಹಾರವನ್ನು ಕರ್ನಾಟಕ ಸರ್ಕಾರ ಘೋಷಿಸಿದೆ. ಆದರೆ ಸರ್ಕಾಕರ ನಿರ್ಲಕ್ಷಕ್ಕೆ ಬಲಿಯಾದವರಿಗೆ ಕೇವಲ 10 ಲಕ್ಷ ರೂಪಾಯಿ ಮಾತ್ರ ಘೋಷಿಸಿದೆ ಎಂದು ವಿಪಕ್ಷಗಳು ಆರೋಪಿಸಿತ್ತು. ಇತ್ತ ಸರ್ಕಾರದ ವಿರುದ್ದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಇದೀಗ ಪರಿಹಾರ ಮೊತ್ತವನ್ನು 25 ಲಕ್ಷ ರೂಪಾಯಿಗೆ ಏರಿಕೆ ಮಾಡಲಾಗಿದೆ.
ಆರ್‌ಸಿಬಿ ತಂಡದಿಂದ ತಲಾ 10 ಲಕ್ಷ ರೂಪಾಯಿ ಪರಿಹಾರ
ಆರ್‌ಸಿಬಿ ವಿಜಯೋತ್ಸವದಲ್ಲಿ ಸಂಭವಿಸಿದ ಕಾಲ್ತುಳಿತದ ಘಟನೆ ಕುರಿತು ತೀವ್ರ ಬೇಸರ ವ್ಯಕ್ತಪಡಿಸಿದ್ದ ಆರ್‌ಸಿಬಿ ಮೃತರ ಕುಟುಂಬಕ್ಕೆ ತಲಾ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಿತ್ತು. ಇದೇ ವೇಳೆ ಗಾಯಗೊಂಡವರಿಗೆ ಆರ್‌ಸಿಬಿ ಫ್ಯಾನ್ಸ್ ಕೇರ್ ಸ್ಥಾಪಿಸಿ ಈ ಮೂಲಕ ನೆರವಾಗುವುದಾಗಿ ಘೋಷಿಸಿತ್ತು.
ರಾಜ್ಯ ಕ್ರಿಕೆಟ್ ಸಂಸ್ಥೆಯಿಂದ 5 ಲಕ್ಷ ರೂ ಪರಿಹಾರ
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಈ ದುರಂತದಲ್ಲಿ ರಾಜ್ಯ ಕ್ರಿಕೆಟ್ ಸಂಸ್ಥೆಯ ಹೊಣೆಗಾರಿಕೆ ಕುರಿತು ಆರೋಪಿಗಳು ಕೇಳಿಬರುತ್ತಿದೆ. ಈ ಕುರಿತು ದೂರು ಕೂಡ ದಾಖಲಾಗಿದೆ. ಇತ್ತ ರಾಜ್ಯ ಕ್ರಿಕೆಟ್ ಸಂಸ್ಥೆ ಪದಾಧಿಕಾರಿಗಳು ರಾಜೀನಾಮೆ ನೀಡಿದ್ದಾರೆ. ಘಟನೆ ನಡೆದ ಬಳಿಕ ರಾಜ್ಯ ಕ್ರಿಕೆಟ್ ಸಂಸ್ಥೆ ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂ ಪರಿಹಾರ ಘೋಷಿಸಿದೆ.
ಮೃತರ ಕುಟುಂಬಕ್ಕೆ ಒಟ್ಟು 40 ಲಕ್ಷ ರೂ ಪರಿಹಾರ
ಚಿನ್ನಸ್ವಾಮಿ ಕ್ರೀಡಾಂಗಣದ ಕಾಲ್ತುಳಿತ ದುರಂತದಲ್ಲಿ ಮೃತಪಟ್ಟ ಕುಟುಂಬದವರಿಗೆ ಪರಿಹಾರ ಮೊತ್ತವಾಗಿ ತಲಾ 40 ಲಕ್ಷ ರೂಪಾಯಿ ಸಿಗಲಿದೆ.
ಸರ್ಕಾರದ ಪರಿಹಾರ ಮೊತ್ತ: 25 ಲಕ್ಷ ರೂಪಾಯಿ
ಆರ್‌ಸಿಬಿ ಪರಿಹಾರ ಮೊತ್ತ: 10 ಲಕ್ಷ ರೂಪಾಯಿ
ಕೆಎಸ್‌ಸಿಎ ಪರಿಹಾರ ಮೊತ್ತ: 5 ಲಕ್ಷ ರೂಪಾಯಿ
ಬೆಂಗಳೂರು ಕಾಲ್ತುಳಿತಕ್ಕೆ ಹೊಣೆ ಯಾರು?
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಘಟನೆಗೆ ಹೊಣೆ ಯಾರು ಅನ್ನೋ ಪ್ರಶ್ನೆ, ಉತ್ತರ, ಆರೋಪ-ಪ್ರತ್ಯಾರೋಪಗಳು ನಡೆಯುತ್ತಿದೆ. ವಿಪಕ್ಷಗಳು ನೇರವಾಗಿ ಸರ್ಕಾರ ಹೊಣೆ ಎಂದು ಆರೋಪಿಸಿದೆ. ನಿರ್ಲಕ್ಷ ಹಾಗೂ ಪ್ರಚಾರದ ತೆವಲಿಗೆ ಕಾರ್ಯಕ್ರಮ ಆಯೋಜಿಸಿ ಜನರ ಬಲಿಪಡೆದಿದೆ ಎಂದು ವಿಪಕ್ಷಗಳು ಆರೋಪಿಸಿದೆ. ಇತ್ತ ಸರ್ಕಾರ ಕರ್ತವ್ಯ ಲೋಪ ಆರೋಪಡಿ ಪೊಲೀಸ್ ಕಮಿಷನರ್ ಸೇರಿದಂತೆ ಪೊಲೀಸ್ ಅಧಿಕಾರಿಗಳ ಅಮಾನತು ಮಾಡಿದೆ.
