ಲಿಂಗರಾಜು ಕೋರಾ

 ಬೆಂಗಳೂರು[ಜ.09]: ರಾಜ್ಯ ಕಳೆದ ವರ್ಷ ಎರಡು ಪ್ರವಾಹ ಪರಿಸ್ಥಿತಿ ಎದುರಿಸಿದ್ದು, ಈ ಪೈಕಿ ಮೊದಲ ಪ್ರವಾಹದಿಂದ ಉಂಟಾದ ನಷ್ಟಕ್ಕೆ ಕೇಂದ್ರ ಸರ್ಕಾರದಿಂದ ಪರಿಹಾರ ಪಡೆಯಲು ಇನ್ನೂ ಹಗ್ಗ-ಜಗ್ಗಾಟ ನಡೆಸಿದೆ. ಕುತೂಹಲಕಾರಿ ಸಂಗತಿಯೆಂದರೆ, ಸೆಪ್ಟೆಂಬರ್‌ ಹಾಗೂ ಅಕ್ಟೋಬರ್‌ ಮಾಸದಲ್ಲಿ ಸಂಭವಿಸಿದ್ದ ಕಳೆದ ವರ್ಷದ ಎರಡನೇ ಭೀಕರ ಪ್ರವಾಹಕ್ಕೆ ಪರಿಹಾರ ಕೋರಿ ಇನ್ನೂ ಪ್ರಸ್ತಾವನೆಯನ್ನು ಸರ್ಕಾರ ಸಲ್ಲಿಸಲು ಸಾಧ್ಯವಾಗಿಲ್ಲ.

ಇದಕ್ಕೆ ಕಾರಣ- ಒಂದೇ ವರ್ಷದಲ್ಲಿ ಒಮ್ಮೆ ಪ್ರವಾಹಕ್ಕೀಡಾದ ಪ್ರದೇಶಗಳಲ್ಲೇ ಮತ್ತೆ ಪ್ರವಾಹ ಉಂಟಾದರೆ ಯಾವ ರೀತಿ ಲೆಕ್ಕಾಚಾರ ಹಾಕಿ ಪರಿಹಾರ ಕೇಳಬೇಕು ಎಂಬ ಬಗ್ಗೆ ಸರ್ಕಾರಕ್ಕೇ ಸ್ಪಷ್ಟತೆ ಇಲ್ಲದಿರುವುದು. ಈ ಗೊಂದಲ ಬಗೆಹರಿಸಿಕೊಳ್ಳಲು ರಾಜ್ಯ ಸರ್ಕಾರ ಕೇಂದ್ರದ ಮೊರೆ ಹೋಗಿದೆಯಂತೆ. ಇದರಿಂದ ಪರಿಹಾರಕ್ಕೆ ಪ್ರಸ್ತಾವನೆ ಸಲ್ಲಿಸುವುದು ಮತ್ತಷ್ಟುವಿಳಂಬವಾಗಿದ್ದು, ಸಂತ್ರಸ್ತರಿಗೆ ಪರಿಹಾರ ಸಿಗುವುದು ಇನ್ನಷ್ಟುವಿಳಂಬವಾಗುವ ಸಾಧ್ಯತೆ ಇದೆ.

