ನುಡಿ ನಮನ: ಚಾಣಾಕ್ಷತೆ, ಸತ್ಯ-ನಿಷ್ಠೆಯಲ್ಲಿ ಶ್ರೀಕೃಷ್ಣನ ಪ್ರತಿರೂಪ ನಮ್‌ ಕೃಷ್ಣ : ಡಿಕೆ ಶಿವಕುಮಾರ್

ಡಿ.ಕೆ. ಶಿವಕುಮಾರ್ ಅವರು ಎಸ್.ಎಂ.ಕೃಷ್ಣ ಅವರೊಂದಿಗಿನ ತಮ್ಮ ರಾಜಕೀಯ ಪಯಣ, ಕೃಷ್ಣ ಅವರ ವ್ಯಕ್ತಿತ್ವ, ಸಾಧನೆಗಳು ಮತ್ತು ಕಾರ್ಯಗಳನ್ನು ನೆನಪಿಸಿಕೊಳ್ಳುತ್ತಾರೆ. ಬೆಂಗಳೂರಿನ ಅಭಿವೃದ್ಧಿ, ಮೆಟ್ರೋ ಯೋಜನೆ, ಬಿಸಿಯೂಟ ಯೋಜನೆ ಮುಂತಾದ ಕೃಷ್ಣ ಅವರ ಕೊಡುಗೆಗಳನ್ನು ಶ್ಲಾಘಿಸುತ್ತಾರೆ.

Karnataka DCM DK Shivakumar remembered about SM Krishna rav

ಡಿ.ಕೆ. ಶಿವಕುಮಾರ್, ಉಪಮುಖ್ಯಮಂತ್ರಿ

ರಾಜಕೀಯದಲ್ಲಿ ನಾವಿನ್ನೂ ಪೈರುಗಳಾಗಿ ಬೆಳೆಯುತ್ತಿರುವ ಹೊತ್ತಿನಲ್ಲಿ ಅಗಾಧ ಮರವಾಗಿ ಬೆಳೆದು ನಿಂತಿದ್ದವರು ಎಸ್.ಎಂ.ಕೃಷ್ಣ. 1989ರಲ್ಲಿ ನಾನು ಸಾತನೂರಿನಿಂದ ಗೆದ್ದು ಶಾಸಕನಾಗಿದ್ದೆ. ಆಗ ವಿಧಾನಸಭೆಯ ಸ್ಪೀಕರ್ ಹುದ್ದೆಯಲ್ಲಿ ಮಿಂಚಿ, ನಮಗೆಲ್ಲ ರಾಜಕೀಯದ ಪಾಠ ಮಾಡಿದವರು ಅವರು. ಅಚ್ಚುಕಟ್ಟುತನ, ಸಂಯಮ, ಜಾಣ್ಮೆ, ನಯ ನಾಜೂಕು, ಆಡಳಿತ-ವಿರೋಧ ಪಕ್ಷ ಎನ್ನದೆ ಸರ್ವರಿಗೂ ಸಮಾನ ಅವಕಾಶ ಕಲ್ಪಿಸುವ ಮೂಲಕ ಸ್ಪೀಕರ್ ಹುದ್ದೆಗೆ ಘನತೆ ತಂದವರು. ವ್ಯಂಗ್ಯಭರಿತ ಮೊನಚು ಮಾತುಗಳಿಂದ ಇಬ್ಬರಿಗೂ ಅವರು ಹೂಡುತ್ತಿದ್ದ ಬಾಣ ಗುರಿ ತಪ್ಪುತ್ತಿರಲಿಲ್ಲ. ಅವರ ವಾಕ್ಚಾತುರ್ಯಕ್ಕೆ ತಲೆದೂಗದವರೇ ಇಲ್ಲ!

