ಕರ್ನಾಟಕ ಸರ್ಕಾರವು ಸಾರ್ವಜನಿಕರ ದೂರುಗಳ ತ್ವರಿತ ವಿಲೇವಾರಿ ಮತ್ತು ಆಡಳಿತಾತ್ಮಕ ದಕ್ಷತೆ ಹೆಚ್ಚಿಸಲು 'ಪ್ರಜಾಸೇವಾ ಇಲಾಖೆ'ಯನ್ನು ಹೊಸದಾಗಿ ಸ್ಥಾಪಿಸಿದೆ. ಆಡಳಿತ ಸುಧಾರಣೆ, ಸಾರ್ವಜನಿಕ ಕುಂದುಕೊರತೆ ವಿಭಾಗ ಮತ್ತು ಸಕಾಲ ಮಿಷನ್ ಅನ್ನು ವಿಲೀನಗೊಳಿಸಲಾಗಿದೆ.

ಬೆಂಗಳೂರು (ಜೂ.24): ರಾಜ್ಯ ಸರ್ಕಾರದಲ್ಲಿ ಆಡಳಿತಾತ್ಮಕ ದಕ್ಷತೆಯನ್ನು ಹೆಚ್ಚಿಸಲು ಮತ್ತು ಸಾರ್ವಜನಿಕರ ಅಹವಾಲುಗಳನ್ನು ಒಂದೇ ಸೂರಿನಡಿ ತ್ವರಿತವಾಗಿ ವಿಲೇವಾರಿ ಮಾಡುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದ ಸರ್ಕಾರ ಮಹತ್ತರ ಹೆಜ್ಜೆಯಿಟ್ಟಿದೆ. ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಘೋಷಿಸಿದ್ದ ಮಹತ್ವಾಕಾಂಕ್ಷೆಯ 'ಪ್ರಜಾಸೇವಾ ಇಲಾಖೆ'ಯನ್ನು (Praja Seva Department) ಹೊಸದಾಗಿ ಸ್ಥಾಪಿಸಿ ಈಗ ಅಧಿಕೃತ ಆದೇಶ ಹೊರಡಿಸಲಾಗಿದೆ. ಜೂನ್ 20 ರಂದು ನಡೆದ ಸಚಿವ ಸಂಪುಟ ಸಭೆಯ ತೀರ್ಮಾನದಂತೆ , ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು (DPAR) ಜೂನ್ 24 ರಂದು ಈ ಹೊಸ ಇಲಾಖೆಯನ್ನು ಸೃಜಿಸಿ ಅಧಿಸೂಚನೆ ಹೊರಡಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮೂರು ಪ್ರಮುಖ ವಿಭಾಗಗಳು ವಿಲೀನ

ನೂತನ ಪ್ರಜಾಸೇವಾ ಇಲಾಖೆಯನ್ನು ಹೆಚ್ಚು ವ್ಯವಸ್ಥಿತವಾಗಿ ರೂಪಿಸಲು ಹಾಲಿ ಇರುವ ಮೂರು ಪ್ರಮುಖ ವಿಭಾಗಗಳನ್ನು ಇದರಲ್ಲಿ ವಿಲೀನಗೊಳಿಸಲಾಗಿದೆ. ಅವುಗಳೆಂದರೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಆಡಳಿತ ಸುಧಾರಣೆ), ಇದರ (ಇ-ಆಡಳಿತ) ಅಡಿಯಲ್ಲಿನ ಸಾರ್ವಜನಿಕ ದೂರುಗಳು ಮತ್ತು ಕುಂದುಕೊರತೆಗಳು ವಿಭಾಗದ 'ಎ' ಮತ್ತು 'ಬಿ' ಶಾಖೆಗಳು ಹಾಗೂ ಸಕಾಲ ಮಿಷನ್ ಅನ್ನು ವಿಲೀನ ಮಾಡಲಾಗಿದೆ.

