ಬಿಟ್ ಕಾಯಿನ್ ಹಗರಣ ಸಂಬಂಧ ವಿಶೇಷ ತನಿಖಾ ತಂಡದಿಂದ ಮರು ತನಿಖೆ ನಡೆಸಲು ಸರಕಾರ ಆದೇಶಿಸಿದೆ. ಈ ಮೂಲಕ ಬಿಟ್ ಕಾಯಿನ್ ಹಗರಣ ಮರುಜೀವ ಪಡೆದಿದೆ.
ಬೆಂಗಳೂರು (ಜು.3): ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಿಟ್ ಕಾಯಿನ್, ಪಿಎಸ್‌ಐ ನೇಮಕಾತಿ ಸೇರಿದಂತೆ ಹಲವು ಪ್ರಕರಣಗಳಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದ್ದ ಕಾಂಗ್ರೆಸ್, ಇದೀಗ ಇಂತಹ ಪ್ರಕರಣಗಳ ಬಗ್ಗೆ ತನಿಖೆಗೆ ಮುಂದಾಗಿದೆ. ಅದರಲ್ಲೂ ಬಿಜೆಪಿ ಸರ್ಕಾರದ ಅವಧಿಯಲ್ಲಿ ಭಾರಿ ಸದ್ದು ಮಾಡಿದ್ದ ಬಿಟ್ ಕಾಯಿನ್ ಹಗರಣ ಸಂಬಂಧ ಎಸ್ಐಟಿ (ವಿಶೇಷ ತನಿಖಾ ತಂಡ) ಮರು ತನಿಖೆ ನಡೆಸಲು ಸರಕಾರ ಆದೇಶಿಸಿದೆ. ಈ ಮೂಲಕ ರಾಜ್ಯ ರಾಜಕೀಯ ಪಡಸಾಲೆಯಲ್ಲಿ ವಾಕ್ಸಮರಕ್ಕೆ ಕಾರಣವಾಗಿದ್ದ ಬಿಟ್ ಕಾಯಿನ್ ಹಗರಣಕ್ಕೆ ಅಧಿಕೃತವಾಗಿ ಮರುಜೀವ ಬಂದಂತಾಗಿದೆ.
ಇದರ ಮೊದಲ ಹಂತವಾಗಿ ಬಿಟ್ ಕಾಯಿನ್ ಪ್ರಕರಣ ಕುರಿತು ಸಿಐಡಿ ತನಿಖೆಗೆ ವಹಿಸುವಂತೆ ಬೆಂಗಳೂರು ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಕಳೆದ ಜೂನ್ ತಿಂಗಳಿನಲ್ಲಿ ಪತ್ರ ಬರೆದಿದ್ದರು. ಬಿಟ್ ಕಾಯಿನ್ ಕೇಸ್ ತನಿಖೆಗೆ ಎಸ್ಐಟಿ ರಚನೆ ಮಾಡಿದ್ದು, ಸಿಐಡಿ ಎಡಿಜಿಪಿ ಮನೀಷ್ ಕರ್ಬೀಕರ್ ನೇತೃತ್ವದಲ್ಲಿ ತನಿಖೆ ನಡೆಸಲು ತಯಾರಿ ನಡೆದಿದೆ. ಈ ಎಸ್ಐಟಿ ತಂಡದಲ್ಲಿ ಡಿಐಜಿ ವಂಶಿಕೃಷ್ಣ, ಡಿಸಿಪಿ ಅನೂಪ್ ಶೆಟ್ಟಿ, ಸಿಐಡಿ ಎಸ್ಪಿ ಶರತ್ ಇದ್ದಾರೆ. ಬೆಂಗಳೂರು ಸಿಸಿಬಿ ತನಿಖೆ ನಡೆಸಿದ್ದ ಕೇಸಿನ ಮರುತನಿಖೆಗೆ ಆದೇಶ ಹೊರಬಿದ್ದಿದ್ದು, ಈ ಹಿಂದೆ ತನಿಖೆ ನಡೆಸಿದ್ದ ಸಿಸಿಬಿ ಅಧಿಕಾರಿಗಳು ಚಾರ್ಜ್ ಶೀಟ್ ಸಲ್ಲಿಸಿದ್ದರು. ಬಿಟ್ ಕಾಯಿನ್ ಸಂಬಂಧ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ನನಗೂ ಬಂಧಿತ ಅಜಿತ್ ರೈಗೂ ಯಾವುದೇ ಸಂಬಂಧವಿಲ್ಲ, ಥೈಲ್ಯಾಂಡ್ ನಿಂದ ಭೂಗತ
ಮೂರು ವರ್ಷಗಳ ಹಿಂದೆ ಡ್ರಗ್ ಪ್ರಕರಣದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕುಖ್ಯಾತ ಹ್ಯಾಕರ್ ಶ್ರೀಕಾಂತ್ ಅಲಿಯಾಸ್ ಶ್ರೀಕಿಯನ್ನು ಸಿಸಿಬಿ ಬಂಧಿಸಿತ್ತು. ಆಗ ವಿಚಾರಣೆ ವೇಳೆ ಆತನ ಬಿಟ್ ಕಾಯಿನ್ ದಂಧೆ ಬಯಲಾಗಿತ್ತು. ಈ ಬಗ್ಗೆ ಕಾಟನ್‌ಪೇಟೆ ಠಾಣೆಯಲ್ಲಿ ಪ್ರತ್ಯೇಕವಾಗಿ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಿದ ಸಿಸಿಬಿ, ಶ್ರೀಕಿ ವಿರುದ್ಧ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಹ ಸಲ್ಲಿಸಿತ್ತು. ಇನ್ನೊಂದೆಡೆ ಇ ಪ್ರೊಕ್ಯುರ್ಮೆಂಟ್ ವೆಬ್‌ಸೈಟ್ ಹ್ಯಾಕ್ ಪ್ರಕರಣ ಸಂಬಂಧ ಶ್ರೀಕಿ ವಿರುದ್ಧ ಸಿಐಡಿ ಕೂಡ ಪ್ರತ್ಯೇಕ ತನಿಖೆ ನಡೆಸಿತ್ತು.