2019ರ ಆಗಸ್ಟ್‌ ನಲ್ಲಿ ಉಂಟಾದ ಭೀಕರ ಪ್ರವಾಹದ ಬಳಿಕ ಸೆಪ್ಟೆಂಬರ್‌ ಮತ್ತು ಅಕ್ಟೋಬರ್‌ನಲ್ಲಿ ರಾಜ್ಯ ಮತ್ತೆ ಭಾರೀ ಮಳೆಯಿಂದಾಗಿ 2ನೇ ಬಾರಿಗೆ ಪ್ರವಾಹÜ ಎದುರಿಸಬೇಕಾಯಿತು. ಈ ಸಂದರ್ಭದಲ್ಲಿ ಬೆಳಗಾವಿ, ಬಾಗಲಕೋಟೆ ಸೇರಿದಂತೆ 19 ಜಿಲ್ಲೆಗಳ ವಿವಿಧ ಪ್ರದೇಶಗಳು ಅತಿವೃಷ್ಟಿಮತ್ತು ನೆರೆಯಿಂದ ತತ್ತರಿಸಿದ್ದವು. ಒಟ್ಟು 46 ಜನ ಸಾವನ್ನಪ್ಪಿದ್ದರು. 3,577 ಕುಟುಂಬಗಳು ಮನೆ ಕಳೆದುಕೊಂಡು ಬೀದಿಪಾಲಾಗಿವೆ. ಪ್ರವಾಹಕ್ಕೆ ಸಿಲುಕಿದ್ದ 5221 ಜನರನ್ನು ರಕ್ಷಿಸಿದ್ದ ಸರ್ಕಾರ ಅವರಿಗೆ 41 ಕಾಳಜಿ ಕೇಂದ್ರಗಳನ್ನು ತೆರೆದಿತ್ತು. ಪ್ರವಾಹ ಇಳಿದ ಬಳಿಕ ಈ ಕುಟುಂಬಗಳು ಮನೆಗೆ ವಾಪಸ್‌ ತೆರಳಿದಾಗ ತಾತ್ಕಾಲಿಕವಾಗಿ ರಾಜ್ಯ ಸರ್ಕಾರದಿಂದಲೇ 10 ಸಾವಿರ ರು. ಪರಿಹಾರ ನೀಡಲಾಗಿದೆ.

ಆದರೆ, 2ನೇ ಬಾರಿಯ ಪ್ರವಾಹಕ್ಕೆ ತುತ್ತಾಗಿ ಮನೆ, ಬೆಳೆ, ಆಸ್ತಿ ಪಾಸ್ತಿ ಕಳೆದುಕೊಂಡ ಕುಟುಂಬಗಳಿಗೆ ರಾಷ್ಟ್ರೀಯ ವಿಪತ್ತು ಪರಿಹಾರ ನಿಯಮ (ಎನ್‌ಡಿಆರ್‌ಎಫ್‌) ಪ್ರಕಾರ ಸೂಕ್ತ ಪರಿಹಾರ ಒದಗಿಸುವಂತೆ ಕೋರಿ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಪ್ರಸ್ತಾವನೆ ಸಲ್ಲಿಸಬೇಕಿತ್ತು. ಆದರೆ, ನಾಲ್ಕು ತಿಂಗಳು ಕಳೆದರೂ ಇನ್ನೂ ಪರಿಹಾರ ಕೋರಿ ವರದಿ ಸಲ್ಲಿಸಿಲ್ಲ. ಇದಕ್ಕೆ ಕಾರಣ ಏನೆಂದರೆ, ಆಗಸ್ಟ್‌ನಲ್ಲಿ ಮೊದಲ ಬಾರಿಗೆ ಪ್ರವಾಹ ಎದುರಾದಾಗಿದ್ದ ಬೆಳಗಾವಿ, ರಾಯಚೂರು, ಧಾರವಾಡ, ಬಾಗಲಕೋಟೆ ಮತ್ತಿತರ ಜಿಲ್ಲೆಗಳ ಹಲವು ಪ್ರದೇಶಗಳಲ್ಲೇ ಸೆಪ್ಟೆಂಬರ್‌ ಮತ್ತು ಅಕ್ಟೋಬರ್‌ನಲ್ಲೂ ಪ್ರವಾಹ ಉಂಟಾಗಿದೆ. ಹಾಗಾಗಿ ಒಂದೇ ವರ್ಷದಲ್ಲಿ ಒಮ್ಮೆ ಪ್ರವಾಹಕ್ಕೀಡಾದ ಪ್ರದೇಶಗಳಲ್ಲೇ ಮತ್ತೆ ಪ್ರವಾಹಕ್ಕೀಡಾದರೆ ಅದನ್ನು ಪರಿಹಾರಕ್ಕೆ ಯಾವ ರೀತಿ ಪರಿಗಣಿಸಬೇಕೆಂಬ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಹಾಗಾಗಿ ಇದನ್ನು ಯಾವ ರೀತಿ ಲೆಕ್ಕ ಹಾಕಬೇಕು, ಎಷ್ಟುಪ್ರಮಾಣದಲ್ಲಿ ಪರಿಹಾರ ಕೇಳಬೇಕು ಎಂಬ ಬಗ್ಗೆ ಗೊಂದಲ ಇದ್ದು, ಈ ಬಗ್ಗೆ ಕೇಂದ್ರ ಸರ್ಕಾರಕ್ಕೇ ಸ್ಪಷ್ಟನೆ ಕೇಳಲಾಗಿದೆ ಎಂದು ಕಂದಾಯ ಇಲಾಖೆಯ ರಾಜ್ಯ ವಿಪತ್ತು ನಿರ್ವಹಣಾ ವಿಭಾಗದ ಮೂಲಗಳು ತಿಳಿಸಿವೆ.

