Local Body Election ಒಬಿಸಿ ಮೀಸಲು ಕಲ್ಪಿಸಿಯೇ ಸ್ಥಳೀಯ ಚುನಾವಣೆ, ರಾಜ್ಯ ಸರ್ಕಾರ!
- ಸುಪ್ರೀಂಕೋರ್ಚ್‌ಗೆ ಮೇಲ್ಮನವಿ ಸಲ್ಲಿಕೆಗೆ ರಾಜ್ಯ ಸರ್ಕಾರ ನಿರ್ಧಾರ
- 3 ತಿಂಗಳು ಸಮಯ ನೀಡುವಂತೆ ಕೋರ್ಚ್‌ಗೆ ಮನವಿ,
- ಕಾನೂನು ತಜ್ಞರ ಜತೆ ಸಿಎಂ ಸಭೆ
ಬೆಂಗಳೂರು(ಮೇ.13): ಸುಪ್ರೀಂಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಇಕ್ಕಟ್ಟಿಗೆ ಸಿಲುಕಿರುವ ಸರ್ಕಾರವು ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸದೆ ಎದುರಿಸುವ ಪ್ರಶ್ನೆಯೇ ಇಲ್ಲ ಎಂಬ ನಿಲವಿಗೆ ಬಂದಿದ್ದು, ಸುಪ್ರೀಂಕೋರ್ಚ್‌ಗೆ ಮೇಲ್ಮನವಿ ಸಲ್ಲಿಸಲು ತೀರ್ಮಾನಿಸಿದೆ.
ಗುರುವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ, ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಅವರು ಕಾನೂನು ತಜ್ಞರ ಜತೆ ಸಭೆ ನಡೆಸಿದರು. ಸಭೆಯ ಮಾಹಿತಿಯನ್ನು ಸಚಿವ ಸಂಪುಟ ಸಭೆಯ ಬಳಿಕ ಸಚಿವ ಜೆ.ಸಿ.ಮಾಧುಸ್ವಾಮಿ ನೀಡಿದರು.
ಸುಪ್ರೀಂ ಆದೇಶದಂತೆ ಸ್ಥಳೀಯ ಸಂಸ್ಥೆ ಚುನಾವಣೆ ನಡೆಸುತ್ತಾ ಸರ್ಕಾರ?
ಸಚಿವ ಸಂಪುಟ ಸಭೆಯಲ್ಲಿ ಸ್ಥಳೀಯ ಸಂಸ್ಥೆಯ ಚುನಾವಣೆ ಕುರಿತು ಚರ್ಚೆ ನಡೆಸಿಲ್ಲ. ಆದರೆ, ಮುಖ್ಯಮಂತ್ರಿಗಳ ಜತೆ ಪ್ರತ್ಯೇಕ ಸಭೆ ನಡೆಸಿ ಚರ್ಚಿಸಲಾಗಿದೆ. ಹಿಂದುಳಿದ ವರ್ಗಕ್ಕೆ ಈ ಹಿಂದಿನ ಮೀಸಲಾತಿ ಅನ್ವಯವಾದರೂ ಸರಿ ಅಥವಾ ಹೊಸದಾಗಿ ಸರ್ಕಾರ ರೂಪಿಸುತ್ತಿರುವ ಮೀಸಲಾತಿ ಅನ್ವಯವಾದರೂ ಸರಿ, ಮೀಸಲಾತಿ ಕಲ್ಪಿಸಿಯೇ ಚುನಾವಣೆ ನಡೆಸಲು ಅವಕಾಶ ನೀಡುವಂತೆ ಸುಪ್ರೀಂಕೋರ್ಚ್‌ಗೆ ಮನವಿ ಮಾಡುತ್ತೇವೆ ಎಂದರು.
ಮೀಸಲಾತಿ ನಿಗದಿ ಮಾಡುವ ಸಂಬಂಧ ನ್ಯಾ.ಭಕ್ತವತ್ಸಲಂ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಲಾಗಿದೆ. 3-4 ತಿಂಗಳಲ್ಲಿ ವರದಿ ನೀಡಲಿದೆ. ಸುಪ್ರೀಂಕೋರ್ಚ್ ಆದೇಶ ಹಿನ್ನೆಲೆಯಲ್ಲಿ ವರದಿಯನ್ನು ಆದಷ್ಟುಬೇಗ ನೀಡುವಂತೆ ತಿಳಿಸಲಾಗಿದೆ. ಸಮಿತಿಯು ವರದಿ ನೀಡಲು ಸಮಯ ತೆಗೆದುಕೊಳ್ಳುವುದರಿಂದ ಮೂರು ತಿಂಗಳಾದರೂ ಕಾಲಾವಕಾಶ ನೀಡುವಂತೆ ನ್ಯಾಯಾಲಯವನ್ನು ಕೋರಲು ತೀರ್ಮಾನಿಸಲಾಗಿದೆ. 1983ರಿಂದ ಹಿಂದುಳಿದ ವರ್ಗಕ್ಕೆ ಮೀಸಲಾತಿ ಕಲ್ಪಿಸಲಾಗುತ್ತಿದೆ. ಮೀಸಲಾತಿ ಇಲ್ಲದೆ ಚುನಾವಣೆ ಎದುರಿಸಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಚ್‌ಗೆ ಮೇಲ್ಮನವಿ ಸಲ್ಲಿಸಿ ಕಾಲಾವಕಾಶ ಕೋರುತ್ತೇವೆ ಎಂದು ತಿಳಿಸಿದರು.
