ಸರ್ಕಾರ ಬೀಳಿಸೋ ದುರಾಲೋಚನೆ ತಡೆದು ಉಳಿಸುವ ಚಿಂತನೆ ಮೂಡಿಸಲಿ : ಖ್ಯಾತ ಸಾಹಿತಿ ಡಾ.ಹಂಪ ನಾಗರಾಜಯ್ಯ

ಸರ್ಕಾರಗಳನ್ನು ಉರುಳಿಸುವ ದುರಾಲೋಚನೆ ಬರದಂತೆ ತಡೆದು, ಚುನಾಯಿತ ಸರ್ಕಾರಗಳನ್ನು ಉಳಿಸುವ ಚಿಂತನೆಗಳನ್ನು ಲೋಕಾಂಬಿಕೆಯು ಮೂಡಿಸಲಿ ಎಂದು ಖ್ಯಾತ ಸಾಹಿತಿ ಡಾ.ಹಂಪ ನಾಗರಾಜಯ್ಯ ಪ್ರಾರ್ಥಿಸಿದರು.

Karnataka Famous writer Dr  Hampa Nagarajaiah speech after mysuru dasara inauguration rav

ಅಂಶಿ ಪ್ರಸನ್ನಕುಮಾರ್

 ಮೈಸೂರು (ಅ.4) : ಸರ್ಕಾರಗಳನ್ನು ಉರುಳಿಸುವ ದುರಾಲೋಚನೆ ಬರದಂತೆ ತಡೆದು, ಚುನಾಯಿತ ಸರ್ಕಾರಗಳನ್ನು ಉಳಿಸುವ ಚಿಂತನೆಗಳನ್ನು ಲೋಕಾಂಬಿಕೆಯು ಮೂಡಿಸಲಿ ಎಂದು ಖ್ಯಾತ ಸಾಹಿತಿ ಡಾ.ಹಂಪ ನಾಗರಾಜಯ್ಯ ಪ್ರಾರ್ಥಿಸಿದರು.

ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಗುರುವಾರ ಬೆಳಗ್ಗೆ 9.29ಕ್ಕೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ವಿಶ್ವವಿಖ್ಯಾತ 417ನೇ ದಸರಾ ಮಹೋತ್ಸವಕ್ಕೆ ಅದ್ದೂರಿ ಚಾಲನೆ ನೀಡಲಾಯಿತು. ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡಿ, ಪೂಜೆ ಸಲ್ಲಿಸುವ ಮೂಲಕ ಹಿರಿಯ ಸಾಹಿತಿ ಹಂಪನಾ ಅವರು ಈ ಬಾರಿಯ ದಸರಾ ಮಹೋತ್ಸವಕ್ಕೆ ಚಾಲನೆ ನೀಡಿದರು.

ಇನ್ನೊಂದು ವರ್ಷದವರೆಗೂ ಚಾಮುಂಡೇಶ್ವರಿ ಆಶೀರ್ವಾದ ಇರಲಿ: ಸಿದ್ದರಾಮಯ್ಯ ಅಚ್ಚರಿಯ ಹೇಳಿಕೆ!

ಲೋಕಮಾತೆ ಚಾಮುಂಡೇಶ್ವರಿ ದೇವಿಗೆ ನಮಸ್ಕರಿಸಿ, ರಾಜರ್ಷಿ ನಾಲ್ವಡಿ ಶ್ರೀಕೃಷ್ಣರಾಜ ಒಡೆಯರನ್ನು ನೆನೆದು ಮಾತು ಆರಂಭಿಸಿದ ಹಂಪನಾ, ಸರ್ಕಾರವನ್ನು ಕೆಡವುವುದು ಸುಲಭ, ಕಟ್ಟುವುದು ಕಷ್ಟ. ಮೊದಲೇ ದೊಡ್ಡ ಹೊರೆಗಳಿಂದ ಬಳಲಿ ಬಸವಳಿದಿರುವ ಶ್ರೀಸಾಮಾನ್ಯನ ಹೆಗಲಿಗೆ ಮತ್ತೆ ಮತ್ತೆ ನಡೆಯುವ ಚುನಾವಣೆಗಳು ಇನ್ನಷ್ಟು ಭಾರ ಹೇರಿದರೆ ಕುಸಿಯುತ್ತಾನಷ್ಟೆ ಎಂದರು.

ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಎಷ್ಟೇ ಅಡ್ಡಿ ಆತಂಕಗಳು ಎದುರಾಗುತ್ತಿದ್ದರೂ, ಎದೆಗುಂದದೆ ಸಡ್ಡು ಹೊಡೆದು ಗಟ್ಟಿಯಾಗಿ ನಿಂತಿರುವುದನ್ನು ನೋಡಿದರೆ ಅವರೂ ಕೂಡ ಗರಡಿಮನೆಯಲ್ಲಿ ಸಾಮು ಮಾಡಿರಬೇಕೆಂಬ ಗುಮಾನಿ ನನಗಿದೆ ಎಂದರು.

ಬಹುಭಾಗ್ಯಗಳ ಬ್ರಹ್ಮ ಸಿದ್ದರಾಮಯ್ಯ: 

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ಬಹುಭಾಗ್ಯಗಳ ಬ್ರಹ್ಮ’ ಎಂಬ ಕೀರ್ತಿ ಗಳಿಸಿದ್ದಾರೆ. ಪ್ರಭುತ್ವಗಳಲ್ಲಿ ಪ್ರಜಾಪ್ರಭುತ್ವ ಮುಡಿಯ ಮಾಣಿಕ್ಯ ಸೆ.15 ರಂದು ತೆಂಕಣದ ಚಾಮರಾಜನಗರದಿಂದ ಬಡಗಣದ ಬೀದರವರೆಗೆ ಪ್ರಜಾಪ್ರಭುತ್ವದ ಬೇರುಗಳನ್ನು ಗಟ್ಟಿಗೊಳಿಸುವ ಮತ್ತು ಬಹುತ್ವದ ಮಹತ್ವವನ್ನು ಮನಗಾಣಿಸುವ ವಿಶ್ವದಾಖಲೆಯ ಮಾನವಸರಪಳಿಯನ್ನು ಆಯೋಜಿಸಿದ್ದು ಸಮಯೋಚಿತವೂ ಅಭಿನಂದನಾರ್ಹವೂ ಆಗಿದೆ ಎಂದರು. 

ಯುದ್ಧ, ಹೆಣ್ಣು ಭ್ರೂಣ ಹತ್ಯೆ ನಿಲ್ಲಲಿ: 

ಇಸ್ರೇಲ್-ಪ್ಯಾಲಸ್ತೀನ್‌, ರಷ್ಯಾ-ಉಕ್ರೈನ್ ಯುದ್ಧ ನಿಂತು, ನಿತ್ಯ ನಡೆಯುತ್ತಿರುವ ಅಮಾಯಕರ ಮಾರಣಹೋಮ ನಿಲ್ಲಲು ಆ ರಾಷ್ಟ್ರನಾಯಕರು ಕೂಡಲೆ ಜೀವಪರ ಕಾಳಜಿ ತೋರುವಂತೆ ಅವರಿಗೆ ಪ್ರೇರಣೆ ನೀಡಬೇಕೆಂದು ದೇವಿಯಲ್ಲಿ ಅವರು ಪ್ರಾರ್ಥಿಸಿದರು. ಸಮಾಜದಲ್ಲಿ ನಡೆಯುತ್ತಿರುವ ಹೆಣ್ಣು ಭ್ರೂಣ ಹತ್ಯೆ ತಡೆಯಲೂ ಚಾಮುಂಡಿದೇವಿಯು ಜನರಿಗೆ ಸದ್ಭುದ್ಧಿ ನೀಡಿ ಅನುಗ್ರಹಿಸಲಿ ಎಂದು ಅವರು ಕೋರಿದರು.

ಸ್ವಾತಂತ್ರ್ಯ ಬಂದು ಇಷ್ಟು ವರ್ಷವಾದರೂ ಶಾಸನಸಭೆ, ಲೋಕಸಭೆಯಲ್ಲಿ ಸ್ತ್ರೀಯರಿಗೆ ಸೂಕ್ತ ಪ್ರಾತಿನಿಧ್ಯ ಕೊಡುವ ಮಸೂದೆಗೆ ಅಡ್ಡಿ ಮಾಡುತ್ತಲೇ ಇದ್ದಾರೆ. ಹೆಣ್ಣುಮಕ್ಕಳು ಶಾಲೆಗೆ ಹೋಗಕೂಡದೆಂದು ಬೆದರಿಸುವ ಒಂದು ದೇಶವೂ ಇದೆಯೆಂಬುದು ಶೋಚನೀಯವಷ್ಟೇ ಅಲ್ಲ ಖಂಡನೀಯ ಕೂಡ ಎಂದರು.

ನಿರುದ್ಯೋಗ ಸಮಸ್ಯೆ ನಿವಾರಣೆಯಾಗಲಿ: 

ಇಂದಿನ ಬಹುದೊಡ್ಡ ರಾಷ್ಟ್ರೀಯ ಸಮಸ್ಯೆಯೆಂದರೆ ನಿರುದ್ಯೋಗ ಸಮಸ್ಯೆ. ಯುವಜನರು ಹತಾಶರಾಗಿದ್ದಾರೆ. ನಿರುದ್ಯೋಗ ನಿವಾರಣೆಗೆ ಆದ್ಯತೆಯಿತ್ತು ಕೇಂದ್ರ ಸರಕಾರವು ಕ್ರಮ ಕೈಗೊಳ್ಳುವಂತೆ ಪ್ರೇರೇಪಿಸಬೇಕೆಂದು ಯುವಜನತೆಯ ಪರವಾಗಿ ದೇವಿಯನ್ನು ಅವರು ಕೋರಿದರು. ಕನ್ನಡನಾಡು, ನುಡಿ, ನೆಲ, ಜಲ ಕಲೆ ಸಂಸ್ಕೃತಿ ಸಂರಕ್ಷಣೆಗಾಗಿ ಹೋರಾಡುವವವರನ್ನು ಕೊಲೆಗಾರರಂತೆ ಕಾಣದೆ, ಪ್ರೀತಿ ಅಭಿಮಾನಗಳಿಂದ ಕಾಣುವಂತೆ ಆಡಳಿತಾಂಗಕ್ಕೆ ಪ್ರೇರಣೆ ಕೊಡುವಂತೆ ಅವರು ವಿನಂತಿಸಿದರು.

ಕುಸ್ತಿಗೆ ಹೆಚ್ಚಿನ ಪ್ರೋತ್ಸಾಹ ಸಿಗಲಿ:

 ಕೆಲವು ಹಬ್ಬಗಳು ಆಯಾ ಮತಧರ್ಮದವರಿಗಷ್ಟೇ ಸೀಮಿತವಾಗಿರುತ್ತದೆ. ಆದರೆ, ದಸರಾ ಹಬ್ಬ ಮತಧರ್ಮಗಳ ತಾರತಮ್ಯವಿರದೆ ಇಡೀ ನಾಡು ಆಚರಿಸುವ ಸರ್ವಜನಾಂಗದ ಹಬ್ಬವಾಗಿದೆ. ಮೈಸೂರು ಒಡೆಯರು ಶ್ರದ್ಧಾಭಕ್ತಿಗಳಿಂದ, ವೈಭವದಿಂದ ಈ ಹಬ್ಬ ಆಚರಿಸಿದರು. ದಸರಾ ಸಂದರ್ಭದಲ್ಲಿ ಹಿಂದಿನಿಂದ ಪ್ರೋತ್ಸಾಹಿಸುತ್ತಿದ್ದ ದೇಸಿ ಪರಂಪರೆಗಳಲ್ಲಿ ಕುಸ್ತಿಯೂ ಒಂದು. ಇನ್ನು ಮುಂದೆಯೂ ದೇಸೀ ಕ್ರೀಡೆಯಾದ ಕುಸ್ತಿಗೆ ಹೆಚ್ಚು ಪ್ರೋತ್ಸಾಹ ಕೊಡಬೇಕು ಎಂದು ಅವರು ಆಗ್ರಹಿಸಿದರು.

