ಬೆಂಗಳೂರು(ಏ.20): ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ನಿಯಂತ್ರಣಕ್ಕೆ ಕೈಗೊಳ್ಳಬೇಕಿರುವ ಕ್ರಮಗಳ ಕುರಿತು ಸರ್ಕಾರವು ಸೋಮವಾರ ಬೆಂಗಳೂರು ನಗರ ಶಾಸಕರ ಅಭಿಪ್ರಾಯ ಸಂಗ್ರಹಿಸಿದ್ದು, ಮಂಗಳವಾರ ರಾಜ್ಯಪಾಲ ವಿ.ಆರ್‌. ವಾಲಾ ಅಧ್ಯಕ್ಷತೆಯಲ್ಲಿ ಸರ್ವ ಪಕ್ಷಗಳ ನಾಯಕರ ಸಭೆ ನಡೆಯಲಿದೆ. ಬಳಿಕ ಅಂತಿಮವಾಗಿ ಬೆಂಗಳೂರು ಹಾಗೂ ರಾಜ್ಯಾದ್ಯಂತ ಯಾವ್ಯಾವ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಸ್ಪಷ್ಟಆದೇಶ ಹೊರ ಬೀಳಲಿದೆ.

ಸೋಮವಾರ ಕಂದಾಯ ಸಚಿವ ಆರ್‌. ಅಶೋಕ್‌ ಅಧ್ಯಕ್ಷತೆಯಲ್ಲಿ ಬೆಂಗಳೂರು ನಗರದ ಶಾಸಕರು, ಸಂಸದರು ರಾಜಧಾನಿಯಲ್ಲಿ ಕೊರೋನಾ ನಿಯಂತ್ರಣಕ್ಕೆ ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಬಗ್ಗೆ ಸ್ಪಷ್ಟಅಭಿಪ್ರಾಯಗಳನ್ನು ತಿಳಿಸಿದ್ದಾರೆ. ಆಸ್ಪತ್ರೆಯಿಂದಲೇ ವಿಡಿಯೋ ಸಂವಾದದ ಮೂಲಕ ಸಭೆಯಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಎಲ್ಲಾ ಸಲಹೆಗಳನ್ನೂ ಸ್ವೀಕರಿಸಿದ್ದಾರೆ.

ಈ ವೇಳೆ ಕಾಂಗ್ರೆಸ್‌ ಪಕ್ಷದ ಸದಸ್ಯರು ಕೊರೋನಾ ನಿಯಂತ್ರಣಕ್ಕಾಗಿ 144 ಸೆಕ್ಷನ್‌ ವಿಧಿಸಬೇಕು. 4ಕ್ಕಿಂತ ಹೆಚ್ಚು ಜನ ಸೇರದಂತೆ ಕ್ರಮ ಕೈಗೊಳ್ಳಬೇಕು. ಆದರೆ, ಯಾವುದೇ ಕಾರಣಕ್ಕೂ ಲಾಕ್‌ಡೌನ್‌ ಮಾಡಬಾರದು. ಒಂದು ವೇಳೆ ಲಾಕ್‌ಡೌನ್‌ ಮಾಡಿದರೆ ಪ್ರತಿ ಕುಟುಂಬಕ್ಕೆ 25 ಸಾವಿರ ರು. ಹಣ ನೀಡಬೇಕು ಎಂದು ಒತ್ತಾಯಿಸಿದ್ದಾರೆ ಎಂದು ತಿಳಿದುಬಂದಿದೆ.

