ಬೆಂಗಳೂರು ಶಿವಮೊಗ್ಗ ವಿಮಾನ ಸಂಚಾರಕ್ಕೆ ಸಬ್ಸಿಡಿ ಘೋಷಿಸಿದ ರಾಜ್ಯ ಸರ್ಕಾರ
ಬೆಂಗಳೂರು ಶಿವಮೊಗ್ಗ ವಿಮಾನ ಸಂಚಾರ ಇಂದಿನಿಂದ ಆರಂಭವಾಗಿದ್ದು, ಮುಂದಿನ ಒಂದು ವರ್ಷಗಳವರೆಗೆ ವಿಮಾನದ ಟಿಕೆಟ್ ಖರೀದಿಗೆ ರಾಜ್ಯ ಸರ್ಕಾರದ ಸಬ್ಸಿಡಿ ಘೋಷಣೆ ಮಾಡಿದೆ.
ಶಿವಮೊಗ್ಗ (ಆ.31): ರಾಜ್ಯದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಸುಸಜ್ಜಿತ 450 ಕೋಟಿ ರೂ, ವೆಚ್ಚದ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ವಿಮಾನ ನಿಲ್ದಾಣಕ್ಕೆ ಇಂದಿನಿಂದ ವಿಮಾನ ಹಾರಾಟ ಆರಂಭವಾಗಿದೆ. ಶಿವಮೊಗ್ಗದಿಂದ ಬೆಂಗಳೂರು ಹಾಗೂ ಬೆಂಗಳೂರು- ಶಿವಮೊಗ್ಗಕ್ಕೆ ಸಂಚಾರ ಮಾಡುವ ಎಲ್ಲ ಪ್ರಯಾಣಿಕರಿಗೆ ರಾಜ್ಯ ಸರ್ಕಾರದಿಂದ 500 ರೂ. ಸಬ್ಸಿಡಿ ನೀಡಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ ಘೋಷಣೆ ಮಾಡಿದರು.
ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹಾರಾಟ ಮಾಡಿದ ಮೊದಲ ವಿಮಾನದಲ್ಲಿ (ಇಂಡಿಗೋ) ಸಂಚಾರ ಮಾಡಿದ ಸಚಿವ ಎಂ.ಬಿ. ಪಾಟೀಲ್ ಅವರು ಶಿವಮೊಗ್ಗ ತಲುಪಿದ ನಂತರ ಮಾಧ್ಯಮಗಳ ಮುಂದೆ ಸಂತಸವನ್ನು ಹಂಚಿಕೊಂಡರು. ಈ ವೇಳೆ ಮಾತನಾಡಿದ ಅವರು, ಇಂದಿನಿಂದ ಮುಂದಿನ ಒಂದು ವರ್ಷದವರೆಗೆ (2024 ಆ.31ರವರೆಗೆ) ಶಿವಮೊಗ್ಗ- ಬೆಂಗಳೂರು ನಡುವೆ ಪ್ರಯಾಣಿಸುವ ಪ್ರತಿಯೊಬ್ಬರ ಟಿಕೆಟ್ ಮೇಲೆ 500 ರೂಪಾಯಿಗಳನ್ನು ರಾಜ್ಯ ಸರ್ಕಾರ ಸಬ್ಸಿಡಿ ನೀಡಲಿದೆ ಎಂದು ಘೋಷಿಸಿದರು.
ಇಂದಿನಿಂದ ಶಿವಮೊಗ್ಗದಲ್ಲಿ ವಿಮಾನ ಪ್ರಯಾಣ ಆರಂಭ: ಬೆಂಗಳೂರು TO ಶಿವಮೊಗ್ಗಕ್ಕೆ ಹಾರಾಟ
ವಿಮಾನಯಾನ ಕೂಡ ಸುಲಭವಾಗಿ ಲಭ್ಯವಾಗಬೇಕು ಎನ್ನುವುದು ರಾಜ್ಯ ಸರ್ಕಾರದ ಚಿಂತನೆಯಾಗಿದೆ. ಹೀಗಾಗಿ, ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಸ್ಥಳದಲ್ಲೇ ಟಿಕೆಟ್ ಖರೀದಿಗೆ ಅವಕಾಶವಿದ್ದು, ಪ್ರತಿಯೊಬ್ಬ ಪ್ರಯಾಣಿಕರಿಗೂ ಸರಕಾರದ ವತಿಯಿಂದ ಮುಂದಿನ ಒಂದು ವರ್ಷ ಕಾಲ 500 ರೂ. ಸಬ್ಸಿಡಿ ನೀಡಲಾಗುತ್ತದೆ. ಇದರಿಂದ ಸಾಮಾನ್ಯರು ಕೂಡ ವಿಮಾನದಲ್ಲಿ ಪ್ರಯಾಣಿಸಲು ಉತ್ತೇಜನ ನೀಡಿದಂತಾಗುತ್ತದೆ. ಇಷ್ಟೇ ಅಲ್ಲದೆ, ಈ ವಿಮಾನ ನಿಲ್ದಾಣವನ್ನು ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ (ಕೆಎಸ್‌ಐಐಡಿಸಿ) ಮೂಲಕವೇ ನಿರ್ವಹಿಸಲಾಗುವುದು. ಇದಕ್ಕೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಈಗಾಗಲೇ ಅನುಮತಿ ನೀಡಿದೆ. ಈ ಮೂಲಕ ರಾಜ್ಯದ ಬೊಕ್ಕಸಕ್ಕೆ ಆದಾಯದ ಹೊಸ ಮೂಲವೊಂದನ್ನು ಕಂಡುಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ವಿಮಾನಸೇವೆ ಲಭ್ಯತೆಯ ವಿವರ: ಇಂಡಿಗೋ ವಿಮಾನವು ಶಿವಮೊಗ್ಗ ವಿಮಾನ ನಿಲ್ದಾಣದಿಂದ ಪ್ರತಿದಿನ ಬೆಳಿಗ್ಗೆ 11.25ಕ್ಕೆ ಹೊರಟು 12.25ಕ್ಕೆ ಬೆಂಗಳೂರನ್ನು ತಲುಪಲಿದೆ. ಅಲ್ಲಿಂದ ಚೆನ್ನೈ, ಮುಂಬೈ ಮತ್ತು ದೆಹಲಿಗೆ ಹೊರಡಲಿರುವ ಇಂಡಿಗೋ ವಿಮಾನಗಳನ್ನು ಹಿಡಿಯಬಹುದು. ಈ ಸೇವೆಯು ಸೆ.10ರಿಂದ ಲಭ್ಯವಾಗಲಿದೆ. ಇದೇ ರೀತಿಯಲ್ಲಿ ಬೆಂಗಳೂರಿನ ಕಡೆಯಿಂದ ಇದೇ ವಿಮಾನವು ಪ್ರತಿದಿನ ಬೆಳಿಗ್ಗೆ 9.55ಕ್ಕೆ ಹೊರಟು 11.05ಕ್ಕೆ ಶಿವಮೊಗ್ಗದಲ್ಲಿ ಇಳಿಯಲಿದೆ ಎಂದು ಸಚಿವ ಎಂ.ಬಿ. ಪಾಟೀಲ ತಿಳಿಸಿದರು.
