ರಾಜ್ಯದ ಜನತೆಗೆ ಸರ್ಕಾರದಿಂದ ಮತ್ತೊಂದು ದರ ಏರಿಕೆ ಶಾಕ್ ಎದುರಾಗುತ್ತಿದೆ. ಇನ್ನು ಮುಂದೆ ಸ್ಟ್ಯಾಂಪ್ ಡ್ಯೂಟಿ ದರ ಏರಿಕೆಯಾಗುತ್ತಿದೆ. ಈ ಮೂಲಕ ಆದಾಯ ಕ್ರೋಢಿಕರಣಕ್ಕೆ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಳ್ಳುತ್ತಿದೆ.
ಬೆಂಗಳೂರು (ಜೂ.21) ಕರ್ನಾಟಕದಲ್ಲಿ ಈಗಾಗಲೇ ಹಲವು ವಸ್ತುಗಳು, ನೋಂದಣಿ ಶುಲ್ಕಗಳು ಹೆಚ್ಚಾಗಿದೆ. ಇದರ ಬೆನ್ನಲ್ಲೇ ಇದೀಗ ಮತ್ತೊಂದು ದರ ಏರಿಕೆಗೆ ಕರ್ನಾಟಕ ಸಾಕ್ಷಿಯಾಗಲಿದೆ. ಈ ಬಾರಿ ಕಾಂಗ್ರೆಸ್ ಸರ್ಕಾರ ಮುದ್ರಾಂಕ ಶುಲ್ಕ ( ಸ್ಟ್ಯಾಂಪ್ ಡ್ಯೂಟಿ) ಹೆಚ್ಚಿಸಲು ನಿರ್ಧರಿಸಿದೆ. ಶೇಕಡಾ 1 ರಷ್ಟು ಸ್ಟ್ಯಾಂಪ್ ಡ್ಯೂಟಿ ಹೆಚ್ಚಿಸುವ ಮೂಲಕ ಆಸ್ತಿ ನೋಂದಣಿ, ಮಾರಾಟದ ಮೂಲಕ ಬರುತ್ತಿರುವ ಆದಾಯ ಮೂಲ ಹೆಚ್ಚಿಸಲು ಸರ್ಕಾರ ಮುಂದಾಗಿದೆ. ಈ ದರ ಹೆಚ್ಚಳದಿಂದ ಇನ್ನು ಮುಂದೆ ಆಸ್ತಿ ಖರೀದಿದಾರರು ಒಟ್ಟು ಶೇಕಡಾ 7.6ರಷ್ಟು ತೆರಿಗೆ, ಶುಲ್ಕ ಪಾವತಿಸಬೇಕಿದೆ.
ಆಸ್ತಿ ಖರೀದಿದಾರರ ಜೇಬಿಗೆ ಕತ್ತರಿ
ಆಸ್ತಿ ಖರೀದಿದಾರರು ಶೇಕಡಾ 5ರಷ್ಟು ಸ್ಟ್ಯಾಂಪ್ ಡ್ಯೂಟಿ, ಶೇಕಡಾ 1 ರಷ್ಟು ನೋಂದಣಿ ಶುಲ್ಕ, ಶೇಕಡಾ 0.5 ರಷ್ಟು ಸೆಸ್, ಶೇಕಡಾ 0.1 ರಷ್ಟು ಸರ್ಚಾರ್ಜ್ ಸೇರಿ ಒಟ್ಟು ಶೇಕಡಾ 6.6 ರಷ್ಟು ಶುಲ್ಕ ಪಾವತಿಸಬೇಕು. ಆದರೆ ದರ ಏರಿಕೆಯಿಂದ ಇನ್ನು ಶೇಕಡಾ 7.6 ರಷ್ಟು ಪಾವತಿಸಬೇಕು. ಇದು ಆಸ್ತಿ ಖರೀದಿ ಮೊತ್ತದ ಶೇಕಡಾ 7.6 ರಷ್ಟು ಮೊತ್ತವನ್ನು ಸರ್ಕಾರಕ್ಕೆ ತೆರಿಗೆ ಹಾಗೂ ಇತರ ಶುಲ್ಕಗಳ ರೂಪದಲ್ಲಿ ಪಾವತಿಸಬೇಕಿದೆ.
ದರ ಏರಿಕೆ ಪ್ರಸ್ತಾವನೆಗೆ ಸರ್ಕಾರದ ಗ್ರೀನ್ ಸಿಗ್ನಲ್
ಜೂನ್ 18 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಟ್ಯಾಂಪ್ಸ್ ಹಾಗೂ ನೋಂದಣಿ ವಿಭಾಗದ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ. ಹಣಕಾಸು ಖಾತೆ ಕೂಡ ಸಿದ್ದರಾಮಯ್ಯನವರೇ ನಿಭಾಯಿಸುತ್ತಿರುವ ಕಾರಣ ಈ ಸಭೆ ಭಾರಿ ಮಹತ್ವ ಪಡೆದುಕೊಂಡಿತ್ತು. ಮುದ್ರಾಂಕ ಶುಲ್ಕ ಹಾಗೂ ನೋಂದಣಿ ಶುಲ್ಕದಲ್ಲಿ ಆದಾಯ ಕೊರತೆ ಕಾಣುತ್ತಿದೆ. ಈ ಕುರಿತ ವರದಿ ಪರಿಶೀಲಿಸಿದ ಸಿದ್ದರಾಮಯ್ಯ ತಕ್ಷಣವೇ ಮುದ್ರಾಂಕ ಶುಲ್ಕ ಹಾಗೂ ನೋಂದಣಿ ಶುಲ್ಕ ವಿಭಾಗದಲ್ಲಿ ಆದಾಯ ಹೆಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಇದರಂತೆ ಮುದ್ರಾಂಖ ಸುಲ್ಕ ಹೆಚ್ಚಳದ ಪ್ರಸ್ತಾವನೆ ಮುನ್ನಲೆಗೆ ಬಂದಿದೆ. ಈ ಪ್ರಸ್ತಾವನೆಗೆ ಸರ್ಕಾರ ಕೂಡ ಗ್ರೀನ್ ಸಿಗ್ನಲ್ ನೀಡಿದೆ. ಆದಾಯ ಹಾಗೂ ಎಸ್ ಆ್ಯಂಡ್ ಆರ್ ವಿಭಾಗದ ಜೊತೆ ಅಂತಿಮ ಸುತ್ತಿನ ಚರ್ಚೆ ನಡೆಸಿ ಈ ದರ ಏರಿಕೆ ಜಾರಿಯಾಗುವ ಸಾಧ್ಯತೆ ಇದೆ.
