ಸೈಬರ್ ಅಪರಾಧಿಗಳಿಗೆ ಸಿಂಹ ಸ್ವಪ್ತವಾಗಲಿದ್ದಾರೆ ಕರ್ನಾಟಕ ಕಾಪ್; ರಾಜ್ಯ ಪೊಲೀಸರಿಗೆ ಸೈಬರ್ ತರಬೇತಿ!

ರಾಜ್ಯದ ಪೊಲೀಸ್ ಅಧಿಕಾರಿಗಳಿಗೆ ಸೈಬರ್ ಅಪರಾಧಗಳ ಬಗ್ಗೆ ತರಬೇತಿ ನೀಡಲಾಗುವುದು ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಹೇಳಿದ್ದಾರೆ. ಸೈಬರ್ ಕ್ರೈಮ್ ತನಿಖಾ ತರಬೇತಿ ಮತ್ತು ಸಂಶೋಧನಾ ಕೇಂದ್ರವು ಸೈಬರ್ ಅಪರಾಧ ಶೃಂಗಸಭೆ-2025 ಕಾರ್ಯಕ್ರಮವನ್ನು ಆಯೋಜಿಸಿತ್ತು.

Karnataka cops will become lions for cyber criminals cyber training for police sat

ಬೆಂಗಳೂರು (ಮಾ. 15): ರಾಜ್ಯದ ಪ್ರತಿಯೊಬ್ಬ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಸೈಬರ್ ಅಪರಾಧಗಳ ಕುರಿತು ಹೆಚ್ಚಿನ ಅರಿವು ಮತ್ತು ತರಬೇತಿ ನೀಡಲಾಗುವುದು ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಹೇಳಿದರು.

ಸಿಐಡಿ ಹಾಗೂ ಸೈಬರ್ ಕ್ರೈಮ್ ತನಿಖಾ ತರಬೇತಿ ಮತ್ತು ಸಂಶೋಧನಾ ಕೇಂದ್ರ ವತಿಯಿಂದ ನಗರದ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ "CIDECODE" ಸೈಬರ್ ಅಪರಾಧ ಶೃಂಗಸಭೆ-2025 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸೈಬರ್ ಅಪರಾಧಗಳಿಗೆ ಯಾವುದೇ ರೀತಿಯ  ಇತಿಮಿತಿಗಳಿಲ್ಲ. ಪ್ರಪಂಚದಲ್ಲಿ ಆಗುತ್ತಿರುವ ಸೈಬರ್ ಅಪರಾಧಗಳ ಕುರಿತು ಅರಿವು ಮೂಡಿಸಬೇಕು ಎಂಬ ಉದ್ದೇಶದಿಂದ ಸಿಸಿಐಟಿಆರ್ ಸ್ಥಾಪಿಸಲಾಗಿದೆ. ಈವರೆಗೆ 46 ಸಾವಿರಕ್ಕೂ ಹೆಚ್ಚು ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ತರಬೇತಿ ನೀಡಲಾಗಿದೆ. 2023ರಲ್ಲಿ 22 ಸಾವಿರ ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿದ್ದವು. ಬ್ಯಾಂಕ್ ಅಕೌಂಟ್, ಡೇಟಾ ಹ್ಯಾಕ್, ಸರ್ಕಾರಿ ಖಾತೆಗಳು ಹ್ಯಾಕ್‌ ಆಗುವುದು ಸೇರಿದಂತೆ ನಾನಾ ರೀತಿಯ ಸೈಬರ್ ಅಪರಾಧಗಳು ಆಗುತ್ತಿವೆ. ಇದನ್ನು ತಡೆಗಟ್ಟದೆ ಹೋದರೆ ಮುಂದಿನ ದಿನಗಳಲ್ಲಿ ತೊಂದರೆಗಳಾಗುತ್ತವೆ. ಸಾಮಾನ್ಯ ಅಪರಾಧಗಳಿಗಿಂತ ಸೈಬರ್ ಕ್ರೈಂ ಹೆಚ್ಚಾಗುತ್ತಿವೆ ಎಂದು ಹೇಳಿದರು.

