ರಾಜ್ಯ ಸರ್ಕಾರ ಅಧಿಕಾರಿಗಳ ಮೇಲೆ ನಿಯಂತ್ರಣ ಕಳೆದುಕೊಂಡಿದ್ದು, ಸಚಿವರು, ಶಾಸಕರು ಅಧಿಕಾರಿಗಳ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ. ಹಾವೇರಿಯಲ್ಲಿ ನಡೆದ ಜನ ಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ಕುಡಿಯುವ ನೀರಿನ ಯೋಜನೆ, ರಸ್ತೆ ದುರಸ್ತಿ, ರೈಲ್ವೆ ಯೋಜನೆಗಳ ಬಗ್ಗೆಯೂ ಪ್ರಸ್ತಾಪಿಸಿದರು.

ಹಾವೇರಿ (ಡಿ.26): ರಾಜ್ಯ ಸರ್ಕಾರ ಅಧಿಕಾರಿಗಳ ಮೇಲೆ ನಿಯಂತ್ರಣ ಕಳೆದುಕೊಂಡಿದೆ. ಅಧಿಕಾರಿಗಳ ಜೊತೆ ಸರ್ಕಾರದ ಸಚಿವರು, ಶಾಸಕರು ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಯಾರು ಜವಾಬ್ದಾರಿ ತೆಗೆದುಕೊಳ್ಳುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.

ಹಾವೇರಿಯಲ್ಲಿ ಜನ ಸಂಪರ್ಕ ಸಭೆ ನಡೆಸಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಅಧಿಕಾರಿಗಳ ಮೇಲೆ ಹಿಡಿತ ಕಳೆದುಕೊಂಡಿದೆ. ಏಕೆಂದರೆ ಅಧಿಕಾರಿಗಳ ಜೊತೆ ಅವರು ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಹೀಗಾಗಿ ಯಾವ ಕೆಲಸವೂ ಆಗುತ್ತಿಲ್ಲ. ಯಾರೂ ಉತ್ತರ ದಾಯುತ್ವ ಇಲ್ಲ, ಭಯ ಇಲ್ಲ, ಅಂಧಾ ದುಂಧಿ ಸರ್ಕಾರ ನಡೆಯುತ್ತಿದೆ. ಹಾವೇರಿಯಲ್ಲಿ ಗುತ್ತಿಗೆದಾರರು ಯಾಕೆ ಕೆಲಸ ಮಾಡುತ್ತಿಲ್ಲ ಎನ್ನುವುದು ಯಕ್ಷ ಪ್ರಶ್ನೆಯಾಗಿದೆ. ಗುತ್ತಿಗೆದಾರರು ಗುತ್ತಿಗೆ ತೆಗೆದುಕೊಂಡ ಸಮಯ, ಸ್ಥಳಿಯ ನಿಬಂಧನೆಗಳು ಏನು ಎನ್ನುವುದರ ಬಗ್ಗೆ ತನಿಖೆಯಾಗಬೇಕು. ಕೇಂದ್ರ ಸರ್ಕಾರದ ಅಮೃತ್ ಯೋಜನೆ ಅಡಿಯಲ್ಲಿ ಕುಡಿಯುವ ನೀರಿನ ಯೋಜನೆ ಕೈಗೆತ್ತಿಕೊಂಡಿದ್ದು, ಕೇಂದ್ರ ಸರ್ಕಾರದಿಂದ ಹಣ ಬಿಡುಗಡೆಯಾಗಿದೆ. ಈ ಯೋಜನೆ ಎಲ್ಲೆಲ್ಲಿ ಆರಂಭವಾಗಿ ಮುಕ್ತಾಯದ ಹಂತಕ್ಕೆ ಬಂದಿದೆ ಎಂದರು.

