'ಸಿದ್ದರಾಮಯ್ಯ ನನ್ನಿಂದ ಬೆಳೆದ' ಅಂತಾರೆ' ನಾನು ಇಲ್ಲಂದಿದ್ರೆ ದೇವೇಗೌಡರು ಸಿಎಂ ಆಗ್ತಿರಲಿಲ್ಲ: ಸಿಎಂ ವಾಗ್ದಾಳಿ

ಜೆಡಿಎಸ್ ಭದ್ರಕೋಟೆ ಹಾಸನದ ಎಸ್.ಎಂ.ಕೃಷ್ಣ ನಗರದಲ್ಲಿ ನಡೆದ ಕಾಂಗ್ರೆಸ್ ಜನ  ಕಲ್ಯಾಣ ಸಮಾವೇಶ ನಿರೀಕ್ಷೆಗೂ ಮೀರಿ ಯಶಸ್ವಿಯಾಯಿತು.

Karnataka CM Siddaramaiah speech at congress janakalyana samavesha at hassan rav

ವರದಿ: ಕೆ.ಎಂ.ಹರೀಶ್, ಏಷ್ಯಾನೆಟ್ ಸುವರ್ಣ ನ್ಯೂಸ್, ಹಾಸನ

ಹಾಸನ (ಡಿ.5): ಜೆಡಿಎಸ್ ಭದ್ರಕೋಟೆ ಹಾಸನದ ಎಸ್.ಎಂ.ಕೃಷ್ಣ ನಗರದಲ್ಲಿ ನಡೆದ ಕಾಂಗ್ರೆಸ್ ಜನ  ಕಲ್ಯಾಣ ಸಮಾವೇಶ ನಿರೀಕ್ಷೆಗೂ ಮೀರಿ ಯಶಸ್ವಿಯಾಯಿತು. ಜಿಲ್ಲೆ ಸೇರಿದಂತೆ ನೆರೆ ಹೊರೆಯ ಜಿಲ್ಲೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಜನರು ಆಗಮಿಸುವ ಮೂಲಕ ಕೆಪಿಸಿಸಿ-ಹಿಂದುಳಿದ ವರ್ಗಗಳ ಒಕ್ಕೂಟಗಳ ಆಶ್ರಯದಲ್ಲಿ ನಡೆದ ಸ್ವಾಭಿಮಾನಿ ಸಮಾವೇಶಕ್ಕೆ ಕೈ ಜೋಡಿಸಿದರು.

ಸಮಾವೇಶ ಉದ್ಘಾಟಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ತಮ್ಮ 40 ವರ್ಷಗಳ ರಾಜಕೀಯ ಜೀವನದಲ್ಲಿ ಹಾಸನ ಜಿಲ್ಲೆಯಲ್ಲಿ ಇಷ್ಟೊಂದು ದೊಡ್ಡ ಸಮಾವೇಶ ಆಗಿರಲಿಲ್ಲ. ಮೊದಲ ಬಾರಿಗೆ ಆಗಿದೆ ಎಂದರು. ಡಾ.ರಾಜ್‌ಕುಮಾರ್ ಅಭಿಮಾನಿಗಳೇ ದೇವರು ಅಂದ್ರು, ನಮಗೆ ಮತದಾರರ ಬಂಧುಗಳೇ ದೇವರು. ಎಲ್ಲ ವರ್ಗಗಳ ಜನರ ಆಶೀರ್ವಾದಿಂದ ಇತ್ತೀಚೆಗೆ 3 ಉಪ ಚುನಾವಣೆ ಗೆಲ್ಲಲು ಕಾರಣವಾಯಿತು ಎಂದು ಹರ್ಷ ವ್ಯಕ್ತಪಡಿಸಿದರು.

ಸಾಯೋವರೆಗೂ ಸಿದ್ದರಾಮಯ್ಯ ಜೊತೆ ನಿಲ್ಲುತ್ತೇನೆ: ಜನಕಲ್ಯಾಣ ಸಮಾವೇಶದಲ್ಲಿ ಡಿಕೆಶಿ ಶಪಥ!

