ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಅವರು ತಮ್ಮ ಧಾರ್ಮಿಕ ನಂಬಿಕೆಗಳು ಮತ್ತು ಆಚರಣೆಗಳ ಬಗ್ಗೆ ಮಾತನಾಡಿದ್ದಾರೆ. ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರ ಟೀಕೆಗಳಿಗೆ ಪ್ರತಿಕ್ರಿಯೆಯಾಗಿ, ಶಿವಕುಮಾರ ಅವರು ತಮ್ಮ ವೈಯಕ್ತಿಕ ನಂಬಿಕೆಗಳನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ ಎಂದು ಹೇಳಿದರು. ಕುಂಭಮೇಳಕ್ಕೆ ಹೋಗುವ ಬಗ್ಗೆಯೂ ಅವರು ಪ್ರತಿಕ್ರಿಯಿಸಿದರು.
ಬೆಂಗಳೂರು (ಫೆ.5): ಯಾರು ಏನು ಬೇಕಾದರೂ ಮಾತನಾಡಲಿ. ನಮ್ಮ ಧರ್ಮ, ನಮ್ಮ ಕರ್ಮ, ನಮ್ಮ ಆಚಾರ ವಿಚಾರ ನಾವು ಪಾಲಿಸುತ್ತೇವೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಹೇಳಿದರು.
ಡಿಕೆ ಶಿವಕುಮಾರ ಕುಂಭಮೇಳಕ್ಕೆ ಹೋಗುತ್ತಿರುವ ವಿಚಾರಕ್ಕೆ ಪ್ರತಿಪಕ್ಷ ನಾಯಕ ಆರ್ ಅಶೋಕ್ ಟೀಕಿಸಿರುವ ಹಿನ್ನೆಲೆ ತಿರುಗೇಟು ನೀಡಿದ ಡಿಕೆ ಶಿವಕುಮಾರ, ಅವರು ವಿರೋಧ ಪಕ್ಷದ ನಾಯಕರು. ಅವರ ಪಾರ್ಟಿಯಲ್ಲಿ ನನ್ನ ಬಗ್ಗೆ ಮಾತನಾಡಿದರೆ ಅವರಿಗೆ ಗೌರವ ಕೊಡುತ್ತಾರೆ. ಗಂಗೆ ಆಗಲೀ ಕಾವೇರಿ ಆಗ್ಲಿ ಕೃಷ್ಣ ಆಗ್ಲಿ, ವೃಷಭಾವತಿ ಆಗಲಿ ನೀರಿಗೆ ಬಣ್ಣ, ಆಕಾರ, ರುಚಿಯಾಗಲಿ ಇಲ್ಲ, ಎಲ್ಲರಿಗೂ ನೀರು ಬೇಕು. ಅವರು ಅಶೋಕ ಅಂತ ಯಾಕೆ ಹೆಸರಿಟ್ಟುಕೊಂಡಿದ್ದಾರೆ? ಕಲ್ಲೋ, ಮಣ್ಣೋ ಅಂತ ಇಟ್ಕೊಬಹುದಿತ್ತಲ್ಲ. ಅವರದು ಏನೇನು ಇದೆಯೋ ಅವರು ಮಾಡುತ್ತಾರೆ. ಅವರಿಗೆ ಏನು ಹೆಚ್ಚು ಕಮ್ಮಿಯಾಗಿದೆಯೋ ಗೊತ್ತಿಲ್ಲ. ಆದರೆ ನನ್ನ ವೈಯಕ್ತಿಕ ನಂಬಿಕೆ ಬಗ್ಗೆ ಮಾತನಾಡಲು ಯಾರಿಗೂ ಹಕ್ಕಿಲ್ಲ. ನನ್ನ ವೈಯಕ್ತಿಕ ನಂಬಿಕೆ ನನ್ನ ಭಕ್ತಿ ಯಾರ ಮೇಲೆ ಭಕ್ತಿನೋ ಅದು ನನಗೆ ಬಿಟ್ಟಿದ್ದು. ಇದರಿಂದ ಅವರಿಗೇನು ಪ್ರಾಬ್ಲಂ ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಗಂಗಾಸ್ನಾನದಿಂದ ಬಡತನ ಹೋಗುತ್ತಾ? ಬಿಜೆಪಿ ನಾಯಕರ ವಿರುದ್ಧ ಖರ್ಗೆ ವಾಗ್ದಾಳಿ!