ಕಾವೇರಿ ತೀರದ ಕನಸುಗಾರ, ಸೊಗಸುಗಾರ, ಅಭಿವೃದ್ದಿಯ ಹರಿಕಾರ. ಮೂವತ್ತನೇ ವಯಸ್ಸಿಗೆ ವಿಧಾನಸಭೆ ಪ್ರವೇಶ ಮಾಡಿದ ‘ಸೈಲೆಂಟ್ ಲೀಡರ್’ ಎಸ್.ಎಂ.ಕೃಷ್ಣ. ಎಂಥದ್ದೇ ಪರಿಸ್ಥಿತಿಯಲ್ಲೂ ಧೃತಿಗೆಡದ ಸ್ಥಿತಪ್ರಜ್ಞ. ಕರ್ನಾಟಕದ ರಾಜಕೀಯ ಕಂಡ ವಿಭಿನ್ನ, ವಿಶಿಷ್ಟ ವ್ಯಕ್ತಿ. ಕಲೆ, ಸಾಹಿತ್ಯ, ಸಂಗೀತ, ಕ್ರೀಡೆ - ಹೀಗೆ ನಾನಾ ವಿದ್ವತ್ತುಗಳು ಮೇಳೈಸಿದ ವ್ಯಕ್ತಿತ್ವ. ರಾಜಪ್ರಭುತ್ವ ಹಾಗೂ ಪ್ರಜಾಪ್ರಭುತ್ವವನ್ನು ಕಂಡಿದ್ದ ಮನೆತನದ ಕೊಂಡಿ. ವಿದೇಶಾಂಗ ಸಚಿವರಾಗಿದ್ದಾಗ ಭಾರತದ ಸಾರ್ವಭೌಮತ್ವ ಎತ್ತಿ ಹಿಡಿದ ‘ಸಂವಿಧಾನ ಪ್ರೇಮಿ’!

ಮಾತೃ ಹೃದಯಿ, ರಾಜಕೀಯ ಸಂತ

ಸರ್ಕಾರಿ ಶಾಲಾ ಮಕ್ಕಳ ಹಸಿವು ಕಣ್ಣಾರೆ ಕಂಡು ಮರುಗಿದ ‘ಮಾತೃ ಹೃದಯಿ’. ಗ್ರಾಮೀಣ ಭಾಗದ ಹೆಣ್ಣುಮಕ್ಕಳ ಆರ್ಥಿಕ ಕಷ್ಟ ದೂರ ಮಾಡಬೇಕು ಎಂದು ಆಲೋಚಿಸಿದವರು. ‘ಕರ್ನಾಟಕ ಕಂಗೊಳಿಸುತ್ತಿದೆ’ ಎನ್ನುವ ಘೋಷವಾಕ್ಯದ ಮೂಲಕ ಕರ್ನಾಟಕಕ್ಕೆ ಬ್ರಾಂಡ್ ಮೌಲ್ಯ ತಂದುಕೊಟ್ಟ ವ್ಯವಹಾರ ಚತುರ.

ಗಾಂಧಿವಾದಿಯಾಗಿದ್ದ ತಂದೆ ಮಲ್ಲಯ್ಯ ಅವರಿಂದ ಬಳುವಳಿಯಾಗಿ ಬಂದಿದ್ದ ಸಜ್ಜನಿಕೆ ಅವರನ್ನು ದೂರದೃಷ್ಟಿಯ ನಾಯಕನನ್ನಾಗಿ ಮಾಡಿತು. ವಿದೇಶ ಶಿಕ್ಷಣ ವರ್ಣರಂಜಿತ ವ್ಯಕ್ತಿತ್ವ ರೂಪಿಸಿತು. ಆದರೆ, ಹಳ್ಳಿ ಮತ್ತು ನಗರವಾಸಿಗಳ ಬಗ್ಗೆ ಅವರಿಗಿದ್ದ ಸಮಾನ ಭಾವ, ಅವರ ಅನೇಕ ತೀರ್ಮಾನಗಳು, ನಿಲುವುಗಳು ನನಗೆ ಅವರಲ್ಲೊಬ್ಬ ‘ರಾಜಕೀಯ ಸಂತ’ನ ದರ್ಶನ ಮಾಡಿಸಿದೆ.

