ಬೆಂಗಳೂರು: ಕಂಪ್ಲಿ ಕಾಂಗ್ರೆಸ್ ಶಾಸಕ ಗಣೇಶ್‌ರಿಂದ ಗಂಭೀರ ಹಲ್ಲೆಗೊಳಗಾಗಿದ್ದ ವಿಜಯನಗರ ಶಾಸಕ ಆನಂದ್‌ಸಿಂಗ್ ಅವರ ಆರೋಗ್ಯ  ಸಂಪೂರ್ಣ ಸುಧಾರಿಸಿಲ್ಲ. ವ್ಹೀಲ್‌ಚೇರ್ ಹಾಗೂ ಸಹಾಯಕರ ನೆರವಿಲ್ಲದೆ ಒಂದು ಹೆಜ್ಜೆಯೂ ಮುಂದಿಡಲು ಸಾಧ್ಯವಾಗದ ಸ್ಥಿತಿಯಲ್ಲೇ ಮುಂದುವರೆದಿದ್ದಾರೆ. 

ಈಗಲ್‌ಟನ್ ರೆಸಾರ್ಟ್‌ನಲ್ಲಿ ಶಾಸಕರ ನಡುವೆ ನಡೆದ ‘ಟೈಟ್‌ಫೈಟ್’ನಲ್ಲಿ ಹಲ್ಲೆಗೊಳಗಾದ ಬಳಿಕ ಮೊದಲ ಬಾರಿಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಆನಂದ್‌ಸಿಂಗ್, ‘ದೇವರ ಆಶೀರ್ವಾದದಿಂದ ನನ್ನ ಆರೋಗ್ಯ ಸುಧಾರಿಸುತ್ತಿದೆ. ನನ್ನ ಆರೋಗ್ಯ ಸಂಪೂರ್ಣ ಸುಧಾರಿಸಲು ಇನ್ನೂ ಒಂದೂವರೆ ತಿಂಗಳು ಬೇಕಾಗಬಹುದು’ ಎಂದು ಹೇಳಿದ್ದಾರೆ. 

ಆನಂದ್‌ಸಿಂಗ್‌ರ ಕಣ್ಣಿಗೆ ಆಗಿರುವ ಗಾಯ ಹಾಗೂ ಕಣ್ಣಿನ ಮೂಳೆ ಕ್ರ್ಯಾಕ್ ಆಗಿರುವುದಕ್ಕೆ ಚಿಕಿತ್ಸೆ ಪಡೆಯಲು ಶುಕ್ರವಾರ ಅಪೋಲೊ ಆಸ್ಪತ್ರೆಯಿಂದ ನಾರಾಯಣ ನೇತ್ರಾಲಯಕ್ಕೆ ಕರೆತರಲಾಗಿತ್ತು. ಇದಕ್ಕೂ ಮೊದಲು ಅಪೋಲೊ ಆಸ್ಪತ್ರೆ ವೈದ್ಯರು ಆನಂದ್‌ಸಿಂಗ್ ಆರೋಗ್ಯ ಸುಧಾರಿಸಿದೆ ಎಂದಿದ್ದರು. ತಲೆಯ ಸುತ್ತ ಬ್ಯಾಂಡೇಜ್, ಹೊಟ್ಟೆ ಪಕ್ಕೆಲುಬು ಭಾಗಕ್ಕೆ ಬೆಲ್ಟ್ ನೊಂದಿಗೆ ಹೆಜ್ಜೆ ಇಡಲೂ ಆಗದ ಸ್ಥಿತಿಯಲ್ಲಿ ಆನಂದ್‌ಸಿಂಗ್ ಪ್ರತ್ಯಕ್ಷವಾಗಿದ್ದಾರೆ.