Karnataka Cabinet Reshuffle: ಸಂಪುಟ ಕಸರತ್ತಿಗೆ ಪಂಚರಾಜ್ಯ ಚುನಾವಣೆ ಬ್ರೇಕ್, ಪುನಾರಚನೆ ಅಸಂಭವ?
*ಸಂಕ್ರಾಂತಿ ಬಳಿಕ ಬೊಮ್ಮಾಯಿ ಮಂತ್ರಿ ಮಂಡಲ ಪುನಾರಚನೆ ಅಸಂಭವ
*ಕೋವಿಡ್ ತೀವ್ರವಾದರೆ ಯಥಾಸ್ಥಿತಿ ಪಾಲನೆ?
*5 ರಾಜ್ಯ ಚುನಾವಣೆಗಳ ಮೇಲೆ ವರಿಷ್ಠರ ಗಮನ
*ರಾಜ್ಯ ಬಜೆಟ್‌ವರೆಗೂ ಯಾವುದೇ ಬದಲಾವಣೆ ಇಲ್ಲ?
ಬೆಂಗಳೂರು (ಜ. 10): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ನೇತೃತ್ವದ ಬಿಜೆಪಿ ಸರ್ಕಾರದ ಬಹು ನಿರೀಕ್ಷಿತ ಸಂಪುಟ ಕಸರತ್ತು ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ (Assemble Elections 2022) ಬಳಿಕವೇ ನಡೆಯುವ ಸಾಧ್ಯತೆ ಕಂಡು ಬರುತ್ತಿದೆ. ಬರುವ ಸಂಕ್ರಾಂತಿ ಹಬ್ಬದ ಬಳಿಕ ಸಂಪುಟ ವಿಸ್ತರಣೆ ಅಥವಾ ಪುನಾರಚನೆ (Cabinet Reshuffle) ನಡೆಯುವ ಸಂಭವವಿದೆ ಎಂಬ ಮಾತು ಇದುವರೆಗೆ ದಟ್ಟವಾಗಿ ಕೇಳಿಬರುತ್ತಿತ್ತು. ಆದರೆ, ಇದೀಗ ಉತ್ತರ ಪ್ರದೇಶ ಸೇರಿದಂತೆ ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ ಘೋಷಣೆಯಾಗಿರುವುದರಿಂದ ರಾಜ್ಯದಲ್ಲಿನ ಬೆಳವಣಿಗೆಗಳ ಬಗ್ಗೆ ಪಕ್ಷದ ವರಿಷ್ಠರು ಗಮನಹರಿಸುವ ಸಾಧ್ಯತೆ ಕಡಮೆ ಎಂಬ ಮಾತು ಬಿಜೆಪಿ ಪಾಳೆಯದಿಂದಲೇ ಹೊರಬಿದ್ದಿದೆ.
ಒಂದು ವೇಳೆ ಕೋವಿಡ್ ಮೂರನೇ ಅಲೆ ತೀವ್ರಗೊಂಡಲ್ಲಿ ಆಗ ಯಥಾಸ್ಥಿತಿಯೇ ಹೆಚ್ಚು ದಿನಗಳ ಕಾಲ ಮುಂದುವರೆದು, ವಿಸ್ತರಣೆಯನ್ನಷ್ಟೇ ಮಾಡಬಹುದು ಎಂಬ ಮಾತೂ ಕೇಳಿಬರುತ್ತಿದೆ. ಮುಂಬರುವ 2023ರ ವಿಧಾನಸಭಾ ಚುನಾವಣೆ ಗುರಿಯಾಗಿಸಿಕೊಂಡು ಸಂಪುಟದಲ್ಲಿ ಸಾಕಷ್ಟುಬದಲಾವಣೆ ಮಾಡುವ ಪ್ರಸ್ತಾಪ ಬಿಜೆಪಿಯ ರಾಜ್ಯ ಘಟಕ ಹಾಗೂ ಸಂಘ ಪರಿವಾರದಲ್ಲಿ ಇದೆ.
