ಬಿಸಿಲು, ಚುನಾವಣೆ: ರಾಜ್ಯದಲ್ಲೀಗ ಮದ್ಯದ ಕೊರತೆ: 20%ರಷ್ಟು ಬೇಡಿಕೆ ಹೆಚ್ಚಳ
ಬಿರು ಬೇಸಿಗೆಯ ಎಫೆಕ್ಟೋ ಅಥವಾ ಚುನಾವಣೆಯ ಪರಿಣಾಮವೋ ಗೊತ್ತಿಲ್ಲ. ಆದರೆ, ರಾಜ್ಯದಲ್ಲಿ ಮಾತ್ರ ಮದ್ಯ ಕೊರತೆ ಉಂಟಾಗಿದೆ. ಹೌದು, ತಮ್ಮ ಬೇಡಿಕೆಗೆ ತಕ್ಕಷ್ಟುಮದ್ಯವನ್ನು ರಾಜ್ಯ ಪಾನೀಯ ನಿಗಮ ಪೂರೈಕೆ ಮಾಡುತ್ತಿಲ್ಲ.
ವಿಶೇಷ ವರದಿ
ಬೆಂಗಳೂರು (ಏ.23): ಬಿರು ಬೇಸಿಗೆಯ ಎಫೆಕ್ಟೋ ಅಥವಾ ಚುನಾವಣೆಯ ಪರಿಣಾಮವೋ ಗೊತ್ತಿಲ್ಲ. ಆದರೆ, ರಾಜ್ಯದಲ್ಲಿ ಮಾತ್ರ ಮದ್ಯ ಕೊರತೆ ಉಂಟಾಗಿದೆ. ಹೌದು, ತಮ್ಮ ಬೇಡಿಕೆಗೆ ತಕ್ಕಷ್ಟುಮದ್ಯವನ್ನು ರಾಜ್ಯ ಪಾನೀಯ ನಿಗಮ ಪೂರೈಕೆ ಮಾಡುತ್ತಿಲ್ಲ. ಇದರಿಂದ ವ್ಯವಹಾರಕ್ಕೆ ತೊಂದರೆ ಉಂಟಾಗಿದೆ ಎಂದು ಆರೋಪಿಸುತ್ತಾರೆ ಮದ್ಯ ಮಾರಾಟಗಾರರು.
ರಾಜ್ಯದಲ್ಲಿ ಪ್ರತಿದಿನ 20 ಲಕ್ಷಕ್ಕೂ ಹೆಚ್ಚಿನ ಕಾರ್ಟನ್ ಬಾಕ್ಸ್ ದೇಶಿ ಉತ್ಪಾದನಾ ಮದ್ಯ ಮತ್ತು ಬಿಯರ್ ಪೂರೈಕೆಯಾಗುತ್ತಿದೆ. ಆದರೆ, ಬೇಸಿಗೆ ಹಾಗೂ ಚುನಾವಣೆ ಪರಿಣಾಮದಿಂದ ಶೇ.20ರಷ್ಟುಬೇಡಿಕೆ ಹೆಚ್ಚಿರುವುದು ಸೇರಿದಂತೆ ಹಾಲಿ ಬೇಡಿಕೆ ಪ್ರಮಾಣ 22ರಿಂದ 25 ಲಕ್ಷ ಕಾರ್ಟನ್ ಬಾಕ್ಸ್‌ನಷ್ಟಿದೆ. ಆದರೆ, ಆ ಪ್ರಮಾಣದ ಮದ್ಯ ಪೂರೈಕೆಯಾಗುತ್ತಿಲ್ಲ. ನೀತಿ ಸಂಹಿತೆ ಹಿನ್ನೆಲೆಯಲ್ಲಿ ಈ ಹಿಂದಿನ ಬೇಡಿಕೆಯಷ್ಟೇ ಮದ್ಯವನ್ನು ಮಾರಾಟ ಮಳಿಗೆಗಳಿಗೆ ಸರಬರಾಜು ಮಾಡಲಾಗುತ್ತಿದೆ. ಬೇಡಿಕೆಯಿಟ್ಟರೂ ಹೆಚ್ಚುವರಿ ಮದ್ಯ ಸರಬರಾಜು ಮಾಡುತ್ತಿಲ್ಲ. ಇದರಿಂದ ವ್ಯವಹಾರಕ್ಕೆ ಹೊಡೆತ ಬಿದ್ದಂತಾಗಿದೆ ಎಂದು ಬಾರ್ ಮಾಲೀಕರ ಸಂಘದ ಅಧ್ಯಕ್ಷ ಕರುಣಾಕರ ಹೆಗ್ಡೆ ತಿಳಿಸಿದ್ದಾರೆ.
