Asianet Suvarna News Asianet Suvarna News

ಲೋಕಸಭೆ ಎಲೆಕ್ಷನ್‌ಗೆ 5 ಕೋಟಿ ಮತದಾರರು!: ನಿಮ್ಮ ಹೆಸರಿದೆಯೇ? ವೆಬ್‌ನಲ್ಲಿ ಪರೀಕ್ಷಿಸಿ

ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು ಇದೇ ವೇಳೆ ಚುನಾವಣಾ ಆಯೋಗವೂ ಕೂಡ ಭರದ ಸಿದ್ಧತೆಯಲ್ಲಿ ತೊಡಗಿಕೊಂಡಿದೆ. ಈಗಾಗಲೇ ಪರಿಷ್ಕೃತ ಮತದಾರರ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಬದಲಾವಣೆ ಮತ್ತು ನೋಂದಾವಣೆಗೆ ಅವಕಾಶವಿದೆ ಎಂದು ಚುನಾವಣಾ ಆಯುಕ್ತರು ಹೇಳಿದ್ದಾರೆ. 

Karnataka Election Commission released Voter list
Author
Bengaluru, First Published Jan 17, 2019, 8:34 AM IST

ಬೆಂಗಳೂರು : ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ನಿರತವಾಗಿರುವ ಚುನಾವಣಾ ಆಯೋಗವು ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯಕ್ರಮವನ್ನು ಬುಧವಾರ ಮುಕ್ತಾಯಗೊಳಿಸಿದ್ದು, 5.03 ಕೋಟಿ ಮತದಾರರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌ ತಿಳಿಸಿದ್ದಾರೆ.

ಚುನಾವಣಾ ಆಯೋಗದ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮತದಾರರ ಪಟ್ಟಿಪರಿಷ್ಕರಣೆ ಕುರಿತು ಮಾಹಿತಿ ನೀಡಿದ ಅವರು, ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಸೇರಿಸದ 18 ವರ್ಷ ವಯೋಮಾನದ ಯುವಜನರು ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಳ್ಳಲು ಮತ್ತು ಬದಲಾವಣೆಗಳಿದ್ದರೆ ಮಾಡಿಕೊಳ್ಳಲು ಇನ್ನೂ ಕಾಲಾವಕಾಶ ಇದ್ದು, ಅದಷ್ಟು ಬೇಗ ನಾಗರಿಕರು ನೋಂದಾಯಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ರಾಜ್ಯದಲ್ಲಿನ ಒಟ್ಟು 5.03 ಕೋಟಿ ಮತದಾರರ ಪೈಕಿ 2,54,84,972 ಪುರುಷ ಮತದಾರರು, 2,48,46,976 ಮಹಿಳಾ ಮತದಾರರು ಮತ್ತು 4718 ಇತರೆ ಮತದಾರರು ಇದ್ದಾರೆ. 2,54,84,972 ಪುರುಷ ಮತದಾರರಲ್ಲಿ 2,54,55,976 ಸಾಮಾನ್ಯ ಮತ್ತು 28996 ಸೇವಾ ಮತದಾರರಿದ್ದು, 2,48,46,976 ಮಹಿಳಾ ಮತದಾರರಲ್ಲಿ 2,48,46,488 ಸಾಮಾನ್ಯ ಮತ್ತು 488 ಸೇವಾ ಮತದಾರರು ಇದ್ದಾರೆ. ಸೇವಾ ಮತದಾರರ ಅಂತಿಮ ಪಟ್ಟಿಯನ್ನು ಫೆ.22ರಂದು ಪ್ರಕಟಿಸಲಾಗುವುದು ಎಂದು ತಿಳಿಸಿದರು.

ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯಕ್ರಮದ ಅವಧಿಯಲ್ಲಿ 17.45 ಲಕ್ಷ ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಳ್ಳದ 6.35 ಲಕ್ಷ ಮತದಾರರನ್ನು ನೋಂದಾಯಿಸಿಕೊಳ್ಳಲಾಗಿದೆ. ಪ್ರಸ್ತುತ ಪರಿಷ್ಕರಣೆಯಲ್ಲಿ 7.12 ಲಕ್ಷ ಯುವ ಮತದಾರರು ನೋಂದಾಯಿಸಿಕೊಂಡಿದ್ದಾರೆ. 7,54,829 ಅರ್ಜಿಗಳು ಹೊಸದಾಗಿ ಸ್ವೀಕೃತಗೊಂಡಿದ್ದು, 7,21,653 ಅರ್ಜಿಗಳು ಅಂಗೀಕೃತಗೊಂಡಿವೆ. ಹೆಸರು ತೆಗೆದುಹಾಕಲು 7,59,277 ಅರ್ಜಿಗಳು ಸ್ವೀಕೃತವಾಗಿದ್ದು, 7,52,901 ಅರ್ಜಿಗಳು ಅಂಗೀಕೃತಗೊಂಡಿವೆ. ಇನ್ನು ತಿದ್ದುಪಡಿಗಾಗಿ 2,31,376 ಅರ್ಜಿಗಳು ಬಂದಿದ್ದು, ಈ ಪೈಕಿ 2,25,306 ಅಂಗಿಕೃತಗೊಂಡಿವೆ ಎಂದು ವಿವರಿಸಿದರು.

