ವಿಜಯೇಂದ್ರ ಇನ್ನೂ ಎಳಸು ಅವರಿಂದ ಕಲಿಯಬೇಕಾದ್ದು ಏನೂ ಇಲ್ಲ: ಈಶ್ವರಪ್ಪ ವಾಗ್ದಾಳಿ
ಹಿಂದೂಗಳಿಗೆ, ಹಿಂದುಳಿದವರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಸಂಘಟನೆ ಮಾಡುವಂತೆ ಸಾಧು-ಸಂತರು ಸೂಚನೆ ಕೊಟ್ಟಿದ್ದಾರೆ. ಈ ಹಿನ್ನೆಲೆ ಮೊದಲ ಸಭೆ ಹುಬ್ಬಳ್ಳಿಯಲ್ಲಿ ನಡೆಸುತ್ತಿದ್ದೇವೆ ಎಂದು ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ ತಿಳಿಸಿದರು.
ಹುಬ್ಬಳ್ಳಿ (ಅ.7): ಹಿಂದೂಗಳಿಗೆ, ಹಿಂದುಳಿದವರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಸಂಘಟನೆ ಮಾಡುವಂತೆ ಸಾಧು-ಸಂತರು ಸೂಚನೆ ಕೊಟ್ಟಿದ್ದಾರೆ. ಈ ಹಿನ್ನೆಲೆ ಮೊದಲ ಸಭೆ ಹುಬ್ಬಳ್ಳಿಯಲ್ಲಿ ನಡೆಸುತ್ತಿದ್ದೇವೆ ಎಂದು ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ ತಿಳಿಸಿದರು.
ಇಂದು ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿ ಗಂಡುಮೆಟ್ಟಿನ ನಾಡು. ಕೆಲ ಮಾಜಿ ಸಚಿವರು, ಮಾಜಿ ಶಾಸಕರು ಸಭೆಯಲ್ಲಿ ಭಾಗಿಯಾಗಿದ್ದಾರೆ. ಅಹಿಂದ ಸಂಘಟನೆ ಕಟ್ಟಿಕೊಂಡು ಬಂದ ನಾಯಕರು ಸಭೆಯಲ್ಲಿದ್ದಾರೆ. ಸಾಧು ಸಂತರು ಸೂಚನೆ ಪ್ರಕಾರ ಅಕ್ಟೊಬರ್ 20 ಕ್ಕೆ ಬಾಗಲಕೋಟೆ ಜಿಲ್ಲೆಯ ಚರಂಟಿಮಠ ಸಮುದಾಯ ಭವನದಲ್ಲಿ ಮತ್ತೆ ಸಭೆ ಮಾಡ್ತೇವೆ ಎಂದರು.
ಮೋದಿ ಕೆಳಗಿಳಿಸಿ ಪಾಕಿಸ್ತಾನಕ್ಕೆ ಅನುಕೂಲ ಮಾಡಿಕೊಡಬೇಕಾ?: ಈಶ್ವರಪ್ಪ
ಯತ್ನಾಳ್ ನಮ್ಮ ಜೊತೆ ಇರ್ತಾರೆ:
ಸಾಧು-ಸಂತರ ಮಾರ್ಗದರ್ಶನದಲ್ಲಿ ನಡೆಯುವ ಬ್ರಿಗೇಡ್ ಚಟುವಟಿಕೆಯಲ್ಲಿ ಯತ್ನಾಳ್ ನಮ್ಮೊಂದಿಗೆ ಇರುತ್ತಾರೆ. ಆದರೆ ಇದಕ್ಕೂ ರಾಜಕೀಯ ಪಕ್ಷಕ್ಕೂ ಸಂಬಂಧವಿಲ್ಲ. ಎಲ್ಲ ಪಕ್ಷದವರಿಗೂ ಆಹ್ವಾನ ನೀಡುತ್ತೇವೆ. ಯಾವುದೇ ಪಕ್ಷದವರು ಬಂದ್ರೂ ಸೇರಿಸಿಕೊಳ್ತೇವೆ ಒಂದು ಕಾಲದಲ್ಲಿ ಸಿದ್ಧಾಂತದ ಬಗ್ಗೆ ಚರ್ಚೆಗಳು ನಡೀತಿದ್ದವು. ಇಂದು ಸಿದ್ದರಾಮಯ್ಯ, ಯಡಿಯೂರಪ್ಪ ಮೊದಲದವರು ಯಾವ ರೀತಿಯ ಪದ ಬಳಸ್ತಿದಾರೆ. ಇಡೀ ದೇಶದ ನಿಮ್ಮನ್ನು ನೋಡ್ತಾ ಇದೆ. ರಾಜ್ಯದಲ್ಲಿ ದ್ವೇಷದ ರಾಜಕಾರಣ ನಡೀತಿದೆ. ಈ ಸಂಘಟನೆ ನನ್ನ ಸ್ವಾರ್ಥಕ್ಕೆ ಬಳಸಿಕೊಳ್ಳಲ್ಲ. ಸಾಯೋವರೆಗೂ ಬಿಜೆಪಿ ಯಲ್ಲಿ ಇರ್ತೇವೆ ಅಂತ ಹೇಳುತ್ತಿದ್ದೆವು. ಆದ್ರೆ ಅಲ್ಲಿನ ಪರಿಸ್ಥಿತಿ ಹೇಗಿದೆ? ಶುದ್ಧೀಕರಣಕ್ಕೆ ಗಂಗಾ ಜಲ ತರೋ ವಿಚಾರ ಯತ್ನಾಳ್ ಅವರಿಗೆ ಗೊತ್ತು ನೀವು ಅವರನ್ನೇ ಕೇಳಿ ನಾನಾಗಲಿ, ನನ್ನ ಮಗನಾಗಲಿ ಚುನಾವಣೆಗೆ ನಿಲ್ಲಲ್ಲ ಎಂದು ಸ್ಪಷ್ಟಪಡಿಸಿದರು.
ವಿಜಯೇಂದ್ರ ಇನ್ನೂ ಎಳಸು:
ಇನ್ನು ಚುನಾವಣೆಯಲ್ಲಿ ಠೇವಣಿ ಕಳೆದುಕೊಂಡವರು ಸಂಘಟನೆ ಕಟ್ಟುತ್ತಿದ್ದಾರೆ ಎಂಬ ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ತಂದೆಯ ಅಧಿಕಾರ, ಹಣಬಲದಿಂದ ಪಕ್ಷದ ಅಧ್ಯಕ್ಷರಾಗಿರುವ ವಿಜಯೇಂದ್ರ ರಾಜಕೀಯ ಅನುಭವದಲ್ಲಿ ಇನ್ನೂ ಎಳಸು. ಅವರಿಂದ ನಾವು ಕಲಿಯಬೇಕಾದ್ದು ಏನೂ ಇಲ್ಲ ಎಂದು ವಾಗ್ದಾಳಿ ನಡೆಸಿದರು,
ನಾವು ಸೈಕಲ್ ಹತ್ತಿ ಪಕ್ಷ ಕಟ್ಟುವಾಗ ವಿಜಯೇಂದ್ರ ಇನ್ನೂ ಕಣ್ಣು ಬಿಟ್ಟಿರಲಿಲ್ಲ. ರಾಜಕೀಯವಾಗಿ ವಿಜಯೇಂದ್ರ ಇನ್ನೂ ಎಳಸು. ಯಾರು ಏನೂ ಮಾಡೋಕೆ ಆಗಲ್ಲ ಅಂತ ಕುಳಿತಿದ್ದಾರೆ. ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ 37 ಜನ ಇವರ ಬಗ್ಗೆ ದೂರು ಕೊಟ್ಟರು. ಸಭೆ ನಡೆದ ನಂತರ ಪಕ್ಷ ಕಟ್ಟಿದವರ ಬಗ್ಗೆ ಲೇವಡಿ ಮಾಡಿದರು. ತನಗೆ ಬೇಕಾದವರಿಗೆ ಸೀಟು, ತನಗೆ ಬೇಕಾದವರಿಗೆ ಪದಾಧಿಕಾರಿ ಹುದ್ದೆ. ಹೈಕಮಾಂಡ್ ಗೆ ಮಂಕು ಬೂದಿ ಎರಚಿದ್ದಾರೆ. ಮಂಕು ಬೂದಿ ಎರಚಿ ರಾಜ್ಯಾಧ್ಯಕ್ಷ ಸ್ಥಾನ ಪಡೆದಿದ್ದಾರೆ
ಹೈಕಮಾಂಡ್ ಗೆ ಇದೆಲ್ಲ ಗೊತ್ತಿದ್ದರೂ ಏನು ಮಾಡಲಾಗದ ಪರಿಸ್ಥಿತಿಯಲ್ಲಿದೆ ಎಂದರು.