ಆಗಸ್ಟ್‌ನಲ್ಲಿ 38,000 ಕೋಟಿ ನಷ್ಟ:

ಕಳೆದ ವರ್ಷ ಆಗಸ್ಟ್‌ನಲ್ಲಿ ರಾಜ್ಯ ಹಿಂದೆಂದೂ ಕಂಡರಿಯದ ಭೀಕರ ಪ್ರವಾಹಕ್ಕೆ ತುತ್ತಾಗಿತ್ತು. ಇದರಿಂದ 22 ಜಿಲ್ಲೆಗಳಲ್ಲಿ 68 ಜನರು ಹಾಗೂ ಸುಮಾರು 900 ಜಾನುವಾರುಗಳು ಬಲಿಯಾಗಿದ್ದವು. 2.03 ಲಕ್ಷ ಮನೆಗಳು ಕೊಚ್ಚಿಹೋಗಿ 6 ಲಕ್ಷಕ್ಕೂ ಹೆಚ್ಚು ಜನರನ್ನು ಸುರಕ್ಷತಾ ಸ್ಥಳಗಳಿಗೆ ಸ್ಥಳಾಂತರಿಸಲಾಗಿತ್ತು. ಲಕ್ಷಾಂತರ ಜನ ನಿರಾಶ್ರಿತರಾಗಿದ್ದರು. 5.35 ಲಕ್ಷ ಹೆಕ್ಟೇರ್‌ ಬೆಳೆ ನಾಶವಾಗಿತ್ತು. ಇದರಿಂದ ಒಟ್ಟಾರೆ 38 ಸಾವಿರ ಕೋಟಿ ರು.ನಷ್ಟುನಷ್ಟವಾಗಿದೆ ಎಂದು ಅಂದಾಜಿಸಿದ್ದ ರಾಜ್ಯ ಸರ್ಕಾರ ರಾಷ್ಟ್ರೀಯ ನೈಸರ್ಗಿಕ ವಿಪತ್ತು ಪರಿಹಾರ (ಎನ್‌ಡಿಆರ್‌ಎಫ್‌) ನಿಯಮಗಳ ಅನುಸಾರ 3,500 ಕೋಟಿ ರು. ಪರಿಹಾರ ಕೋರಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಇದಕ್ಕೆ ಕೇಂದ್ರ ಸರ್ಕಾರ ಮೊದಲ ಹಂತದಲ್ಲಿ 1200 ಕೋಟಿ ರು., 2ನೇ ಹಂತದಲ್ಲಿ 669 ಕೋಟಿ ರು. ನೆರವು ನೀಡಿದೆ.

