ಬೆಂಗಳೂರು (ಅ.06):  ರಾಜ್ಯದಲ್ಲಿ ಕೋವಿಡ್‌-19 ಸಾಂಕ್ರಾಮಿಕ ಕಾಯಿಲೆ ವ್ಯಾಪಕವಾಗಿ ಹಬ್ಬುತ್ತಿರುವಾಗಲೇ ವೈದ್ಯರು, ಆರೋಗ್ಯ ಕಾರ್ಯಕರ್ತರು ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಪ್ರತಿಭಟನೆ ನಡೆಸಿ ಸರ್ಕಾರದ ಮೇಲೆ ಒತ್ತಡ ಹೇರಿದ್ದರಿಂದ ಪಾಠ ಕಲಿತಿರುವ ರಾಜ್ಯ ಸರ್ಕಾರ ಇದೀಗ ಕೊರೋನಾ ವಾರಿಯ​ರ್‍ಸ್  ಪ್ರತಿಭಟನೆಯನ್ನೇ ನಿಷೇಧಿಸಿ ಆದೇಶ ಹೊರಡಿಸಿದೆ.

ಯಾವುದೇ ಸಾರ್ವಜನಿಕ ವಲಯದ ಅಧಿಕಾರಿ, ಸಿಬ್ಬಂದಿ, ಆರೋಗ್ಯ ಸಿಬ್ಬಂದಿ, ಕಾಯಂ ಗುತ್ತಿಗೆ ಅಥವಾ ಹೊರ ಗುತ್ತಿಗೆ ಆಧಾರದಲ್ಲಿ ಆರೋಗ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರು ಮುಷ್ಕರ, ಅಸಹಕಾರ, ಅವಿಧೇಯತೆ ಹಾಗು ಆರೋಗ್ಯ ಸೇವೆಗಳಿಗೆ ಸಂಬಂಧಿಸಿದ ಕೆಲಸ ನಿರ್ವಹಿಸಲು ನಿರಾಕರಿಸುವುದು, ವರದಿಗಳನ್ನು ಸಲ್ಲಿಸದಿರುವುದು ಮತ್ತು ಮೇಲಾಧಿಕಾರಿಗಳ ಆದೇಶವನ್ನು ಪಾಲಿಸದಿರುವುದನ್ನು ನಿಷೇಧಿಸಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ್‌ ಭಾಸ್ಕರ್‌ ಅಧಿಸೂಚನೆ ಹೊರಡಿಸಿದ್ದಾರೆ.

ಬಿಎಸ್‌ವೈ ಸಂಪುಟದ ಮತ್ತೋರ್ವ ಸಚಿವರೊಬ್ಬರಿಗೆ ಕೊರೋನಾ..! ...

ರಾಜ್ಯದಲ್ಲಿ ಕೊರೋನಾ ಸೋಂಕು ಹಬ್ಬುವುದನ್ನು ತಡೆಗಟ್ಟುವ, ನಿರ್ಬಂಧಿಸುವ ಗುರಿಯನ್ನು ಸಾಧಿಸುವ ಜವಾಬ್ದಾರಿಯನ್ನು ಹೊಂದಿರುವ ಸಾರ್ವಜನಿಕ ವಲಯದ ಅಧಿಕಾರಿ ಮತ್ತು ಸಿಬ್ಬಂದಿ ತನ್ನ ಕರ್ತವ್ಯದಿಂದ ವಿಮುಖರಾದರೆ ಅವರ ಮೇಲೆ ವಿಪತ್ತು ನಿರ್ವಹಣಾ ಕಾಯ್ದೆಯಡಿ ಹೊರಡಿಸಿರುವ ಆದೇಶ ಮತ್ತು ಕರ್ನಾಟಕ ರಾಜ್ಯ ನಾಗರಿಕ ಸೇವೆಗಳ (ಮುಷ್ಕರಗಳ ನಿಯಂತ್ರಣ) ಕಾಯ್ದೆ - 1966ರಡಿ ದಂಡ ಅಥವಾ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ಮುಖ್ಯ ಕಾರ್ಯದರ್ಶಿಗಳು ನೀಡಿದ್ದಾರೆ.