Karnataka Politics: ದೆಹಲಿಯಲ್ಲಿ ಸಿಎಂ ಬೊಮ್ಮಾಯಿ ಮಿಂಚಿನ ಸಂಚಾರ..!
* ಕೇಂದ್ರ ಸಚಿವರಾದ ನಿರ್ಮಲಾ, ಧರ್ಮೇಂದ್ರ ಪ್ರಧಾನ್ ಜೊತೆ ರಾಜ್ಯದ ಅಭಿವೃದ್ಧಿ ವಿಚಾರಗಳ ಚರ್ಚೆ
* ಜಿಎಸ್‌ಟಿ ಗ್ರೂಪ್ ಆಫ್ ಮಿನಿಸ್ಟರ್ಸ್ ಸಭೆಯ ಬಗ್ಗೆಯೂ ಚರ್ಚೆ
* ರಾಯಚೂರಲ್ಲಿ ಸಿರಿಧಾನ್ಯ ಬೆಳೆಗಾರರ ಸಭೆ ಆಯೋಜಿಸಲು ತೀರ್ಮಾನ
ನವದೆಹಲಿ(ಏ.07): ರಾಜ್ಯದ ವಿವಿಧ ಯೋಜನೆ ಮತ್ತು ಸಂಪುಟ ವಿಸ್ತರಣೆಗಳ(Cabinet Expansion) ಬಗ್ಗೆ ಕೇಂದ್ರ ಸಚಿವರು ಮತ್ತು ಪಕ್ಷದ ಹೈಕಮಾಂಡ್ ನಾಯಕರೊಂದಿಗೆ ಮಾತುಕತೆ ನಡೆಸುವ ಸಲುವಾಗಿ ರಾಷ್ಟ್ರ ರಾಜಧಾನಿ ನವದೆಹಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರು ಬುಧವಾರ ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ರಾಜನಾಥ್ ಸಿಂಗ್, ಧರ್ಮೇಂದ್ರ ಪ್ರಧಾನ್, ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ಕರ್ನಾಟಕ(Karnataka) ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಭೇಟಿ ಮಾಡಿದರು.
ಮಂಗಳವಾರ ಅವರು ಕೇಂದ್ರ ಸಚಿವರಾದ ಗಜೇಂದ್ರ ಸಿಂಗ್ ಶೆಖಾವತ್, ಆರ್.ಕೆ.ಸಿಂಗ್ ಅವರನ್ನು ಭೇಟಿ ಮಾಡಿದ್ದರು. ಬುಧವಾರ ಬೆಳಗ್ಗೆ ದೆಹಲಿ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಸಂಸ್ಥಾಪನಾ ದಿನಾಚರಣೆಯಲ್ಲಿ ಅವರು ಭಾಗವಹಿಸಿದ್ದರು.
ಕರ್ನಾಟಕದಲ್ಲಿ ಆಝಾನ್ ಸೌಂಡ್: ಸರ್ಕಾರ ಯಾವುದೇ ಹೊಸ ಅದೇಶ ಹೊರಡಿಸಿಲ್ಲ ಎಂದ ಸಿಎಂ
ಈ ವೇಳೆ ಸಚಿವರಾದ ಗೋವಿಂದ ಕಾರಜೋಳ ಮತ್ತು ಸುನಿಲ್ ಕುಮಾರ್ ಸಹ ಇದ್ದರು. ಕಾರ್ಯಕ್ರಮದ ಬಳಿಕ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರ ಜೊತೆ ಎಂಟ್ಹತ್ತು ನಿಮಿಷಗಳ ಕಾಲ ಚರ್ಚಿಸಿದರು. ಇದೇವೇಳೆ ಪಕ್ಷದ ಕರ್ನಾಟಕ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಕರೆಯಿಸಿಕೊಂಡ ನಡ್ಡಾ ಇಬ್ಬರೊಂದಿಗೆ ಹತ್ತು ನಿಮಿಷಗಳ ಕಾಲ ಮಾತುಕತೆ ನಡೆಸಿದರು.
ಕಾರ್ಯಕ್ರಮದ ಬಳಿಕ ಮುಖ್ಯಮಂತ್ರಿ ಬೊಮ್ಮಾಯಿ ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ಭದ್ರಾ ಮೇಲ್ದಂಡೆ ಯೋಜನೆ ರಾಷ್ಟ್ರೀಯ ಯೋಜನೆ ಎಂದು ಘೋಷಿಸಲು ಆರ್ಥಿಕ ಇಲಾಖೆಯ ಅನುಮೋದನೆ ಆಗಬೇಕು ಎಂಬ ವಿಚಾರವನ್ನು ಗಮನಕ್ಕೆ ತಂದರು. ಜೊತೆಗೆ ಇಂಧನ ಕ್ಷೇತ್ರದಲ್ಲಿ ಹಸಿರು ಕಾರಿಡಾರ್‌ನಲ್ಲಿ 3 ವಿಷಯಗಳನ್ನು ಸೇರ್ಪಡೆ ಮಾಡಬೇಕಿರುವ ವಿಷಯವೂ ಆರ್ಥಿಕ ಇಲಾಖೆಯ ಅನುಮೋದನೆಗೆ ಬರಲಿದೆ. ಈ ಎರಡರ ಬಗ್ಗೆಯೂ ಶೀಘ್ರ ಕ್ರಮ ಕೈಗೊಳ್ಳುವುದಾಗಿ ಕೇಂದ್ರ ಸಚಿವರಿಂದ ಸಕಾರಾತ್ಮಕ ಸ್ಪಂದನೆ ದೊರಕಿರುವುದಾಗಿ ಮುಖ್ಯಮಂತ್ರಿ ಬೊಮ್ಮಾಯಿ ತಿಳಿಸಿದ್ದಾರೆ.