ಇದನ್ನೂ ಓದಿ: Mekedatu Politics: ಕಾಂಗ್ರೆಸ್ಸಿನದ್ದು ರಾಜಕೀಯಪ್ರೇರಿತ ಪಾದಯಾತ್ರೆ: ಬೊಮ್ಮಾಯಿ ಕಿಡಿ
ಇದಕ್ಕೆ ಪಕ್ಷದ ವರಿಷ್ಠರೂ ಪರಿಶೀಲಿಸಿ ನೋಡೋಣ ಎಂಬ ಪರೋಕ್ಷ ಒಲವು ತೋರಿದ್ದರು. ಈ ಹಿನ್ನೆಲೆಯಲ್ಲಿ ಚಿಂತನ ಸಭೆಯ ಹೆಸರಿನಲ್ಲಿ ಸಚಿವರ ಮೌಲ್ಯಮಾಪನ ನಡೆಸುವ ಸಿದ್ಧತೆಯೂ ನಡೆದಿತ್ತು. ಸಾಧ್ಯವಾದರೆ ಕೆಲವರನ್ನು ಕೈಬಿಟ್ಟು ಈಗಿರುವ ಖಾಲಿ ಸ್ಥಾನಗಳ ಜತೆಗೆ ಹೊಸ ಮುಖಗಳಿಗೆ ಹೆಚ್ಚು ಅವಕಾಶ ನೀಡಬೇಕು ಎಂಬ ಚಿಂತನೆ ಇದರ ಹಿಂದಿತ್ತು.ಇ
ಆದರೆ, ಕೋವಿಡ್ ಸೋಂಕು ಹೆಚ್ಚಿದ ಬೆನ್ನಲ್ಲೇ ಚಿಂತನ ಸಭೆ ಮುಂದೂಡಲಾಯಿತು. ಅದರ ಬೆನ್ನಲ್ಲೇ ಪಂಚರಾಜ್ಯಗಳ ಚುನಾವಣೆ ಘೋಷಣೆಯಾಗಿದೆ. ಇತರ ರಾಜ್ಯಗಳಿಗಿಂತ ಉತ್ತರ ಪ್ರದೇಶ ಬಿಜೆಪಿ ಪಾಲಿಗೆ ಅಗ್ನಿ ಪರೀಕ್ಷೆಯಂತಾಗಿದೆ. ಹೀಗಾಗಿ, ಆ ರಾಜ್ಯದಲ್ಲಿ ಮತ್ತೊಮ್ಮೆ ಗೆಲುವಿನ ಪತಾಕೆ ಹಾರಿಸಲು ಟೊಂಕ ಕಟ್ಟಿನಿಂತಿರುವ ಬಿಜೆಪಿ ವರಿಷ್ಠರು ಕರ್ನಾಟಕದಲ್ಲಿನ ಬದಲಾವಣೆ ಬಗ್ಗೆ ಆಸಕ್ತಿ ತೋರುವುದು ಅಥವಾ ಸಮಯ ನೀಡುವುದು ಕಷ್ಟಎನ್ನಲಾಗಿದೆ.
ಇದನ್ನೂ ಓದಿ: Karnataka Politics : ಡಿಕೆ ಸೋದರರ ಜೊತೆ ಒಳ ಒಪ್ಪಂದ : ಬಿಜೆಪಿ ಬಿಡುವ ವಿಚಾರಕ್ಕೂ ಉತ್ತರ
ಅಲ್ಲಿಗೆ ಪಂಚರಾಜ್ಯಗಳ ವಿಧಾನಸಭಾ ಚುನಾವಣೆ ನಡೆದು, ರಾಜ್ಯದ ಬಜೆಟ್ ಮಂಡನೆ ಮುಗಿದ ಬಳಿಕ ಸಂಪುಟದಲ್ಲಿ ಮಹತ್ತರ ಬದಲಾವಣೆ ಮಾಡುವ ಸಾಹಸಕ್ಕೆ ವರಿಷ್ಠರು ಕೈಹಾಕುತ್ತಾರಾ ಅಥವಾ ಕೇವಲ ಖಾಲಿ ಇರುವ ಸ್ಥಾನಗಳನ್ನು ಮಾತ್ರ ಭರ್ತಿ ಮಾಡಿ ಮುಂದಿನ ಸಾರ್ವತ್ರಿಕ ವಿಧಾನಸಭಾ ಚುನಾವಣೆಯತ್ತ ಗಮನಹರಿಸುತ್ತಾರಾ ಎಂಬುದು ಕುತೂಹಲಕರವಾಗಿದೆ.
