ಬೆಂಗಳೂರು (ಅ.30):  ಕೊರೊನಾ ಸೋಂಕು ತಗಲಿ ಗಂಭೀರ ಸ್ಥಿತಿಗೆ ತಲುಪಿರುವ ರೋಗಿಗಳಿಗೆ ವೈದ್ಯಕೀಯ ಆಮ್ಲಜನಕ ಪೂರೈಕೆಗೆ ರಾಜ್ಯ ಸರ್ಕಾರ ಸಾರಿಗೆ ದರ ನಿಗದಿಪಡಿಸಿ ಆದೇಶಿಸಿದೆ.

ಈ ಕುರಿತು ರಾಜ್ಯ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಂಜುಂ ಪರ್ವೇಜ್‌ ಬುಧವಾರ ಆದೇಶ ಹೊರಡಿಸಿದ್ದು, ಅದರಂತೆ ದ್ರವರೂಪದ ವೈದ್ಯಕೀಯ ಆಕ್ಸಿಜನ್‌ ಮತ್ತು ಆಕ್ಸಿಜನ್‌ ಸಿಲಿಂಡರ್‌ಗಳ ಪೂರೈಕೆಗೆ ಹತ್ತು ಟನ್‌ ಸಾಮರ್ಥ್ಯದವರೆಗೆ ಸಾಗಣೆಗೆ (ಬಂದು ಹೋಗುವುದು ಸೇರಿ) ಪ್ರತಿ ಕಿ.ಮೀ.ಗೆ 35 ರು.ಗಳನ್ನು ನಿಗದಿಪಡಿಸಲಾಗಿದೆ.

10ರಿಂದ 15 ಟನ್‌ವರೆಗೆ ಪ್ರತಿ ಕಿ.ಮಿ.ಗೆ 40 ರು., 15ರಿಂದ 20 ಟನ್‌ಗೆ ಪ್ರತಿ ಕಿ.ಮೀ.ಗೆ 45 ರು., 20ರಿಂದ 30 ಟನ್‌ಗೆ ಪ್ರತಿ ಕಿ.ಮೀ.ಗೆ 52.50 ರು. ಹಾಗೂ 30 ಟನ್‌ ಮೇಲ್ಪಟ್ಟು ಪ್ರತಿ ಕಿ.ಮೀ.ಗೆ 60 ರು. ನಿಗದಿಪಡಿಸಲಾಗಿದ್ದು, ಈ ಆದೇಶ ತಕ್ಷಣದಿಂದ ಜಾರಿಗೆ ಬರಲಿದೆ. ಇದು 2021ರ ಮಾಚ್‌ರ್‍ 31ರ ವರೆಗೆ ಅನ್ವಯವಾಗಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಕೊವಿಡ್ ವಾರ್ಡ್‌ಗೆ ಆಕ್ಸಿಜನ್ ಸಿಲಿಂಡರ್ ಖರೀದಿಸಲು 7.68 ಲಕ್ಷ ಕೊಟ್ಟ ನಟ

ಈ ಆದೇಶ ಉಲ್ಲಂಘಿಸುವವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ 2005ರ ಅಡಿ ದಂಡನಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಎಚ್ಚರಿಸಲಾಗಿದೆ.

ಕೇಂದ್ರದ ಸೂಚನೆಯಂತೆ ಇತ್ತೀಚೆಗೆ ನಡೆದ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಕಾರ್ಯಕಾರಿ ಸಮತಿಯ ತೀರ್ಮಾನದಂತೆ ಈ ಆದೇಶ ಹೊರಡಿಸಲಾಗಿದೆ ಎಂದು ಉಲ್ಲೇಖಿಸಲಾಗಿದೆ.