ಮನೆಯಲ್ಲೇ ಐಸೋಲೇಟ್ ಆಗಿರುವ ರೋಗಿಗಳ ನೆರವಿಗೆ ಕಾಲ ಸೆಂಟರ್ ಸಿಬ್ಬಂದಿ ನೇಮಿಸಲಾಗಿದೆ. ಇಲ್ಲಿಂದ ಹೋಮ್ ಐಸೋಲೇಷನ್ ಆಗಿರುವವರಿಗೆ ಸೂಕ್ತ ಸಲಹೆ ಲಭ್ಯವಾಗಲಿದೆ. 

ಬೆಂಗಳೂರು (ಏ.28): ಹೋಂ ಐಸೋಲೇಷನ್‌ನಲ್ಲಿರುವ ಕೋವಿಡ್‌ ರೋಗಿಗಳಿಗೆ ಮಾರ್ಗದರ್ಶನ ನೀಡಲು ಕಾಲ್‌ಸೆಂಟರ್‌ನಲ್ಲಿ 1,100 ಮಂದಿಯನ್ನು ನಿಯೋಜನೆ ಮಾಡಲು ತೀರ್ಮಾನಿಸಲಾಗಿದೆ ಎಂದು ಆರೋಗ್ಯ ಸಚಿವ ಡಾ. ಕೆ.ಸುಧಾಕರ್‌ ಹೇಳಿದ್ದಾರೆ.

ವಿಧಾನಸೌಧದಲ್ಲಿ ನಡೆದ ಕೋವಿಡ್‌ ಟಾಸ್ಕ್‌ಫೋರ್ಸ್‌ ಸಭೆಯ ನಂತರ ಮಾತನಾಡಿದ ಅವರು, ಮನೆಯಲ್ಲಿ ಆರೈಕೆ ಮಾಡುವುದಕ್ಕೆ ಹೆಚ್ಚಿನ ಆದ್ಯತೆ ನೀಡಲು ನಿರ್ಧರಿಸಲಾಗಿದೆ. ಈಗಾಗಲೇ ಕಾಲ್‌ಸೆಂಟರ್‌ನಲ್ಲಿ 400 ಸಿಬ್ಬಂದಿ ಕಾರ್ಯನಿರ್ವಹಿಸಿದ್ದಾರೆ. ಕೋವಿಡ್‌ ಉಲ್ಬಣಗೊಳ್ಳುತ್ತಿರುವ ಕಾರಣ ಇಷ್ಟುಮಂದಿಯಿಂದ ಕಷ್ಟವಾಗುತ್ತಿದೆ. ಹೀಗಾಗಿ ಮನೆ ಆರೈಕೆಯಲ್ಲಿರುವವರಿಗೆ ಕರೆ ಮಾಡಿ ಮಾರ್ಗದರ್ಶನ ನೀಡಲು 1,100 ಮಂದಿಯನ್ನು ನಿಯೋಜನೆ ಮಾಡಲಾಗುವುದು. ಇದಕ್ಕಾಗಿ 11 ಕೋಟಿ ರು. ವೆಚ್ಚದಲ್ಲಿ ಆರು ತಿಂಗಳಿಗೆ ಸಿಬ್ಬಂದಿಯನ್ನು ನೇಮಕ ಮಾಡಿಕೊಂಡು ಹೊಸ ವ್ಯವಸ್ಥೆ ಮಾಡಲಾಗುವುದು. ಇದಲ್ಲದೇ, 20 ಕೋಟಿ ರು. ವೆಚ್ಚದಲ್ಲಿ ಟೆಲಿ ಮೆಡಿಸಿನ್‌, ವೈದ್ಯಕೀಯ ಸಲಹೆ ನೀಡಲು ನಿರ್ಧರಿಸಲಾಗಿದೆ ಎಂದು ವಿವರಿಸಿದರು.

ಕೋವಿಡ್‌ ಕೇರ್‌ ಸೆಂಟರ್‌:

ಇದಲ್ಲದೆ, ಪ್ರತಿ ಜಿಲ್ಲಾ ಮತ್ತು ತಾಲೂಕಿನಲ್ಲಿ 50-100 ಹಾಸಿಗೆಗಳ ಕೋವಿಡ್‌ ಕೇರ್‌ ಸೆಂಟರ್‌ ನಿರ್ಮಿಸಲು ತೀರ್ಮಾನಿಸಲಾಗಿದೆ. ಶೇ.10-20ರಷ್ಟುಆಮ್ಲಜನಕ ಹಾಸಿಗೆ ಇರಲಿದೆ. ಜಿಲ್ಲಾಡಳಿತಗಳು ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಿವೆ. ಪ್ರತಿ ಕೇಂದ್ರದಲ್ಲಿ ಪೋರ್ಟೆಬಲ್‌ ಆಕ್ಸಿಜನ್‌ ಆಮದು ಮಾಡಿಕೊಳ್ಳಲು ಪ್ರಯತ್ನಿಸಲಾಗುತ್ತಿದೆ. ಬೆಂಗಳೂರಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಅಥವಾ ಎರಡು ಕೇರ್‌ ಸೆಂಟರ್‌ಗಳನ್ನು ತೆರೆಯಲಾಗುವುದು. ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸ್ಥಳೀಯ ಶಾಸಕರ ಅಭಿಪ್ರಾಯಗಳನ್ನು ಪಡೆದು 14 ದಿನದಲ್ಲಿ ಅಧಿಕಾರಿಗಳು ಸಿದ್ಧಪಡಿಸಬೇಕು ಎಂದರು.

ಕೋವಿಡ್ ಅಂಕಿ-ಸಂಖ್ಯೆಯನ್ನು ಸರ್ಕಾರ ಮುಚ್ಚಿಡುತ್ತಿದ್ಯಾ? ಸ್ಪಷ್ಟನೆ ಕೊಟ್ಟ ಸುಧಾಕರ್ ...

ಕರ್ಫ್ಯೂನಿಂದ ಕೊರೋನಾ ಚೈನ್‌ ಕಡಿತ

ರಾಜ್ಯದಲ್ಲಿ ಕೋವಿಡ್‌ ಎರಡನೇ ಅಲೆ ವ್ಯಾಪಕವಾಗಿ ಹಬ್ಬುತ್ತಿದ್ದು, ಜನತಾ ಕರ್ಫ್ಯೂನಿಂದ ಚೈನ್‌ ಕಡಿತ ಮಾಡಬಹುದು. ಮುಂಬೈನಲ್ಲಿ ಕರ್ಫ್ಯೂ ವಿಧಿಸಿದ ಬಳಿಕ ಈಗ ದಿನಕ್ಕೆ ಮೂರು ಸಾವಿರ ಪ್ರಕರಣಗಳು ಕಂಡುಬರುತ್ತಿವೆ. ಅಲ್ಲಿ ಪ್ರಕರಣಗಳು ಇಳಿಕೆಯಾಗುತ್ತಿದೆ. ಕರ್ಪ್ಯೂ ವಿಧಿಸಿದರೆ ಸೋಂಕು ಕಡಿಮೆಯಾಗುತ್ತದೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಉಪಸ್ಥಿತರಿದ್ದರು.