Asianet Suvarna News Asianet Suvarna News

karnataka sandalwood policy ರಾಜ್ಯದಲ್ಲಿ ರೈತರು ಶ್ರೀಗಂಧ ಬೆಳೆಯಲು ಹೊಸ ನೀತಿ

  • ಪೋಷಣೆ, ಸಂರಕ್ಷಣೆ, ಕಟಾವು, ಮಾರುಕಟ್ಟೆಸೇರಿದಂತೆ ರೈತರಿಗೆ ಎಲ್ಲ ಸೌಲಭ್ಯ
  •  ಶ್ರೀಗಂಧ ಬೆಳೆಯಲು ಅರಣ್ಯ ಇಲಾಖೆಯಿಂದ ನೆರವು
  •  ಎದುರಾಗುವ ಸಮಸ್ಯೆಗಳ ಪರಿಹಾರಕ್ಕಾಗಿ ಮೇಲ್ವಿಚಾರಣಾ ಸಮಿತಿ 
karnataka Government set to implement new sandalwood plantation policy soon ckm
Author
Bengaluru, First Published Jan 24, 2022, 4:18 AM IST

ಬೆಂಗಳೂರು(ಜ.24): ರಾಜ್ಯದಲ್ಲಿ ರೈತರು ತಮ್ಮ ಹೊಲ ಗದ್ದೆಗಳಲ್ಲಿ ಶ್ರೀಗಂಧ ಬೆಳೆಯುವುದನ್ನು ಉತ್ತೇಜಿಸುವ ಜೊತೆಗೆ ಮಾರಾಟಕ್ಕೆ ಸರಳ ವ್ಯವಸ್ಥೆ ಕಲ್ಪಿಸಲು ರಾಜ್ಯ ಅರಣ್ಯ ಇಲಾಖೆ ನೂತನವಾಗಿ ‘ಶ್ರೀಗಂಧ ನೀತಿ’ ಜಾರಿಮಾಡಲು ಮುಂದಾಗಿದೆ.

2001ರಿಂದ ರಾಜ್ಯದಲ್ಲಿ ರೈತರು ಶ್ರೀಗಂಧ ಬೆಳೆಯಲು ಅನುಮತಿ ನೀಡಲಾಗಿದ್ದರೂ ಅವುಗಳ ಪೋಷಣೆ, ಸಂರಕ್ಷಣೆ, ಕಟಾವಣೆ ಮಾಡುವುದು ಮತ್ತು ಸೂಕ್ತ ಮಾರುಕಟ್ಟೆಸೌಲಭ್ಯಗಳನ್ನು ಅರಣ್ಯ ಇಲಾಖೆ ಈವರೆಗೂ ಕಲ್ಪಿಸಿರಲಿಲ್ಲ. ಇದರಿಂದ ಶ್ರೀಗಂಧ ಬೆಳೆಯುವ ರೈತರ ಆಕ್ರೋಶಕ್ಕೆ ಕಾರಣವಾಗಿತ್ತು. ಜೊತೆಗೆ, 10 ವರ್ಷ ಬೆಳೆದ ಶ್ರೀಗಂಧಕ್ಕೆ ಸೂಕ್ತ ಬೆಲೆ ಲಭ್ಯವಾಗದೆ ಪರದಾಡುವಂತಾಗಿತ್ತು. ಇದಕ್ಕಾಗಿ ಸೂಕ್ತ ಪರಿಹಾರ ಕಂಡುಕೊಳ್ಳಲು ಶ್ರೀಗಂಧ ನೀತಿ ಜಾರಿ ತರಲು ಅರಣ್ಯ ಇಲಾಖೆ ಕರಡು ನೀತಿ ಸಿದ್ಧಪಡಿಸಿ ಅನುಮತಿ ಪಡೆಯಲು ಸರ್ಕಾರಕ್ಕೆ ಸಲ್ಲಿಸಿದೆ.

ಕಲಬುರಗಿಯಲ್ಲಿ 'ಭೀಮಾ' ಬಲ; ದ್ರಾಕ್ಷಿ ಕೃಷಿಯಿಂದ ರೈತನ ಕಜಾನೆ ಫುಲ್ ಕಾಂಚಣ!