ನೆರೆ ರಾಜ್ಯಗಳನ್ನು ಗುರಾಣಿಯಾಗಿ ಹಿಡಿಯಲಿದೆ ಸರ್ಕಾರ
ಹಾಲಿನ ದರ ಏರಿಕೆ ಸೇರಿದಂತೆ ಇತರ ಅಗತ್ಯ ವಸ್ತುಗಳ ದರ ಏರಿಕೆ ಸಂದರ್ಭದಲ್ಲಿ ನೆರೆ ರಾಜ್ಯಗಳಿಗೆ ಹೋಲಿಸಿದೆರೆ ಕರ್ನಾಟಕದಲ್ಲಿ ಹಾಲಿನ ದರ ಕಡಿಮೆ ಇದೆ ಎಂದು ಸಮರ್ಥನೆ ನೀಡಿತ್ತು. ಇದೀಗ ಮುದ್ರಾಂಕ ಶುಲ್ಕ ಹಾಗೂ ನೋಂದಣಿ ಶುಲ್ಕ ದರ ಏರಿಕೆಗೂ ನೆರೆ ರಾಜ್ಯಗಳನ್ನೇ ಗುರಾಣಿಯಾಗಿ ಹಿಡಿಯುವ ಸಾಧ್ಯತೆ ದಟ್ಟವಾಗಿದೆ. ನೆರೆ ರಾಜ್ಯಗಳಲ್ಲಿ ಈ ದರ ಕರ್ನಾಟಕಕ್ಕಿಂದ ದುಬಾರಿಯಾಗಿದೆ.
ಸ್ಟ್ಯಾಂಪ್ ಡ್ಯೂಟಿ ದರ ಏರಿಕೆ ಪ್ರಸ್ತಾವನೆಗೆ ರಿಯಲ್ ಎಸ್ಟೇಟ್ ಉದ್ಯಮದಾರರು ಸೇರಿದಂತೆ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆಸ್ತಿ ಖರೀದಿ, ಮಾರಾಟದ ವೇಳೆ ಹಲವರು ಸಮಸ್ಯೆ ಎದುರಿಸುತ್ತಿದ್ದಾರೆ. ಪೋರ್ಟಲ್ ಸಮಸ್ಯೆ, ತಾಂತ್ರಿಕ ಸಮಸ್ಯೆಗಳಿಂದ ಜನರು ಅಲೆದಾಜುವಂತಾಗಿದೆ. ಸರ್ಕಾರ ಆದಾಯ ಕೊರತೆ ಅನುಭವಿಸುತ್ತಿದೆ ನಿಜ. ಅದಕ್ಕೆ ಸ್ಟ್ಯಾಂಪ್ ಡ್ಯೂಟಿ ದರ ಏರಿಕೆ ಪರಿಹಾರವಲ್ಲ ಎಂದು ರಿಯಲ್ ಎಸ್ಟೇಟ್ ಡೆವಲಪ್ಪರ್ ಅಸೋಸಿಯೇಶನ್ ಇಂಡಿಯಾದ ರಾಜ್ಯ ಘಟಕದ ಅಧ್ಯಕ್ಷ ಟಿ ಭಾಸ್ಕರ್ ನಾಗೇಂದ್ರಪ್ಪ ಹೇಳಿದ್ದಾರೆ.
2023ರಲ್ಲಿ ಗೈಡೆನ್ಸ್ ವಾಲ್ಯೂ ದರವನ್ನು ಶೇಕಡಾ 39ರಷ್ಟು ಹೆಚ್ಚಿಸಲಾಗಿದೆ. ಇದೀಗ ಸ್ಟ್ಯಾಂಪ್ ಡ್ಯೂಟಿ ದರ ಏರಿಕೆಯಿಂದ ಆಸ್ತಿ ಖರೀದಿ ದುಬಾರಿಯಾಗಲಿದೆ.ಇದರಿಂದ ಬಹುತೇಕರು ತಮ್ಮ ಕನಸು ನನಸು ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಜೊತೆಗೆ ಆಸ್ತಿ ಖರೀದಿ, ಮನೆ ನಿರ್ಮಾಣಗಳು ಕುಂಠಿತಗೊಳ್ಳಲಿದ. ಇದರಿಂದ ರಿಯಲ್ ಎಸ್ಟೇಟ್ ಉದ್ಯಮ ಮಾತ್ರವಲ್ಲ, ಇದಕ್ಕ ಹೊಂದಿಕೊಂಡ ಎಲ್ಲಾ ಉದ್ಯಮಗಳು ನಷ್ಟ ಅನುಭವಿಸಲಿದೆ ಎಂದು ಟಿ ಭಾಸ್ಕರ್ ನಾಗೇಂದ್ರಪ್ಪ ಹೇಳಿದ್ದಾರೆ.