ಯಾವ ವಾರ್ಡ್ ನಲ್ಲಿ ಎಲ್ಲಿಗೆ ನಿಂತಿದೆ ಎನ್ನುವ ಕುರಿತು ಕೂಡಲೇ ಇನ್ನೊಬ್ಬ ಗುತ್ತಿಗೆದಾರನಿಂದ ಕೆಲಸ ಆರಂಭಿಸಬೇಕು ಎಂದು ನಾನು ದಿಶಾ ಸಭೆಯಲ್ಲಿ ಹೇಳಿದ್ದೆ. ಹಳೆ ಗುತ್ತಿಗೆದಾರ ಕೋರ್ಟ್ವಗೆ ಹೋಗಿದ್ದರಿಂದ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಸರ್ಕಾರ ಕೂಡಲೇ ಇನ್ನೊಂದು ಡಿಪಿಆರ್ ಮಾಡಿ, ಸರ್ಕಾರ ಹಣ ಒದಗಿಸಿ ಕೆಲಸ ಪ್ರಾರಂಭಿಸಬೇಕು ಎಂದು ಒಂದು ತೀರ್ಮಾನವನ್ನು ಮಾಡಿದ್ದೇವು. ಈ ಸರ್ಕಾರ ಸ್ಪಂದಿಸಿಲ್ಲ. ಮುಂದಿನ ದಿಶಾ ಸಭೆಯಲ್ಲಿ ಈ ಕುರಿತು ಏನಾಗಿದೆ ಎಂಬ ಮಾಹಿತಿ ಪಡೆಯಲಾಗುವುದು. ಆದರೆ, ಸಮಗ್ರ ಕುಡಿಯುವ ನೀರಿನ ಯೋಜನೆ ಜಾರಿಗೆ ನಾನು ಬೆನ್ನು ಹತ್ತಿ ಕೆಲಸ ಮಾಡಿಸುವೆ ಎಂದು ಹೇಳಿದರು.

ಗ್ರಾಮೀಣ ರಸ್ತೆಗಳು ಸಾಕಷ್ಟು ಹದಗೆಟ್ಟಿದ್ದು ಅವುಗಳ ದುರಸ್ತಿ ಹಾಗೂ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ರಸ್ತೆ ನಿರ್ಮಾಣಕ್ಕೆ ರಾಜ್ಯ ಸರ್ಕಾರಕ್ಕೆ ಕೇಳಿದ್ದೇನೆ ಅವುಗಳಿಗೆ ಮಂಜೂರಾತಿ ಪಡೆದುಕೊಳ್ಳುತ್ತೇನೆ. ಶಿವಮೊಗ್ಗ ರಾಣೆಬೆನ್ನೂರು ರೈಲ್ವೆ ಯೋಜನೆಗೆ ಭೂಸ್ವಾಧೀನ ಪ್ರಕ್ರಿಯೆ ಆದಷ್ಟು ಬೇಗ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದೇನೆ. ಮುಂದಿನ ವಾರ ಸಭೆ ನಡೆಸಿ, ರೈಲು ಮಾರ್ಗದ ಕುರಿತ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸೂಚಿಸಿದ್ದೇನೆ. ಆದಷ್ಟು ಬೇಗ ಪ್ರಕ್ರಿಯೆ ಆರಂಭಿಸುತ್ತೇವೆ ಎಂದರು.

ಇದನ್ನೂ ಓದಿ: ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆ ಶೌಚಾಲಯದಲ್ಲಿ ಹೆಣ್ಣು ಭ್ರೂಣ ಪತ್ತೆ!

ಗದಗ ಯಲವಿಗಿ ರೈಲ್ವೆ ಯೋಜನೆ 200 ಕೋಟಿ ರೂ. ಕೊಟ್ಟ ಕೇಂದ್ರ: ಗದಗ ಯಲವಿಗಿ ರೈಲ್ವೆ ಯೋಜನೆಗೆ ಕೇಂದ್ರ ಸರ್ಕಾರ ಬಜೆಟ್ ನಲ್ಲಿ 200 ಕೋಟಿ ರೂಪಾಯಿ‌ ಒದಗಿಸಿದೆ. ರಾಜ್ಯ ಸರ್ಕಾರ ತನ್ನ ಪಾಲಿನ ಹಣವನ್ನು ನೀಡಿ, ಭೂಸ್ವಾಧೀನ ಮಾಡಬೇಕು ಎಂದು ಅಧಿಕಾರಿಗಳ ಜೊತೆ ಸಭೆ ಮಾಡಿದ್ದೇನೆ. ಮುಖ್ಯಮಂತ್ರಿಗಳಿಗೆ ಹಣ ಒದಗಿಸಲು ಪತ್ರ ಬರೆದಿದ್ದೇನೆ‌. ಅಧಿಕಾರಿಗಳು ಕೊಟ್ಟಿರುವ ಮಾಹಿತಿ ಪ್ರಕಾರ ಮಾರ್ಚ್ ಹೊತ್ತಿಗೆ ಭೂ ಸ್ವಾಧೀನ ಪ್ರಕ್ರಿಯೆ ಮುಗಿಯಲಿದೆ. ಆದಷ್ಟು ಬೇಗ ಅನುದಾನ ಬಿಡುಗಡೆ ಮಾಡಿ ಕಾಮಗಾರಿ ಆರಂಭಿಸಲು ರಾಜ್ಯ ಸರ್ಕಾರವನ್ನು ಒತ್ತಾಯಿಸುವುದಾಗಿ ತಿಳಿಸಿದರು.

