ಮಲ್ಲಿಕಾರ್ಜುನ ಸಿದ್ದಣ್ಣವರ

ಹುಬ್ಬಳ್ಳಿ(ಮೇ.29): ಮಹಾಮಾರಿ ಕೊರೋನಾ ವೈರಸ್‌ ಸೃಷ್ಟಿಸಿದ ಅವಾಂತರಗಳು ಒಂದೆರಡು ಅಲ್ಲ. ಅವುಗಳ ಸಾಲಿಗೆ ಇದೀಗ ‘ಕಂಕಣಬಲ’ ಹೊಸ ಸೇರ್ಪಡೆ. ಸೋಂಕು ಹರಡುವಿಕೆಯ ತೀವ್ರತೆಗೆ ಕಡಿವಾಣ ಹಾಕಲು ಘೋಷಿಸಲಾದ ಲಾಕ್‌ಡೌನ್‌ ಪಾಲನೆಗಾಗಿ ಕಲ್ಯಾಣ ಮಂಟಪಗಳಿಗೆ ಬೀಗ ಹಾಕಿದ ಕಾರಣಕ್ಕೆ ಹಲವು ಮದುವೆಗಳು ರದ್ದಾಗಿರುವ ಬೆನ್ನಲ್ಲೇ, ರಾಜ್ಯದಲ್ಲಿ ನಿಶ್ಚಿತಾರ್ಥವೂ ಮುರಿದುಬೀಳುತ್ತಿರುವ ಘಟನೆಗಳು ವರದಿಯಾಗಿವೆ.

ಓದು, ಉದ್ಯೋಗ, ಪರಸ್ಪರ ಒಮ್ಮತ, ಕುಟುಂಬದವರ ಒಪ್ಪಿಗೆ ಇತ್ಯಾದಿ ಸವಾಲುಗಳನ್ನು ಮೆಟ್ಟಿನಿಶ್ಚಿತಾರ್ಥ ಮಾಡಿಕೊಂಡ ನವ ಜೋಡಿಗಳು, ಕೊರೋನಾ ಮಹಾಮಾರಿ ಕಾರಣದಿಂದಾಗಿ ಇದೀಗ ಸದ್ಯಕ್ಕೆ ಮದುವೆಯೇ ಬೇಡ ಎಂಬ ನಿಲುವಿಗೆ ಬರುತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿ ಮಕ್ಕಳ ವಿವಾಹವನ್ನು ಕಣ್ತುಂಬಿಕೊಳ್ಳಬೇಕೆಂದು ನೂರಾರು ದೇವರುಗಳಿಗೆ ಹರಕೆ ಹೊರುವ ಪಾಲಕರಂತೂ ಮದುವೆ ನಿಲ್ಲಲು ಕಾರಣವಾದ ಕೊರೋನಾಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ.

ಸ್ವದೇಶೀ ಲಸಿಕೆ ಕೋವ್ಯಾಕ್ಸಿನ್ 4 ಕೋಟಿ ಡೋಸ್ ನಾಪತ್ತೆ ರಹಸ್ಯ ಏನು?

ಬದುಕಿದ್ರೆ ನೋಡೋಣ: ಇನ್ನು ಕೊರೋನಾ ಸೋಂಕಿಗೆ ತುತ್ತಾಗಿ ಚಿಕಿತ್ಸೆ ಪಡೆದು ಗುಣಮುಖರಾಗಿರುವವರು ಸಹ ಮದುವೆಯಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಸದ್ಯಕ್ಕೆ ವಿವಾಹವೇ ಬೇಡ. ಮುಂದೆ ಬದುಕಿದ್ದರೆ ನೋಡೋಣ ಎಂದು ಹೇಳುವಷ್ಟರ ಮಟ್ಟಿಗೆ ಯುವ ಜನರಲ್ಲಿ ಮದುವೆ ಬಗ್ಗೆ ಜಿಗುಪ್ಸೆ ಹುಟ್ಟಿಸಿದೆ ಈ ವ್ಯಾಧಿ.

ಹುಬ್ಬಳ್ಳಿಯ ಯುವತಿಯೊಂದಿಗೆ ತುಮಕೂರಿನ ಯುವಕನ ನಿಶ್ಚಿತಾರ್ಥವಾಗಿತ್ತು. ಲಾಕ್‌ಡೌನ್‌ದಿಂದಾಗಿ ಮದುವೆಗೆ ಅವಕಾಶ ಸಿಗಲಿಲ್ಲ. ಅಷ್ಟೊತ್ತಿಗೆ ಆತನಿಗೆ ಕೊರೋನಾ ಸೋಂಕು ದೃಢವಾಯಿತು. ಬೆಂಗಳೂರಿನ ಮಣಿಪಾಲ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾನೆ.