ರಾಜ್ಯ, ದೇಶದಲ್ಲಿ ಕಾಂಗ್ರೆಸ್‌ನಿಂದ ಮಾತ್ರ ಸುಭದ್ರ ಸರ್ಕಾರ ಎಂದ ಸಿದ್ದರಾಮಯ್ಯ, ಕರ್ನಾಟಕದಲ್ಲಿ ಜೆಡಿಎಸ್-ಬಿಜೆಪಿ ಎಂದೂ ಸ್ವಂತ ಶಕ್ತಿಯಿಂದ ಅಧಿಕಾರಕ್ಕೆ ಬಂದಿಲ್ಲ. ಕುಮಾರಸ್ವಾಮಿ ಒಮ್ಮೆ ಬಿಜೆಪಿ ಮತ್ತೊಮ್ಮೆ ನಮ್ಮ ಬೆಂಬಲದಿಂದ ಸಿಎಂ ಆದರು. ಬಿಜೆಪಿ ಆಪರೇಷನ್ ಕಮಲದ ಮೂಲಕ ಹಿಂಬಾಗಿಲಿನಿಂದ ಅಧಿಕಾರ ಹಿಡಿದಿದೆ ಎಂದು ಟೀಕಿಸಿದರು.
  
ಆ ಎರಡೂ ಪಕ್ಷಗಳೂ ಸುಭದ್ರ ಸರ್ಕಾರ ಕೊಟ್ಟಿದ್ದಾರಾ ಎಂದು ಪ್ರಶ್ನಿಸಿದ ಸಿಎಂ, ಎಲ್ಲ ಕಾಲದಲ್ಲೂ ನಾವೇ ಸುಭದ್ರ ಸರ್ಕಾರ ಕೊಟ್ಟಿದ್ದೇವೆ. ಹಾಗಾಗಿ ಮುಂದಿನ ದಿನಗಳಲ್ಲಿ ಅವರನ್ನು ಬೆಂಬಲಿಸಬೇಕಾ ಯೋಚಿಸಿ ಎಂದರು. 2013-18 ರಲ್ಲಿ ನಾವು ಅಧಿಕಾರ ನಡೆಸಿದಾಗ 165 ರಲ್ಲಿ 158 ಭರವಸೆ ಈಡೇರಿಸಿದೆವು, ಆದರೆ ಅವರು ಶೇ.10ರಷ್ಟನ್ನೂ ಈಡೇರಿಸಲಿಲ್ಲ. ಕೊಟ್ಟ ಮಾತಿನಂತೆ ನಡೆದಿರುವುದು ನಾವು, ಅವರಲ್ಲ ಎಂದು ಛೇಡಿಸಿದರು.

ಬಿಪಿಎಲ್ ಕಾರ್ಡ್ ಬಗ್ಗೆ ಭಾರೀ ಮಾತನಾಡುತ್ತಿದ್ದಾರೆ. 5 ಕೆಜಿ ಉಚಿತ ಅಕ್ಕಿ ಕೊಟ್ಟಿದ್ದು, 7 ಕೆಜಿಗೆ ಏರಿಸಿದ್ದು ನಾವು, ಬಡವರ ಹೊಟ್ಟೆ ಮೇಲೆ ಹೊಡೆದಿರುವುದು ಅವರು ಎಂದು ಕಿಡಿ ಕಾರಿದರು. ಇಡೀ ದೇಶದಲ್ಲೇ ತಲಾವಾರು 10 ಕೆಜಿ ಅಕ್ಕಿ ಕೊಡುತ್ತಿದ್ದೇವೆ. ಬಿಜೆಪಿಯವರು ದೇಶದ ಒಂದೇ ಒಂದು ರಾಜ್ಯದಲ್ಲಿ ಕೊಡುತ್ತಿದ್ದರೆ ನಾನು ರಾಜಕೀಯ ನಿವೃತ್ತಿ ಪಡೆಯುವ ಎಂದು ಸವಾಲು ಹಾಕಿದರು. ಅವರಿಗೆ ಬಡವರ ಬಗ್ಗೆ ಮಾತನಾಡಲು ನೈತಿಕ ಹಕ್ಕಿಲ್ಲ ಎಂದು ಜರಿದರು.

5 ಗ್ಯಾರಂಟಿಯಿಂದ ರಾಜ್ಯ ದಿವಾಳಿ ಆಗಲಿದೆ ಎಂದು ಪ್ರಧಾನಿ ಹೇಳಿದರು. ಆದರೀಗ ಅವುಗಳ ಯಶಸ್ಸಿನಿಂದ ಉರಿದು ಹೋಗಿರುವ ಬಿಜೆಪಿ-ಜೆಡಿಎಸ್ ಹೇಗಾದರೂ ಮಾಡಿ ನಿಲ್ಲಿಸಬೇಕು ಎಂದು ತೆರಿಗೆ, ನಬಾರ್ಡ್ ಅನುದಾನ  ಕಡಿತದ ಮೂಲಕ ಅನ್ಯಾಯ ಮಾಡುತ್ತಿದ್ದಾರೆ.ಆದರೆ ಯಾವುದೇ ಕಾರಣಕ್ಕೂ ಗ್ಯಾರಂಟಿ ನಿಲ್ಲಿಸಲ್ಲ ಎಂದು ಪುನರುಚ್ಛರಿಸಿದರು.