ಇಲಾಖೆಯ ಪ್ರಮುಖ ಕಾರ್ಯಗಳು ಮತ್ತು ಉದ್ದೇಶ

  • ಏಕೀಕೃತ ಮಾದರಿ: ಸಾರ್ವಜನಿಕ ಕುಂದುಕೊರತೆಗಳ ಸ್ವೀಕಾರ, ಮೇಲ್ವಿಚಾರಣೆ ಮತ್ತು ಆಡಳಿತ ಸುಧಾರಣೆಯನ್ನು ಒಂದೇ ಸೂರಿನಡಿ ತರುವುದು.
  • ಕಾಲಮಿತಿಯೊಳಗೆ ಪರಿಹಾರ: ಸರ್ಕಾರದ ಪ್ರಸಿದ್ಧ 'ಜನಸ್ಪಂದನ' ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಿ, ನಾಗರಿಕರ ಸಮಸ್ಯೆಗಳನ್ನು ನಿಗದಿತ ಕಾಲಮಿತಿಯಲ್ಲಿ ಬಗೆಹರಿಸುವುದು.
  • ನಾಗರಿಕರ ಪ್ರತಿಕ್ರಿಯೆ: ದೂರುಗಳ ವಿಲೇವಾರಿಯ ಗುಣಮಟ್ಟವನ್ನು ಸಾರ್ವಜನಿಕರ ತೃಪ್ತಿಯ ಮಾನದಂಡಗಳ ಮೂಲಕ ಮೌಲ್ಯಮಾಪನ ಮಾಡುವುದು.
  • ಸರಳೀಕರಣ: ವಿಳಂಬ ನೀತಿಯನ್ನು ತಪ್ಪಿಸಲು ಹಾಲಿ ಇರುವ ಸರ್ಕಾರಿ ಕಾರ್ಯವಿಧಾನಗಳನ್ನು ಮರುವಿನ್ಯಾಸಗೊಳಿಸಿ ಸರಳೀಕರಿಸುವುದು.

ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ನಿಯೋಜನೆ

ಹೊಸ ಇಲಾಖೆಯ ಆಡಳಿತ ವಿನ್ಯಾಸದ ಕುರಿತು ಸ್ಪಷ್ಟ ಆದೇಶ ಹೊರಡಿಸಲಾಗಿದ್ದು , ಒಟ್ಟು 73 ಮಂಜೂರಾದ ಖಾಯಂ ಹುದ್ದೆಗಳನ್ನು ಮರುಹೊಂದಾಣಿಕೆ ಮೂಲಕ ಸೃಜಿಸಲಾಗಿದೆ. ಇದರಲ್ಲಿ ಸರ್ಕಾರದ ಕಾರ್ಯದರ್ಶಿ ಹಾಗೂ ಮಿಷನ್ ನಿರ್ದೇಶಕರು, ಅಪರ ಮಿಷನ್ ನಿರ್ದೇಶಕರು, ಉಪ ಕಾರ್ಯದರ್ಶಿ ಹಾಗೂ ಆಡಳಿತಾಧಿಕಾರಿ ಹುದ್ದೆಗಳು ಸೇರಿವೆ. ಇದರೊಂದಿಗೆ ತಾಂತ್ರಿಕ ಹಾಗೂ ಆಡಳಿತಾತ್ಮಕ ಕೆಲಸಗಳ ನಿರ್ವಹಣೆಗಾಗಿ ಒಟ್ಟು 48 ಹುದ್ದೆಗಳನ್ನು ಗುತ್ತಿಗೆ ಹಾಗೂ ಹೊರಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲು ಅನುಮತಿ ನೀಡಲಾಗಿದೆ.

ಈ ಐತಿಹಾಸಿಕ ನಿರ್ಧಾರದಿಂದಾಗಿ ಇನ್ಮುಂದೆ ಸಾರ್ವಜನಿಕರು ತಮ್ಮ ದೂರುಗಳು ಮತ್ತು ಆಡಳಿತಾತ್ಮಕ ಕೆಲಸಗಳಿಗಾಗಿ ಬೇರೆ ಬೇರೆ ಇಲಾಖೆಗಳಿಗೆ ಅಲೆಯುವುದು ತಪ್ಪಲಿದ್ದು, ಪ್ರಜಾಸೇವಾ ಇಲಾಖೆಯ ಮೂಲಕ ತ್ವರಿತವಾಗಿ ನ್ಯಾಯ ಸಿಗಲಿದೆ.