Asianet Suvarna News Asianet Suvarna News

ಕಾಂಗ್ರೆಸ್‌ ಕೈಗೆ ಹೊಸ ಚುನಾವಣಾ ಅಸ್ತ್ರ, ಸಚಿವ ಈಶ್ವರಪ್ಪ ರಾಜೀನಾಮೆ, ಬಂಧನಕ್ಕೆ ಆಗ್ರಹ!

* ಸಚಿವ ಈಶ್ವರಪ್ಪ ರಾಜೀನಾಮೆ, ಬಂಧನಕ್ಕೆ ಆಗ್ರಹ

* ಕಾಂಗ್ರೆಸ್‌ ಕೈಗೆ ಹೊಸ ಚುನಾವಣಾ ಅಸ್ತ್ರ

* ನಾಳೆಯಿಂದ ಹೋರಾಟ ತೀವ್ರಕ್ಕೆ ನಿರ್ಧಾರ

Karnataka Congress tears into KS Eshwarappa calls for his resignation arrest pod
Author
Bengaluru, First Published Apr 14, 2022, 4:49 AM IST | Last Updated Apr 14, 2022, 4:49 AM IST

ಬೆಂಗಳೂರು(ಏ.14): ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಆತ್ಮಹತ್ಯೆ ಹಾಗೂ 40 ಪರ್ಸೆಂಟ್‌ ಭ್ರಷ್ಟಾಚಾರ ಆರೋಪವನ್ನೇ ಚುನಾವಣಾ ಅಸ್ತ್ರವನ್ನಾಗಿ ಬಳಸಿಕೊಳ್ಳಲು ತೀರ್ಮಾನಿಸಿರುವ ಕಾಂಗ್ರೆಸ್‌, ಸಚಿವ ಕೆ.ಎಸ್‌.ಈಶ್ವರಪ್ಪ ತಲೆದಂಡಕ್ಕಾಗಿ ನಡೆಸಿರುವ ಹೋರಾಟವನ್ನು ಗುರುವಾರದಿಂದ ಮತ್ತಷ್ಟು ತೀವ್ರಗೊಳಿಸಲಿದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಗುರುವಾರ ಮುಖ್ಯಮಂತ್ರಿ ಅಧಿಕೃತ ನಿವಾಸಕ್ಕೆ ಘೇರಾವ್‌ ಹಾಕಲಿದೆ. ಶುಕ್ರವಾರದಿಂದ ಐದು ದಿನಗಳ ಕಾಲ ರಾಜ್ಯಾದ್ಯಂತ ‘ಭ್ರಷ್ಟಾಚಾರ ಮುಕ್ತ ಕರ್ನಾಟಕ’ ಅಭಿಯಾನದ ಹೆಸರಿನಲ್ಲಿ ಹೋರಾಟ ರೂಪಿಸಿದ್ದು, ಇದಕ್ಕಾಗಿ ಎಂಟು ತಂಡಗಳನ್ನು ರಚಿಸಲಾಗಿದೆ.

ಗುರುವಾರ ಬೆಳಗ್ಗೆ ಕೆಪಿಸಿಸಿ ಕಚೇರಿಯಿಂದ ಕಾಂಗ್ರೆಸ್‌ ನಾಯಕರು ಪಾದಯಾತ್ರೆ ಮೂಲಕ ಮುಖ್ಯಮಂತ್ರಿಯವರ ಅಧಿಕೃತ ನಿವಾಸಕ್ಕೆ ಆಗಮಿಸಲಿದ್ದು, ನಿವಾಸಕ್ಕೆ ಮುತ್ತಿಗೆ ಹಾಕುವ ಪ್ರಯತ್ನ ಮಾಡಲಿದ್ದಾರೆ ಎಂದು ಕೆಪಿಸಿಸಿ ಮೂಲಗಳು ತಿಳಿಸಿವೆ.

ಇದಕ್ಕೆ ಮಣಿದು ಈಶ್ವರಪ್ಪ ಅವರನ್ನು ಸಂಪುಟದಿಂದ ಕೈ ಬಿಡದಿದ್ದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭಾಗವಹಿಸುವ ಎಲ್ಲಾ ಕಾರ್ಯಕ್ರಮಗಳಲ್ಲಿ ಕಾಂಗ್ರೆಸ್‌ ಕಾರ್ಯಕರ್ತರಿಂದ ಘೇರಾವ್‌ ಹಾಕಿಸಲು ಕಾಂಗ್ರೆಸ್‌ ತೀರ್ಮಾನಿಸಿದೆ.

8 ತಂಡಗಳ ರಚನೆ:

ರಾಜ್ಯಾದ್ಯಂತ ಸಂಚರಿಸಿ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್‌, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ, ಸಲೀಂ ಅಹಮದ್‌, ಸತೀಶ್‌ ಜಾರಕಿಹೊಳಿ, ಧ್ರುವನಾರಾಯಣ, ಈಶ್ವರ್‌ ಖಂಡ್ರೆ ನೇತೃತ್ವದಲ್ಲಿ ಎಂಟು ತಂಡಗಳನ್ನು ರಚಿಸಲಾಗಿದೆ.