ಆದರೆ ಬಿಟ್ ಕಾಯಿನ್ ಪ್ರಕರಣದಲ್ಲಿ ಭಾರಿ ಅವ್ಯವಹಾರ ನಡೆದಿದೆ. ಹ್ಯಾಕರ್ ಶ್ರೀಕಿಯನ್ನು ಬಳಸಿಕೊಂಡು ಆಡಳಿತ ಪಕ್ಷದವರು ದೊಡ್ಡ ಮೊತ್ತದ ಹಣ ಲಪಟಾಯಿಸಿದ್ದಾರೆ ಎಂದು ಆಗಿನ ಕಾಂಗ್ರೆಸ್ ಪಕ್ಷದ ನಾಯಕರು ಆರೋಪಿಸಿದ್ದರು. ಅಲ್ಲದೆ ತಮ್ಮ ಸರ್ಕಾರ ಆಡಳಿತಕ್ಕೆ ಬಂದರೆ ಬಿಟ್ ಕಾಯಿನ್ ಹಗರಣದ ತನಿಖೆ ನಡೆಸುವುದಾಗಿ ಸಹ ಕಾಂಗ್ರೆಸ್ ಪಕ್ಷ ಹೇಳಿತ್ತು.
ಈ ಬಗ್ಗೆ ಮರು ತನಿಖೆ ನಡೆಸುವುದಾಗಿ ಅಧಿಕೃತವಾಗಿ ಇತ್ತೀಚೆಗೆ ರಾಜ್ಯ ಗೃಹ ಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದ್ದರು. ಈ ಬೆಳವಣಿಗೆ ಬೆನ್ನಲ್ಲೇ ಎರಡು ದಿನಗಳ ಹಿಂದೆ ಬಿಟ್ ಕಾಯಿನ್ ಪ್ರಕರಣದ ತನಿಖೆಯನ್ನು ಸಿಐಡಿ ತನಿಖೆಗೆ ಶಿಫಾರಸು ಮಾಡಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಅವರಿಗೆ ಪೊಲೀಸ್ ಆಯುಕ್ತ ಬಿ.ದಯಾನಂದ್ ಪತ್ರ ಬರೆದಿದ್ದಾರೆ. ಆಯುಕ್ತರ ಪತ್ರವನ್ನು ರಾಜ್ಯ ಸರ್ಕಾರಕ್ಕೆ ಡಿಜಿಪಿ ರವಾನಿಸಿದ್ದು, ಈಗ ಮುಖ್ಯಮಂತ್ರಿಗಳ ಅಂಗಳದಲ್ಲಿ ಬಿಟನ್ ಪ್ರಕರಣದ ಚೆಂಡು ಬಿದ್ದಿದೆ.
ಸದನ ಆರಂಭವಾದ್ರೂ ಆಯ್ಕೆಯಾಗದ ವಿಪಕ್ಷ ನಾಯಕ
ಏನಿದು ಪ್ರಕರಣ?:
2020ರಲ್ಲಿ ಕೆಂಪೇಗೌಡ ನಗರ ಸಮೀಪ ಡ್ರಗ್ ಮಾರಾಟಕ್ಕೆ ಯತ್ನಿಸಿದ್ದಾಗ ಶ್ರೀಕಿ ಹಾಗೂ ಆತನ ಸ್ನೇಹಿತರು ಸಿಸಿಬಿ ಬಲೆಗೆ ಬಿದ್ದಿದ್ದರು. ಬಳಿಕ ವಿಚಾರಣೆ ವೇಳೆ ಅಂತಾರಾಷ್ಟ್ರೀಯ ಮಟ್ಟದ ಆನ್‌ಲೈನ್ ಗೇಮಿಂಗ್ ಕಂಪನಿಗಳು ಹಾಗೂ ಸರ್ಕಾರದ ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡಿ ಸುಮಾರು 11 ಕೋಟಿ ರು. ಹಣವನ್ನು ಶ್ರೀಕಿ ದೋಚಿದ್ದ ಸಂಗತಿ ಬಯಲಾಗಿತ್ತು. ಹೀಗೆ ದೋಚಿದ್ದ ಹಣವನ್ನು ಬಿಟ್ ಕಾಯಿನ್‌ಗಳಾಗಿ ಪರಿವರ್ತಿಸಿ ಡ್ರಗ್ ದಂಧೆಗೆ ಶ್ರೀಕಿ ಬಳಸಿದ್ದ ಎನ್ನಲಾಗಿತ್ತು.