ಕೃಷ್ಣಪಥ: ರಾಜಕೀಯಕ್ಕೆ ಬಂದಾಗ 100 ಎಕರೆ ಇತ್ತು, ಈಗ 1 ಎಕರೆ ಕೂಡ ಇಲ್ಲ: ಪ್ರೇಮಾ ಕೃಷ್ಣ

ಅಜಾತಶತ್ರುವಾಗಿ ರಾಜಕೀಯದ ಒಂದೊಂದೇ ಮೆಟ್ಟಿಲುಗಳನ್ನು ಸಾವಧಾನವಾಗಿ ಏರಿದ ಕೃಷ್ಣ ಅವರು ಕೆಂಪೇಗೌಡರು ನಿರ್ಮಿಸಿದ ಬೆಂಗಳೂರನ್ನು ಇಡೀ ಜಗತ್ತೇ ತಿರುಗಿನೋಡುವಂತೆ ಪರಿವರ್ತಿಸಿದರು. ಐಟಿಬಿಟಿ ಮೂಲಕ ಬೆಂಗಳೂರನ್ನು ಸಿಲಿಕಾನ್ ಸಿಟಿಯಾಗಿಸಿ ದೇಶದ ಆರ್ಥಿಕತೆಗೆ ಅತಿದೊಡ್ದ ಕೊಡುಗೆ ಸಿಗುವಂತೆ ಮಾಡಿದವರು ಎಸ್.ಎಂ.ಕೃಷ್ಣ ಅವರು.

ದ್ವಾಪರಯುಗದ ಕೃಷ್ಣನ ಬಗ್ಗೆ ಕಥೆಗಳಲ್ಲಿ ಕೇಳಿದ್ದೇವೆ, ಓದಿದ್ದೇವೆ. ರಾಜಕೀಯ ಚಾಣಾಕ್ಷತೆ, ಸತ್ಯ-ನಿಷ್ಠೆ ವಿಚಾರದಲ್ಲಿ ಆ ಕೃಷ್ಣನ ಪ್ರತಿರೂಪವೇ ನಮ್ಮ ಈ ಕೃಷ್ಣ.

ಸಾಯಿಬಾಬಾ ಹೇಳಿದ್ದು ನಿಜವಾಯ್ತು

ಹಿಂದೆ ಎಸ್.ಎಂ.ಕೃಷ್ಣ ಅವರ ಜನ್ಮದಿನದಂದು ಅವರ ಜೊತೆ ಪುಟ್ಟಪರ್ತಿಗೆ ತೆರಳಿದ್ದೆ. ನನ್ನನ್ನು ಕಂಡ ಸಾಯಿಬಾಬಾ ಅವರು ಎಸ್.ಎಂ.ಕೃಷ್ಣ ಅವರನ್ನು ಉದ್ದೇಶಿಸಿ, ‘ನೀನು ಈ ಹುಡುಗನನ್ನು ಬಿಡುವುದಿಲ್ಲ, ಕೊನೆಯವರೆಗೂ ಜತೆಯಲ್ಲೇ ಉಳಿಸಿಕೊಳ್ಳುವೆ’ ಎಂದರು. ಅವರು ಯಾವ ಅರ್ಥದಲ್ಲಿ ಇದನ್ನು ಹೇಳಿದ್ದರೋ ಗೊತ್ತಿಲ್ಲ, ಅವರ ಮಾತಂತೂ ನಿಜವಾಯಿತು. ರಾಜಕೀಯ ಮೀರಿಯೂ ಕೊನೆಗಾಲದವರೆಗೂ ಅವರ ಜತೆಯಲ್ಲೇ ಇದ್ದೆ ಎಂಬುದೇ ನನ್ನ ಸೌಭಾಗ್ಯ.