ಮೇಲ್ವಿಚಾರಣಾ ಸಮಿತಿ ರಚನೆ:
ಶ್ರೀಗಂಧ ಬೆಳೆಯುವ ರೈತರಿಗೆ ಎದುರಾಗುವ ಸಮಸ್ಯೆಗಳ ಪರಿಹಾರಕ್ಕಾಗಿ ಮೇಲ್ವಿಚಾರಣಾ ಸಮಿತಿ ರಚನೆ ಮಾಡಲು ನಿರ್ಧರಿಸಲಾಗಿದೆ. ಸಸಿಗಳ ವಿತರಣೆ, ಬೆಳವಣಿಗೆ, ಕಟಾವು ಮತ್ತು ಮಾರಾಟಕ್ಕೆ ಸಂಬಂಧಿಸಿದಂತೆ ರೈತರಿಂದ ಕಾಲ ಕಾಲಕ್ಕೆ ಮಾಹಿತಿ ಸಂಗ್ರಹಿಸುವುದು. ಈ ಪ್ರಕ್ರಿಯೆಯಲ್ಲಿ ಗೊಂದಲಗಳು ಉಂಟಾದಲ್ಲಿ ರೈತರ ನೆರವಿಗೆ ಧಾವಿಸುವುದು. ಅವುಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಲಾಗಿದೆ. ಜೊತೆಗೆ, ಶ್ರೀಗಂಧ ಬೆಳೆಗೆ ತೋಟಗಾರಿಕೆ ಇಲಾಖೆಯಿಂದ ಲಭ್ಯವಾಗುವ ಸಬ್ಸಿಡಿ ಸೇರಿದಂತೆ ಇತರೆ ಸೌಲಭ್ಯಗಳನ್ನು ರೈತರಿಗೆ ತಿಳಿಸಲು ಸಮಿತಿ ಕಾರ್ಯನಿರ್ವಹಿಸಲಿದೆ.

ತಾಂತ್ರಿಕ ಸಲಹೆ:
ಪ್ರಸ್ತುತ ಅರಣ್ಯ ಇಲಾಖೆಯಿಂದ ಶ್ರೀಗಂಧದ ಸಸಿಗಳನ್ನು ರೈತರಿಗೆ ವಿತರಣೆ ಮಾಡಲಾಗುತ್ತಿದೆ. ಆದರೆ, ಈ ಸಸಿಗಳ ಪೈಕಿ ಶೇ.40ಕ್ಕೂ ಹೆಚ್ಚು ಪ್ರಮಾಣದಲ್ಲಿ ಬೆಳೆಯುವ ಹಂತದಲ್ಲಿ ನಾಶವಾಗುತ್ತಿದ್ದವು. ಈ ನಿಟ್ಟಿನಲ್ಲಿ ಗುಣಮಟ್ಟದ ಸಸಿಗಳನ್ನು ವಿತರಿಸಲು ಯೋಜನೆ ರೂಪಿಸಲಾಗುತ್ತಿದೆ. ಈ ಬಗ್ಗೆ ನರ್ಸರಿಗಳಲ್ಲಿ ಸಂಶೋಧನೆಗೆ ಒತ್ತು ನೀಡಲು,ಯಾವ ಭಾಗದಲ್ಲಿ ಶ್ರೀಗಂಧ ಬೆಳೆಯಬಹುದು. ಅವುಗಳ ಪೋಷಣೆಗೆ ಅಗತ್ಯವಿರುವ ತಾಂತ್ರಿಕ ಸಲಹೆಗಳನ್ನು ರೈತರಿಗೆ ಒದಗಿಸಲು ಉದ್ದೇಶಿಸಲಾಗಿದೆ.

ಕೃಷಿ ಅರಣ್ಯೀಕರಣ ಪ್ರೋತ್ಸಾಹಕ್ಕೆ ಅರಣ್ಯ ಕಾಯ್ದೆ ಸಡಿಲಿಕೆ: ಶೋಭಾ ಕರಂದ್ಲಾಜೆ

ಎಫ್‌ಪಿಒ ರಚನೆ ಮಾಡಿ ರಕ್ಷಣೆ:
ಶ್ರೀಗಂಧದ ಗಿಡಗಳಿಗೆ 10 ವರ್ಷ ಕಳೆಯುತ್ತಿದ್ದಂತೆ ಕಳ್ಳರ ಕಾಟ ಆರಂಭವಾಗುತ್ತದೆ ಇದನ್ನು ತಡೆಯಲು ರೈತರು ಶಸ್ತಾ್ರಸ್ತ್ರಗಳ ಪರವಾನಿಗೆ ನೀಡುವಂತೆ ಮನವಿ ಮಾಡುತ್ತಿದ್ದಾರೆ. ಹೀಗಾಗಿ ಇವುಗಳ ರಕ್ಷಣೆಗೆ ಗ್ರಾಮ ಮಟ್ಟದಲ್ಲಿ ಶ್ರೀಗಂಧ ಬೆಳೆಯುವ 100 ರೈತರನ್ನೊಳಗೊಂಡ ರೈತರ ಉತ್ಪಾದಕ ಸಂಘ (ಎಫ್‌ಪಿಒ)ಗಳನ್ನು ರಚನೆ ಮಾಡಬೇಕು. ಈ ಸಂಘದಲ್ಲಿ ಗುಂಪುಗಳನ್ನಾಗಿ ರಚನೆ ಮಾಡಿ ಪ್ರತಿದಿನ ಒಂದು ಗುಂಪಿನಿಂದ ರಕ್ಷಣೆ ಒದಗಿಸಲು ನಿಯಮ ರೂಪಿಸಲಾಗಿದೆ.

