ಗುವಾಹಟಿ [ಜು.27] :  ಇನ್ನು ಮಹಿಳೆಯರು ಹಾಗೂ ಮಕ್ಕಳು ನಿಸರ್ಗದ ಕರೆಗೆ  ಪರದಾಡಬೇಕಿಲ್ಲ. ಮಾರುಕಟ್ಟೆ ಪ್ರದೇಶ, ದೂರ ಪ್ರಯಾಣದ ವೇಳೆ ಸಾರ್ವಜನಿಕ ಶೌಚಾಲಯ ಇಲ್ಲದಿದ್ದರೂ ಸಂಕಷ್ಟ ಪಡಬೇಕಿಲ್ಲ. ಇದಕ್ಕೆ ಗುವಾಹಟಿಯಲ್ಲಿ ಶೌಚಾಲಯಗಳ ಬಳಕೆಗೆ ಮುಕ್ತ ಅವಕಾಶ ನೀಡಲಾಗಿದೆ. 

ಯಾವುದೇ ಹೋಟೆಲ್, ರೆಸ್ಟೋರೆಂಟ್ ಗಳಲ್ಲಿ, ಫೈವ್ ಸ್ಟಾರ್ ಹೋಟೆಲ್ ಗಳಲ್ಲಿ ಶೌಚಾಲಯ ಬಳಕೆಗೆ ನಿರ್ಬಂಧಿಸುವಂತಿಲ್ಲ. ಗ್ರಾಹಕರಲ್ಲದಿದ್ದರೂ ಹಣವನ್ನು ನೀಡದೇ ಶೌಚಾಲಯ ಬಳಕೆ ಮಾಡಬಹುದಾಗಿದೆ.  ಸ್ವತಂತ್ರವಾಗಿ ತೆರಳಿ ಬಳಸಲು ಅವಕಾಶ ಒದಗಿಸಲಾಗಿದೆ. 

ಈ ಬಗ್ಗೆ ಗುವಾಹಟಿ ಮುನಿಸಿಪಲ್ ಕಾರ್ಪೊರೇಷನ್ ಕಮಿಷನರ್  ದೆಬೇಶ್ವರ್ ಮಲಕರ್ ಈ ಬಗ್ಗೆ ನಿರ್ದೇಶನವನ್ನು ನೀಡಿದ್ದಾರೆ. ನಗರದಲ್ಲಿ ಸಾರ್ವಜನಿಕ ಶೌಚಾಲಯಗಳ ಸಂಖ್ಯೆ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಇದ್ದು, 33 ಬಯೋ ಶೌಚಾಲಯಗಳಿವೆ. ಇಲ್ಲಿನ ಜನಸಂಖ್ಯೆಗೆ ಇವುಗಳು ಅತೀ ಕಡಿಮೆ. ಈ ನಿಟ್ಟಿನಲ್ಲಿ ಪಂಚತಾರಾ ಹೋಟೆಲ್ ಗಳನ್ನು ಸಾರ್ವಜನಿಕರು ಮುಕ್ತವಾಗಿ ಬಳಸಬಹುದು ಎಂದಿದ್ದಾರೆ. 

ಒಂದು ವೇಳೆ ಯಾವುದೇ ಶಾಪಿಂಗ್ ಮಾನ್, ಹೋಟೆಲ್ ಗಳು ಶೌಚಾಲಯ ಬಳಕೆಗೆ ಅವಕಾಶ ನಿರಾಕರಿಸಿದಲ್ಲಿ ದಂಡ ವಿಧಿಸಲಾಗುತ್ತದೆ ಎಂದು ಕಮಿಷನರ್ ಎಚ್ಚರಿಸಿದ್ದಾರೆ.

ದಿಲ್ಲಿ ಸೇರಿದಂತೆ ಕೆಲ ನಗರಗಳಲ್ಲಿ ಈ ರೀತಿ ಶೌಚಾಲಯ ಬಳಕೆಗೆ ಮುಕ್ತ ಅವಕಾಶವನ್ನು ಕೆಲ ವರ್ಷಗಳ ಹಿಂದೆಯೇ ನೀಡಲಾಗಿದೆ. ಇದೀಗ ಗುವಾಹಟಿಯಲ್ಲಿಯೂ ಕೂಡ ಶೌಚಾಲಯ ಬಳಕೆಗೆ ನಿರ್ಬಂಧ ವಿಧಿಸುವಂತಿಲ್ಲ ಎಂದು ಆದೇಶ ನೀಡಲಾಗಿದೆ.