ಉದ್ಯಮಿಗಳಿಗೂ ಕುಲಪತಿ ಹುದ್ದೆ: ಕೇಂದ್ರದ ವಿರುದ್ಧ ಸಿದ್ದರಾಮಯ್ಯ ಕಿಡಿ

ಕೇಂದ್ರದ ತಿದ್ದುಪಡಿಗಳಿಂದಾಗಿ ಸಾರ್ವಜನಿಕ ಮತ್ತು ಖಾಸಗಿ ಕ್ಷೇತ್ರದ ಉದ್ಯಮಿಗಳು, ಸಾರ್ವಜನಿಕ ಆಡಳಿತದ ನೀತಿ ನಿರೂಪಕರು ಸೇರಿ ಬೇರೆ ಕ್ಷೇತ್ರದಲ್ಲಿರುವ ತಜ್ಞರನ್ನು ಕುಲಪತಿಯಾಗಿ ನೇಮಕ ಮಾಡಿಕೊಳ್ಳಬಹುದಾಗಿದೆ. ಇದು ಕನ್ನಡಿಗರಿಗೆ ಮಾಡುವ ದ್ರೋಹ ಎಂದು ಆಕ್ರೋಶ ಹೊರಹಾಕಿದ ಮುಖ್ಯಮಂತ್ರಿ ಸಿದ್ದರಾಮಯ್ಯ 
 

Karnataka CM Siddaramaiah Slams Central Government

ಬೆಂಗಳೂರು(ಜ.09):  ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ನೇಮಕಾತಿ ನಿಯಮಗಳಿಗೆ ತಿದ್ದುಪಡಿ ಮಾಡಿ ಕುಲಪತಿಗಳ ನೇಮಕಾತಿಗೆ ರಾಜ್ಯಪಾಲರಿಗೆ ಸರ್ವಾಧಿಕಾರ ನೀಡಿ ರಾಜ್ಯಗಳ ಅಧಿಕಾರ ಕಸಿಯಲು ಹೊರಟಿರುವ ಕೇಂದ್ರದ ಕ್ರಮ ಖಂಡನೀಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಕೇಂದ್ರದ ತಿದ್ದುಪಡಿಗಳಿಂದಾಗಿ ಸಾರ್ವಜನಿಕ ಮತ್ತು ಖಾಸಗಿ ಕ್ಷೇತ್ರದ ಉದ್ಯಮಿಗಳು, ಸಾರ್ವಜನಿಕ ಆಡಳಿತದ ನೀತಿ ನಿರೂಪಕರು ಸೇರಿ ಬೇರೆ ಕ್ಷೇತ್ರದಲ್ಲಿರುವ ತಜ್ಞರನ್ನು ಕುಲಪತಿಯಾಗಿ ನೇಮಕ ಮಾಡಿಕೊಳ್ಳಬಹುದಾಗಿದೆ. ಇದು ಕನ್ನಡಿಗರಿಗೆ ಮಾಡುವ ದ್ರೋಹ ಎಂದು ಆಕ್ರೋಶ ಹೊರಹಾಕಿದ್ದಾರೆ.

ಆಹ್ವಾನ ಪತ್ರಿಕೆಯಲ್ಲಿ ಹೆಸರು ಕೈಬಿಟ್ಟಿದ್ದಕ್ಕೆ ಧಾರವಾಡ ಕೃಷಿ ವಿವಿ ಕುಲಪತಿ ಮತ್ತು ರೆಜಿಸ್ಟರ್ ಮಧ್ಯ ಮನಸ್ತಾಪ!

ಕೇಂದ್ರದ ಈ ಕ್ರಮ ರಾಜ್ಯ ಸರ್ಕಾರದ ಮೇಲಿನ ನೇರ ಸವಾರಿ. ಒಕ್ಕೂಟ ವ್ಯವಸ್ಥೆಯನ್ನೇ ಬುಡಮೇಲು ಮಾಡುವಂಥ ಇಂತಹ ನಡವಳಿಕೆಗಳನ್ನು ರಾಜ್ಯ ಸರ್ಕಾರ ಸಹಿಸುವುದಿಲ್ಲ. ಬಿಜೆಪಿಯೇತರ ಸರ್ಕಾರವಿರುವ ರಾಜ್ಯಗಳ ಜೊತೆಯಲ್ಲಿ ಈ ಬಗ್ಗೆ ಚರ್ಚಿಸಿ ಮುಂದಿನ ಹೆಜ್ಜೆಯ ಬಗ್ಗೆ ತೀರ್ಮಾನ ಮಾಡಲಾಗುವುದು ಎಂದು ಹೇಳಿದರು.

ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ರಾಜ್ಯ ಸರ್ಕಾರಗಳ ಅಧಿಕಾರ ಮೊಟಕುಗೊಳಿಸುವ ಸಣ್ಣ ಅವಕಾಶವನ್ನೂ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಬಿಡುತ್ತಿಲ್ಲ. ಎನ್‌ಡಿಎ ಸರ್ಕಾರದ ಕಣ್ಣು ಈಗ ರಾಜ್ಯದ ವಿಶ್ವವಿದ್ಯಾಲಯಗಳ ಮೇಲೆ ಬಿದ್ದಿದ್ದು, ಯುಜಿಸಿ ನೇಮಕಾತಿಗೆ ಸಂಬಂಧಿಸಿ ಬಿಡುಗಡೆ ಮಾಡಲಾದ ಕರಡು ನಿಯಮಾಳಿಗಳ ಬಗ್ಗೆ ನಾವು ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದರು.

ಈಗಿರುವ ನಿಯಮಾವಳಿಗಳ ಪ್ರಕಾರ ಉಪಕುಲಪತಿಗಳ ನೇಮಕಾತಿಗೆ ರಾಜ್ಯ ಸರ್ಕಾರ ಶೋಧನಾ ಸಮಿತಿ ರಚಿಸುತ್ತಿತ್ತು. ಅದರಲ್ಲಿ ಕುಲಪತಿಗಳಾಗಿರುವ ರಾಜ್ಯಪಾಲರು ಶಿಫಾರಸು ಮಾಡುವ ವ್ಯಕ್ತಿಗಳು ಕೂಡಾ ಸದಸ್ಯರಾಗಿರುತ್ತಿದ್ದರು. ಹೊಸ ನಿಯಮಗಳ ಪ್ರಕಾರ ರಾಜ್ಯಪಾಲರು ಸೂಚಿಸುವ ವ್ಯಕ್ತಿಯೇ ಶೋಧನಾ ಸಮಿತಿ ಅಧ್ಯಕ್ಷರಾಗಿರುತ್ತಾರೆ. ಇದು ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರದ ಮೇಲಿನ ನೇರ ಸವಾರಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅನ್ಯಭಾಷಿಕರು ಕೂರುವ ಅಪಾಯ:

ರಾಜ್ಯದ ವಿಶ‍್ವವಿದ್ಯಾಲಯಗಳ ಕುಲಪತಿಗಳ ನೇಮಕಾತಿಗಾಗಿ ರಾಷ್ಟ್ರಮಟ್ಟದ ಪತ್ರಿಕೆಗಳಲ್ಲಿ ಜಾಹೀರಾತು ನೀಡಿ ಅರ್ಜಿಗಳನ್ನು ಆಹ್ವಾನಿಸಬೇಕೆಂದು ಯುಜಿಸಿ ಹೊಸ ನಿಯಮಾವಳಿಗಳು ಹೇಳುತ್ತಿದೆ. ಇಲ್ಲಿಯವರೆಗೆ ಆಯಾ ರಾಜ್ಯಗಳ ವಿದ್ವಾಂಸರಿಗಷ್ಟೇ ಸೀಮಿತವಾಗಿದ್ದ ಉಪಕುಲಪತಿಗಳ ಸ್ಥಾನದಲ್ಲಿ ಅನ್ಯಭಾಷಿಕರು ಬಂದು ಕೂರುವ ಅಪಾಯ ಇದೆ. ಉಪಕುಲಪತಿಗಳ ನೇಮಕಾತಿಯ ಅರ್ಹತೆಗೆ ಸಂಬಂಧಿಸಿದಂತೆಯೂ ಕೆಲ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ. ಹೊಸ ನಿಯಮಗಳ ಪ್ರಕಾರ ಉಪಕುಲಪತಿಗಳನ್ನು ಕೇವಲ ಅಕಾಡೆಮಿಕ್ ವಲಯದಿಂದ ಮಾತ್ರ ನೇಮಿಸಿಕೊಳ್ಳದೆ, ಸಾರ್ವಜನಿಕ ಮತ್ತು ಖಾಸಗಿ ಕ್ಷೇತ್ರದ ಉದ್ಯಮಿಗಳು, ಸಾರ್ವಜನಿಕ ಆಡಳಿತದ ನೀತಿ ನಿರೂಪಕರು ಸೇರಿ ಬೇರೆ ಕ್ಷೇತ್ರದಲ್ಲಿರುವ ತಜ್ಞರನ್ನು ನೇಮಕಮಾಡಿಕೊಳ್ಳಬಹುದಾಗಿದೆ. ಇದು ಕನ್ನಡಿಗರಿಗೆ ಬಗೆಯುವ ದ್ರೋಹ ಎಂದು ಕಿಡಿ ಕಾರಿದ್ದಾರೆ.

