5,000 ಪೆಟ್ರೋಲ್ ಬಂಕ್ ಮುಂದೆ ಕೈ ನಾಯಕರ ‘100 ನಾಟೌಟ್’ ಪ್ರತಿಭಟನೆ!
* ಪೆಟ್ರೋಲ್ ಏರಿಕೆ ವಿರುದ್ಧ ಸಿಡಿದೆದ್ದ ಕಾಂಗ್ರೆಸ್
* 5,000 ಪೆಟ್ರೋಲ್ ಬಂಕ್ ಮುಂದೆ ‘100 ನಾಟೌಟ್’ ಪ್ರತಿಭಟನೆ ಆರಂಭ
* ರಾಜ್ಯಾದ್ಯಂತ ಕಾಂಗ್ರೆಸ್‌ನಿಂದ 5 ದಿನಗಳ ಹೋರಾಟ
* ಬೆಂಗಳೂರಲ್ಲಿ ಡಿಕೆಶಿ, ಸಿದ್ದು ಪೊಲೀಸ್ ವಶ, ನಂತರ ಬಿಡುಗಡೆ
* ತಟ್ಟೆ, ಲೋಟ ಬಡಿದು ಸರ್ಕಾರದ ವಿರುದ್ಧ ಕಾರ‍್ಯಕರ್ತರ ಆಕ್ರೋಶ
ಬೆಂಗಳೂರು(ಜೂ.12): ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ರಾಜ್ಯಾದ್ಯಂತ 5 ದಿನಗಳ ಕಾಲ 5 ಸಾವಿರ ಪೆಟ್ರೋಲ್ ಬಂಕ್‌ಗಳ ಬಳಿ ರಾಜ್ಯ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿರುವ ‘100 ನಾಟೌಟ್’ ಪ್ರತಿಭಟನಾ ಅಭಿಯಾನಕ್ಕೆ ಶುಕ್ರವಾರ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸುವ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ.
ಬೆಂಗಳೂರಿನ ಶಿವಾನಂದ ವೃತ್ತದ ಬಳಿಯ ರೆಡ್ಡಿ ಪೆಟ್ರೋಲ್ ಬಂಕ್ ಬಳಿ ಸೀಮಿತ ಸಂಖ್ಯೆಯಲ್ಲಿ ಸೇರಿದ್ದ ಕಾಂಗ್ರೆಸ್‌ನ ಪ್ರಮುಖ ನಾಯಕರಾದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು, ರಾಮ ರಾಜ್ಯದ ಆಸೆ ತೋರಿಸಿ ಕೇಂದ್ರ ಸರ್ಕಾರ ಜನರ ಲೂಟಿ ಮಾಡುತ್ತಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಿಗಣೆಯಂತೆ ಜನರ ರಕ್ತ ಹೀರುತ್ತಿದ್ದಾರೆ. ಜನರು ಈಗಾಗಲೇ ಆಕ್ರೋಶಗೊಂಡಿದ್ದು, ಜನರೇ ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ಪ್ರತಿಭಟನೆ ತಡೆದ ಪೊಲೀಸರು ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಅವರನ್ನು ವಶಕ್ಕೆ ಪಡೆದು ಹೈಗ್ರೌಂಡ್ಸ್ ಪೊಲೀಸ್ ಠಾಣೆ ಬಳಿಗೆ ಕರೆದುಕೊಂಡು ಹೋಗಿ ಬಿಡುಗಡೆ ಮಾಡಿದರು. ಈ ವೇಳೆ ಮಹಿಳಾ ಕಾಂಗ್ರೆಸ್ ಸದಸ್ಯರು ವೃತ್ತದ ಸುತ್ತಲೂ ನಿಂತು ತಟ್ಟೆ, ಲೋಟ ಬಡಿದು ಶಬ್ಧ ಮಾಡುವ ಮೂಲಕ ಬೆಲೆ ಏರಿಕೆ ಬಗ್ಗೆ ವಾಹನÜ ಸವಾರರ ಗಮನ ಸೆಳೆದರು.
