ಬೆಂಗಳೂರು(ಮಾ.22): ಕೊರೋನಾ ವೈರಸ್‌ ಸೋಂಕು ಕುರಿತು ಹರಡುವ ವದಂತಿಗಳು ಹಾಗೂ ಅಪಪ್ರಚಾರಗಳನ್ನು ತಡೆದು ಜನರಿಗೆ ನೈಜ ಮಾಹಿತಿ ಒದಗಿಸಲು ವಾರ್ತಾ ಇಲಾಖೆಯು ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಕಾರ್ಯನಿರ್ವಹಿಸಲು ‘ಕೊರೋನಾ ಯೋಧ’ ಸ್ವಯಂ ಸೇವಕರಿಗೆ ಅರ್ಜಿ ಆಹ್ವಾನಿಸಿದೆ.

ಭಾರತೀಯ ರೆಡ್‌ ಕ್ರಾಸ್‌ ಸೊಸೈಟಿ ಹಾಗೂ ಕರ್ನಾಟಕ ರಾಜ್ಯ ಕಾರ್ಮಿಕ ಅಧ್ಯಯನ ಸಂಸ್ಥೆ ಸಹಯೋಗದಲ್ಲಿ ಕೊರೋನಾ ಯೋಧರು ಕೆಲಸ ಮಾಡಲಿದ್ದಾರೆ. ಈ ಸ್ವಯಂ ಸೇವಕರು ರಾಜ್ಯಾದ್ಯಂತ ಎಲ್ಲಾ ತಾಲೂಕುಗಳಲ್ಲಿ ಹರಡುವ ವದಂತಿಗಳ ಬಗ್ಗೆ ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ನೈಜ ಮಾಹಿತಿಯನ್ನು ಜನರಿಗೆ ತಲುಪಿಸಲು ಉಪಕಾರ ಮಾಡಬೇಕು.

ರಾಜ್ಯದ ಪ್ರತಿ ತಾಲೂಕಿನಲ್ಲಿ ಕನಿಷ್ಠ 4 ಸ್ವಯಂಸೇವಕರು ದಿನಕ್ಕೆ ನಾಲ್ಕು ಪಾಳಿಗಳಲ್ಲಿ ಕಾರ್ಯನಿರ್ವಹಿಸಬೇಕು. ಬೆಂಗಳೂರು ನಗರದಲ್ಲೇ ಸುಮಾರು 120 ಸ್ವಯಂ ಸೇವಕರಿಗೆ ಅವಕಾಶವಿದ್ದು, ರಾಜ್ಯಾದ್ಯಂತ ಸುಮಾರು 3,000 ಸ್ವಯಂ ಸೇವಕರು ಭಾಗವಹಿಸಬಹುದು.

ಈಗಾಗಲೇ ಆನ್‌ಲೈನ್‌ ಮೂಲಕ ಅರ್ಜಿಗಳನ್ನು ಸಲ್ಲಿಸಿ ನೋಂದಾಯಿಸಿಕೊಳ್ಳಬೇಕು. ಬಳಿಕ ಈ ಸ್ವಯಂ ಸೇವಕರಿಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಎಲ್ಲಾ ಜಿಲ್ಲಾ ಕಚೇರಿಗಳಲ್ಲಿ ಸೂಕ್ತ ತರಬೇತಿ, ಸುರಕ್ಷತಾ ಕಿಟ್‌ ಹಾಗೂ ಗುರುತಿನ ಚೀಟಿ ಒದಗಿಸಲಾಗುವುದು. ಆಸಕ್ತರು: https://covid19.karnataka.gov.in/coronawarrior.html ಅಂತರ್ಜಾಲ ತಾಣಕ್ಕೆ ಭೇಟಿ ನೀಡಿ ನೋಂದಣಿ ಮಾಡಿಕೊಳ್ಳಬಹುದು.