ಬೆಂಗಳೂರು (ಸೆ.27): ಕೋವಿಡ್‌ ಪರಿಸ್ಥಿತಿ ಗಂಭೀರಗೊಂಡ ಹಿನ್ನೆಲೆಯಲ್ಲಿ ಕ್ಷಯ ರೋಗ ಪತ್ತೆ ಪ್ರಕ್ರಿಯೆ ಕಡಿಮೆಯಾಗಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರವು ಈ ಎರಡೂ ರೋಗಗಳ ಪತ್ತೆ ಪರೀಕ್ಷೆಗಳನ್ನು ಒಟ್ಟೊಟ್ಟಿಗೆ ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದೆ. 

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಜಾವೇದ್‌ ಅಖ್ತರ್‌, ಎಲ್ಲ ಕೋವಿಡ್‌-19 ರೋಗಿಗಳನ್ನು ಕ್ಷಯ ರೋಗ ಲಕ್ಷಣಗಳಿಗಾಗಿ ಪರೀಕ್ಷೆ ನಡೆಸಬೇಕು ಮತ್ತು ಎಲ್ಲ ಕ್ಷಯ ರೋಗಿಗಳನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಬೇಕು ಮತ್ತು ಹತ್ತು ದಿನಗಳನ್ನು ಮೀರಿ ಇನ್‌ಫ್ಲುಯೆಂಜಾ ರೀತಿಯ ಕಾಯಿಲೆ (ಐಎಲ್‌ಐ), ತೀವ್ರ ಉಸಿರಾಟದ ತೊಂದರೆ (ಸಾರಿ) ಗಳಿದ್ದವರನ್ನು ಕ್ಷಯ ರೋಗ ಪರೀಕ್ಷೆಗೆ ಒಳಪಡಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.

ಬೆಂಗಳೂರಲ್ಲಿ ಕೇವಲ 30 ದಿನದಲ್ಲಿ ಕೊರೋನಾ ದುಪ್ಪಟ್ಟು: 1000 ಕ್ಕೂ ಅಧಿಕ ಮಂದಿ ಸಾವು ..

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಕ್ಷಯ ರೋಗ ಪತ್ತೆಯಲ್ಲಿ ಶೇ.36ರಷ್ಟುಕುಸಿತವಾಗಿದೆ. ಕ್ಷಯ ರೋಗ ಪತ್ತೆ ಕಡಿಮೆಯಾಗಿರುವುದರಿಂದ ಈ ಕಾಯಿಲೆಯಿಂದ ಪ್ರಾಣ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚಾಗಬಹುದು ಹಾಗೂ ಕ್ಷಯ ರೋಗ ಹರಡಬಹುದು. ಹಾಗೆಯೇ ಕೋವಿಡ್‌ ರೋಗಿಗಳಲ್ಲಿ ಕ್ಷಯವಿದ್ದರೆ ಅದು ಮಾರಣಾಂತಿಕವಾಗುವುದು ಬೆಳಕಿಗೆ ಬಂದಿದೆ ಎಂದು ಸರ್ಕಾರ ಹೇಳಿದೆ.

ಈ ಎರಡೂ ಕಾಯಿಲೆಗಳು ಶ್ವಾಸಕೋಶದ ಮೇಲೆ ದಾಳಿ ನಡೆಸುವಂತಹದ್ದು. ಇವೆರೆಡರ ರೋಗ ಲಕ್ಷಣಗಳಲ್ಲೂ ಸಾಮ್ಯತೆಯಿದೆ ಎಂದು ಹೇಳಿರುವ ರಾಜ್ಯ ಸರ್ಕಾರ ಎರಡೂ ಪರೀಕ್ಷೆಗೆ ಮಾರ್ಗದರ್ಶಿ ಟಿಪ್ಪಣಿಯನ್ನು ಜಿಲ್ಲಾಡಳಿತಕ್ಕೆ ಕಳುಹಿಸಿಕೊಟ್ಟಿದೆ.