Asianet Suvarna News Asianet Suvarna News

ಲಿಂಗಾಯತ ಸಮುದಾಯಕ್ಕೆ ಒಬಿಸಿ ಮೀಸಲು? ಕೇಂದ್ರಕ್ಕೆ ರಾಜ್ಯದ ಶಿಫಾರಸು ಸಂಭವ!

ಲಿಂಗಾಯತರಿಗೆ ಒಬಿಸಿ ಮೀಸಲು?| ಕೇಂದ್ರಕ್ಕೆ ರಾಜ್ಯದ ಶಿಫಾರಸು ಸಂಭವ| ಇಂದು ಖುದ್ದು ಸಿಎಂ ಘೋಷಣೆ ನಿರೀಕ್ಷೆ| ಅಪರೂಪಕ್ಕೆ ಸಿಎಂರಿಂದ ಸಂಪುಟ ಸಭೆ ಮಾಹಿತಿ| ಕುತೂಹಲ ಕೆರಳಿಸಿದೆ ಪತ್ರಿಕಾಗೋಷ್ಠಿ| ಪಂಚಮಸಾಲಿಗೆ 2ಎ ಮೀಸಲು ಘೋಷಣೆ?

Karnataka CM B S Yediyurappa master plan Veerashaiva Lingayats may get Central OBC status for
Author
Bangalore, First Published Nov 27, 2020, 7:16 AM IST

ಬೆಂಗಳೂರು(ನ.27): ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆ ಬೆನ್ನಲ್ಲೇ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಇಡೀ ಲಿಂಗಾಯತ ಸಮುದಾಯಕ್ಕೆ ಇತರ ಹಿಂದುಳಿದ ವರ್ಗಗಳ (ಒಬಿಸಿ) ಮೀಸಲಾತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವ ಬಗ್ಗೆ ಗಂಭೀರ ಚಿಂತನೆ ನಡೆಸಿದ್ದಾರೆ.

ಅಲ್ಲದೆ, ಲಿಂಗಾಯತ ಪಂಚಮಸಾಲಿ ಸಮುದಾಯವನ್ನು ಹಿಂದುಳಿದ ವರ್ಗಗಳ ಪ್ರವರ್ಗ 2ಎ ಪಟ್ಟಿಯಲ್ಲಿ ಸೇರ್ಪಡೆಗೊಳಿಸುವ ಬಗ್ಗೆಯೂ ನಿರ್ಧಾರ ಕೈಗೊಳ್ಳುವ ಸಂಬಂಧ ಪರಿಶೀಲನೆ ನಡೆಸಿದ್ದಾರೆ. ಗುರುವಾರ ಸಂಜೆ ಬೇಡಿಕೆಗಳನ್ನು ಮುಂದಿರಿಸಿಕೊಂಡು ತಮ್ಮನ್ನು ಭೇಟಿಯಾಗಿದ್ದ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದ ನಿಯೋಗಕ್ಕೆ ಎರಡು ದಿನಗಳಲ್ಲಿ ಸಿಹಿ ಸುದ್ದಿ ನೀಡುವುದಾಗಿ ಭರವಸ ನೀಡಿರುವುದು ಇದಕ್ಕೆ ಪುಷ್ಟಿನೀಡುವಂತಿದೆ.

ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ನೂತನ ಅಧ್ಯಕ್ಷರ ನೇಮಕ

ಶುಕ್ರವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಲಿಂಗಾಯಿತರಿಗೆ ಒಬಿಸಿ ಮೀಸಲು ಶಿಫಾರಸು ಸಂಬಂಧ ಚರ್ಚಿಸಿ ನಿರ್ಣಯ ಕೈಗೊಂಡ ಬಳಿಕ ಖುದ್ದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರೇ ಈ ವಿಷಯವನ್ನು ಪ್ರಕಟಿಸುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.