ಕೇಂದ್ರ-ರಾಜ್ಯಗಳ ನಡುವೆ ತಿಕ್ಕಾಟ ಸಾಧ್ಯತೆ:

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದ ವಿಶ್ವವಿದ್ಯಾಲಯಗಳ ಉಪಕುಲಪತಿಗಳ ನೇಮಕಾತಿಯಲ್ಲಿ ರಾಜ್ಯಪಾಲರು ಅನಗತ್ಯವಾಗಿ ಮೂಗು ತೂರಿಸುತ್ತಾ ಬಂದಿ‍ದ್ದಾರೆ. ಎಷ್ಟೋ ಸಂದರ್ಭಗಳಲ್ಲಿ ರಾಜ್ಯ ಸರ್ಕಾರದ ಶಿಫಾರಸನ್ನು ನಿರ್ಲಕ್ಷಿಸಿ ತಮ್ಮ ಆಯ್ಕೆಯನ್ನು ನಮ್ಮ ಮೇಲೆ ಹೇರುತ್ತಿದ್ದಾರೆ. ಶಿಕ್ಷಣ ಕ್ಷೇತ್ರದ ನಿರ್ವಹಣೆ ರಾಜ್ಯ ಸರ್ಕಾರದ ಪರಮಾಧಿಕಾರವಾಗಿದ್ದು, ಇದರಲ್ಲಿ ಅನಗತ್ಯವಾದ ಮಧ್ಯಪ್ರವೇಶದಿಂದಾಗಿ ಕೇಂದ್ರ ಮತ್ತು ರಾಜ್ಯಗಳ ನಡುವೆ ಘರ್ಷಣೆ ಏರ್ಪಡುವ ಸಾಧ್ಯತೆ ಇದೆ ಎಚ್ಚರಿಕೆ ನೀಡಿದ್ದಾರೆ.

ಕೊಡಗು ವಿಶ್ವವಿದ್ಯಾಲಯದ ಪ್ರಥಮ ಕುಲಪತಿಗಳಿಗೆ ಮಂತ್ರಾಲಯದ ಪ್ರತಿಷ್ಠಿತ ಪರಿಮಳ ಪ್ರಶಸ್ತಿ

ತಿದ್ದುಪಡಿ ಏನು?

ಕುಲಪತಿಗಳ ನೇಮಕಕ್ಕೆ ರಾಷ್ಟ್ರಮಟ್ಟದ ಪತ್ರಿಕೆಗಳಲ್ಲಿ ಜಾಹೀರಾತು ನೀಡಿ ಅರ್ಜಿ ಆಹ್ವಾನಿಸಬೇಕು
- ಈವರೆಗೆ ರಾಜ್ಯದ ವಿದ್ವಾಂಸರಿಗಷ್ಟೇ ಸೀಮಿತವಾಗಿದ್ದ ವೀಸಿ ಹುದ್ದೆ ಇನ್ನು ಅನ್ಯಭಾಷಿಕರ ಪಾಲು
- ಸಾರ್ವಜನಿಕ, ಖಾಸಗಿ ಕ್ಷೇತ್ರದ ಉದ್ಯಮಿ, ಆಡಳಿತ ತಜ್ಞರನ್ನೂ ವೀಸಿ ಮಾಡಲು ಅವಕಾಶ: ಸಿದ್ದು

ಗೌರ್ನರ್‌ಗೆ ಅಧಿಕಾರ

- ಕುಲಪತಿ ನೇಮಕಕ್ಕೆ ಈವರೆಗೆ ಸರ್ಕಾರ ಶೋಧನಾ ಸಮಿತಿ ರಚಿಸುತ್ತಿತ್ತು
- ರಾಜ್ಯಪಾಲರು ಶಿಫಾರಸು ಮಾಡುವ ವ್ಯಕ್ತಿಗಳೂ ಸದಸ್ಯರಾಗಿರುತ್ತಿದ್ದರು
- ಹೊಸ ನಿಯಮದ ಪ್ರಕಾರ ರಾಜ್ಯಪಾಲರು ಸೂಚಿಸುವ ವ್ಯಕ್ತಿಯೇ ಅಧ್ಯಕ್ಷ
- ರಾಜ್ಯ ಸರ್ಕಾರದ ಮೇಲೆ ಕೇಂದ್ರ ಸರ್ಕಾರ ಮಾಡುವ ಸವಾರಿ ಇದು: ಸಿಎಂ

Latest Videos
Follow Us:
Download App:
  • android
  • ios