ಬೆಂಗಳೂರು[ಫೆ.01]: ರಾಜ್ಯದ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಸೇರಿ ಎಲ್ಲಾ ಮಾದರಿಯ ಪದವಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ 45 ನಿಮಿಷ ಊಟದ ವಿರಾಮವನ್ನು ವೇಳಾಪಟ್ಟಿಯಲ್ಲಿ ಕಡ್ಡಾಯವಾಗಿ ನಿಗದಿ ಮಾಡುವಂತೆ ಕಾಲೇಜು ಶಿಕ್ಷಣ ಇಲಾಖೆ ಸೂಚನೆ ನೀಡಿದೆ.

ಇಲಾಖೆಯ ಉನ್ನತ ಅಧಿಕಾರಿಗಳ ತಂಡವು ಇತ್ತೀಚೆಗೆ ಕಾಲೇಜುಗಳ ಪರಿಶೀಲನೆಗೆ ಭೇಟಿ ನೀಡಿದ್ದ ವೇಳೆ ಊಟದ ವಿರಾಮವನ್ನು 10ರಿಂದ 15 ನಿಮಿಷಗಳು ಮಾತ್ರ ನಿಗದಿ ಮಾಡಿರುವುದು ಕಂಡು ಬಂದಿದೆ. ವಿದ್ಯಾರ್ಥಿಗಳಿಗೆ ಊಟ ಮಾಡುವುದಕ್ಕೂ ಸರಿಯಾದ ಸಮಯ ಇಲ್ಲದಿರುವುದರಿಂದ ಸಮಸ್ಯೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಾಲೇಜಿನಲ್ಲಿ 45 ನಿಮಿಷ ಊಟದ ವಿರಾಮ ನೀಡುವಂತೆ ತಿಳಿಸಲಾಗಿದೆ.

ಇದೇ ರೀತಿ ಪ್ರತಿ ದಿನ ದೈಹಿಕ ಶಿಕ್ಷಣ ಬೋಧಿಸಲು ಒಂದು ಗಂಟೆಯ ತರಗತಿಯನ್ನು ವೇಳಾಪಟ್ಟಿಯಲ್ಲಿ ನಿಗದಿ ಮಾಡಬೇಕು. ಬೇರೊಂದು ವಿಷಯ ಬೋಧಿಸುವ ಪ್ರಾಧ್ಯಾಪಕರು ರಜೆ/ವಿಶೇಷ ಕಾರ್ಯ ನಿಮಿತ್ತ ತೆರಳಿದ್ದಲ್ಲಿ ಅವರ ನಿಗದಿತ ಸಮಯವನ್ನು ದೈಹಿಕ ಶಿಕ್ಷಣ ಬೋಧನೆಗೆ, ಕ್ರೀಡಾ ಚಟುವಟಿಕೆಗಳು, ಯೋಗ, ದೈಹಿಕ ಮತ್ತು ಆರೋಗ್ಯ ಶಿಕ್ಷಣ ನೀಡಲು ಬಳಕೆ ಮಾಡಿಕೊಳ್ಳಬೇಕು.

ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟಹೆಚ್ಚಿಸಲು ಕಾಲೇಜಿನ ಗ್ರಂಥಾಲಯಗಳಲ್ಲಿ ಹೆಚ್ಚಿನ ಓದಿಗಾಗಿ ವಾರಕ್ಕೆ ಕನಿಷ್ಠ ಒಂದು ಗಂಟೆ ಅವಧಿಯನ್ನು ಮೀಸಲಿಡಬೇಕು.ಪರೀಕ್ಷಾ ದೃಷ್ಟಿಯಿಂದ ಹಿಂದಿನ ವರ್ಷಗಳ ಪ್ರಶ್ನೆಪತ್ರಿಕೆಗಳ ಬಗ್ಗೆ ಕಡ್ಡಾಯವಾಗಿ ತರಗತಿಯಲ್ಲಿ ವಿಶೇಷ ಕಾರ್ಯಾಗಾರಗಳ ಮೂಲಕ ಚರ್ಚಿಸಿ ಪ್ರಾಧ್ಯಾಪಕರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಬೇಕು ಎಂದು ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರಾದ ಅನಿರುದ್‌್ಧ ಶ್ರವಣ್‌ ಸುತ್ತೋಲೆ ಹೊರಡಿಸಿದ್ದಾರೆ.