ಸಿಎಂ ಪತ್ರಿಕಾಗೋಷ್ಠಿ ಕುತೂಹಲ: ಸಚಿವ ಸಂಪುಟ ಸಭೆಯ ನಂತರ ಮುಖ್ಯಮಂತ್ರಿಗಳ ಪತ್ರಿಕಾಗೋಷ್ಠಿ ನಿಗದಿಯಾಗಿದ್ದು, ಈ ವಿಷಯವನ್ನು ತಾವೇ ಘೋಷಣೆ ಮಾಡುವ ಸಂಭವವಿದೆ. ಸಾಮಾನ್ಯವಾಗಿ ಸಂಪುಟ ಸಭೆ ನಿರ್ಣಯಗಳನ್ನು ಕಾನೂನು ಸಚಿವ ಮಾಧುಸ್ವಾಮಿಯವರು ನೀಡುತ್ತಿದ್ದರು. ಆದರೆ ಶುಕ್ರವಾರ ಖುದ್ದು ಯಡಿಯೂರಪ್ಪ ಅವರೇ ಪತ್ರಿಕಾಗೋಷ್ಠಿ ನಡೆಸುತ್ತಿರುವುದು ಕುತೂಹಲ ಮೂಡಿಸಿದೆ.

ಒಟ್ಟಾರೆ ಲಿಂಗಾಯತ ಸಮುದಾಯಕ್ಕೆ ಮೀಸಲಾತಿ ಮತ್ತು ಪಂಚಮಸಾಲಿ ಸಮುದಾಯವನ್ನು ರಾಜ್ಯ ಸರ್ಕಾರದ ಹಿಂದುಳಿದ ವರ್ಗಗಳ ಪ್ರವರ್ಗ 2ಎ ಪಟ್ಟಿಯಲ್ಲಿ ಸೇರ್ಪಡೆಗೊಳಿಸುವಂತೆ ಆಗ್ರಹಿಸಿ ಕೂಡಲಸಂಗಮ ಜಗದ್ಗುರುಗಳು ಕಳೆದ ಅ.28ರಂದು ಬೆಳಗಾವಿಯ ಸುವರ್ಣ ವಿಧಾನಸೌಧದ ಮುಂಭಾಗದಲ್ಲಿ ಒಂದು ದಿನದ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದ್ದರು. ಮೀಸಲಾತಿ ನೀಡುವ ಬಗ್ಗೆ ನ.28ರೊಳಗೆ ಸರ್ಕಾರ ಸ್ಪಂದಿಸಬೇಕು ಎಂಬ ಒಂದು ತಿಂಗಳ ಗಡುವು ನೀಡಿ ಸತ್ಯಾಗ್ರಹ ಅಂತ್ಯಗೊಳಿಸಿದ್ದರು. ಶನಿವಾರ ಆ ಗಡುವು ಪೂರ್ಣಗೊಳ್ಳಲಿದೆ. ಹೀಗಾಗಿ, ಶುಕ್ರವಾರವೇ ಆ ಸಮುದಾಯಕ್ಕೆ ಸಿಹಿ ಸುದ್ದಿ ನೀಡಬಹುದು ಎಂಬ ಸುದ್ದಿ ದಟ್ಟವಾಗಿ ಹಬ್ಬಿದೆ.

ವೀರಶೈವ-ಲಿಂಗಾಯತ ನಿಗಮಕ್ಕೆ 500 ಕೋಟಿ!

ಹಲವು ಸಚಿವರು ದಿಲ್ಲಿಗೆ; ಸಂಪುಟ ಸಭೆಗೆ ಗೈರು

ಬೆಂಗಳೂರು: ಶುಕ್ರವಾರ ಬೆಳಗ್ಗೆ ನಡೆಯುವ ರಾಜ್ಯ ಸಚಿವ ಸಂಪುಟ ಸಭೆಗೆ ಲಕ್ಷ್ಮಣ ಸವದಿ, ಅಶೋಕ್‌ ಸೇರಿದಂತೆ ಹಲವು ಸಚಿವರು ಗೈರು ಹಾಜರಾಗಲಿದ್ದಾರೆ. ಸಿ.ಟಿ.ರವಿಯವರ ಕಚೇರಿ ಉದ್ಘಾಟನೆ ಮತ್ತು ಬಿಜೆಪಿ ವರಿಷ್ಠರ ಭೇಟಿಗಾಗಿ ಹಲವು ಸಚಿವರು ದೆಹಲಿಗೆ ತೆರಳಿರುವುದರಿಂದ ಸಂಪುಟ ಸಭೆಯಲ್ಲಿ ಭಾಗವಹಿಸುತ್ತಿಲ್ಲ. ದೆಹಲಿಗೆ ತೆರಳಿದ ಸಚಿವರ ಪೈಕಿ ಕೆಲವರು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಅನುಮತಿ ಪಡೆದಿದ್ದಾರೆ ಎನ್ನಲಾಗಿದೆ.

Follow Us:
Download App:
  • android
  • ios