ಬೆಂಗಳೂರು (ಮಾ.23):  ಕೋವಿಡ್‌-19ಕ್ಕೆ ಸಂಕಷ್ಟಕ್ಕೆ ಸಿಲುಕಿ ಜರ್ಜರಿತಗೊಂಡಿರುವ ಹೋಟೆಲ್‌ ಉದ್ಯಮದ ಪುನಶ್ಚೇತನಕ್ಕೆ ಪೂರಕವಾಗಲು ಸ್ಟಾರ್‌ ವರ್ಗದ ಹೋಟೆಲ್‌ಗಳಿಗೆ ಕೈಗಾರಿಕಾ ಸ್ಥಾನಮಾನ ನೀಡಿ ರಾಜ್ಯ ಸರ್ಕಾರ ಆದೇಶಿಸಿದೆ.

ಹೋಟೆಲ್‌ ಅಸೋಸಿಯೇಷನ್‌ ಆಫ್‌ ಇಂಡಿಯಾ ಆತಿಥ್ಯ ವಲಯಕ್ಕೆ ಕೈಗಾರಿಕಾ ಸ್ಥಾನಮಾನ ನೀಡಬೇಕು ಎಂದು ಮನವಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸಚಿವ ಸಂಪುಟ ಕಳೆದ ಫೆಬ್ರವರಿಯಲ್ಲಿ ಕೈಗಾರಿಕಾ ಸ್ಥಾನಮಾನ ನೀಡಲು ನಿರ್ಧರಿಸಿತ್ತು. ಈಗ ಹೋಟೆಲ್‌ ಉದ್ಯಮಕ್ಕೆ ಕೈಗಾರಿಕಾ ಸ್ಥಾನಮಾನ ನೀಡಿ, ವಿದ್ಯುಚ್ಛಕ್ತಿ ದರ ಮತ್ತು ಆಸ್ತಿ ತೆರಿಗೆಯಲ್ಲಿ 5 ವರ್ಷಗಳ ಅವಧಿಗೆ ರಿಯಾಯಿತಿ ನೀಡಿ ಆದೇಶ ಹೊರಡಿಸಲಾಗಿದೆ.

5 Star Hotel ಶೌಚಾಲಯ ಬಳಕೆ ಇನ್ನು ಸಾರ್ವಜನಿಕರಿಗೆ ಫ್ರೀ! .

ರಾಜ್ಯದಲ್ಲಿ ನೋಂದಣಿಯಾಗಿರುವ 62 ಸ್ಟಾರ್‌ ವರ್ಗೀಕೃತ ಹೋಟೆಲ್‌ಗಳಿಗೆ ಮತ್ತು ಮುಂದಿನ ದಿನದಲ್ಲಿ ನೋಂದಣಿಯಾಗುವ ಸ್ಟಾರ್‌ ವರ್ಗೀಕೃತ ಹೋಟೆಲ್‌ಗಳಿಗೆ ಕೈಗಾರಿಕಾ ಸ್ಥಾನಮಾನ ದೊರೆಯಲಿದೆ. ಈ ಕುರಿತು ಕೈಗಾರಿಕಾ ಅಭಿವೃದ್ಧಿ ಮತ್ತು ವಾಣಿಜ್ಯ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆ ಸಮಾಲೋಚನೆ ಮಾಡಿ ಮಾರ್ಗಸೂಚಿಗಳನ್ನು ಹೊರಡಿಸಲಿವೆ. ವಿದ್ಯುಚ್ಛಕ್ತಿ ದರ ಮತ್ತು ಆಸ್ತಿ ತೆರಿಗೆಯಲ್ಲಿ ವಾಣಿಜ್ಯ ಬಳಕೆದಾರ ಮತ್ತು ಕೈಗಾರಿಕೆ ಬಳಕೆದಾರರ ನಡುವಿನ ವ್ಯತ್ಯಾಸದ ದರ ಮಾತ್ರ ಇದಕ್ಕೆ ಅನ್ವಯಿಸುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಅಲ್ಲದೇ, ಚಾಲ್ತಿಯಲ್ಲಿರುವ ಸಾಲಕ್ಕೆ ಮರು ಹಣಕಾಸಿನ ಸೌಲಭ್ಯ, ಸಾಲಗಳಿಗೆ ವಿಧಿಸಲು ಬಡ್ಡಿಯಲ್ಲಿ ಸಬ್ಸಿಡಿಯನ್ನು ಸುಲಭವಾಗಿ ಪಡೆಯುವುದು, ಕಡಿಮೆ ತೆರಿಗೆ ದರ ಮತ್ತು ಹೋಟೆಲ್‌ ಯೋಜನೆಗಳಿಗೆ ಪರವಾನಗಿ ಹಾಗೂ ಚಾಲನೆ ನೀಡುವ ಪ್ರಕ್ರಿಯೆಯನ್ನು ಸರಳೀಕರಿಸುವ ಸೌಲಭ್ಯವನ್ನು ಪಡೆದುಕೊಳ್ಳಬಹುದು. ರಾಜ್ಯದಲ್ಲಿ ಪಾರಂಪರಿಕ, ನೈಸರ್ಗಿಕ, ಕರಾವಳಿ, ಆಧ್ಮಾತ್ಮಿಕ, ಅರಣ್ಯ ಮತ್ತು ಸಾಹಸಿ ಪ್ರವಾಸ ಒಳಗೊಂಡಂತೆ 778 ಪ್ರವಾಸಿ ತಾಣಗಳನ್ನು ಗುರುತಿಸಲಾಗಿದೆ. ಪ್ರವಾಸೋದ್ಯಮ ಕ್ಷೇತ್ರ ರಾಜ್ಯದ ಜಿಎಸ್‌ಡಿಪಿಗೆ ಶೇ.14.8ರಷ್ಟುಕೊಡುಗೆ ನೀಡುತ್ತಿದೆ ಎಂದು ಆದೇಶದಲ್ಲಿ ವಿವರಿಸಲಾಗಿದೆ.