ಬೆಂಗಳೂರು(ಡಿ.21): ರಾಜ್ಯ ಸರ್ಕಾರ ಜ.1ರಿಂದ ಶಾಲಾ ಕಾಲೇಜು ಆರಂಭ ಪ್ರಕ್ರಿಯೆಗೆ ಮುಂದಡಿ ಇರಿಸಿದ ಬೆನ್ನಲ್ಲೇ ಬೇಡಿಕೆ ಈಡೇರಿಕೆ ನೆಪದಲ್ಲಿ ಖಾಸಗಿ ಶಾಲಾ ಸಂಘಟನೆಯೊಂದು ಆನ್‌ಲೈನ್‌ ಶಿಕ್ಷಣ ಬಂದ್‌ ಮಾಡುವ ಹಾಗೂ ‘ವಿದ್ಯಾಗಮ’ಕ್ಕೆ ಬಹಿಷ್ಕಾರ ಹಾಕುವ ಬೆದರಿಕೆಯೊಡ್ಡಿದೆ. ತನ್ಮೂಲಕ ಹೊಸ ವರ್ಷದಿಂದ ಶಾಲಾ ಕಾಲೇಜು ಆರಂಭದ ನಿರೀಕ್ಷೆಯಲ್ಲಿದ್ದ ವಿದ್ಯಾರ್ಥಿ ಹಾಗೂ ಪೋಷಕ ವರ್ಗದಲ್ಲಿ ಗೊಂದಲ ನಿರ್ಮಾಣ ಮಾಡಿದೆ.

ಕುತೂಹಲಕಾರಿ ಸಂಗತಿಯೆಂದರೆ ಈ ಬಂದ್‌-ಬಹಿಷ್ಕಾರಕ್ಕೆ ಎಲ್ಲಾ ಖಾಸಗಿ ಶಾಲಾ ಸಂಘಟನೆಗಳ ಬೆಂಬಲ ಇಲ್ಲ. ಮಾನ್ಯತೆ ಪಡೆದ ಅನುದಾನರಹಿತ ಖಾಸಗಿ ಶಾಲೆಗಳ ಸಂಘ (ರುಪ್ಸಾ) ಮಾತ್ರ ಈ ಬಂದ್‌, ಬಹಿಷ್ಕಾರದ ಎಚ್ಚರಿಕೆ ನೀಡಿದೆ. ರಾಜ್ಯದಲ್ಲಿ ಒಟ್ಟು 20,400 ಖಾಸಗಿ ಶಾಲೆಗಳಿದ್ದು, ಆ ಪೈಕಿ ತನ್ನ ಸಂಘಟನೆಯ ಅಡಿಯಲ್ಲಿ 12 ಸಾವಿರ ಶಾಲೆಗಳಿವೆ. ನಮ್ಮಲ್ಲಿ ಸುಮಾರು 25 ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ ಎಂದು ರುಪ್ಸಾ ಹೇಳಿಕೊಂಡಿದೆ. ಅಂದರೆ ರಾಜ್ಯದಲ್ಲಿ ಅರ್ಧಕ್ಕಿಂತ ಹೆಚ್ಚು ಖಾಸಗಿ ಶಾಲೆಗಳು ಸೋಮವಾರದಿಂದ ಬಂದ್‌ ಆಗುವ ಸಾಧ್ಯತೆಯಿದೆ.

ಉಳಿದಂತೆ ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲೆ ಆಡಳಿತ ಮಂಡಳಿಗಳ ಒಕ್ಕೂಟ (ಕ್ಯಾಮ್ಸ್‌), ಕರ್ನಾಟಕ ಅನುದಾನರಹಿತ ಖಾಸಗಿ ಶಾಲೆಗಳ ಸಂಘ (ಕುಸ್ಮಾ) ಹಾಗೂ ಸಿಬಿಎಸ್‌ಇ ಶಾಲಾ ಸಂಘಟನೆಗಳು ಬೆಂಬಲ ನೀಡಿಲ್ಲ. ಈ ಸಂಘಟನೆಗಳ ಅಡಿಯಲ್ಲಿ ಬರುವ ಶಾಲೆಗಳಲ್ಲಿ ಶಿಕ್ಷಣ ವ್ಯತ್ಯಯವಾಗುವುದಿಲ್ಲ.