ಅಸಲಿ ಗಾಂಧಿ ಹೆಸರಲ್ಲಿ ನಕಲಿ ಕಾಂಗ್ರೆಸ್ ಅಧಿವೇಶನ: ಮಹಾತ್ಮ ಗಾಂಧಿ ಕಾಂಗ್ರೆಸ್ ಗೂ ಇಂದಿನ ಕಾಂಗ್ರೆಸ್ ಗೂ ಬಹಳ ವ್ಯತ್ಯಾಸ ಇದೆ. ಅಸಲಿ ಕಾಂಗ್ರೆಸ್ ಗೂ ನಕಲಿ ಕಾಂಗ್ರೆಸ್ ಗೂ ವ್ಯತ್ಯಾಸ ಇದೆ. ಮಹಾತ್ಮ ಗಾಂಧೀಜಿಯವರ ತದ್ವಿರುದ್ಧವಾಗಿ ಈಗಿನ ಕಾಂಗ್ರೆಸ್ ನವರು ನಡೆದುಕೊಳ್ಳುತ್ತಿದಾರೆ. ರಾಜ್ಯದಲ್ಲಿ ಕಾನೂನು ರೀತಿ ಆಡಳಿತವೇ ಇಲ್ಲ. ಎಲ್ಲಾ ಇಲಾಖೆಗಳು, ನಿಗಮಗಳಲ್ಲಿ ಭ್ರಷ್ಟಾಚಾರ ನಡೆದಿದೆ. ದೀನ ದಲಿತರ ಅನುದಾನದಲ್ಲೇ ಭ್ರಷ್ಟಾಚಾರ ಮಾಡಿದ್ದಾರೆ. ಗಾಂಧಿಯವರ ಸ್ವರಾಜ್ಯಕ್ಕೆ ತದ್ವಿರುದ್ದವಾಗಿ ನಡೆದುಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಅಧಿವೇಶನಕ್ಕೆ ಸರ್ಕಾರದ ಹಣ ಬಳಸುತ್ತಿರುವುದು ಎಷ್ಟು ಸರಿ? ಇದು ಯಾವ ಕಾನೂನಿನಲ್ಲಿದೆ? ರಾಜಕೀಯ ಸಮ್ಮೇಳನಗಳಿಗೆ ಸರ್ಕಾರದ ಹಣ ಬಳಸುವುದು ಎಷ್ಟರ ಮಟ್ಟಿಗೆ ಸರಿ? ಗಾಂಧೀಜಿಯವರನ್ನು ಮುಂದಿಟ್ಟುಕೊಂಡು ತಮ್ಮ ಬ್ಯಾನರ್ ಹಾಕಿಕೊಂಡು ಅಧಿವೇಶನ ಮಾಡುತ್ತಿದ್ದಾರೆ. ಅಸಲಿ ಗಾಂಧಿ ಹೆಸರಲ್ಲಿ ನಕಲಿ ಕಾಂಗ್ರೆಸ್ ಅಧಿವೇಶನ ಮಾಡುತ್ತಿದ್ದಾರೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದರು.

ಇದನ್ನೂ ಓದಿ:ಮೈಸೂರು ಪ್ರಿನ್ಸೆಸ್ ರಸ್ತೆ ಹೆಸರಿನ ಹಿಂದೆ ಇಷ್ಟೊಂದು ದೊಡ್ಡ ಇತಿಹಾಸ ಇದೆಯೇ?