ಬೆಂಗಳೂರು, (ಫೆ.03): ಕನ್ನಡ ಚಿತ್ರರಂಗದ ಒತ್ತಡಕ್ಕೆ ಮಣಿದ ರಾಜ್ಯ ಸರ್ಕಾರ ಮಾರ್ಗಸೂಚಿಯನ್ನು ಬದಲಿಸಿದ್ದು, ಚಿತ್ರಮಂದಿರದಲ್ಲಿ ಶೇಕಡ 100 ರಷ್ಟು ಪ್ರೇಕ್ಷಕರಿಗೆ ಅವಕಾಶ ಕಲ್ಪಿಸಿದೆ.

ಶೇಕಡ 100 ರಷ್ಟು ಅವಕಾಶ ಕಲ್ಪಿಸಲು ಮಾರ್ಗಸೂಚಿ ರಚಿಸುವಂತೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ಅಧಿಕಾರಿಗಳಿಗೆ ಸೂಚಿಸಿದ್ದು, ಸರ್ಕಾರದಿಂದ ಕೆಲವ ಕ್ಷಣಗಳಲ್ಲಿ ಅಧಿಕೃತ ಆದೇಶ ಹೊರಬೀಳಲಿದೆ.

ನಮಗೆ ಮನೋರಂಜನೆಗಿಂತ ಜನರ ಆರೋಗ್ಯ ಮುಖ್ಯ: ನಟರಿಗೆ ಸುಧಾಕರ್ ಟಾಂಗ್

ಇನ್ನು ಕನ್ನಡ ಚಿತ್ರರಂಗದ ಗಣ್ಯರ ಜೊತೆಗಿನ ಸಭೆ ಬಳಿಕ ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ಸುಧಾಕರ್,  ಸಿಎಂ ಸೂಚನೆ ಮೇರೆಗೆ ಮಾರ್ಗಸೂಚಿ ಬದಲಾಯಿಸುತ್ತೇವೆ. ಶೇ. 100 ಆಸನ ಭರ್ತಿಗೆ ಒಪ್ಪಿಗೆ ನೀಡಿದ್ದೇವೆ. ಇದು ಮುಂದಿನ 4 ವಾರಗಳ ತನಕ ಎಂದು ಸ್ಪಷ್ಟಪಡಿಸಿದರು.

ಒಂದು ವೇಳೇ ನಾಲ್ಕು ವಾರಗಳ ಕಾಲ ಏನಾದರೂ ಆದ್ರೆ ನಮ್ಮ ತೀರ್ಮಾನ ಬದಲಾಯಿಸೋದು ಅನಿವಾರ್ಯ  ಅಂತಲೂ ಈ ಸಂದರ್ಭದಲ್ಲಿ  ಸುಧಾಕರ್ ಹೇಳಿದರು.

ಈ ಮೊದಲು ರಾಜ್ಯ ಸರ್ಕಾರ, ರ ಕೊರೋನಾ ಎರಡನೇ ಕಾರಣ ಫೆಬ್ರವರಿ 28 ರವರೆಗೆ ಚಿತ್ರಮಂದಿರಗಳಲ್ಲಿ ಶೇಕಡ 50 ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ ನೀಡುವಂತೆ ಸುತ್ತೋಲೆ ಹೊರಡಿಸಿತ್ತು.

ಇದಕ್ಕೆ  ಕನ್ನಡ ಚಿತ್ರರಂಗದಿಂದ ವಿರೋಧ ವ್ಯಕ್ತವಾಗಿದ್ದು,  ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಶೇಕಡ 100 ರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡಿದ್ದರೂ ರಾಜ್ಯದಲ್ಲಿ ಶೇಕಡ 50ರಷ್ಟು ಮಾತ್ರ ಅವಕಾಶ ಹೇಗೆ ಅಂತೆಲ್ಲ ಪ್ರಶ್ನಿಸಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸಚಿವ ಸುಧಾಕರ್ ಅವರು ನಟ, ನಿರ್ಮಾಪಕ, ನಿರ್ದೇಶಕ ಸೇರಿದಂತೆ ಕನ್ನಡ ಚಿತ್ರರಂಗದ ಗಣ್ಯರ ಸಭೆ ಕರೆದಿದ್ದರು.