ಬೆಂಗಳೂರು ನಗರದಲ್ಲಿ ದಾಖಲಾಗುತ್ತಿರುವ ಸಾಮಾನ್ಯ ಅಪರಾಧಗಳಲ್ಲಿ ಶೇ.30ರಷ್ಟು ಸೈಬರ್ ಅಪರಾಧಗಳು ದಾಖಲಾಗುತ್ತಿವೆ. ವೈಟ್‌ಫೀಲ್ಡ್ ವಿಭಾಗದ ವ್ಯಾಪ್ತಿಯಲ್ಲಿ ಶೇ.40ರಷ್ಟು ಸೈಬರ್ ಅಪರಾಧ ಪ್ರಕರಣಗಳು ದಾಖಲಾಗುತ್ತಿವೆ. ಇದು ಇನ್ನು ಹೆಚ್ಚಾಗುವ ಸಾಧ್ಯತೆ ಇದೆ. ಆರಂಭಿಕ ಹಂತದಲ್ಲೆ ಹೆಚ್ಚು ಫೋಕಸ್ ಮಾಡಿ ತಡೆಗಟ್ಟಲು ಅಗತ್ಯ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ: ನಮ್ಮಜ್ಜಿ ಅಕೌಂಟ್‌ನಲ್ಲಿ ₹80 ಲಕ್ಷ ಇದೆ ಎಂದಿದ್ದಷ್ಟೇ..! ಅಜ್ಜಿ ಹಣ, ಬಾಲಕಿ ಮಾನ ಎರಡೂ ಹೋಯ್ತು!

ಕಾನೂನು ಸುವ್ಯವಸ್ಥೆಯನ್ನು ಬಲಪಡಿಸಲು ತಂತ್ರಜ್ಞಾನ ಮತ್ತು ತರಬೇತಿಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ಜಾಗತಿಕವಾಗಿ ಸೈಬರ್ ಅಪರಾಧಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇದನ್ನು ತಡೆಗಟ್ಟಲು ತಾಂತ್ರಿಕ ಬಲವರ್ಧನೆಯನ್ನು ಹೆಚ್ಚಿಸಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಸಿಐಡಿ ಡಿಕೋಡ್ ಶೃಂಗಸಭೆಯು ಸಹಕಾರಿಯಾಗಲಿದೆ. ಹ್ಯಾಕಥಾನ್ ಮತ್ತು ಸೈಬರ್ ಲಾ ಐಡಿಯಾಥಾನ್‌ನಂತಹ ಕಾರ್ಯಕ್ರಮಗಳು ಸುರಕ್ಷಿತ ಡಿಜಿಟಲ್ ಕರ್ನಾಟಕ ಮತ್ತು ಸುರಕ್ಷಿತ ಭಾರತವನ್ನು ನಿರ್ಮಿಸುವ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಕೇಂದ್ರ ತನಿಖಾ ವಿಭಾಗವು (ಸಿಐಡಿ) ಆಯೋಜಿಸಿದ್ದ ಹ್ಯಾಕಥಾನ್ ಮತ್ತು ಸೈಬರ್ ಲಾ ಐಡಿಯಾಥಾನ್‌ಗಳಲ್ಲಿ ಭಾಗವಹಿಸಿ, ಡೀಪ್ ಫೇಕ್ ಪತ್ತೆ, ಬ್ಲಾಕ್ ಚೈನ್ ತಂತ್ರಜ್ಞಾನ ಬಳಕೆ ಸೇರಿದಂತೆ ಇನ್ನಿತರ ಸೈಬರ್ ಅಪರಾಧಗಳಿಗೆ ಸಮಸ್ಯೆಗಳನ್ನು ಬಗೆಹರಿಸಲು ತಂತ್ರಾಂಶಗಳನ್ನು ಅಭಿವೃದ್ಧಿಪಡಿಸುವ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಗೃಹ ಸಚಿವ ಜಿ.ಪರಮೇಶ್ವರ ಅವರು ಬಹುಮಾನ ನೀಡಿ ಅಭಿನಂದಿಸಿದರು.