ಈ ತಂಡಗಳು ಏ.15 ರಿಂದ ಏ.20 ರವರೆಗೆ ಜಿಲ್ಲೆಗಳಿಗೆ ಭೇಟಿ ನೀಡಿ ಪ್ರತಿಭಟನಾ ಸಭೆಗಳನ್ನು ಹಮ್ಮಿಕೊಳ್ಳಲಿವೆ. ತನ್ಮೂಲಕ ಗುತ್ತಿಗೆದಾರರ ಸಂಘ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಬರೆದಿರುವ 40% ಕಮಿಷನ್‌ ಪತ್ರ, ಈಶ್ವರಪ್ಪ ಅವರ ವಿರುದ್ಧ ಡೆತ್‌ನೋಟ್‌ ಬರೆದಿಟ್ಟು ಮೃತಪಟ್ಟಿರುವ ಗುತ್ತಿಗೆದಾರ ಸಂತೋಷ್‌ ಹಾಗೂ ಈ ಹಿಂದೆ ಈಶ್ವರಪ್ಪ ವಿರುದ್ಧ ಸಂತೋಷ್‌ ಮಾಡಿರುವ ಆರೋಪಗಳು, ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿಗಳು ಈ ಬಗ್ಗೆ ವಹಿಸಿರುವ ಮೌನದ ಬಗ್ಗೆ ಜನಾಭಿಪ್ರಾಯ ಮೂಡಿಸಲಿದ್ದಾರೆ ಎಂದು ತಿಳಿದುಬಂದಿದೆ.

ಐದು ದಿನಗಳ ಕಾಲ ಹೋರಾಟ:

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರ ನೇತೃತ್ವದ ತಂಡವು ಏ. 15 ರಿಂದ 19 ರವರೆಗೆ ಕ್ರಮವಾಗಿ ಹಾವೇರಿ, ಗದಗ, ಬಾಗಲಕೋಟೆ, ಹುಬ್ಬಳ್ಳಿ-ಧಾರವಾಡ ನಗರ, ಧಾರವಾಡ ಗ್ರಾಮೀಣ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಹೋರಾಟ ನಡೆಸಲಿದೆ.

ಸಿದ್ದರಾಮಯ್ಯ ನೇತೃತ್ವದ ತಂಡ ಏ.15 ರಿಂದ 20ರವರೆಗೆ ಚಾಮರಾಜನಗರ, ಮೈಸೂರು ನಗರ ಮತ್ತು ಗ್ರಾಮಾಂತರ, ಮಂಡ್ಯ, ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದೆ. ಎಂ.ಬಿ. ಪಾಟೀಲ್‌ ಅವರ ನೇತೃತ್ವದ ತಂಡ ಏ.15 ರಿಂದ 18ರವರೆಗೆ ಬೀದರ್‌, ಕಲಬುರಗಿ, ಯಾದಗಿರಿ, ರಾಯಚೂರು ಜಿಲ್ಲೆ, ರಾಮಲಿಂಗಾರೆಡ್ಡಿ ನೇತೃತ್ವದ ತಂಡ ಏ.15 ರಿಂದ 18ರವರೆಗೆ ಬಳ್ಳಾರಿ ನಗರ ಮತ್ತು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಭೇಟಿ ನೀಡಲಿದೆ.

ಸಲೀಂ ಅಹಮದ್‌ ಅವರ ನೇತೃತ್ವದ ತಂಡ ಏ.15 ರಿಂದ 17ರವರೆಗೆ ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ತುಮಕೂರು ಜಿಲ್ಲೆ, ಸತೀಶ್‌ ಜಾರಕಿಹೊಳಿ ಅವರ ತಂಡ ಏ.15 ರಿಂದ 17ರವರೆಗೆ ಉತ್ತರ ಕನ್ನಡ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆ, ಆರ್‌. ಧ್ರುವನಾರಾಯಣ ಅವರ ನೇತೃತ್ವದ ತಂಡ ಏ.15 ರಿಂದ 17ರವರೆಗೆ ಕೊಪ್ಪಳ, ದಾವಣಗೆರೆ, ಶಿವಮೊಗ್ಗ ಜಿಲ್ಲೆ, ಈಶ್ವರಖಂಡ್ರೆ ತಂಡ ಏ.15 ರಿಂದ 17ರವರೆಗೆ ಬೆಳಗಾವಿ ನಗರ ಹಾಗೂ ಗ್ರಾಮಾಂತರ, ಚಿಕ್ಕೋಡಿ, ವಿಜಯಪುರ ಜಿಲ್ಲೆಗಳಲ್ಲಿ ಹೋರಾಟ ನಡೆಸಲಿದೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

Latest Videos
Follow Us:
Download App:
  • android
  • ios