ಖಾಸಗಿ ಸೋಲಾರ್ ವಿದ್ಯುತ್ ಘಟಕ ಸ್ಥಾಪನೆಗೆ ರೈತ ಸಂಘ ತೀವ್ರ ವಿರೋಧ ವ್ಯಕ್ತಪಡಿಸಿದೆ. ತುಂಗಭದ್ರಾ ಜಲಾಶಯ ನಿರ್ಮಾಣದ ವೇಳೆ ನಿರಾಶ್ರಿತರಾಗಿ 73 ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ಭೂಮಿಗೆ ಹಕ್ಕುಪತ್ರ ನೀಡುವಂತೆ ರೈತರು ಆಗ್ರಹಿಸಿದ್ದಾರೆ.
ಹೊಸಪೇಟೆ: ತಾಲೂಕಿನ ಡಣಾಪುರ ಬಳಿ ಸೋಲಾರ್ ವಿದ್ಯುತ್ ಘಟಕ ಸ್ಥಾಪನೆಗೆ ಕರ್ನಾಟಕ ರಾಜ್ಯ ರೈತ ಸಂಘ ತೀವ್ರ ವಿರೋಧ ವ್ಯಕ್ತಪಡಿಸಿ ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಶೃತಿ ಎಂ. ಮಳ್ಳಪ್ಪಗೌಡ್ರು ಅವರಿಗೆ ಮನವಿ ಸಲ್ಲಿಸಿದರು.
ಸರ್ಕಾರದಿಂದ ಸಿಗದ ಹಕ್ಕುಪತ್ರ
ಪ್ರತಿಭಟನಾ ಸಭೆ ಉದ್ದೇಶಿಸಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಬಿ.ಗೋಣಿಬಸಪ್ಪ ಮಾತನಾಡಿ, ತಾಲೂಕಿನ ಮರಿಯಮ್ಮನಹಳ್ಳಿ ಹೋಬಳಿಯ ಡಣಾಯಕನಕೆರೆ ಕಂದಾಯ ಗ್ರಾಮದ ವ್ಯಾಪ್ತಿಯಲ್ಲಿ ಕಳೆದ 73 ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ರೈತರಿಗೆ ಈವರೆಗೆ ಸರ್ಕಾರ ಹಕ್ಕು ಪತ್ರ ನೀಡಿಲ್ಲ.
1959 ರಲ್ಲಿ ತುಂಗಭದ್ರಾ ಜಲಾಶಯ ನಿರ್ಮಾಣ ಸಂದರ್ಭದಲ್ಲಿ ಮುಳುಗಡೆಯಾದ ಪ್ರದೇಶಗಳ ನಿರಾಶ್ರಿತರಿಗೆ ಸರ್ಕಾರ ಪುನರ್ವಸತಿಗಾಗಿ ಈ ಪ್ರದೇಶದಲ್ಲಿ ಭೂಮಿ ನೀಡಿದೆ. ಆದರೆ ಸರ್ಕಾರದಿಂದ ನೀಡಲಾದ ಜಮೀನುಗಳಿಗೆ ಈವರೆಗೆ ಹಕ್ಕು ಪತ್ರ ನೀಡಿಲ್ಲ. ಈ ಕುರಿತಂತೆ ಈ ಭಾಗದ ರೈತರು ಹಲವಾರು ವರ್ಷಗಳಿಂದ ಹೋರಾಟ ನಡೆಸುತ್ತಾ ಬಂದಿದ್ದಾರೆ.
ಸೋಲಾರ್ ಘಟಕ ಆರಂಭಕ್ಕೆ ಪರವಾನಿಗೆ ನೀಡದಂತೆ ಒತ್ತಾಯ
ತಹಸೀಲ್ದಾರ, ಜಿಲ್ಲಾಧಿಕಾರಿ ಸೇರಿದಂತೆ ಜನಪ್ರತಿನಿಧಿಗಳಿಗೆ ಸರ್ಕಾರಕ್ಕೆ ಮನವಿಪತ್ರ ಸಲ್ಲಿಸಿದರೂ ರೈತರು ಸಾಗುವಳಿ ಮಾಡುತ್ತಿರುವ ಜಮೀನುಗಳಿಗೆ ಹಕ್ಕುಪತ್ರ ನೀಡಿರುವುದಿಲ್ಲ. ಆದರೆ ಇದೇ ಸಂದರ್ಭದಲ್ಲಿ ಖಾಸಗಿ ಕಂಪನಿಯವರು ಸೋಲಾರ್ ವಿದ್ಯುತ್ ಘಟಕ ಸ್ಥಾಪನೆಗೆ ಪರವಾನಗಿ ಕೋರಿ ಅರ್ಜಿ ಸಲ್ಲಿಸಿದ್ದು. ಜಿಲ್ಲಾಡಳಿತ ಯಾವುದೇ ಕಾರಣಕ್ಕೂ ಪರವಾನಗಿ ನೀಡಬಾರದು ಎಂದು ಒತ್ತಾಯಿಸಿದರು.
ಹೆದ್ದಾರಿ ತಡೆದು ಪ್ರತಿಭಟನೆ ನಡೆಸುವ ಎಚ್ಚರಿಕೆ
ತುಂಗಭದ್ರಾ ನಿರಾಶ್ರಿತರ ಜಮೀನುಗಳಿಗೆ ಹಕ್ಕುಪತ್ರ ನೀಡುವಂತೆ ಒತ್ತಾಯಿಸಿ ತಾಲೂಕಿನ ಡಣಾಪುರ ಬಳಿ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು. ಈ ಸಂದರ್ಭದಲ್ಲಿ ರೈತರಿಗೆ ತೊಂದರೆ ಆದರೆ ಅದಕ್ಕೆ ಜಿಲ್ಲಾಡಳಿತ ಹಾಗೂ ಸರ್ಕಾರವೇ ನೇರ ಹೊಣೆಯಾಗಲಿದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕಾಧ್ಯಕ್ಷ ಗಂಟೆ ಸೋಮಶೇಖರ್, ಯಮುನೂರ, ರಾಜಬಕ್ಷಿ, ಹುಚ್ಚುಸಾಬ್, ಕನಕರಾಯ, ಹುಲುಗಪ್ಪ, ಉಮೇಶ, ಮಾರೆಪ್ಪ, ರಮೇಶ, ದಾದಾಪೀರ್, ನಾಗರಾಜ, ರಾಮಪ್ಪ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.
ಇದನ್ನೂ ಓದಿ: ಆಲಮಟ್ಟಿಯಿಂದ ನಿತ್ಯ 27,500 ಕ್ಯುಸೆಕ್ ನೀರು ಬಿಡುಗಡೆ: ಇದರ ಹಿಂದಿನ ರಹಸ್ಯವೇನು ?