"ಕರ್ನಾಟಕದ ಅಭಿವೃದ್ಧಿಯ ಯಶೋಗಾಥೆಯಲ್ಲಿ ಇದೊಂದು ವಿನೂತನ ಅಧ್ಯಾಯವಾಗಿದೆ. ರಸಋಷಿ ಕುವೆಂಪು ಅವರ ಹೆಸರನ್ನು ಹೊರಲಿರುವ ಈ ವಿಮಾನ ನಿಲ್ದಾಣದಿಂದ ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ, ಚಿತ್ರದುರ್ಗ, ದಾವಣಗೆರೆ ಮತ್ತು ಹಾವೇರಿ ಜಿಲ್ಲೆಗಳ ಜನರಿಗೆ ಅನುಕೂಲವಾಗಲಿದೆ. ಈ ಮೂಲಕ ಮಲೆನಾಡು ಮತ್ತು ಮಧ್ಯಮ ಕರ್ನಾಟಕದ ಆರ್ಥಿಕ, ಕೈಗಾರಿಕಾ ಮತ್ತು ಶೈಕ್ಷಣಿಕ ಬೆಳವಣಿಗೆ ಹೊಸ ಮಜಲನ್ನು ಮುಟ್ಟಲಿದೆ" ಎಂದು ಸಚಿವ ಎಂ.ಬಿ.ಪಾಟೀಲ ಬಣ್ಣಿಸಿದರು.
ರಾಜ್ಯದ 9ನೇ ಏರ್‌ಪೋರ್ಟ್ ಶಿವಮೊಗ್ಗದಲ್ಲಿಂದು ಶುರು: ವಿಮಾನ ನಿಲ್ದಾಣದ ವಿಶೇಷತೆಗಳು ಗೊತ್ತಾ?
ಮೊದಲ ವಿಮಾನದಲ್ಲಿ ಪ್ರಯಾಣಿಸಿದ ಪ್ರಮುಖರು: ಸಚಿವ ಎಂ.ಬಿ.ಪಾಟೀಲ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಂಸದ ಬಿ ವೈ ರಾಘವೇಂದ್ರ, ಶಾಸಕರಾದ ಬಿ ವೈ ವಿಜಯೇಂದ್ರ, ಗೋಪಾಲಕೃಷ್ಣ ಬೇಳೂರು, ಅರಗ ಜ್ಞಾನೇಂದ್ರ, ಭಾರತಿ ಶೆಟ್ಟಿ, ಡಿ.ಎಸ್.ಅರುಣ್, ಮೂಲಸೌಕರ್ಯ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಗೌರವ್ ಗುಪ್ತ, ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್ ಸೆಲ್ವಕುಮಾರ್, ಕೆಎಸ್‌ಐಐಡಿಸಿ ವ್ಯವಸ್ಥಾಪಕ ನಿರ್ದೇಶಕ ಎಂ ಆರ್ ರವಿ, ಕಾರ್ಯನಿರ್ವಾಹಕ ನಿರ್ದೇಶಕ ಪ್ರಕಾಶ, ಉಪಸ್ಥಿತರಿದ್ದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸುಂದರೇಶ, ಮಾಜಿ ಸಚಿವ ಎಚ್.ಹಾಲಪ್ಪ, ಮಾಜಿ ಶಾಸಕ ಅಶೋಕ ನಾಯಕ, ಶಿವಮೊಗ್ಗ ಹಾಪ್ ಕಾಮ್ಸ್ ನಿರ್ದೇಶಕ ಆರ್. ವಿಜಯ ಕುಮಾರ್, ಶಿವಮೊಗ್ಗ ವಾಣಿಜ್ಯ ಮಹಾಮಂಡಲ ಅಧ್ಯಕ್ಷ ಗೋಪಿನಾಥ್, ಕಿಮ್ಮನೆ ಗಾಲ್ಫ್ ರೆಸಾರ್ಟ್ ಸಿಇಒ ರೋನಕ್, ನ್ಯಾಷನಲ್ ಕನ್‌ಸ್ಟ್ರಕ್ಷನ್ ಕಂಪನಿಯ ಷರೀಫ್ ಮತ್ತಿತರರು ಉಪಸ್ಥಿತರಿದ್ದರು.