ಬೆಂಗಳೂರು :  ಕಾವೇರಿ ನೀರಿನ ಸಂಬಂಧ ನಡೆಸಿದ ಹೋರಾಟದಲ್ಲಿ ರೈತರ ವಿರುದ್ಧ ಮಂಡ್ಯ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಹೂಡಿರುವ ಪ್ರಕರಣಗಳನ್ನು ವಾಪಸ್‌ ಪಡೆಯಲಾಗುವುದು. ಈ ಸಂಬಂಧ ಸಂಪುಟ ಉಪ ಸಮಿತಿ ನಿರ್ಧರಿಸಿದೆ ಎಂದು ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ತಿಳಿಸಿದ್ದಾರೆ.

ಶನಿವಾರ ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಹೋರಾಟದ ಸಂಬಂಧ 1016 ಪ್ರಕರಣಗಳು ಮಂಡ್ಯ, ಮದ್ದೂರು, ಶ್ರೀರಂಗಪಟ್ಟಣ, ಪಾಂಡವಪುರ, ಮಳವಳ್ಳಿ ತಾಲ್ಲೂಕಿನ ರೈತರ ವಿರುದ್ಧ ದಾಖಲಾಗಿವೆ. ಈ ಪೈಕಿ ಶೇ. 95ರಷ್ಟುಪ್ರಕರಣಗಳನ್ನು ವಾಪಸ್‌ ಪಡೆಯಲಾಗುವುದು. ಆದರೆ ಸಾರ್ವಜನಿಕರ ಆಸ್ತಿ-ಪಾಸ್ತಿಗೆ ಹಾನಿ ಮಾಡಿದ ಪ್ರಕರಣಗಳನ್ನು ಹಿಂಪಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ವರಿಷ್ಠರ ತೀರ್ಮಾನ ಅಂತಿಮ:  ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್‌ ಜೊತೆ ಹೊಂದಾಣಿಕೆ ಸಂಬಂಧ ಪಕ್ಷದ ವರಿಷ್ಠರಾದ ಎಚ್‌.ಡಿ. ದೇವೇಗೌಡ, ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಎಚ್‌. ವಿಶ್ವನಾಥ್‌ ಅವರ ತೀರ್ಮಾನವೇ ಅಂತಿಮವಾಗಿದೆ, ಸಮ್ಮಿಶ್ರ ಸರ್ಕಾರದಲ್ಲಿ ಹೊಂದಾಣಿಕೆಯಿಂದಲೇ ಹೋಗಬೇಕಾಗುತ್ತದೆ. 

ಈ ಹಿಂದೆ ಅಟಲ್‌ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ 23 ಪಕ್ಷಗಳ ಜೊತೆ ಹೊಂದಾಣಿಕೆ ಮಾಡಿಕೊಂಡು ಆಡಳಿತ ನಡೆಸಿದ್ದರು. ಅದೇ ರೀತಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರ ಹೊಂದಾಣಿಕೆಯಿಂದ ಹೋಗಬೇಕಾಗಿದೆ ಎಂದರು.