1.14 ಲಕ್ಷ ನಕಲಿ ಗುರುತಿನ ಚೀಟಿ ಪತ್ತೆ

ನಕಲಿ ಗುರುತಿನ ಚೀಟಿ ಪತ್ತೆ ಕಾರ್ಯಾಚರಣೆಯನ್ನು ಚುನಾವಣಾ ಆಯೋಗದ ಅಧಿಕಾರಿಗಳು ನಡೆಸುತ್ತಿದ್ದು, 1,14,377 ಭಾವಚಿತ್ರ ಪುನರಾವರ್ತನೆಯುಳ್ಳ ಪ್ರಕರಣಗಳನ್ನು ಗುರುತಿಸಲಾಗಿದೆ. ಕೆಲವು ಪ್ರಕರಣಗಳಲ್ಲಿ ಅಗತ್ಯ ಕಾನೂನು ಕ್ರಮ ಜರುಗಿಸಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌ ಹೇಳಿದ್ದಾರೆ.

ಮತದಾರರ ಪಟ್ಟಿಪರಿಷ್ಕರಣೆಯಲ್ಲಿ ಪತ್ತೆಯಾದ ಭಾವಚಿತ್ರ ಪುನಾರವರ್ತನೆ ಪ್ರಕರಣಗಳ ಪೈಕಿ 54,140 ಪ್ರಕರಣಗಳಲ್ಲಿ ಕ್ರಮ ಕೈಗೊಳ್ಳಲಾಗಿದೆ. 64,600 ಪ್ರಕರಣದಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ. ಅಲ್ಲದೇ, 1.82 ಲಕ್ಷ ಭಾವಚಿತ್ರ ಇಲ್ಲದ ಪ್ರಕರಣಗಳನ್ನು ಗುರುತಿಸಲಾಗಿದೆ. ಈ ಪೈಕಿ 1.47 ಲಕ್ಷ ಪ್ರಕರಣದಲ್ಲಿ ಕ್ರಮ ಕೈಗೊಳ್ಳಲಾಗಿದೆ. 34 ಸಾವಿರ ಪ್ರಕರಣ ಬಾಕಿ ಉಳಿದಿದ್ದು, ಭಾವಚಿತ್ರವನ್ನು ಗುರುತಿನ ಚೀಟಿಗೆ ನೀಡುವಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಪ್ರಕರಣಗಳನ್ನು ಪರಿಶೀಲಿಸಿದಾಗ ಮತದಾರರು ಕೆಲಸದ ನಿಮಿತ್ತ ಇತರ ಸ್ಥಳಗಳಿಗೆ ವಲಸೆ ಹೋಗಿದ್ದಾರೆ ಎಂಬುದು ಗೊತ್ತಾಗಿದೆ. ಭಾವಚಿತ್ರ ಇಲ್ಲದಿರುವವರು ಸಂಬಂಧಿಸಿದ ಮತಗಟ್ಟೆಅಧಿಕಾರಿಗೆ ನೀಡಿ ಭಾವಚಿತ್ರವುಳ್ಳ ಮತದಾರರ ಗುರುತಿನ ಚೀಟಿ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಇನ್ನು 10.41 ಲಕ್ಷ ಮತದಾರರ ಹೆಸರು ಪುನರಾವರ್ತನೆಗೊಂಡ ಪ್ರಕರಣಗಳನ್ನು ಗುರುತಿಸಲಾಗಿದೆ. ಈ ಪೈಕಿ 31,372 ಪ್ರಕರಣಗಳ ವಿರುದ್ಧ ಕ್ರಮ ಜರುಗಿಸಲಾಗಿದೆ ಎಂದರು.

