Asianet Suvarna News Asianet Suvarna News

ರಾಜ್ಯ ಸರ್ಕಾರದಿಂದ ರೈತರಿಗೆ ಭರ್ಜರಿ ಗುಡ್ ನ್ಯೂಸ್

ರಾಜ್ಯದ ರೈತರಿಗೆ ಕರ್ನಾಟಕ ಸರ್ಕಾರವು ಗುಡ್ ನ್ಯೂಸ್ ನೀಡಿದೆ. ಬೆಂಬಲ ಬೆಲೆಯಡಿ ಖರೀದಿ ಮಾಡುವ ಬಗ್ಗೆ ಸಚಿವರು ತಿಳಿಸಿದ್ದಾರೆ

Karnataka Govt announces support price for  farmers snr
Author
Bengaluru, First Published Dec 9, 2020, 9:25 AM IST

ವಿಧಾನಸಭೆ (ಡಿ.09):  ಈ ಬಾರಿ ರೈತರಿಂದ 2.5 ಲಕ್ಷ ಟನ್‌ ಭತ್ತ ಮತ್ತು 3 ಲಕ್ಷ ಟನ್‌ ರಾಗಿ ಬೆಳೆಯನ್ನು ಬೆಂಬಲ ಬೆಲೆ ನೀಡಿ ಖರೀದಿಗೆ ಅನುಮತಿ ನೀಡಲಾಗಿದ್ದು, ಕೂಡಲೇ ಈ ಬೆಳೆಗಳ ಖರೀದಿ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದಾರೆ.

ವಿಧಾನಸಭೆಯಲ್ಲಿ ಮಂಗಳವಾರ ಕೃಷಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಕುರಿತು ನಡೆದ ಚರ್ಚೆಯ ಬಳಿಕ ಉತ್ತರ ನೀಡಿದ ಅವರು, ಹಿಂದಿನ ವರ್ಷದ ಖರೀದಿ ಸಾಮರ್ಥ್ಯದ ಆಧಾರದ ಮೇಲೆ ಈ ಬಾರಿ 2.10 ಲಕ್ಷ ಟನ್‌ ಭತ್ತ ಮತ್ತು 3 ಲಕ್ಷ ಟನ್‌ ರಾಗಿಯನ್ನು ಬೆಂಬಲ ಬೆಲೆ ನೀಡಿ ರೈತರಿಂದ ಖರೀದಿ ಮಾಡಲು ನಿರ್ಧರಿಸಲಾಗಿದೆ. ನ.1ರಿಂದ ನೋಂದಣಿ ಆರಂಭಿಸಿ ಡಿ.1ರಿಂದಲೇ ಖರೀದಿ ಪ್ರಕ್ರಿಯೆ ಆರಂಭವಾಗಬೇಕಿತ್ತು. ಆದರೆ, ಅಧಿಕಾರಿಗಳ ತಪ್ಪು ಗ್ರಹಿಕೆಯಿಂದ ಡಿ.1ರಿಂದ ನೋಂದಣಿ ಆರಂಭವಾಗಿದೆ. ಇದನ್ನು ಸರಿಪಡಿಸಲು ಕೂಡಲೇ ಖರೀದಿಯನ್ನೂ ಆರಂಭಿಸಲಾಗುವುದು ಎಂದು ತಿಳಿಸಿದರು.

'ಆತ್ಮಹತ್ಯೆ ಮಾಡಿಕೊಳ್ಳುವ ರೈತರು ಹೇಡಿಗಳು' ಪಾಟೀಲರ ಬಿಸಿ ಹೇಳಿಕೆ! ..

ಪ್ರತಿ ಕ್ವಿಂಟಾಲ್‌ಗೆ ಸಾಮಾನ್ಯ ಭತ್ತಕ್ಕೆ ಕೇಂದ್ರ ಸರಕಾರ ನಿಗದಿ ಮಾಡಿರುವ 1,868 ರು. ಹಾಗೂ ಗ್ರೆಡ್‌-1 ಭತ್ತಕ್ಕೆ 1,888 ರು. ನೀಡಲಾಗುತ್ತದೆ. ಪ್ರತಿ ರೈತರಿಂದ ಎಕರೆಗೆ 16 ಕ್ವಿಂಟಾಲ್‌ನಂತೆ ಗರಿಷ್ಠ 70 ಕ್ವಿಂಟಾಲ್‌ ಭತ್ತ ಖರೀದಿ ಮಾಡಲಾಗುತ್ತದೆ. ಬೆಂಬಲ ಬೆಲೆ ದಾಸ್ತಾನುದಾರರು ದುರುಪಯೋಗಪಡಿಸಿಕೊಳ್ಳಬಾರದೆಂಬ ರೈತರಿಗೆ ಅನುಕೂಲವಾಗಬೇಕೆಂಬ ಕಾರಣಕ್ಕೆ ಎಕರೆ ಮಿತಿ ವಿಧಿಸಲಾಗಿದೆ. ಆದರೆ, ಹೆಚ್ಚಿನ ಭೂಮಿ ಇರುವ ರೈತರು ತರುವ ಭತ್ತವನ್ನೂ ಖರೀದಿ ಮಾಡುತ್ತೇವೆ ಎಂದರು.

ಮೂಲ ಬೆಲೆ ಹೆಚ್ಚಿಸಿರುವುದರಿಂದ ಈ ಬಾರಿ ಬೆಂಬಲ ಬೆಲೆ ಕಡಿಮೆ ಮಾಡಲಾಗಿದೆ. ಖರೀದಿ ಕೇಂದ್ರಗಳಿಗೆ ಹೆಚ್ಚು ಭತ್ತದ ದಾಸ್ತಾನು ಬಂದರೆ ಖರೀದಿ ಮಿತಿಯನ್ನು 3 ಲಕ್ಷ ಟನ್‌ಗೆ ಹೆಚ್ಚಿಸಲಾಗುವುದು. ಕೇಂದ್ರದ ಅನುಮತಿಯಂತೆ ಮುಂದಿನ ಮೂರು ತಿಂಗಳ ಕಾಲ ಕೃಷಿ ಬೆಳೆ ಖರೀದಿ ಕೇಂದ್ರಗಳಲ್ಲಿ ಖರೀದಿ ಪ್ರಕ್ರಿಯೆ ನಡೆಯಲಿದೆ. ಇನ್ನೂ ಒಂದು ತಿಂಗಳು ವಿಸ್ತರಿಸಲು ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗುವುದು. ಹೆಚ್ಚುವರಿ 1 ಲಕ್ಷ ಟನ್‌ನಷ್ಟುಭತ್ತ ಖರೀದಿಗೆ ಅನುಮತಿ ನೀಡುವಂತೆಯೂ ಮನವಿ ಮಾಡಲಾಗಿದೆ ಎಂದರು.

ಮುಂದಿನ ವರ್ಷದಿಂದ ಹೆಸರು, ಉದ್ದಿನ ಕಾಳು ಖರೀದಿಗೆ ಜುಲೈ ಆಗಸ್ಟ್‌ನಿಂದಲೇ ಖರೀದಿ ಕೇಂದ್ರಗಳನ್ನು ಆರಂಭಿಸಲಾಗುವುದು ಎಂದು ಇದೇ ವೇಳೆ ಸಚಿವರು ತಿಳಿಸಿದರು.

Follow Us:
Download App:
  • android
  • ios