ಸಭೆ ಬಳಿಕ ಮಾತನಾಡಿದ ಕಂದಾಯ ಸಚಿವ ಆರ್‌. ಅಶೋಕ್‌, ಮಂಗಳವಾರ ರಾಜ್ಯಪಾಲ ವಿ.ಆರ್‌. ವಾಲಾ ಅಧ್ಯಕ್ಷತೆಯಲ್ಲಿ ಸರ್ವಪಕ್ಷಗಳ ಸಭೆ ನಡೆಯಲಿದೆ. ಈ ವೇಳೆ ಬೆಂಗಳೂರು ಜನಪ್ರತಿನಿಧಿಗಳ ಸಭೆಯ ಅಭಿಪ್ರಾಯ, ಕೊರೋನಾ ತಾಂತ್ರಿಕ ಸಲಹಾ ಸಮಿತಿಯ ತಜ್ಞರ ಅಭಿಪ್ರಾಯವನ್ನು ಮುಂದಿಟ್ಟುಕೊಂಡು ಚರ್ಚೆ ನಡೆಯಲಿದೆ. ಅಂತಿಮವಾಗಿ ಯಾವ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಬಗ್ಗೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ನಿರ್ಧರಿಸುತ್ತಾರೆ. ಮಂಗಳವಾರ ಸಂಜೆ ಈ ಬಗ್ಗೆ ಸ್ಪಷ್ಟಮಾರ್ಗಸೂಚಿಯನ್ನು ಪ್ರಕಟಿಸಲಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಲಾಕ್‌ಡೌನ್‌ ವಿರುದ್ಧ ಒಮ್ಮತ:

ಸಚಿವ ಆರ್‌.ಅಶೋಕ್‌, ಕಾಂಗ್ರೆಸ್‌ ಸೇರಿದಂತೆ ಎಲ್ಲಾ ಶಾಸಕರೂ ಲಾಕ್‌ಡೌನ್‌ ಬೇಡ ಎಂಬ ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವೀಕೆಂಡ್‌ ಲಾಕ್‌ಡೌನ್‌ ಬಗ್ಗೆಯೂ ಪ್ರಸ್ತಾಪ ಆಗಿಲ್ಲ. ಕಾಂಗ್ರೆಸ್‌ ಶಾಸಕರು ರಾಜ್ಯಾದ್ಯಂತ 144 ಸೆಕ್ಷನ್‌ ವಿಧಿಸಬೇಕು. ಈ ಮೂಲಕ 4ಕ್ಕಿಂತ ಹೆಚ್ಚು ಜನ ಸೇರದಂತೆ ನಿಯಂತ್ರಿಸಬೇಕು. ಇದರಿಂದ ಜನರ ನಿತ್ಯ ಜೀವನದ ಮೇಲೆ ಯಾವುದೇ ಕೆಟ್ಟಪರಿಣಾಮ ಬೀರುವುದಿಲ್ಲ ಎಂದು ಸಲಹೆ ನೀಡಿದ್ದಾರೆ. ಇವೆಲ್ಲವನ್ನೂ ಮುಖ್ಯಮಂತ್ರಿಗಳು ಆಲಿಸಿದ್ದು, ಮಂಗಳವಾರ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದರು.

ಸಭೆಗೆ ಕೊರೋನಾ ಪಾಸಿಟಿವ್‌ ಆಗಿದ್ದ ಶಾಸಕರನ್ನು ಹೊರತುಪಡಿಸಿ ಉಳಿದೆಲ್ಲರೂ ಆಗಮಿಸಿದ್ದರು. ಕಳೆದ ಬಾರಿ ಸೋಂಕಿತರು ಮನೆಯಲ್ಲಿ ಐಸೋಲೇಷನ್‌ ಆಗಿದ್ದರೆ ನಿತ್ಯ ದೂರವಾಣಿ ಕರೆ ಮಾಡಿ ವೈದ್ಯಕೀಯ ಸಲಹೆ ನೀಡಲಾಗುತ್ತಿತ್ತು. ಪಾಸಿಟಿವ್‌ ಇದ್ದವರು ಹೊರಗಡೆ ಓಡಾಡದಂತೆ ಸೀಲ್‌ ಹಾಕುತ್ತಿದ್ದರು. ಈ ಬಾರಿಯೂ ಅಂತಹ ಕ್ರಮ ಕೈಗೊಳ್ಳುವಂತೆ ಶಾಸಕರು ಸಲಹೆ ನೀಡಿದ್ದಾರೆ.