ಮಧ್ಯಪ್ರದೇಶ, ಮಹಾರಾಷ್ಟ್ರ ಪ್ರಕರಣ ಸಂಬಂಧ ಸುಪ್ರೀಂಕೋರ್ಚ್ ಆದೇಶ ನೀಡಿದೆ. ಆದರೆ, ರಾಜ್ಯದ ವಿಚಾರಕ್ಕೆ ಬಂದರೆ ಕೆಲವು ತಾಂತ್ರಿಕ ಸಮಸ್ಯೆಗಳು ಎದುರಾಗಿವೆ. 51 ಗ್ರಾಮಪಂಚಾಯಿತಿಗಳನ್ನು ಮೇಲ್ದರ್ಜೆಗೆ ಏರಿಸಲಾಗಿದೆ. ಅಲ್ಲದೇ, ಬೆಂಗಳೂರಿಗೆ 110 ಗ್ರಾಮಗಳನ್ನು ಸೇರಿಸಿ ಬಿಬಿಎಂಪಿ ಎಂದು ಪರಿಗಣಿಸಲಾಗಿದೆ. ವಾರ್ಡ್, ಕ್ಷೇತ್ರ ಮರುವಿಂಗಡಣೆ ಮಾಡಲಾಗಿದೆ. ಅಲ್ಲದೇ, ಗ್ರಾಮಪಂಚಾಯಿತಿಗೆ ಚುನಾವಣೆಗಳು ಮುಗಿದಿವೆ. ಹೀಗಿರುವಾಗ ಚುನಾವಣೆ ನಡೆಸಲಾಗುವುದಿಲ್ಲ. 2015ರ ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕದಲ್ಲಿ ತಾಲೂಕು ಪಂಚಾಯಿತಿಯ ವಿವಿಧ ಸ್ಥಾಯಿ ಸಮಿತಿ 11 ಸ್ಥಾನಕ್ಕಿಂತ ಕಡಿಮೆ ಇರಬಾರದು ಎಂದು ಹೇಳಲಾಗಿದೆ. ಹೊಸ ತಾಲೂಕುಗಳನ್ನು ಮಾಡಿರುವುದರಿಂದ 2015ರ ತಿದ್ದುಪಡಿಯಂತೆ ಕಾರ್ಯನಿರ್ವಹಿಸಲು ಆಗುವುದಿಲ್ಲ. ಹೀಗಾಗಿ ತಿದ್ದುಪಡಿ ಮಾಡಿ ಕನಿಷ್ಠ ಏಳು ಸ್ಥಾನಗಳು ಇರುವಂತೆ ಮಾಡಲಾಗುತ್ತಿದೆ. ಈ ಎಲ್ಲಾ ತಾಂತ್ರಿಕ ಸಮಸ್ಯೆ ಇರುವ ಕಾರಣ ಅವುಗಳನ್ನು ಬಗಹರಿಸಬೇಕು ಎಂದು ಹೇಳಿದರು.
ಬಿಬಿಎಂಪಿ ಚುನಾವಣೆ: ಸರ್ಕಾರಕ್ಕೆ ಕಗ್ಗಂಟಾದ ಸುಪ್ರೀಂ ಆದೇಶ
ಮಲೆನಾಡ ಭಾಗದಲ್ಲಿ 10-12 ಸಾವಿರ ಜನಸಂಖ್ಯೆಯಂತೆ ಕ್ಷೇತ್ರ ಮಾಡಿದರೆ ಹೆಚ್ಚಿನ ಸ್ಥಾನ ಬರುವುದಿಲ್ಲ. 2015ರಲ್ಲಿ ಕಾನೂನು ಮಾಡುವಾಗ ಸರ್ಕಾರವು ಸ್ವಲ್ಪ ಮುಂದಾಲೋಚನೆ ಮಾಡಬೇಕಾಗಿತ್ತು. ಆಗ ಸಮರ್ಪಕವಾಗಿ ಮಾಡದಿರುವ ಕಾರಣ ಈಗ ಸಮಸ್ಯೆ ಎದುರಾಗಿದೆ. ಪ್ರತಿಪಕ್ಷಗಳಿಗೂ ಈ ಬಗ್ಗೆ ಮನವರಿಕೆ ಮಾಡಿಕೊಡಲಾಗಿದೆ. ಸುಪ್ರೀಂಕೋರ್ಚ್‌ಗೆ ಮೇಲ್ಮನವಿ ಸಲ್ಲಿಸಿ ಅವಕಾಶ ನೀಡುವಂತೆ ಕೋರಲಾಗುವುದು ಎಂದು ನುಡಿದರು.
ಮೀಸಲಾತಿ ಸಂಬಂಧ ನ್ಯಾ.ಭಕ್ತವತ್ಸಲಂ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. 3-4 ತಿಂಗಳಲ್ಲಿ ವರದಿ ನೀಡಲಿದೆ. ಹೀಗಾಗಿ 3 ತಿಂಗಳಾದರೂ ಕಾಲಾವಕಾಶ ನೀಡುವಂತೆ ನ್ಯಾಯಾಲಯವನ್ನು ಕೋರಲು ತೀರ್ಮಾನಿಸಲಾಗಿದೆ.
ಮಾಧುಸ್ವಾಮಿ, ಕಾನೂನು ಸಚಿವ