ಬೆಂಗಳೂರು(ಡಿ.16): 1971ರ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತದ ವಿಜಯದ ನೆನಪಿಗಾಗಿ ರಾಷ್ಟ್ರವು ಇಂದು ವಿಜಯ್ ದಿವಸ್ ಅನ್ನು ಆಚರಿಸುತ್ತದೆ. ಈ ದಿನದಂದು ಯುದ್ಧದ ಸಮಯದಲ್ಲಿ ಪ್ರಾಣ ತ್ಯಾಗ ಮಾಡಿದ ಹುತಾತ್ಮರಿಗೆ ಹಲವೆಡೆ ಗೌರವ ನಮನ ಸಲ್ಲಿಸಲಾಗುತ್ತಿದೆ. 

ಹೀಗಿರುವಾಗ ಇತ್ತ ಕರ್ನಾಟಕ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಟ್ವೀಟ್ ಮಾಡಿ ಯುದ್ಧದ ಸಮಯದಲ್ಲಿ ಪ್ರಾಣ ತ್ಯಾಗ ಮಾಡಿದ ಹುತಾತ್ಮರಿಗೆ ನಮನ ಸಲ್ಲಿಸಿದ್ದಾರೆ. ಟ್ವೀಟ್ ಮಾಡಿರುವ ಬಿಎಸ್‌ವೈ ದೇಶದ ರಕ್ಷಣೆಗಾಗಿ ಪ್ರಾಣದ ಹಂಗು ತೊರೆದು ಕರ್ತವ್ಯ ನಿರ್ವಹಿಸುವ ನಮ್ಮ ವೀರಯೋಧರ ಧೈರ್ಯ, ಪರಾಕ್ರಮ, ತ್ಯಾಗ, ಬಲಿದಾನಗಳಿಗೆ ಇಡೀ ದೇಶ ಸದಾ ಋಣಿಯಾಗಿದೆ. 1971ರ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಸಾಧಿಸಿದ ಗೆಲುವಿನ ಸಂಸ್ಮರಣೆಯ ಈ ವಿಜಯ ದಿವಸದಂದು ನಮ್ಮ ಹೆಮ್ಮೆಯ ಸೇನಾಪಡೆಗಳಿಗೆ ಗೌರವ ಸಲ್ಲಿಸೋಣ. #VijayDiwas2020 ಎಂದು ಬರೆದಿದ್ದಾರೆ.

ಅಲ್ಲದೇ ವಿಜಯ್ ದಿವಸ್ ಪ್ರಯುಕ್ತ ಬೆಂಗಳೂರಿನ ರಾಷ್ಟ್ರೀಯ ಮಿಲಿಟರಿ ಸ್ಮಾರಕದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಪಾಲ್ಗೊಂಡು ಹುತಾತ್ಮ ವೀರಯೋಧರಿಗೆ ಗೌರವ ಸಲ್ಲಿಸಿದ್ದಾರೆ.