ಕಳೆದ ವರ್ಷ ಆಗಸ್ಟ್‌ನಲ್ಲಿ ಪ್ರವಾಹಕ್ಕೀಡಾಗಿದ್ದ ವಿವಿಧ ಜಿಲ್ಲೆಗಳ ಹಲವು ಪ್ರದೇಶಗಳಲ್ಲೇ ಸೆಪ್ಟೆಂಬರ್‌ ಮತ್ತು ಅಕ್ಟೋಬರ್‌ನಲ್ಲೂ ಪ್ರವಾಹ ಉಂಟಾಗಿತ್ತು. ಹಾಗಾಗಿ ಒಂದೇ ಪ್ರದೇಶ ಎರಡನೇ ಬಾರಿ ಪ್ರವಾಹಕ್ಕೀಡಾದಾಗ ನಷ್ಟದ ಪ್ರಮಾಣವನ್ನು ಹೇಗೆ ಅಂದಾಜಿಸಬೇಕು? ಎಷ್ಟುಪ್ರಮಾಣದಲ್ಲಿ ನಷ್ಟಕೇಳಬೇಕು ಎಂಬ ಬಗ್ಗೆ ಗೊಂದಲ ಇರುವುದು ನಿಜ. ಈ ಬಗ್ಗೆ ನಮ್ಮ ಅಧಿಕಾರಿಗಳು ಕೇಂದ್ರ ಸರ್ಕಾರದೊಂದಿಗೆ ಸಂಪರ್ಕದಲ್ಲಿದ್ದು, ಸ್ಪಷ್ಟನೆ ಕೇಳಿದ್ದಾರೆ. ಸ್ಪಷ್ಟನೆ ಸಿಕ್ಕ ಬಳಿಕ ವರದಿ ತಯಾರಿಸಿ ಪರಿಹಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು.

- ಆರ್‌.ಅಶೋಕ್‌, ಕಂದಾಯ ಸಚಿವ

ಇದರ ಬೆನ್ನಲ್ಲೇ, ಸೆಪ್ಟೆಂಬರ್‌ ಮತ್ತು ಅಕ್ಟೋಬರ್‌ನಲ್ಲಿ ಉಂಟಾದ ಪ್ರವಾಹದಿಂದ ಆಗಿರುವ ನಷ್ಟದ ಬಗ್ಗೆಯೂ ಸರ್ಕಾರ ಸಮೀಕ್ಷೆ ನಡೆಸಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿ ಸೂಕ್ತ ಪರಿಹಾರ ಕೋರಬೇಕಿತ್ತು. ಸಲ್ಲಿಸಿದ್ದರೆ ಕೇಂದ್ರದಿಂದ ಇನ್ನಷ್ಟುಪರಿಹಾರ ನಿರೀಕ್ಷಿಸಬಹುದಿತ್ತು. ಆದರೆ, ಪ್ರವಾಹದಿಂದಾದ ನಷ್ಟದ ವರದಿಯೇ ಇನ್ನೂ ಅಂತಿಮವಾಗಿಲ್ಲ. ಇದರಿಂದ ಪ್ರಸ್ತಾವನೆ ಸಲ್ಲಿಕೆ ಇನ್ನಷ್ಟುವಿಳಂಬವಾಗುವ ಸಾಧ್ಯತೆ ಇದೆ. ಪರಿಹಾರ ತಡವಾಗುವ ಆತಂಕ ಸಂತ್ರಸ್ತರಲ್ಲಿ ಮನೆ ಮಾಡಿದೆ.

ಗೊಂದಲ ಏಕೆ?

ಒಂದೇ ವರ್ಷದಲ್ಲಿ ಒಮ್ಮೆ ಪ್ರವಾಹಕ್ಕೀಡಾದ ಪ್ರದೇಶಗಳಲ್ಲೇ ಮತ್ತೆ ಪ್ರವಾಹ ಉಂಟಾದರೆ ಯಾವ ರೀತಿ ಲೆಕ್ಕಾಚಾರ ಹಾಕಿ ಪರಿಹಾರ ಕೇಳಬೇಕು ಎಂಬ ಬಗ್ಗೆ ಸರ್ಕಾರಕ್ಕೇ ಸ್ಪಷ್ಟತೆ ಇಲ್ಲ. ನಷ್ಟವನ್ನು ಯಾವ ರೀತಿ ಲೆಕ್ಕ ಹಾಕಬೇಕು, ಎಷ್ಟುಪ್ರಮಾಣದಲ್ಲಿ ಪರಿಹಾರ ಕೇಳಬೇಕು ಎಂಬ ಬಗ್ಗೆ ಗೊಂದಲ ಇದೆ.