ಇದೇ ವೇಳೆ ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಆಯಾ ಜಿಲ್ಲೆಯ ಪ್ರಮುಖ ಕಾಂಗ್ರೆಸ್ ನಾಯಕರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಪೆಟ್ರೋಲ್ 100 ರು. ಗಡಿ ದಾಟಿರುವ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಕೂಡಲೇ ಇಂಧನ ಬೆಲೆ ಇಳಿಕೆ ಮಾಡುವಂತೆ ಒತ್ತಾಯ ಮಾಡಿದರು.
ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ: 5 ದಿನಗಳ ಹೋರಾಟದಲ್ಲಿ ಮೊದಲ ದಿನ ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಪೆಟ್ರೋಲ್, ಡೀಸೆಲ್ ದರ ಹೆಚ್ಚಳ ಖಂಡಿಸಿ ಹುಬ್ಬಳ್ಳಿ, ಮಂಗÜಳೂರು, ಮೈಸೂರು, ಕೋಲಾರ, ಮಂಡ್ಯ, ಉಡುಪಿ, ಕೊಡಗು, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಹಾವೇರಿ, ಗದಗ, ಕೊಪ್ಪಳ, ಬಳ್ಳಾರಿಗಳಲ್ಲಿ ಪೆಟ್ರೋಲ್ ಬಂಕ್ ಮುಂದೆ ಕಾಂಗ್ರೆಸ್ಸಿಗರು ಪ್ರತಿಭಟನೆ ನಡೆಸಿದರು.
ಇದೇ ವೇಳೆ ಹುಬ್ಬಳ್ಳಿಯಲ್ಲಿ ಬೈಕ್‌ಗೆ ಹಗ್ಗ ಕಟ್ಟಿ, ಚಕ್ಕಡಿ ಮೇಲೆ ಹತ್ತಿ ಪ್ರತಿಭಟನೆ ನಡೆಸಲಾಯಿತು. ಬಳ್ಳಾರಿಯಲ್ಲಿ ಎತ್ತಿನ ಬಂಡಿಯಲ್ಲಿ ಆಗಮಿಸಿ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿದರೆ, ಬೆಳಗಾವಿಯಲ್ಲಿ ಬೈಕ್‌ಗಳಿಗೆ ಪೆಟ್ರೋಲ್ ತುಂಬಿಸಿ ಶಾಸಕಿ ಹೆಬ್ಬಾಳ್ಕರ್ ಪ್ರತಿಭಟಿಸಿದರು. ಮಂಡ್ಯದಲ್ಲಿ ಸೌಟು-ಲಟ್ಟಣಿಗೆ ಹಿಡಿದು ಮಹಿಳಾ ಪದಾಧಿಕಾರಿಗಳು ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇನ್ನೂ 4 ದಿನ ಪ್ರತಿಭಟನೆ: ಪ್ರತಿಭಟನೆ ಇನ್ನೂ ನಾಲ್ಕು ದಿನ ಮುಂದುವರೆಯಲಿದ್ದು ಜೂ. 12ರಂದು ತಾಲೂಕು ಕೇಂದ್ರ, ಜೂ.13ರಂದು ಎಲ್ಲ ಜಿಲ್ಲಾ ಪಂಚಾಯಿತಿ ಹಾಗೂ ಹೋಬಳಿ ಕೇಂದ್ರಗಳಲ್ಲಿ, ಜೂ.14ರಂದು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪೆಟ್ರೋಲ… ಬಂಕ್‌ಗಳಲ್ಲಿ ಹಾಗೂ ಜೂ. 15ರಂದು ಗ್ರಾಮ, ವಾರ್ಡ್ ಹಂತದ ಪ್ರಮುಖ ಪೆಟ್ರೋಲ್ ಬಂಕ್‌ಗಳಲ್ಲಿ ಪ್ರತಿಭಟನೆ ನಡೆಯಲಿದೆ.