ಬೆಂಗಳೂರು ಟ್ರಾಫಿಕ್ ಸಮಸ್ಯೆಗೆ ಪರಿಹಾರವಾಗಿ ಮಾಜಿ ಮುಖ್ಯಮಂತ್ರಿ ಜೆ.ಎಚ್.ಪಟೇಲರು ಮೋನೋ ರೈಲು ತರಲು ಮುಂದಾಗಿದ್ದರು. ಕೃಷ್ಣ ಅವರು ಸಹ ಮೊನೋ ರೈಲು ಪರವಾಗಿದ್ದರು. ಆಗ ನಾನು ಅದು ಬೇಡ, ಮೆಟ್ರೋ ರೈಲು ಬೇಕು ಎಂದು ಪಟ್ಟು ಹಿಡಿದೆ. ನಂತರ ವಿದೇಶಗಳಲ್ಲಿ ಮೆಟ್ರೋ ಬಗ್ಗೆ ಅಧ್ಯಯನ ಮಾಡಿ ವರದಿ ಕೊಟ್ಟೆ. ಅದರ ಆಧಾರದ ಮೇಲೆ ಮೆಟ್ರೋ ಬಗ್ಗೆ ಯೋಚನೆ ಮಾಡಿದರು. ಅಷ್ಟೇ ಅಲ್ಲದೆ ಅಂದಿನ ಕೇಂದ್ರ ಸಚಿವ ಅನಂತ ಕುಮಾರ್ ಅವರ ಜೊತೆ ದೆಹಲಿಗೆ ಹೋಗಿ ಪ್ರಧಾನಿ ವಾಜಪೇಯಿ ಅವರನ್ನು ಭೇಟಿ ಮಾಡಿ ಬೆಂಗಳೂರಿಗೆ ಮೆಟ್ರೋ ರೈಲು ಯೋಜನೆ ತಂದರು. ಆಗ ನಾನೂ ಅವರ ಜತೆಗಿದ್ದೆ. ಯಾರು ಏನೇ ಹೇಳಿದರೂ ‘ನಮ್ಮ ಮೆಟ್ರೋ’ ಎಸ್.ಎಂ ಕೃಷ್ಣ ಅವರ ಕೊಡುಗೆ. ಅದೀಗ 10 ವರ್ಷಗಳನ್ನು ಪೂರೈಸಿದೆ.

ಕೃಷ್ಣ ನಿಭಾಯಿಸಿದ್ದ ಹುದ್ದೆ ನನಗೂ ಸಿಕ್ಕಿವೆ

ನನ್ನ ರಾಜಕೀಯ ಗುರು ಬಂಗಾರಪ್ಪ ಅವರು ತಮ್ಮ ಸಂಪುಟದಲ್ಲಿ ಬಂದೀಖಾನೆ ಸಚಿವನನ್ನಾಗಿ ಮಾಡಿ ಮೊದಲ ಬಾರಿಗೆ ನನಗೆ ಜವಾಬ್ದಾರಿ ಕೊಟ್ಟರು. ನಾನು ಇಲಾಖೆಯನ್ನು ನಿಭಾಯಿಸುತ್ತಿದ್ದ ರೀತಿ, ಪಕ್ಷ ನಿಷ್ಠೆ, ನನ್ನ ದುಡಿಮೆಯನ್ನು ಹತ್ತಿರದಿಂದ ಕಂಡ ಕೃಷ್ಣ ಅವರು ಮುಖ್ಯಮಂತ್ರಿಗಳಾದಾಗ ನನಗೆ ಅನೇಕ ಗುರುತರ ಜವಾಬ್ದಾರಿಗಳನ್ನು ನೀಡಿದರು. ನಗರಾಭಿವೃದ್ದಿ ಸಚಿವನನ್ನಾಗಿ ಮಾಡಿದ್ದೂ ಈಗ ಇತಿಹಾಸ. ಅವರು ನಿಭಾಯಿಸಿದ ಹುದ್ದೆಗಳನ್ನು ನಾನು ನಿಭಾಯಿಸಿದ್ದು ಮಾತ್ರ ಕಾಕತಾಳೀಯ.

ಕೃಷ್ಣ ಅವರ ಅವಧಿಯಲ್ಲಿ ಸಾವಿರಾರು ‘ಸ್ತ್ರೀ ಶಕ್ತಿ’ ಸಂಘಗಳು ರಚನೆಯಾದವು. ರೈತರ ಜಮೀನಿನ ದಾಖಲೆಗಳು ‘ಭೂಮಿ’ತಂತ್ರಾಂಶದ ಮೂಲಕ ಡಿಜಿಟಲ್ ರೂಪ ಪಡೆದವು. ಲಕ್ಷಾಂತರ ರೈತರು, ಕಾರ್ಮಿಕರ ಮಕ್ಕಳು ಸಾಫ್ಟ್‌ವೇರ್ ಎಂಜಿನಿಯರ್‌ಗಳಾದರು. ರೈತರ ಆರೋಗ್ಯ ಕಾಪಾಡಲು ‘ಯಶಸ್ವಿನಿ’ ಜಾರಿಗೆ ತಂದು ಜನರ ಜೀವ, ಜೀವನ ಕಾಪಾಡಿದರು.

