ಬೆಂಗಳೂರು : ಲೋಕಸಭಾ ಚುನಾವಣೆಗೆ ಜಾತಿ ಸಮೀಕರಣವನ್ನು ಅಸ್ತ್ರ ಮಾಡಿಕೊಳ್ಳಲು ಸಜ್ಜಾಗಿರುವ ಕಾಂಗ್ರೆಸ್ ಪಕ್ಷ ಶೀಘ್ರವೇ ಇನ್ನೂ ಮೂರು ನೂತನ ಕಾರ್ಯಾಧ್ಯಕ್ಷರನ್ನು ನೇಮಕ ಮಾಡಲು ಮುಂದಾಗಿದೆ. ಈಗಾಗಲೇ ಲಿಂಗಾಯತ ಸಮುದಾಯಕ್ಕೆ ಸೇರಿದ ಈಶ್ವರ್ ಖಂಡ್ರೆ ಅವರನ್ನು ಕಾರ್ಯಾಧ್ಯಕ್ಷರನ್ನಾಗಿ ಹೊಂದಿರುವ ಕಾಂಗ್ರೆಸ್, ಶೀಘ್ರವೇ ಅಲ್ಪಸಂಖ್ಯಾತ, ಪರಿಶಿಷ್ಟ ಜಾತಿ (ಎಡಗೈ) ಮತ್ತು ಒಕ್ಕಲಿಗ ಸಮುದಾಯಕ್ಕೆ ಸೇರಿದ ಒಬ್ಬೊಬ್ಬ ನಾಯಕನನ್ನು ಕಾರ್ಯಾಧ್ಯಕ್ಷರನ್ನಾಗಿ ನೇಮಿಸಲಿದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ. 

ಈ ಕುರಿತು ಕೆಪಿಸಿಸಿ ಈಗಾಗಲೇ ಮೂರು ಕಾರ್ಯಾ ಧ್ಯಕ್ಷ ಸ್ಥಾನಗಳಿಗೂ ಅರ್ಹ ನಾಯಕರ ಹೆಸರನ್ನು ಶಿಫಾರಸು ಮಾಡಿದ್ದು, ಹೈಕಮಾಂಡ್ ಅನುಮೋದನೆ ಮಾತ್ರ ಬಾಕಿಯಿದೆ ಎಂದು ತಿಳಿದು ಬಂದಿದೆ. ಈ ಮೂಲಗಳ ಪ್ರಕಾರ ಅಲ್ಪಸಂಖ್ಯಾತ ಸಮುದಾಯದಿಂದ ಸಲೀಂ ಅಹಮದ್ ಹಾಗೂ ತನ್ವೀರ್ ಸೇಠ್, ಪರಿಶಿಷ್ಟ ಜಾತಿ (ಎಡಗೈ) ಸಮುದಾಯದಿಂದ ಎಚ್.ಆಂಜನೇಯ ಮತ್ತು ಒಕ್ಕಲಿಗ ಸಮುದಾಯದಿಂದ ಬಿ.ಎಲ್. ಶಂಕರ್ ಹಾಗೂ ಜೆ.ಸಿ.ಚಂದ್ರಶೇಖರ್ ಅವರ ಹೆಸರನ್ನು ನೂತನ ಕಾರ್ಯಾಧ್ಯಕ್ಷ ಹುದ್ದೆಗೆ ಕೆಪಿಸಿಸಿ ನಾಯಕತ್ವ ಶಿಫಾರಸು ಮಾಡಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. 

ಒಂದು ವೇಳೆ ಕಾಂಗ್ರೆಸ್ ಹೈಕಮಾಂಡ್ ಈ ನೇಮಕವನ್ನು ಶೀಘ್ರ ಮಾಡಿದರೆ ಕಾಂಗ್ರೆಸ್ ಪಕ್ಷವು ನಾಡಿನ ಪ್ರಭಾವಿ ಸಮುದಾಯಗಳೆನಿಸಿದ ಒಕ್ಕಲಿಗ, ಲಿಂಗಾ ಯತ, ಕುರುಬ, ಬ್ರಾಹ್ಮಣ, ಅಲ್ಪಸಂಖ್ಯಾತ ಹಾಗೂ ಪರಿಶಿಷ್ಟ ಬಲಗೈ ಹಾಗೂ ಎಡಗೈ ಸಮುದಾಯದ ನಾಯಕರಿಗೆ ಪ್ರಮುಖ ಸ್ಥಾನ ನೀಡಿದಂತಾಗಲಿದೆ. ಬ್ರಾಹ್ಮಣ ಸಮುದಾಯಕ್ಕೆ ಸೇರಿದ ದಿನೇಶ್ ಗುಂಡೂರಾವ್ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದರೆ, ಕುರುಬ ಸಮುದಾಯ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿದ್ದಾರೆ. 

ಪರಿಶಷ್ಟ ಜಾತಿ ಬಲಗೈ ಸಮುದಾ ಯದ ಜಿ.ಪರಮೇಶ್ವರ್ ಅವರು ಉಪ ಮುಖ್ಯಮಂತ್ರಿ ಯಾಗಿದ್ದರೆ, ಲಿಂಗಾಯತ ಸಮುದಾಯದ ಈಶ್ವರ್ ಖಂಡ್ರೆ ಅವರು ಹಾಲಿ ಕಾರ್ಯಾಧ್ಯಕ್ಷರಾಗಿದ್ದಾರೆ. ಇವರೊಂದಿಗೆ ಪರಿಶಿಷ್ಟ ಎಡಗೈ, ಒಕ್ಕಲಿಗ ಮತ್ತು ಅಲ್ಪ ಸಂಖ್ಯಾತರಿಗೆ ಪ್ರಮುಖ ಸ್ಥಾನ ಒದಗಿಸುವ ಮೂಲಕ ಈ ಎಲ್ಲಾ ಸಮುದಾಯಗಳನ್ನು ಆಕರ್ಷಿಸಿದಂತಾಗುತ್ತದೆ. 