ಜೊತೆಗೆ ಜಿಎಸ್‌ಟಿ(GST) ಗ್ರೂಪ್ ಆಫ್ ಮಿನಿಸ್ಟರ್ಸ್ ಸಭೆಯ ಬಗ್ಗೆಯೂ ಚರ್ಚಿಸಲಾಯಿತು. ಸಚಿವರು ಕರ್ನಾಟಕಕ್ಕೆ ಭೇಟಿ ನೀಡುವುದಾಗಿ ತಿಳಿದ್ದಾರೆ. ಕೇಂದ್ರ ಸರ್ಕಾರದ(Central Government) ಯೋಜನೆಗಳಿಗೆ ಬ್ಯಾಂಕ್‌ಗಳ ಮುಖಾಂತರ ಆಗಬೇಕಿರುವ ಕೆಲಸಗಳ ಬಗ್ಗೆ ವಿಶೇಷ ಸಭೆ ಕರೆಯುವುದಾಗಿ ತಿಳಿಸಿದರು. ಅಂತಾರಾಷ್ಟ್ರೀಯ ಸಿರಿಧಾನ್ಯ ದಿನಾಚರಣೆ ಇರುವುದರಿಂದ ರಾಯಚೂರಿನಲ್ಲಿ(Raichur) ಸಿರಿಧಾನ್ಯ ಬೆಳೆಗಾರರ ಸಭೆಯನ್ನು ಆಯೋಜಿಸಲು ತೀರ್ಮಾನಿಸಲಾಯಿತು ಎಂದು ತಿಳಿಸಿದರು.
ಇದೇನಾ ನೀವು ಆಡಳಿತ ನಡೆಸುವ ರೀತಿ, ಸಿಎಂ ಬೊಮ್ಮಾಯಿ ವಿರುದ್ಧ ಎಚ್‌ಡಿಕೆ ಕೆಂಡ
ಬಳಿಕ ಇಂಧನ ಕ್ಷೇತ್ರದಲ್ಲಿ ಆನಂತರ ಮುಖ್ಯಮಂತ್ರಿ ಬೊಮ್ಮಾಯಿ ಅವರು ಕೇಂದ್ರ ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲನೆ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನೂ ಭೇಟಿ ಮಾಡಿ ವಿವಿಧ ವಿಚಾರಗಳ ಬಗ್ಗೆ ಮಾತುಕತೆ ನಡೆಸಿದರು. ಸಂಜೆ ಮತ್ತೊಮ್ಮೆ ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗಿರುವ ಮುಖ್ಯಮಂತ್ರಿಗಳು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಲು ಪ್ರಯತ್ನ ಪಟ್ಟರಾದರೂ ರಾತ್ರಿವರೆಗೂ ಅವಕಾಶ ದೊರಕಿರಲಿಲ್ಲ.
ಸಂಪುಟ ಕಸರತ್ತು ಬಿರುಸು: ಸಚಿವರ ಕೈಬಿಡುವ ಬಗ್ಗೆ ನಡ್ಡಾ ಕೂಡ ಒಲವು..!
ಸಚಿವ ಸಂಪುಟ ಕಸರತ್ತಿಗೆ ಸಂಬಂಧಿಸಿದಂತೆ ಚಟುವಟಿಕೆಗಳು ಆರಂಭಗೊಂಡಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ(JP Nadda) ಅವರೊಂದಿಗೆ ಸುದೀರ್ಘವಾಗಿ ಸಮಾಲೋಚನೆ ನಡೆಸಿದ್ದಾರೆ.
ದೆಹಲಿ ಪ್ರವಾಸದಲ್ಲಿರುವ ಬೊಮ್ಮಾಯಿ ಅವರು ಬುಧವಾರ ರಾತ್ರಿ ಸುಮಾರು ಒಂದೂವರೆ ಗಂಟೆಗಳ ಕಾಲ ನಡ್ಡಾ ಅವರೊಂದಿಗೆ ಪ್ರತ್ಯೇಕವಾಗಿ ಮಾತುಕತೆ ನಡೆಸಿದರು. ಇದಕ್ಕೂ ಮೊದಲು ಅವರು ಬೆಳಗ್ಗೆ ಪಕ್ಷದ ಕಚೇರಿಯಲ್ಲಿ ನಡೆದ ಸಂಸ್ಥಾಪನಾ ದಿನಾಚರಣೆಯ ಸಮಾರಂಭದ ವೇಳೆಯೂ ನಡ್ಡಾ ಅವರೊಂದಿಗೆ ಕೆಲಹೊತ್ತು ಚರ್ಚೆ ನಡೆಸಿದ್ದರು. ಮಾತುಕತೆಯ ವಿವರಗಳು ಸ್ಪಷ್ಟವಾಗಿ ಹೊರಬೀಳದೇ ಇದ್ದರೂ ನಡ್ಡಾ ಅವರು ಕೇಂದ್ರದ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಚರ್ಚಿಸಿದ ಬಳಿಕ ಸ್ಪಷ್ಟಚಿತ್ರಣ ಹೊರಬೀಳಬಹುದು ಎನ್ನಲಾಗಿದೆ.