ದೇಶದಲ್ಲಿ ಮೊದಲು ಬಿಸಿಯೂಟ ಜಾರಿ

ಹಾಜರಾತಿ ಕುಸಿಯುತ್ತಿದ್ದ ವೇಳೆ ಮಕ್ಕಳನ್ನು ಶಾಲೆಗಳತ್ತ ಮರಳಿ ತರಲು ಮಧ್ಯಾಹ್ನ ‘ಬಿಸಿಯೂಟ’ ಯೋಜನೆಯನ್ನು ದೇಶದಲ್ಲಿ ಮೊದಲ ಬಾರಿಗೆ ಜಾರಿಗೆ ತಂದರು. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತನಾಡಿದಂತೆ ಎಸ್‌.ಎಂ.ಕೃಷ್ಣ ಅವರ ಯೋಜನೆಗಳ ಬಗ್ಗೆ ಹತ್ತಾರು ವ್ಯಾಖ್ಯಾನ ಬಂದವು. ಆದರೆ, ಉತ್ತರ ಕರ್ನಾಟಕದಿಂದ ಆರಂಭಿಸಿ, ನಂತರ ರಾಜ್ಯಾದ್ಯಂತ ವಿಸ್ತರಿಸಿದರು. ಈ ಯೋಜನೆ ಇಡೀ ದೇಶಕ್ಕೆ ಮಾದರಿಯಾಗಿದೆ.

1989-94 ರ ಅವಧಿಯಲ್ಲಿ 1,100 ಮೆ.ವ್ಯಾ ವಿದ್ಯುತ್ ಉತ್ಪಾದನೆ ಹೆಚ್ಚಳ ಮಾಡಿದ ಪರಿಣಾಮ ರಾಜ್ಯ ಇಂದಿಗೂ ವಿದ್ಯುತ್ ಕೊರತೆ ಕಾಣದಂತೆ ಪ್ರತಿ ಮನೆಯ ‘ಗೃಹಜ್ಯೋತಿʼ ಬೆಳಗುತ್ತಿದೆ. ಎಸ್ಕಾಂ ಸ್ಥಾಪನೆ ಮಾಡಿ ವಿದ್ಯುತ್ ಸುಧಾರಣಾ ಕಾಯ್ದೆ ಜಾರಿಗೊಳಿಸಿ ವಿದ್ಯುತ್ ಕಳ್ಳತನ ತಡೆಗೆ ಕಾನೂನು ರೂಪಿಸಿದರು.

ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ತಮಿಳುನಾಡಿಗೆ ನೀರು ಹರಿಸಲೇಬೇಕೆಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದಾಗ ಒಂದು ಕ್ಷಣ ಕಣ್ಣು ಮುಚ್ಚಿ ಕುಳಿತವರು ಮರು ಕ್ಷಣವೇ ‘ಬನ್ನಿ ಮಂಡ್ಯವರೆಗೂ, ಕಾವೇರಿ ಉಳಿವಿಗಾಗಿ ಪಾದಯಾತ್ರೆ ಮಾಡೋಣ’ ಎಂದು ಎದ್ದು ಕುಳಿತರು. 72ರ ವಯಸ್ಸಿನಲ್ಲೂ ಬಿಸಿಲನ್ನೂ ಲೆಕ್ಕಿಸದ ಅವರ ಉತ್ಸಾಹ ಕಂಡು ಬೆರಗಾಗಿದ್ದೆ.