ಕಳೆದೆರಡು ದಿನಗಳ ಹಿಂದೆ ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ಪರಿಷತ್ ಸದಸ್ಯ ಕೆ.ಎಸ್. ನವೀನ್ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವ ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು, ಸೈಬರ್ ಅಪರಾಧಗಳ ತಡೆಗೆ ಹೆಚ್ಚು ಒತ್ತು ನೀಡಲಾಗಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ತಪ್ಪಿತಸ್ಥರ ವಿರುದ್ದ ಯಾವುದೇ ಮುಲಾಜಿಲ್ಲದೆ ಕಟ್ಟುನಿಟ್ಟಿನ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ಪ್ರತೀ ಪೊಲೀಸ್ ಠಾಣೆಯಲ್ಲೂ ಸಾಮಾಜಿಕ ಜಾಲತಾಣ ನಿಗಾ ಘಟಕ ಸ್ಥಾಪಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಿ ಗಲಭೆ ಸೃಷ್ಟಿಸುವವರ ವಿರುದ್ದ ಸ್ವಯಂ ಪ್ರೇರಿತವಾಗಿ ಪ್ರಕರಣಗಳನ್ನು ದಾಖಲಿಸಿಕೊಂಡು ಕಾನೂನು ರೀತ್ಯ ಕ್ರಮ ಕೈಗೊಂಡು ಸಾರ್ವಜನಿಕರ ನೆಮ್ಮದಿಯನ್ನು ಕಾಪಾಡಲಾಗುತ್ತಿದೆ ಎಂದರು.

ಇದನ್ನೂ ಓದಿ: ಸೈಬರ್ ಕ್ರೈಮ್ 2025ರಲ್ಲಿ ಭಾರತೀಯ ಸಂಸ್ಥೆಗಳಿಗೆ 20,000 ಕೋಟಿ ನಷ್ಟವಾಗುವ ಅಂದಾಜು!

ಮುಂದುವರೆದು, ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ಎಕ್ಸ್, ಇನ್‌ಸ್ಟಾಗ್ರಾಮ್‌, ಯೂಟ್ಯೂಬ್ ಚಾನೆಲ್‍ಗಳ ಮೇಲೆ ನಿಗಾ ವಹಿಸಲು ರಾಜ್ಯಾದ್ಯಂತ ಪ್ರತ್ಯೇಕ ಸಾಮಾಜಿಕ ಜಾಲತಾಣ ನಿಗಾ ಘಟಕಗಳನ್ನು ಜಿಲ್ಲಾ ಮಟ್ಟದಲ್ಲಿ ಹಾಗೂ ಪ್ರತೀ ಪೊಲೀಸ್ ಠಾಣೆಗಳಲ್ಲೂ ಪ್ರಾರಂಭಿಸಿ ಸೂಕ್ತ ತರಬೇತಿ ಪಡೆದ ಸಿಬ್ಬಂದಿಗಳನ್ನು ನೇಮಿಸಲಾಗಿದೆ. ಸದರಿ ಘಟಕವು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಯೂಟ್ಯೂಬ್ ಚಾನೆಲ್‍ಗಳಲ್ಲಿ ಪ್ರಸಾರವಾಗುವ ಪ್ರಚೋದನಕಾರಿ ಸಂದೇಶಗಳ/ ಸುಳ್ಳು ಸುದ್ದಿಗಳ/ ದ್ವೇಷ ಭಾಷಣಗಳ ಮೇಲೆ ಸಮಾಜದ ಸಾಮರಸ್ಯ ಹಾಳು ಮಾಡುವಂತವರ ಮೇಲೆ ನಿರಂತರವಾಗಿ ನಿಗಾ ವಹಿಸಲಾಗುತ್ತಿದೆ ಎಂದು ತಿಳಿಸಿದರು.

Latest Videos
Follow Us:
Download App:
  • android
  • ios