ಏಜೆಂಟ್‌ ನೇಮಕಕ್ಕೆ ರಾಜಕೀಯ ಪಕ್ಷಗಳ ನಿರಾಸಕ್ತಿ

ಮತಗಟ್ಟೆಮಟ್ಟದ ಏಜೆಂಟ್‌ಗಳನ್ನು ನೇಮಿಸಲು ರಾಜಕೀಯ ಪಕ್ಷಗಳು ನಿರಾಸಕ್ತಿ ಹೊಂದಿದ್ದು, 58186 ಮತಗಟ್ಟೆಗಳಿಗೆ ಕೇವಲ 26432 ಏಜೆಂಟ್‌ಗಳನ್ನು ಮಾತ್ರ ರಾಜಕೀಯ ಪಕ್ಷಗಳು ನೇಮಕ ಮಾಡಿವೆ. ಕಾಂಗ್ರೆಸ್‌ 9497, ಬಿಜೆಪಿ 14696, ಜೆಡಿಎಸ್‌ 1038 ಮತ್ತು ಬಿಎಸ್‌ಪಿ 950 ಏಜೆಂಟ್‌ಗಳನ್ನು ನೇಮಕ ಮಾಡಿರುವ ಬಗ್ಗೆ ಮಾಹಿತಿ ಇದೆ ಎಂದು ರಾಜ್ಯ ಮುಖ್ಯಚುನಾವಣಾಧಿಕಾರಿ ಸಂಜೀವ್‌ ಕುಮಾರ್‌ ತಿಳಿಸಿದ್ದಾರೆ.

ಪ್ರತಿ ಮತಗಟ್ಟೆಯ ಮತದಾರರ ಪಟ್ಟಿಯನ್ನು ಕೂಲಂಕಷವಾಗಿ ಪರಿಶೀಲಿಸಲು ಮತ್ತು ದೋಷಗಳನ್ನು ಗುರುತಿಸಲು ಮತಗಟ್ಟೆಮಟ್ಟದ ಏಜೆಂಟ್‌ಗಳನ್ನು ನೇಮಕ ಮಾಡುವಂತೆ ರಾಜಕೀಯ ಪಕ್ಷಗಳಿಗೆ ತಿಳಿಸಲಾಗಿತ್ತು. ಆದರೆ ನಿರೀಕ್ಷಿತ ಮಟ್ಟದಲ್ಲಿ ನೇಮಕ ಮಾಡಿಲ್ಲ. ಅದಷ್ಟುಬೇಗ ಕ್ರಮ ಕೈಗೊಳ್ಳಬೇಕು ಎಂದರು.

ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯಕ್ರಮ ಅವಧಿಯಲ್ಲಿ 7.52 ಲಕ್ಷ ಮತದಾರರನ್ನು ಕೈಬಿಡಲಾಗಿದೆ. ಇದರಲ್ಲಿ 4.72 ಲಕ್ಷ ಮತದಾರರು ಸ್ಥಳಾಂತರಗೊಂಡಿದ್ದಾರೆ. 1.95 ಲಕ್ಷ ಮತದಾರರು ಮರಣಹೊಂದಿದ್ದಾರೆ ಮತ್ತು 80 ಸಾವಿರ ಪುನರಾವರ್ತನೆಗೊಂಡ ಮತದಾರರನ್ನು ಗುರುತಿಸಿ ಕೈಬಿಡಲಾಗಿದೆ. 2019ರ ಮತದಾರರ ಪಟ್ಟಿಯಲ್ಲಿ 3.82 ಲಕ್ಷ ಅಂಗವಿಕಲ ಮತದಾರರು ಇದ್ದಾರೆ. ಲೋಕಸಭಾ ಉಪಚುನಾವಣೆಯಲ್ಲಿ ಮಾಡಿದಂತೆ ಅಂಗವಿಕಲರಿಗೆ ಗಾಲಿ ಕುರ್ಚಿ, ವಾಹನಗಳ ವ್ಯವಸ್ಥೆಯಂತೆ ಈ ಬಾರಿಯೂ ಮಾಡಲಾಗುತ್ತದೆ. ಪ್ರತಿ ಸಾವಿರ ಪುರುಷರಿಗೆ ಇರುವಂತಹ ಮಹಿಳಾ ಮತದಾರರ ಸಂಖ್ಯೆಯು ಹೆಚ್ಚಾಗಿದ್ದು, 976 ಮತದಾರರು ಇದ್ದಾರೆ ಎಂದು ಹೇಳಿದರು.

ಮತಗಟ್ಟೆಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿದ ವೇಳೆ ಗುರುತಿಸಿದ ಮೃತ, ವಲಸಿಗ ಮತ್ತು ಪುನರಾವರ್ತಿತ ಪ್ರಕರಣಗಳಲ್ಲಿ 7.47 ಲಕ್ಷ ಮತದಾರರ ಹೆಸರನ್ನು ತೆಗೆದು ಹಾಕಲಾಗಿದೆ. 4.72 ಲಕ್ಷ ಮಂದಿ ವಲಸೆ ಹೋಗಿದ್ದು, 80 ಸಾವಿರ ಪುನರಾವರ್ತಿತ ಮತ್ತು 1.95 ಲಕ್ಷ ಮೃತ ಮತದಾರರನ್ನು ಗುರುತಿಸಲಾಗಿದೆ. ಅಂತಹವರ ಹೆಸರನ್ನು ಮತದಾರರ ಪಟ್ಟಿಯಿಂದ ಕೈ ಬಿಡಲಾಗಿದೆ ಎಂದರು.

Follow Us:
Download App:
  • android
  • ios