ಈ ಅನ್ಯಾಯದ ವಿರುದ್ಧ ಒಮ್ಮೆಯಾದರೂ ದೇವೇಗೌಡರು, ಕುಮಾರಸ್ವಾಮಿ ಕೇಳಿದ್ದಾರಾ, ಬಿಜೆಪಿ ಸಂಸದರು ಕೋಲೆ ಬಸವನಂತೆ ತಲೆ ಯಾಡಿಸೋದು ಬಿಟ್ಟು ಇನ್ನೇನು ಮಾಡಿದ್ದಾರೆ ಎಂದು ಪ್ರಶ್ನಿಸಿದರು. ನಾವು ರೈತರ ಮಕ್ಕಳು ಎನ್ನುವವರು ಮೇಕೆದಾಟು, ಮಹದಾಯಿ ಯೋಜನೆಗೆ ಅನುಮತಿ ಕೊಡಿಸಿ ಎಂದು ಕೇಳಿದ ಸಿಎಂ, ದೇವೇಗೌಡರು ನನಗಿಂತ 15 ವರ್ಷ ದೊಡ್ಡವರು, ವಯಸ್ಸಿಗೆ ತಕ್ಕಂತೆ ಮಾತನಾಡಬೇಕಲ್ವಾ ಎಂದು ಕಾಲೆಳೆದರು. ಉಪ ಚುನಾವಣೆಯಲ್ಲಿ ದೇವೇಗೌಡರು ಕಣ್ಣೀರು ಹಾಕಿದ್ದೇ ಹಾಕಿದ್ದು, ಆದರೆ ಹಾಸನ ಜನ ಕಣ್ಣೀರಲ್ಲಿ ಕೈ ತೊಳೀತಾ ಇದಾರೆ. ಮಹಿಳೆಯರು ಆತಂಕದಲ್ಲಿದ್ದಾರೆ, ಇಲ್ಲೂ ಕಣ್ಣೀರು ಹಾಕಬೇಕಿತ್ತಲ್ವಾ ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.

ಅಧಿಕಾರ ಹಂಚಿಕೆ ಸೂತ್ರ: ಡಿಕೆಶಿ ಹೇಳಿಕೆ ಸಿಎಂ ಸಿದ್ದರಾಮಯ್ಯ ತಿರುಗೇಟು!

ದೇವೇಗೌಡರು ಯಾರನ್ನೂ ಬೆಳೆಸಲ್ಲ, ಒಕ್ಕಲಿಗರನ್ನೇ ಬೆಳೆಸಲು ಇಷ್ಟಪಡಲ್ಲ. ಸಿದ್ದರಾಮಯ್ಯ ನನ್ನಿಂದ ಬೆಳೆದ ಅಂತಾರೆ, ನಾನು, ಜಾಲಪ್ಪ ಇಲ್ಲದಿದ್ರೆ 1996 ರಲ್ಲಿ ದೇವೇಗೌಡರು ಸಿಎಂ ಆಗಲು ಆಗುತ್ತಿರಲಿಲ್ಲ. ದೇವೇಗೌಡರು ನನ್ನ ಬೆಳೆಸಲಿಲ್ಲ. ಕೊನೆ ಉಸಿರಿರುವವರೆಗೂ ರಾಜಕೀಯ ಮಾಡುವೆ ಎನ್ನುವ ಗೌಡರು ಮಾಡಲಿ, ಆದರೆ ದ್ವೇಷದ ರಾಜಕಾರಣ ಮಾಡಬೇಡಿ ಎಂದರು. ಮುಂದಿನ ಚುನಾವಣೆಯಲ್ಲಿ ಹಾಸನದಲ್ಲಿ ಸಂಸತ್ ಸ್ಥಾನ ಸೇರಿ ಎಲ್ಲ 7 ವಿಧಾನಸಭಾ ಕ್ಷೇತ್ರಗಳಲ್ಲೂ ನಾವೇ ಗೆಲ್ಲುತ್ತೇವೆ ಎಂದು ಸಿಎಂ ವಿಶ್ವಾಸ ವ್ಯಕ್ತಪಡಿಸಿದರು.

Latest Videos
Follow Us:
Download App:
  • android
  • ios