ಕಮಲಾ ನೆನದು ಭಾವುಕರಾದ ಹಂಪನಾ: 

ಕರ್ನಾಟಕದ ಜನರ ಪ್ರತಿನಿಧಿಯಾಗಿ ಈ ನಾಡ ಹಬ್ಬವನ್ನು ಸಂತೋಷದಿಂದ ಉದ್ಘಾಟಿಸಿದ್ದೇನೆ. ನನ್ನ 88 ವರ್ಷದ ದೀರ್ಘ ಜೀವನದಲ್ಲಿ ಮರೆಯಲಾಗದ ಮಧುರ ಸ್ಮೃತಿಯ ಕ್ಷಣಗಳನ್ನು ಕಲ್ಪಿಸಿಕೊಟ್ಟ ನಮ್ಮ ಹೆಮ್ಮೆಯ ಕರ್ನಾಟಕ ಸರಕಾರಕ್ಕೆ ಅಂತಃಕರಣ ತುಂಬಿದ ಕೃತಜ್ಞತೆಗಳು ಎಂದರು. ಒಟ್ಟು 71 ವರ್ಷಗಳ ಸ್ನೇಹದ ಸುಖ ನೀಡಿದ್ದಲ್ಲದೆ ಆರು ವರ್ಷ ಸಹಪಾಠಿಯಾಗಿಯೂ, 63 ವರ್ಷ ಮಡದಿಯಾಗಿಯೂ ನನ್ನನ್ನು ರೂಪಿಸಿದ ಮಹಾಶಿಲ್ಪಿ ನಾಡೋಜ ಪ್ರೊ.ಕಮಲಾ ಹಂಪನಾ ಅವರ ದಿವ್ಯ ನೆನಪಿಗೆ ನನಗೆ ಸಂದಿರುವ ಈ ಗೌರವವನ್ನು ಸಮರ್ಪಿಸುತ್ತೇನೆ ಎಂದು ಹೇಳಿ ಹಂಪನಾ ಭಾವುಕರಾದರು.

ಕೆಲವೊಮ್ಮೆ ಕೋರ್ಟ್‌ನಲ್ಲಿ ನ್ಯಾಯ ಸಿಗದೆ ಇರಬಹುದು: ಸಿಎಂ ಸಿದ್ದರಾಮಯ್ಯ ಆತ್ಮಸಾಕ್ಷಿ ಮಂತ್ರ!

ಯಾವ ಪಕ್ಷವೂ ಶಾಶ್ವತವಾಗಿ ಅಧಿಕಾರದಲ್ಲಿ ಇರುವುದು ಅಸಾಧ್ಯ. ಚಕ್ರಾರ ಪಂಕ್ತಿರಿವ ಗಚ್ಛತಿ ಭಾಗ್ಯ ಪಂಕ್ತಿಃ. ಸೋತ ಪಕ್ಷವು ಮತ್ತೆ ಅಧಿಕಾರಕ್ಕೆ ಬರಲು, ಜನಮನವನ್ನು ತಮ್ಮ ಪರವಾಗಿ ಒಲಿಸಿಕೊಳ್ಳಲು ಐದು ವರ್ಷದಲ್ಲಿ ಸಜ್ಜಾಗಬಹುದು

Latest Videos
Follow Us:
Download App:
  • android
  • ios