ಈಶ್ವರಪ್ಪರನ್ನು ಪಕ್ಷದಿಂದ ಉಚ್ಚಾಟಿಸಿದ್ದು ವಿಜಯೇಂದ್ರಗೆ ನುಂಗಲಾರದ ತುತ್ತು: ಶಾಸಕ ಗೋಪಾಲಕೃಷ್ಣ ಬೇಳೂರು
ಸಿಎಂ ಸ್ಥಾನ ಉಳಿಸಿಕೊಳ್ಳಲು ಜಾತಿಗಣತಿ:
ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೇಗಾದರೂ ಸಿಎಂ ಹುದ್ದೆ ಉಳಿಸಿಕೊಳ್ಳಬೇಕು. ಹೀಗಾಗಿ ಸಿದ್ದರಾಮಯ್ಯ ಜಾತಿ ಜನಗಣತಿ ಅಡ್ಡ ತಂದಿದ್ದಾರೆ. ಜಾತಿ ಗಣತಿ ಬಹಿರಂಗದ ಕುರಿತು ನಾವು ಅಧಿವೇಶನದಲ್ಲಿಯೇ ಪಕ್ಷಾತೀತವಾಗಿ ನಿಳುವಳಿ ಸೂಚನೆ ಮಾಡಿದ್ದೆವು. ಮಂಡನೆ ಮಾಡೇ ಮಾಡ್ತೇವೆ ಅಂತ ಸಿದ್ದರಾಮಯ್ಯ ಹೇಳಿದ್ರು. ಆದ್ರೆ ಈಗ ಡೈವರ್ಟ್ ಮಾಡೋಕೆ ಜಾತಿ ಜನಗಣತಿ ಅಡ್ಡ ತಂದಿದ್ದಾರೆ. ಚಾಮುಂಡಿ ಸಿದ್ದರಾಮಯ್ಯ ಗೆ ಬುದ್ಧಿ ಕೊಟ್ಟಿದ್ದಾಳೆ. ಇನ್ನೂ ವರದಿಯೇ ಬಂದಿಲ್ಲ. ಆದರೆ ಮುಂಚೆ ಹೇಳಿದಂತೆ ನಡೆದುಕೊಳ್ಳಿ. ಮೊದಲು ವಿಧಾನ ಮಂಡಲದಲ್ಲಿ ಮಂಡಿಸಿ ಆಮೇಲೆ ಅಂಗೀಕಾರ ಅದಕ್ಕೆ ಮೊದಲು ಜಾತಿ ಗಣತಿ ಅಡ್ಡ ಇಟ್ಟುಕೊಂಡು ಸಿಎಂ ಹುದ್ದೆ ಉಳಿಸಿಕೊಳ್ಳಲು ಹೋಗಬೇಡಿ ಎಂದು ತಿವಿದರು.