ಈ ವೇಳೆ ವಧುವಿನ ಪಾಲಕರು ಆರೋಗ್ಯ ವಿಚಾರಿಸಲೆಂದು ಕರೆ ಮಾಡಿದಾಗ, ಸದ್ಯ ಆರಾಮಾಗಿದ್ದೇನೆ. ಇನ್ನೂ 3ನೇ ಅಲೆ ಬರುತ್ತಿದೆಯಂತೆ. ಸದ್ಯಕ್ಕೆ ಮದ್ವೆ ಬೇಡ ಅನ್ನಿಸಿದೆ. ಜೀವದಿಂದ ಬದುಕುಳಿದ್ರೆ ಮುಂದೆ ನೋಡೋಣ. ನಿಮ್ಮ ಮಗಳಿಗೆ ಬೇರೆ ಕಡೆ ಗಂಡು ನೋಡಿಕೊಳ್ಳಿ ಎಂದು ಶಾಕ್‌ ನೀಡಿದ್ದಾನೆ. ಇದರಿಂದಾಗಿ ವಧುವಿನ ಪಾಲಕರಿಗೆ ಮುಂದೇನು ಮಾಡಬೇಕೆನ್ನುವುದು ತೋಚದೇ ಹಣೆಬರೆÜಹ ಹಳಿಯುತ್ತ ಅವರಿವರ ಮುಂದೆ ಅಲವತ್ತುಕೊಳ್ಳುತ್ತಿದ್ದಾರೆ.

ಕೆಲಸ ಉಳಿದ್ರೆ ಮದುವೆ: ಈ ಕೊರೋನಾ ಹಾವಳಿ, ಲಾಕ್‌ಡೌನ್‌, ಆರ್ಥಿಕ ನಷ್ಟಇತ್ಯಾದಿ ಕಾರಣಗಳಿಂದ ಭಾರೀ ಪ್ರಮಾಣದಲ್ಲಿ ಉದ್ಯೋಗ ನಷ್ಟವೂ ಆಗುತ್ತಿದ್ದು, ಮದುವೆಗೆ ಸಜ್ಜಾಗಿದ್ದ ಖಾಸಗಿ ಕಂಪನಿ ನೌಕರರು ಇದೀಗ ತಮ್ಮ ಆ ಪ್ರಯತ್ನದಿಂದ ಹಿಂದಡಿ ಇಡುತ್ತಿರುವ ಬೆಳವಣಿಗೆಗಳೂ ನಡೆದಿವೆ.

'ಕೊರೋನಾ ಗೆಲ್ಲಲು ಇನ್ನೆರಡು ವರ್ಷ : ಜೈವಿಕ ಲಸಿಕೆ ಜತೆ ಸಾಮಾಜಿಕ ಲಸಿಕೆ ಬೇಕು'

ಧಾರವಾಡದ ಯುವಕ ಬೆಂಗಳೂರಿನ ಅಟೋಮೊಬೈಲ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಕೈತುಂಬ ಸಂಬಳ ಇತ್ತು. ಗದುಗಿನ ಯುವತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ. ನಿಗದಿತ ದಿನ ಮದುವೆಯಾಗಿದ್ದರೆ ಮುಂದೆ ಹೇಗೋ ಬದುಕುತ್ತಿದ್ದರೇನೋ? ಆದರೆ ಮದುವೆ ಮಂಟಪಕ್ಕೆ ಬೀಗ ಬಿದ್ದಿದ್ದರಿಂದ ಅದು ನೆರವೇರಲಿಲ್ಲ. ಮೇಲಾಗಿ ಲಾಕ್‌ಡೌನ್‌ದಿಂದ ಕಂಪನಿ ವೇತನ ಪಾವತಿಸಿಲ್ಲ. ಕೆಲಸ ಉಳಿಸುವ ಭರವಸೆಯನ್ನೂ ನೀಡುತ್ತಿಲ್ಲ. ಹಾಗಾಗಿ ಆತನಿಗೀಗ ಭವಿಷ್ಯದ ಚಿಂತೆ ಕಾಡುತ್ತಿದೆ.

‘ಮೊದಲು ಕೆಲಸ, ಆಮೇಲೆ ಮದುವೆ. ಕೆಲಸ ಉಳಿದ್ರೆ ಮುಂದೆ ಮದುವೆಯಾದರಾಯಿತು, ಈಗೇನು ಅವಸರ?’ ಅನ್ನುತ್ತಿದ್ದಾನೆ. ಆತನ ಈ ಪರಿಸ್ಥಿತಿ ಕಂಡು ಯಾರೂ ಮದುವೆಗೆ ಒತ್ತಾಯಿಸುವ ಧೈರ್ಯ ಮಾಡುತ್ತಿಲ್ಲ. ಹಲವು ಕನ್ಯೆಯರು ಸಹ ನಿಶ್ಚಿತಾರ್ಥ ಮತ್ತು ಮದುವೆಗಳನ್ನು ಮುರಿಯುವುದರಲ್ಲಿ ಹಿಂದೆ ಬಿದ್ದಿಲ್ಲ. ಒಟ್ಟಾರೆ ಕೂಡಿಬಂದ ಕಂಕಣಬಲವನ್ನೇ ಈ ಮಹಾಮಾರಿ ಮುರಿದುಬೀಳುವಂತೆ ಮಾಡುತ್ತಿರುವುದು ನಿಜಕ್ಕೂ ವಿಷಾದದ ಸಂಗತಿ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona