Asianet Suvarna News Asianet Suvarna News

ಸಿಎಂ ಬೊಮ್ಮಾಯಿ ಇಂದು ದಿಲ್ಲಿಗೆ: ನಡ್ಡಾ ಭೇಟಿ ಕುತೂಹಲ!

* ಸಂಪುಟ, ನಿಗಮ- ಮಂಡಳಿ ನೇಮಕ ಕುರಿತು ಚರ್ಚೆ

* ಅಂತಾರಾಜ್ಯ ಜಲ ವಿವಾದ ಕುರಿತ ಸಭೆಯಲ್ಲಿ ಭಾಗಿ

* ಕೃಷಿ, ಹಣಕಾಸು, ನೀರಾವರಿ, ರಕ್ಷಣಾ ಮಂತ್ರಿ ಭೇಟಿ

* ಸಿಎಂ ಇಂದು ದಿಲ್ಲಿಗೆ: ನಡ್ಡಾ ಭೇಟಿ ಕುತೂಹಲ

Karnataka CM Bommai toVisit Delhi discuss inter-State water disputes with legal team pod
Author
Bangalore, First Published Aug 25, 2021, 7:41 AM IST

ಬೆಂಗಳೂರು(ಆ.25): ಅಂತಾರಾಜ್ಯ ಜಲವಿವಾದಗಳ ಕುರಿತು ಕಾನೂನು ತಜ್ಞರ ಸಭೆಯಲ್ಲಿ ಪಾಲ್ಗೊಳ್ಳುವುದೂ ಸೇರಿದಂತೆ ರಾಜ್ಯದ ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿದಂತೆ ಕೇಂದ್ರ ಸಚಿವರನ್ನು ಭೇಟಿ ಮಾಡುವ ಸಲುವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬುಧವಾರ ದೆಹಲಿಗೆ ತೆರಳಲಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂತಾರಾಜ್ಯ ಜಲವಿವಾದಗಳ ಬಗ್ಗೆ ದೆಹಲಿಯಲ್ಲಿ ಕಾನೂನು ತಜ್ಞರ ಜತೆ ಸಭೆ ನಡೆಸಲಾಗುವುದು. ಸಭೆಯಲ್ಲಿ ರಾಜ್ಯ ಸರ್ಕಾರದ ಅಡ್ವೋಕೇಟ್‌ ಜನರಲ್‌, ರಾಜ್ಯದ ಹಿರಿಯ ವಕೀಲರು, ಕಾನೂನು ತಜ್ಞರು ಸೇರಿದಂತೆ ಇತರರು ಭಾಗವಹಿಸಲಿದ್ದಾರೆ. ರಾಜ್ಯದ ನೀರಾವರಿ ವಿವಾದದ ಬಗ್ಗೆ ರಾಜ್ಯದ ಮುಂದಿನ ನಡೆಯ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುವುದು. ರಾಜ್ಯದ ನೆಲ, ಜಲ, ಭಾಷೆಯ ಹಿತರಕ್ಷಣೆಗೆ ಸರ್ವ ಪ್ರಯತ್ನ ಮಾಡಲಾಗುವುದು. ಈ ವಿಚಾರದಲ್ಲಿ ಯಾವುದೇ ರೀತಿಯ ಆತಂಕ ಬೇಡ ಎಂದು ತಿಳಿಸಿದರು.