ಆದರೆ, ರುಪ್ಸಾ ತನ್ನ ಅಡಿಯಲ್ಲಿ ಬರುವ ಶಾಲೆಗಳಲ್ಲಿ ಸೋಮವಾರದಿಂದ (ಡಿ.21) ಆನ್‌ಲೈನ್‌ ಶಿಕ್ಷಣ ಸ್ಥಗಿತಗೊಳಿಸಲಿದೆ. ತಮ್ಮ ಬೇಡಿಕೆಗಳನ್ನು ಡಿ.30ರೊಳಗೆ ಈಡೇರಿಸದಿದ್ದರೆ ಜ.2ರಿಂದ ತರಗತಿ ಬೋಧನೆ ಹಾಗೂ ‘ವಿದ್ಯಾಗಮ’ ಆರಂಭಿಸುವುದಿಲ್ಲ. ಜ.6ರಿಂದ ಸಂಪೂರ್ಣ ಶಾಲಾ ಚಟುವಟಿಕೆ ಬಹಿಷ್ಕರಿಸಿ ನಗರದ ಫ್ರೀಡಂ ಪಾರ್ಕ್ನಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಎಚ್ಚರಿಸಿದೆ.

ರಾಜ್ಯದ ಗ್ರಾಮೀಣ ಭಾಗದ ಖಾಸಗಿ ಶಾಲೆಗಳನ್ನೇ ಹೆಚ್ಚಾಗಿ ಕೇಂದ್ರೀಕರಿಸಿಕೊಂಡು ಹುಟ್ಟುಕೊಂಡಿರುವ ಮಾನ್ಯತೆ ಪಡೆದ ಅನುದಾನ ರಹಿತ ಖಾಸಗಿ ಶಾಲೆಗಳ ಸಂಘ (ರುಪ್ಸಾ) ಪ್ರತಿನಿಧಿಗಳು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಈ ಘೋಷಣೆ ಮಾಡಿದ್ದು, ಮಾನ್ಯತೆ ನವೀಕರಣದ ಕಠಿಣ ಮಾನದಂಡ ಸಡಿಲಿಕೆ ಸೇರಿದಂತೆ 15 ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದಾರೆ.

ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರುಪ್ಸಾ ಅಧ್ಯಕ್ಷ ಲೋಕೇಶ್‌ ತಾಳಿಕಟ್ಟೆ, ಕೋವಿಡ್‌ ಲಾಕ್‌ಡೌನ್‌ ನಂತರ ತೀವ್ರ ಆರ್ಥಿಕ ಸಂಕಷ್ಟಎದುರಾಗಿದ್ದು, ಶಾಲೆಗಳನ್ನು ನಡೆಸುವುದು ಕಷ್ಟವಾಗಿದೆ. ಬ್ಯಾಂಕುಗಳಲ್ಲಿ ಪಡೆದಿರುವ ಸಾಲದ ಕಂತು ಮರುಪಾವತಿ ಕಾಲಾವಧಿಯನ್ನು ಕನಿಷ್ಠ ಒಂದು ವರ್ಷ ವಿಸ್ತರಿಸಬೇಕು. ಮಾನ್ಯತೆ ನವೀಕರಣಕ್ಕೆ ಇರುವ ಕಠಿಣ ಮಾನದಂಡಗಳನ್ನು ಸಡಿಲಿಸಬೇಕು, ಖಾಸಗಿ ಶಾಲೆಗಳ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸಿ ಆರ್ಥಿಕ ನೆರವು ನೀಡಬೇಕು ಎಂಬುದು ಸೇರಿದಂತೆ ಒಟ್ಟು 15 ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.