ಸರಳ ಮಾರ್ಗ:
ರೈತರು ಶ್ರೀಗಂಧ ಬೆಳೆದ ಬಳಿಕ ಕಟಾವು ಮಾಡುವುದು ಮತ್ತು ಸಾಗಣೆ ಮಾಡಲು ಈವರೆಗೂ ಅರಣ್ಯ ಮತ್ತು ಕಂದಾಯ ಇಲಾಖೆಯ ಅನುಮತಿ ಕಡ್ಡಾಯವಾಗಿತ್ತು. ಇದೀಗ ಈ ವ್ಯವಸ್ಥೆಗೆ ಬದಲಾವಣೆ ತರಲಾಗುತ್ತಿದ್ದೆ. ಆನ್ಲೈನ್‌ ಮೂಲಕ ಅರ್ಜಿ ಸಲ್ಲಿಸಿ ಅರಣ್ಯ ಇಲಾಖೆಯಿಂದ ಅನುಮತಿ ಪಡೆಯಬಹುದಾಗಿದೆ. ನಿಗದಿತ ಸಮಯದಲ್ಲಿ ಅನುಮತಿ ಲಭ್ಯವಾಗದಿದ್ದಲ್ಲಿ ಸ್ವಯಂಪ್ರೇರಿತವಾಗಿ ಅನುಮತಿ ಲಭ್ಯವಾಗುವಂತೆ ನಿಯಮ ರೂಪಿಸಲಾಗುತ್ತಿದೆ.

ಮುಕ್ತ ಮಾರುಕಟ್ಟೆ:
ರಾಜ್ಯದಲ್ಲಿ ಬೆಳೆಯುತ್ತಿರುವ ಶ್ರೀಗಂಧವನ್ನು ಅರಣ್ಯ ಇಲಾಖೆಯ ಡಿಪೋಗಳು, ಕರ್ನಾಟಕ ಸೋಫ್ಸ್‌ ಮತ್ತು ಡಿಟರ್ಜಂಟ್‌ ನಿಗಮ ಮತ್ತು ಕರ್ನಾಟಕ ಕರಕುಶಲ ಅಭಿವೃದ್ಧಿ ಮಂಡಳಿಗೆ ಮಾತ್ರ ಮಾರಾಟ ಮಾಡಬೇಕು ಎಂಬುದಾಗಿ ನಿರ್ಬಂಧ ವಿಧಿಸಲಾಗಿದೆ. ಇದೀಗ ಮುಕ್ತ ಮಾರುಕಟ್ಟೆವ್ಯವಸ್ಥೆ ಮಾಡಲಾಗುತ್ತಿದೆ. ರೈತರು ಬೆಳೆದ ಶ್ರೀಗಂಧವನ್ನು ತಮಗೆ ಇಚ್ಛಿಸಿದ ವ್ಯಾಪಾರಿಗಳಿಗೆ ಮಾರಾಟಕ್ಕೆ ಅವಕಾಶ ನೀಡುವುದಾಗಿದೆ. ಜೊತೆಗೆ, ಶ್ರೀಗಂಧ ಖರೀದಿದಾರರು ಅರಣ್ಯ ಇಲಾಖೆಯಲ್ಲಿ ನೋಂದಣಿ ಕಡ್ಡಾಯ ಮಾಡಿಕೊಂಡಿರಬೇಕು ಎಂಬುದು ಕರಡು ನೀತಿಯಲ್ಲಿ ಪ್ರಸ್ತಾಪಿಸಲಾಗಿದೆ.

ರಾಜ್ಯದಲ್ಲಿ ಶ್ರೀಗಂಧ ಬೆಳೆಯುವುದನ್ನು ಸರಳಗೊಳಿಸುವ ಸಲುವಾಗಿ ಹೊಸ ನೀತಿ ಜಾರಿ ಮಾಡಲಾಗುತ್ತಿದೆ. ಈ ಸಂಬಂಧ ಅರಣ್ಯ ಸಚಿವರ ನೇತೃತ್ವದಲ್ಲಿ ಈಗಾಗಲೇ ಎರಡು ಸುತ್ತಿನ ಸಭೆ ನಡೆಸಿದ್ದು, ಕರಡು ನೀತಿ ಸಿದ್ಧಪಡಿಸಲಾಗಿದೆ. ಸರ್ಕಾರದ ಅನುಮತಿ ಸಿಕ್ಕಲ್ಲಿ ಹೊಸ ನೀತಿಯನ್ನು ಪ್ರಕಟಿಸಿ ಜಾರಿ ಮಾಡಲಾಗುವುದು.
- ಪ್ರಭಾಶ್‌ ಚಂದ್ರ ರೇ, ಅಪರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಅರಣ್ಯ ಸಂಪನ್ಮೂಲ ನಿರ್ವಹಣೆ)

ರಮೇಶ್‌ ಬನ್ನಿಕುಪ್ಪೆ
ಕನ್ನಡಪ್ರಭ ವಾರ್ತೆ ಬೆಂಗಳೂರು

Follow Us:
Download App:
  • android
  • ios