ಇನ್ನು ಬಿ.ಯು. ನಂಬರ್‌ ಸಮಸ್ಯೆಯಾಗುತ್ತಿದೆ. ಕೊರೋನಾ ಪಾಸಿಟಿವ್‌ ಬಂದ 8-10 ಗಂಟೆಗೆ ಬಿ.ಯು. ನಂಬರ್‌ ಬರುತ್ತಿದೆ ಎಂದು ದೂರಿದ್ದಾರೆ. ಈ ಬಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಸೂಚನೆ ನೀಡಿದ್ದು ಹೆಚ್ಚುವರಿ ಸಿಬ್ಬಂದಿಯನ್ನು ನೇಮಿಸಿಕೊಂಡು ಕೂಡಲೇ ಬಿ.ಯು. ನಂಬರ್‌ ನೀಡಲು ವ್ಯವಸ್ಥೆ ಮಾಡಲು ತಿಳಿಸಿದ್ದೇವೆ. ಉಳಿದಂತೆ ಐಸಿಯು ಸಮಸ್ಯೆ, ಆಕ್ಸಿಜನ್‌ ಸಮಸ್ಯೆ, ರೆಮ್‌ಡಿಸಿವಿರ್‌ ಸಮಸ್ಯೆ ಸೇರಿದಂತೆ ಎಲ್ಲವನ್ನೂ ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ಸಭೆಯಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌ ಸೇರಿದಂತೆ ಸಚಿವರು, ಬೆಂಗಳೂರು ನಗರ ಸಂಸದರು, ಶಾಸಕರು ಹಾಗೂ ವಿಧಾನಪರಿಷತ್‌ ಸದಸ್ಯರು ಭಾಗವಹಿಸಿದ್ದರು.

ಸರ್ಕಾರದ ವಿರುದ್ಧ ಕಾಂಗ್ರೆಸ್‌ ಸದಸ್ಯರು ಕಿಡಿ

ಕೊರೋನಾ ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಬೆಡ್‌ ವ್ಯವಸ್ಥೆ, ಆಕ್ಸಿಜನ್‌, ಔಷಧಗಳು ಸೇರಿದಂತೆ ಯಾವುದೇ ವ್ಯವಸ್ಥೆ ಮಾಡಿಕೊಂಡಿಲ್ಲ. ಹೀಗಾಗಿಯೇ ಜನ ಬೀದಿಗಳಲ್ಲಿ ಸಾಯುತ್ತಿದ್ದಾರೆ ಎಂದು ಕಾಂಗ್ರೆಸ್‌ ಸದಸ್ಯರು ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಕೊರೋನಾ ನಿರ್ವಹಣೆ ಹೆಸರಿನಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ. ಕಳೆದ ಒಂದು ವರ್ಷದಿಂದ ಕಾಲಾವಕಾಶವಿದ್ದರೂ ಯಾವುದೇ ಸಿದ್ಧತೆ ಮಾಡಿಕೊಂಡಿಲ್ಲ. ಪರಿಸ್ಥಿತಿ ಕೈ ಮೀರಿದ ಬಳಿಕ ಸಭೆ ಕರೆದಿದ್ದೀರಿ. ಲಾಕ್‌ಡೌನ್‌ ಮಾಡಬೇಡಿ ಮಾಡಿದರೆ ಕುಟುಂಬಕ್ಕೆ ತಲಾ 25 ಸಾವಿರ ರು. ಪರಿಹಾರ ನೀಡಿ ಎಂದು ಮಾಜಿ ಸಚಿವರಾದ ರಾಮಲಿಂಗಾರೆಡ್ಡಿ, ಕೃಷ್ಣ ಬೈರೇಗೌಡ, ಸಿ.ಎಂ. ಇಬ್ರಾಹಿಂ ಮತ್ತಿತರರು ಒತ್ತಾಯಿಸಿದರು.

ಈ ವೇಳೆ ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಹಾಗೂ ಕೃಷ್ಣ ಬೈರೇಗೌಡ ನಡುವೆ ವಾಗ್ವಾದ ನಡೆಯಿತು ಎಂದು ತಿಳಿದುಬಂದಿದೆ.