ಈ ಬಗ್ಗೆ ಹಲವು ದಿನಗಳಿಂದ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ನಮ್ಮ ಸಂಘಟನೆಯಿಂದ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಾ ಬಂದಿದ್ದೇವೆ. ಅಲ್ಲದೆ, ಖುದ್ದು ಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರನ್ನು ನಾಲ್ಕು ಬಾರಿ ಭೇಟಿ ಮಾಡಿ ಮನವಿ ಸಲ್ಲಿಸಿದ್ದೇವೆ. ಅಧಿಕಾರಿಗಳಿಗೂ ನಮ್ಮ ಅಹವಾಲು ಸಲ್ಲಿಸಿದ್ದೇವೆ. ಆದರೆ, ಇದುವರೆಗೂ ಸರ್ಕಾರ, ಸಚಿವರು ನಮ್ಮ ಬೇಡಿಕೆಗಳಿಗೆ ಸೊಪ್ಪು ಹಾಕಿಲ್ಲ. ಬೇಜವಾಬ್ದಾರಿಯಿಂದ ನಡೆದುಕೊಂಡಿದ್ದಾರೆ. ಹೀಗಾಗಿ ಪ್ರತಿಭಟನೆಗೆ ಇಳಿದಿರುವುದಾಗಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಶಶಿಧರ್‌ ದಿಂಡೂರ್‌, ಕಾರ್ಯನಿರ್ವಾಹಕ ಅಧ್ಯಕ್ಷ ಬಾಲಕೂರು ಲೇಪಾಕ್ಷಿ ಮತ್ತಿತರರು ಇದ್ದರು.

ಕುಸ್ಮಾ-ಕ್ಯಾಮ್ಸ್‌ ಶಾಲೆಗಳ ಬೆಂಬಲ ಇಲ್ಲ

ಈ ಹೋರಾಟಕ್ಕೆ ರಾಜ್ಯದ ಇತರೆ ಖಾಸಗಿ ಶಾಲಾ ಸಂಘಟನೆಗಳಾದ ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಆಡಳಿತ ಮಂಡಳಿಗಳ ಒಕ್ಕೂಟ (ಕ್ಯಾಮ್ಸ್‌), ಕರ್ನಾಟಕ ಅನುದಾನರಹಿತ ಖಾಸಗಿ ಶಾಲೆಗಳ ಸಂಘ (ಕುಸ್ಮಾ) ಹಾಗೂ ಸಿಬಿಎಸ್‌ಇ ಶಾಲಾ ಸಂಘಟನೆಗಳು ಬೆಂಬಲ ನೀಡಿಲ್ಲ. ರುಪ್ಸಾ ಹೇಳಿಕೆಗೂ ನಮಗೂ ಸಂಬಂಧವಿಲ್ಲ. ಸರ್ಕಾರ ಇತ್ತೀಚೆಗೆ ನಮ್ಮ ಸಂಘಟನೆಗಳಿಂದ ನಡೆದ ಸಾಂಕೇತಿಕ ಪ್ರತಿಭಟನೆ ವೇಳೆ ನಮ್ಮ ಬೇಡಿಕೆಗಳ ಈಡೇರಿಕೆಗೆ ಒಪ್ಪಿಕೊಂಡಿದೆ. ಹಾಗಾಗಿ ನಮ್ಮ ಸಂಘಟನೆಗಳಡಿ ಬರುವ ಯಾವುದೇ ಶಾಲೆಗಳು ಆನ್‌ಲೈನ್‌ ಶಿಕ್ಷಣ ಸ್ಥಗಿತಗೊಳಿಸುವುದಾಗಲಿ, ಜ.1ರಿಂದ ಶಾಲೆ ಆರಂಭಿಸದೆ ಇರುವ ಅಥವಾ ಹೋರಾಟಕ್ಕಿಳಿಯುವ ನಿರ್ಧಾರ ಮಾಡಿಲ್ಲ ಎಂದು ಸ್ಪಷ್ಟಪಡಿಸಿವೆ.

ನ್ಯಾಯಯುತ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹೋರಾಟ ನಡೆಸುತ್ತಿದ್ದೇವೆ. ಸರ್ಕಾರ ನಮ್ಮ ಅಹವಾಲನ್ನು ಕಿವಿಗೂ ಹಾಕಿಕೊಂಡಿಲ್ಲದ ಕಾರಣ ಆನ್‌ಲೈನ್‌ ಶಿಕ್ಷಣ ಸ್ಥಗಿತಗೊಳಿಸಿ, ಶಾಲೆ ಆರಂಭಿಸದೆ ಹೋರಾಟಕ್ಕಿಳಿಯುವ ನಿರ್ಧಾರ ಮಾಡಲಾಗಿದೆ. ಬೇಡಿಕೆ ಈಡೇರದಿದ್ದರೆ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ.

- ಲೋಕೇಶ್‌ ತಾಳಿಕಟ್ಟೆ, ರುಪ್ಸಾ ಅಧ್ಯಕ್ಷ