ಇಂದು ಸಿದ್ಧಗಂಗಾ ಮಠಕ್ಕೆ ಹೊಸ ಉತ್ತರಾಧಿಕಾರಿ: ಮನೋಜ್ ಕುಮಾರ್‌ಗೆ ಪಟ್ಟಾಭಿಷೇಕ
ರಾಜ್ಯದಲ್ಲಿ ಮದ್ಯ ಉತ್ಪಾದನೆ ಮಾಡುವ 25 ಡಿಸ್ಟಿಲರಿಗಳಿವೆ. ಅವುಗಳಲ್ಲಿ ಈ ಹಿಂದೆ 2 ಪಾಳಿಯಲ್ಲಿ ಮದ್ಯ ಉತ್ಪಾದನೆ ಮಾಡಲಾಗುತ್ತಿತ್ತು. ಆದರೀಗ, ಒಂದು ಪಾಳಿಯಲ್ಲಿ ಮಾತ್ರ ಉತ್ಪಾದನೆ ಮಾಡಲಾಗುತ್ತಿದೆ. ಇದರಿಂದಲೂ ಮದ್ಯ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ. ಮದ್ಯ ಪೂರೈಕೆಯಲ್ಲಿನ ಕೊರತೆಯಿಂದಾಗಿ ಗೋವಾ, ತಮಿಳುನಾಡು, ಆಂಧ್ರಪ್ರದೇಶ ಗಡಿ ಭಾಗಗಳಲ್ಲಿನ ಜನರು ಆ ರಾಜ್ಯಗಳಿಗೆ ತೆರಳಿ ಮದ್ಯ ಸೇವನೆ ಮಾಡುವಂತಾಗಿದೆ. ಆದರೆ, ಮದ್ಯ ಮಾರಾಟಗಾರರು ಆ ರಾಜ್ಯಗಳಿಂದ ಮದ್ಯ ತೆಗೆದುಕೊಂಡು ಬರಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಕರುಣಾಕರ ರೆಡ್ಡಿ ತಿಳಿಸುತ್ತಾರೆ.
ಚುನಾವಣೆ ಹಿನ್ನೆಲೆಯಲ್ಲಿ ಎಲ್ಲ ರೀತಿಯ ಮದ್ಯಗಳಿಗೂ ಬೇಡಿಕೆ ಹೆಚ್ಚಾಗಿದೆ. ಜತೆಗೆ ಬೇಸಿಗೆ ಇರುವ ಕಾರಣ ಮದ್ಯ ಸೇವಿಸುವವರು ಬಿಯರ್ ಅನ್ನು ಹೆಚ್ಚಾಗಿ ಕೇಳುತ್ತಿದ್ದಾರೆ. ಪ್ರತಿದಿನ ರಾಜ್ಯದಲ್ಲಿ 60 ಸಾವಿರ ಲೀಟರ್ ಬಿಯರ್ ಮಾರಾಟವಾಗುತ್ತಿದೆ. ಆದರೆ, ಕಳೆದ 10 ದಿನಗಳಿಂದೀಚೆಗೆ ಮದ್ಯ ಪೂರೈಕೆ ಪ್ರಮಾಣದಲ್ಲಿ ವ್ಯತ್ಯಯವಾಗಿರುವ ಕಾರಣ ಸದ್ಯ ಬಿಯರ್ ಮಾರಾಟ 45ರಿಂದ 50 ಸಾವಿರ ಲೀಟರ್‌ಗೆ ಇಳಿಕೆಯಾಗಿದೆ. ಪಾನೀಯ ನಿಗಮ ಮತ್ತು ಅಬಕಾರಿ ಇಲಾಖೆಗಳು ಮದ್ಯ ಮಾರಾಟಗಾರರು ಸಲ್ಲಿಸುವ ಬೇಡಿಕೆಗನುಗುಣವಾಗಿ ಮದ್ಯ ಸರಬರಾಜು ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಕೋರಿದ್ದಾರೆ.
ಕಾಂಗ್ರೆಸ್ ಗೆದ್ದರೆ 25 ಸಾವಿರ ಪೌರಕಾರ್ಮಿಕರ ಕೆಲಸ ಕಾಯಂ: ಸುರ್ಜೇವಾಲಾ ಭರವಸೆ
ಬಿಗಿ ಕ್ರಮ: ಮದ್ಯ ಸರಬರಾಜಿನಲ್ಲಿ ವ್ಯತ್ಯಯದ ನಡುವೆಯೇ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಗಳು ಪದೇಪದೇ ಮದ್ಯ ಮಾರಾಟ ಮಳಿಗೆಗಳಿಗೆ ತೆರಳಿ ಪರಿಶೀಲನಾ ಕಾರ್ಯ ಮಾಡುತ್ತಿದ್ದಾರೆ. ಏಕಕಾಲದಲ್ಲಿ ಹೆಚ್ಚಿನ ಪ್ರಮಾಣದ ಮದ್ಯ ಖರೀದಿ ಮಾಡಿದವರ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಆ ಕುರಿತ ಮಾಹಿತಿಯನ್ನು ಇಟ್ಟುಕೊಳ್ಳದ ಮದ್ಯ ಮಾರಾಟಗಾರರ ವಿರುದ್ಧ ಕ್ರಮದ ಎಚ್ಚರಿಕೆಯನ್ನೂ ನೀಡುತ್ತಿದ್ದಾರೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.