ಅಲ್ಲದೆ, ನಾಯಕತ್ವದ ಏಕಸ್ವಾಮ್ಯತೆಯನ್ನು ತಪ್ಪಿಸಿದಂತಾಗುತ್ತದೆ ಎಂಬುದು ಕಾಂಗ್ರೆಸ್ ಹೈಕಮಾಂಡ್‌ನ ಲೆಕ್ಕಾಚಾರ ಎನ್ನಲಾಗಿದೆ. ತನ್ನ ದೇಶವ್ಯಾಪಿ ನೀತಿಯ ಅಂಗವಾಗಿ ಕರ್ನಾಟಕ ದಲ್ಲೂ ನಾಲ್ಕು ಕಾರ್ಯಾಧ್ಯಕ್ಷ ಹುದ್ದೆಗಳನ್ನು ಹುಟ್ಟಿಹಾಕಲು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸೂಚಿಸಿದ್ದು, ಅದರಂತೆ ಕೆಪಿಸಿಸಿ ನಾಯಕತ್ವವು ಈ ನಾಯಕರ ಹೆಸರನ್ನು ಶಿಫಾರಸು ಮಾಡಿದೆ ಎಂದು ಹೇಳಲಾಗಿದೆ. ನಾಲ್ಕು ಕಾರ್ಯಾಧ್ಯಕ್ಷರು ಏಕೆ?: ಕೆಪಿಸಿಸಿ ಅಧ್ಯಕ್ಷರ ಅಡಿ ಕಾರ್ಯಾಧ್ಯಕ್ಷರು ಕೆಲಸ ಮಾಡಲಿದ್ದಾರೆ. 

ಈ ನಾಲ್ಕು ಕಾರ್ಯಾಧ್ಯಕ್ಷರಿಗೆ ಒಂದೊಂದು ವಿಭಾಗದ ಹೊಣೆಗಾರಿಕೆ ವಹಿಸಲಾಗುತ್ತದೆ ಮತ್ತು ಆ ವಿಭಾಗದ ಸಂಪೂರ್ಣ ಹೊಣೆಯನ್ನು ಸದರಿ ಕಾರ್ಯಾಧ್ಯಕ್ಷರಿಗೆ ನೀಡಲಾಗುತ್ತದೆ. ಈ ರೀತಿ ಮಾಡುವುದರಿಂದ ಅಧಿಕಾರ ಒಬ್ಬ ವ್ಯಕ್ತಿಯ ಕೈಯಲ್ಲಿ ಕೇಂದ್ರೀಕೃತವಾಗುವುದು ಹಾಗೂ ಪಕ್ಷವೇ ಆ ವ್ಯಕ್ತಿಯ ಹಿಡಿತಕ್ಕೆ ಹೋಗುವುದು ತಪ್ಪುತ್ತದೆ ಎಂಬುದು ಹೈಕಮಾಂಡ್‌ನ ಲೆಕ್ಕಾಚಾರ ಎನ್ನಲಾಗಿದೆ. 

ಈ ಹಿನ್ನೆಲೆಯಲ್ಲಿ ರಾಜ್ಯ ನಾಯಕತ್ವಕ್ಕೆ ಸೂಕ್ತ ನಾಯಕರನ್ನು ಶಿಫಾರಸು ಮಾಡುವಂತೆ ಹೈಕಮಾಂಡ್ ಸೂಚಿಸಿದ್ದು, ಅದರಂತೆ ಇತ್ತೀಚೆಗೆ ಕೆಪಿಸಿಸಿಯು ಪರಿಶಿಷ್ಟ ಜಾತಿಯ ಎಡಗೈ ಪಂಗಡದ ಪ್ರಭಾವಿ ನಾಯಕ ಎನಿಸಿದ ಎಚ್. ಆಂಜನೇಯ, ಅಲ್ಪಸಂಖ್ಯಾತ ಸಮುದಾಯ ದಿಂದ ಎಲ್ಲರನ್ನೂ ಸರಿದೂಗಿಸಿಕೊಂಡುವ ಹೋಗುವ ಸ್ವಭಾವದ ಸಲೀಂ ಅಹ್ಮದ್ ಅಥವಾ ತನ್ವೀರ್ ಸೇಠ್ ಮತ್ತು ಒಕ್ಕಲಿಗ ಸಮುದಾಯದಿಂದ ಕಾಂಗ್ರೆಸ್‌ನ ಥಿಂಕ್ ಟ್ಯಾಂಕ್‌ನ ಕಾಯಂ ಸದಸ್ಯ ಬಿ.ಎಲ್. ಶಂಕರ್ ಅಥವಾ ರಾಜ್ಯಸಭಾ ಸದಸ್ಯ ಜೆ.ಸಿ. ಚಂದ್ರಶೇಖರ್ ಅವರ ಹೆಸರನ್ನು ಶಿಫಾರಸು ಮಾಡಿದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ

ವರದಿ :  ಎಸ್.ಗಿರೀಶ್ ಬಾಬು