ನಾನು ಕುಂಭಮೇಳಕ್ಕೆ ವಿಚಾರದ ಬಗ್ಗೆ ಅವರು ಟ್ವೀಟ್ ಆದರೂ ಮಾಡ್ಲಿ ಭಾಷಣ ಆದ್ರು ಮಾಡ್ಲಿ ಅದಕ್ಕೆ ಉತ್ತರ ಕೊಡಕ್ಕೆ ಆಗೋಲ್ಲ. ಅವರ ಟೀಕೆಗೆ ಉತ್ತರ ಕೊಡೋಕೆ ನನಗೆ ಇಷ್ಟನೇ ಇಲ್ಲ. ನನ್ನ ಹೆಸರು ತೆಗೆದುಕೊಳ್ಳಲಿಲ್ಲಂದ್ರೆ ಅವರಿಗೆ ನಿದ್ರೆನೂ ಬರಲ್ಲ. ಕೆಲವರಿಗೆ ಶಕ್ತಿನೂ ಬರೋದಿಲ್ಲ, ಉತ್ಸಾಹನೂ ಬರೋದಿಲ್ಲ. ಹೀಗಾಗಿ ನನ್ನ ಬಗ್ಗೆ ಮಾತನಾಡುತ್ತಲೇ ಇರುತ್ತಾರೆ. ಕುಂಭ ಮೇಳಕ್ಕೆ ನಾನು ಹೋಗ್ತೀನೋ ಬಿಡ್ತೀನೋ ಅದು ನನಗೆ ಬಿಟ್ಟಿದ್ದು. ಅದು ನನ್ನ ವೈಯಕ್ತಿಕ ವಿಚಾರ. ನಾನು ದೀನಾ ಪೂಜೆ ಮಾಡ್ತೀನಿ, ಹಣೆಗೆ ಕುಂಕುಮನೂ ಇಡ್ತಿನಿ, ಕೊರಳಲ್ಲಿ ರುದ್ರಾಕ್ಷಿನೂ ಹಾಕ್ತಿನಿ ಅದು ನನ್ನಿಷ್ಟ. ಒಬ್ಬೊಬ್ಬರು ಅವರಿಗೆ ಇಷ್ಟ ಬಂದ ಹಾಗೆ ಇರುತ್ತಾರೆ. ನೀವೇ ಮೀಡಿಯಾದವರು 25 ಜನ ಇದ್ದೀರಿ. ನಿಮಗೆ ಇಷ್ಟದ ಬಣ್ಣದ ಬಟ್ಟೆ ಹಾಕಿಕೊಳ್ತಿಲ್ವ? ಇದು ಹಾಗೆ ಎಂದರು.
ಕುಂಭಮೇಳದ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಅವರು ಯಾವುದೋ ಒಂದು ವಿಚಾರದಲ್ಲಿ ಅವರು ಹಾಗೆ ಹೇಳಿದ್ದಾರೆ. ಕುಂಭಮೇಳದಲ್ಲಿ ಪವಿತ್ರ ಸ್ನಾನ ಮಾಡಿದ್ರೆ ಬಡತನ ಹೋಗುತ್ತಾ ಎಂದಿದ್ದಾರೆ. ನೀವು ಅದನ್ನೇ ತಗೊಂಡು ಅದರಲ್ಲಿ ಬೇಳೆ ಬೇಯಿಸಿಕೊಂಡು ಟಿಆರ್‌ಪಿ ತಗೊಬೇಡಿ ಎಂದು ಮಾಧ್ಯಮಗಳ ವಿರುದ್ಧವೇ ಅಸಮಾಧಾನಗೊಂಡರು.