ಇದೇ ವೇಳೆ ಕೇಂದ್ರ ಕೃಷಿ, ಹಣಕಾಸು, ನೀರಾವರಿ, ರಕ್ಷಣಾ ಸಚಿವರ ಜತೆ ಚರ್ಚೆ ನಡೆಸಲಾಗುವುದು. ಈಗಾಗಲೇ ಈ ಸಂಬಂಧ ಕೇಂದ್ರದ ಸಚಿವರ ಸಮಯ ಕೇಳಲಾಗಿದೆ ಎಂದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಸಹ ಭೇಟಿಯಾಗಲಿದ್ದು, ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತು ಚರ್ಚೆ ನಡೆಸುತ್ತೇನೆ. ಸಂಪುಟ ರಚನೆ, ನಿಗಮ ಮಂಡಳಿ ಅಧ್ಯಕ್ಷರ ನೇಮಕಾತಿ ವಿಚಾರವನ್ನು ಸಾಂದರ್ಭಿಕವಾಗಿ ಪ್ರಸ್ತಾಪಿಸಲಾಗುವುದು. ನಡ್ಡಾ ಅವರ ಸಲಹೆ ಪಡೆದುಕೊಳ್ಳಲಾಗುವುದು ಎಂದರು.

ಮುಖ್ಯಮಂತ್ರಿಗಳು ಗುರುವಾರ ಸಂಜೆ ದೆಹಲಿಯಿಂದ ಬೆಂಗಳೂರಿಗೆ ವಾಪಸಾಗಲಿದ್ದಾರೆ. ಅವರೊಂದಿಗೆ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮತ್ತಿತರರು ತೆರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪಾದಯಾತ್ರೆ ಮಾಡಲು ಜೆಡಿಎಸ್‌ ಸ್ವತಂತ್ರ: ಸಿಎಂ

ನೆಲ-ಜಲ, ಭಾಷೆಯ ವಿಚಾರದಲ್ಲಿ ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಯಾರೊಂದಿಗೂ ರಾಜಿಯಾಗುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪುನರುಚ್ಚರಿಸಿದ್ದಾರೆ.

ಮೇಕೆದಾಟು, ಮಹದಾಯಿ ನದಿ ನೀರು ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ಜೆಡಿಎಸ್‌ ಪಾದಯಾತ್ರೆ ನಡೆಸುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ನೆಲ-ಜಲ, ಭಾಷೆ ವಿಷಯದಲ್ಲಿ ಯಾರೇ ಪ್ರತಿರೋಧ ವ್ಯಕ್ತಪಡಿಸಿದರೂ ನಾವು ಯೋಜನೆ ಕಾರ್ಯಗತಗೊಳಿಸುವುದರಿಂದ ಹಿಂದೆ ಸರಿಯುವುದಿಲ್ಲ. ವಿರೋಧ ವ್ಯಕ್ತಪಡಿಸುವುದು ಅವರ ಹಕ್ಕಾಗಿರಬಹುದು. ಆದರೆ, ಯೋಜನೆ ಅನುಷ್ಠಾನಗೊಳಿಸುವುದು ನಮ್ಮ ಹಕ್ಕು. ಇದಕ್ಕೆ ಯಾರೂ ಆತಂಕಪಡುವ ಅಗತ್ಯ ಇಲ್ಲ. ಇತಿಹಾಸವನ್ನು ಒಮ್ಮೆ ತಿರುಗಿ ನೋಡಿದರೆ ರಾಜ್ಯದ ವಿಚಾರದಲ್ಲಿ ಯಾವ ಸರ್ಕಾಗಳು ಹೇಗೆ ನಡೆದುಕೊಂಡಿವೆ ಎಂಬುದಕ್ಕೆ ಸಾಕ್ಷಿ ಇದೆ. ರಾಜ್ಯದ ವಿಷಯಕ್ಕೆ ಬಂದಾಗ ಪಕ್ಷಭೇದ ಮರೆತು ಹೋರಾಟ ಮಾಡಿದ್ದೇವೆ, ಈಗಲೂ ಹೋರಾಟ ಮಾಡುತ್ತೇವೆ. ಇಂತಹ ವಿಷಯದಲ್ಲಿ ಯಾರೊಬ್ಬರೂ ರಾಜಕಾರಣ ಮಾಡಬಾರದು. ಜೆಡಿಎಸ್‌ನವರು ಪಾದಯಾತ್ರೆ ಮಾಡಲು ಸ್ವತಂತ್ರರು ಎಂದರು.

Follow Us:
Download App:
  • android
  • ios