ಮುಂದೂಡಿಕೆ ಸಾಧ್ಯತೆ ಏಕೆ?
- ಸಂಕ್ರಾಂತಿ ಬಳಿಕ ಸಚಿವ ಸಂಪುಟ ವಿಸ್ತರಣೆ/ ಪುನಾರಚನೆ ಬಗ್ಗೆ ಚರ್ಚೆ ಇತ್ತು
- ಈಗ ಮಹತ್ವದ ಉತ್ತರಪ್ರದೇಶ ಸೇರಿ ಪಂಚರಾಜ್ಯ ಚುನಾವಣೆ ಘೋಷಣೆ
- ಐದೂ ರಾಜ್ಯಗಳ ಚುನಾವಣೆ ಪ್ರಕ್ರಿಯೆಗಳಲ್ಲಿ ಬಿಜೆಪಿ ವರಿಷ್ಠರು ಪೂರ್ಣ ವ್ಯಸ್ತ
- ಇಂತಹ ವೇಳೆ ರಾಜ್ಯದ ಬೆಳವಣಿಗೆ ಬಗ್ಗೆ ಗಮನಹರಿಸುವ ಸಾಧ್ಯತೆ ಕಡಿಮೆ
- ಪಂಚರಾಜ್ಯ ಚುನಾವಣೆಗಳ ಬಳಿಕ ಸಂಪುಟ ಕಸರತ್ತಿಗೆ ಕೈಹಾಕುವ ಸಾಧ್ಯತೆ
- ಇಲ್ಲವಾದಲ್ಲಿ ಖಾಲಿ ಸ್ಥಾನ ಭರ್ತಿ ಮಾಡಿ ಯಥಾಸ್ಥಿತಿ ಮುಂದುವರಿಕೆ ಸಂಭವ
ಏಕೆ ಸಂಪುಟ ಸರ್ಕಸ್?
- 2023ರ ಚುನಾವಣೆ ಗಮನದಲ್ಲಿರಿಸಿ ಹಲವು ಪ್ರಯೋಗಗಳನ್ನು ಮಾಡುವ ಪ್ರಸ್ತಾವ
- ಸಚಿವ ಸಂಪುಟದಲ್ಲಿ ಬದಲಾವಣೆಗೆ ಒಲವು ತೋರಿದ್ದ ರಾಜ್ಯ ಬಿಜೆಪಿ, ಸಂಘ ಪರಿವಾರ
- ಇದಕ್ಕೆ ವರಿಷ್ಠರಿಂದ ಬಹುತೇಕ ಸಹಮತಿ. ಸಚಿವರ ಮೌಲ್ಯಮಾಪನಕ್ಕೆ ಸಜ್ಜಾಗಿದ್ದ ಪಕ್ಷ
- ಕೆಲವು ಸಚಿವರನ್ನು ಕೈಬಿಟ್ಟು, ಹೊಸ ಮುಖಗಳಿಗೆ ಅವಕಾಶ ನೀಡುವ ಕುರಿತು ಚಿಂತನೆ
- ಕೋವಿಡ್ ವೀಕೆಂಡ್ ಕರ್ಫ್ಯೂ ಜಾರಿ ಹಿನ್ನೆಲೆಯಲ್ಲಿ ಈ ಕುರಿತ ಸಭೆ ಮುಂದೂಡಿಕೆ
- ಇದರ ಬೆನ್ನಲ್ಲೇ ಪಂಚರಾಜ್ಯ ಚುನಾವಣೆ ಘೋಷಣೆ. ಹೀಗಾಗಿ ಪ್ರಕ್ರಿಯೆಗೆ ಕೊಕ್ಕೆ