ಕೃಷ್ಣ ಅವರ ಕಾಲ ಎಂದೇ ಜನ್ಮ ಸ್ಮರಿಸುತ್ತಾರೆ

ಸತತ ಬರ, ಕಂಬಾಲಪಲ್ಲಿ ದುರಂತ, ಕಾವೇರಿ ಸಮಸ್ಯೆ, ಡಾ.ರಾಜಕುಮಾರ್ ಅಪಹರಣ ಮತ್ತಿತರ ಸವಾಲುಗಳ ಮಧ್ಯೆ ಆಡಳಿತ ನಿರ್ವಹಣೆಯಲ್ಲಿ ಯಶಸ್ಸು ಕಂಡು, ಅವರ ಆಡಳಿತಾವಧಿಯನ್ನು ‘ಕೃಷ್ಣ ಅವರ ಕಾಲ’ ಎಂದೇ ಜನ ಈಗಲೂ ಸ್ಮರಿಸುತ್ತಾರೆ. ಯಾವುದೇ ಆರೋಪಗಳಿಗೆ ತಲೆಕೆಡಿಸಿಕೊಳ್ಳದೆ, ಅಷ್ಟೇ ನಯವಾಗಿ ಎದುರಾಳಿಗಳಿಗೆ ಉತ್ತರಿಸುತ್ತಾ ‘ನಡೆ ಮುಂದೆ, ನಡೆಮುಂದೆ ನುಗ್ಗಿ ನಡೆಮುಂದೆ’ ಎಂದು ಮುನ್ನುಗ್ಗಿದವರು ಎಸ್.ಎಂ. ಕೃಷ್ಣ.

ನುಡಿನಮನ: ನಾನು ಮರಳಲ್ಲಿ ಅ ಆ ಕಲಿಯುತ್ತಿದ್ದಾಗ ಅವರು ವಿದೇಶದಲ್ಲಿ ಓದುತ್ತಿದ್ದರು - ಸಿಎಂ ಸಿದ್ದರಾಮಯ್ಯ

ನಾವಿಂದು ಎಸ್.ಎಂ. ಕೃಷ್ಣ ಅವರ ಕಾರಣಕ್ಕೆ ಮೆಟ್ರೋದಲ್ಲಿ ಓಡಾಡುತ್ತಿದ್ದೇವೆ. ಜಗತ್ತಿನ ಎಲ್ಲಾ ಮೂಲೆಗಳಿಗೂ ಬೆಂಗಳೂರಿನಿಂದ ವಿಮಾನ ಸೌಲಭ್ಯ ಕಲ್ಪಿಸಿರುವ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ವಿಶ್ವದಲ್ಲಿಯೇ ಉತ್ಕೃಷ್ಟವಾಗಿದೆ. ಇಡೀ ಐಟಿ-ಬಿಟಿ ಜಗತ್ತು ಬೆಂಗಳೂರಿನಿಂದಲೇ ಉಸಿರಾಡುತ್ತಿದೆ. ಬೆಂಗಳೂರಿನ ಜನ ನಿರಾತಂಕವಾಗಿ ಕಾವೇರಿ ನೀರು ಕುಡಿಯುತ್ತಿದ್ದಾರೆ.

‘ವೈಟ್ ಕಾಲರ್ ರಾಜಕಾರಣಿ’ ಎಂದು ತಮ್ಮನ್ನು ಬಣ್ಣಿಸಿದಾಗ ನಸುನಕ್ಕು, ‘ನನ್ನಲ್ಲಿ ಮಂಡ್ಯ ಮಣ್ಣಿನ ಗುಣವಿದೆ’ ಎಂದಿದ್ದರು. ಈ ಮಣ್ಣಿನ ಗುಣದ ರಾಜಕಾರಣಿ ಈಗ ದೈಹಿಕವಾಗಿ ಮಾತ್ರ ನಮ್ಮಿಂದ ದೂರಾಗಿದ್ದಾರೆ. ಆದರೆ, ಹೆಮ್ಮರವಾಗಿ ನಮ್ಮೆಲ್ಲರ ಮನದಲ್ಲಿ ಶಾಶ್ವತವಾಗಿ ಉಳಿದಿದ್ದಾರೆ. ದೇಶ, ರಾಜ್ಯದ ಬಗ್ಗೆ ಅವರ ಕನಸು, ಆಶಯಗಳನ್ನು ನೆನೆದು ಮುನ್ನಡೆಯೋಣ. ಅನುಷ್ಠಾನಕ್ಕೆ ತರೋಣ. ಅದುವೇ ನಿಜವಾಗಿ ನಾವು ಅವರಿಗೆ ಸಲ್ಲಿಸಬಹುದಾದ ನೈಜ ಶ್ರದ್ಧಾಂಜಲಿ.

Latest Videos
Follow Us:
Download App:
  • android
  • ios