ಬೆಂಗಳೂರು(ಮಾ.07): ರಾಜ್ಯದಲ್ಲಿ ಕೋವಿಡ್‌ ಸೋಂಕಿತರ ಸಂಖ್ಯೆ ಏರುತ್ತಿರುವ ಹಿನ್ನೆಲೆಯಲ್ಲಿ ಪ್ರತಿಭಟನೆ ಹಾಗೂ ಸಮಾವೇಶಗಳನ್ನು ನಿರ್ಬಂಧಿಸುವ ಆದೇಶ ಹೊರಡಿಸುವಂತೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಮನವಿ ಮಾಡುವುದಾಗಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದ್ದಾರೆ.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಪ್ರಕಾರ ಪ್ರತಿಭಟನೆ ಹಾಗೂ ಸಮಾವೇಶಗಳಿಗೆ ಅನುಮತಿ ಕೊಡದಿರುವುದು ಒಳ್ಳೆಯದು. ಈ ಕುರಿತು ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಮನವಿ ಮಾಡುವೆ ಎಂದು ಹೇಳಿದರು.

ಹಾಗಂತ ನಾವು ಪ್ರತಿಭಟನೆ ಹತ್ತಿಕ್ಕುವ ಉದ್ದೇಶ ಹೊಂದಿಲ್ಲ. ಹೋರಾಟ ನಡೆಸಲು ಎಲ್ಲರೂ ಸ್ವತಂತ್ರರು. ಆದರೆ ಮುಂದೆ ಆಗಬಹುದಾದ ಅನಾಹುತಕ್ಕೆ ಯಾರು ಹೊಣೆ? ಸಮಯ ಸಂದರ್ಭ ಸರಿಯಿಲ್ಲದ ಕಾರಣ ಹೋರಾಟಗಳನ್ನು ಒಂದೆರಡು ತಿಂಗಳು ಮುಂದಕ್ಕೆ ಹಾಕಲಿ. ಗುಂಪು ಗುಂಪಾಗಿ ಬೆಂಗಳೂರಿಗೆ ಬರಬೇಡಿ ಎಂದು ನಾನು ಎಲ್ಲ ಮಠಾಧೀಶರು, ಧಾರ್ಮಿಕ ಗುರುಗಳು, ಹೋರಾಟಗಾರರು, ರಾಜಕೀಯ ನಾಯಕರು, ರೈತ ಮುಖಂಡರಲ್ಲಿ ಮನವಿ ಮಾಡುವೆ ಎಂದರು.

8 ಜಿಲ್ಲೆಗಳಲ್ಲಿ ಕೋವಿಡ್‌ ಅಪಾಯ:

ಬೆಂಗಳೂರು ನಗರ ಜಿಲ್ಲೆ ಬಿಟ್ಟರೆ ದಕ್ಷಿಣ ಕನ್ನಡದಲ್ಲಿ ಹೆಚ್ಚಿನ ಪ್ರಕರಣಗಳು ವರದಿಯಾಗುತ್ತಿವೆ. ಮಂಗಳೂರಿಗೆ ಹೊರಗಿನಿಂದ ಹೆಚ್ಚಿನ ಜನರು ಬರುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿ ಹೆಚ್ಚು ತಪಾಸಣೆ ನಡೆಸುವಂತೆ ಸೂಚಿಸಲಾಗಿದೆ. ಉಳಿದಂತೆ ಮೈಸೂರು, ಚಾಮರಾಜನಗರ, ಉಡುಪಿ, ಕೊಡಗು, ಬೆಳಗಾವಿ, ತುಮಕೂರು ಜಿಲ್ಲೆಗಳಲ್ಲಿಯೂ ಪ್ರಕರಣಗಳ ಸಂಖ್ಯೆ ಏರಿಕೆ ಆಗಿದೆ. ಇಲ್ಲಿನ ಜಿಲ್ಲಾಡಳಿತ ಸೋಂಕು ನಿಯಂತ್ರಣ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ಈ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆ ಮುಂದಿನ ವಾರ ಮುಖ್ಯಮಂತ್ರಿಗಳು ವಿಡಿಯೋ ಕಾನ್ಫರೆನ್ಸ್‌ ಮೂಲಕ ಸಭೆ ನಡೆಸಲಿದ್ದಾರೆ ಎಂದು ಸುಧಾಕರ್‌ ತಿಳಿಸಿದರು.

ಕೋವಿಡ್‌ ಬಗ್ಗೆ ಜನರು ಸಂಪೂರ್ಣ ನಿರ್ಲಕ್ಷ್ಯ ವಹಿಸುತ್ತಿದ್ದು, ತಡವಾಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಕೋವಿಡ್‌ ಮಾರ್ಗಸೂಚಿ ಬಗ್ಗೆ ಜನರು ಮತ್ತೆ ನಿರ್ಲಕ್ಷ್ಯ ವಹಿಸುವುದು ಹೀಗೇ ಮುಂದುವರಿದರೆ ರಾಜ್ಯದ ಕೋವಿಡ್‌ ಪರಿಸ್ಥಿತಿ ಬಿಗಡಾಯಿಸಲಿದೆ ಎಂದು ಸುಧಾಕರ್‌ ಎಚ್ಚರಿಕೆ ನೀಡಿದರು.

ಬೆಂಗಳೂರು ಮಹಾನಗಪಾಲಿಕೆ ವ್ಯಾಪ್ತಿಯಲ್ಲಿ ಸೋಂಕಿತರ ಸಂಖ್ಯೆ 200ರ ಗಡಿಯಲ್ಲಿತ್ತು. ಆದರೆ, ಇದೀಗ 400ಕ್ಕೂ ಹೆಚ್ಚು ಕೇಸ್‌ ಪತ್ತೆಯಾಗಿದೆ. 12 ಕ್ಲಸ್ಟರ್‌ ಗುರುತಿಸಲಾಗಿದ್ದು, ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪರೀಕ್ಷೆ ಆಗಬೇಕೆಂದು ತಾಂತ್ರಿಕ ಸಮಿತಿ ಸಲಹೆ ನೀಡಿದೆ. ಶನಿವಾರದಿಂದ ನಿತ್ಯ 40,000 ಕೋವಿಡ್‌ ಟೆಸ್ಟ್‌ ಮಾಡಲಾಗುವುದು. ಸೋಂಕು ಹೆಚ್ಚಿರುವ ಪ್ರದೇಶದಲ್ಲಿ ಸಂಪರ್ಕಿತರನ್ನು ಪತ್ತೆ ಹಚ್ಚುವ ಕೆಲಸ ವೇಗವಾಗಿ ನಡೆಯಬೇಕು. ಒಬ್ಬ ಸೋಂಕಿತನಿಗೆ 20 ಸಂಪರ್ಕಿತರ ಪರೀಕ್ಷೆ ನಡೆಸಬೇಕು ಎಂಬ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸುಧಾಕರ್‌ ಸೂಚಿಸಿದ್ದಾರೆ.